varthabharthi


ಕೃತಿ ಪರಿಚಯ

ಈ ಹೊತ್ತಿನ ಹೊತ್ತಿಗೆ

ಸಮಗ್ರ ಗೋವಿನ ಹಾಡು

ವಾರ್ತಾ ಭಾರತಿ : 7 Oct, 2019
-ಕಾರುಣ್ಯಾ

   ‘ಗೋವಿನ ಹಾಡು’ ಪದ್ಯವನ್ನು ಓದದೆ ಬೆಳೆದ ಮಕ್ಕಳು ತೀರಾ ಕಡಿಮೆ. ಪುಣ್ಯಕೋಟಿಯ ಸತ್ಯಸಂಧತೆ, ಹುಲಿಯ ಮನಃಪರಿವರ್ತನೆಯ ಕತೆಯನ್ನು ಕೇಳಿ ಒಮ್ಮೆಯಾದರೂ ಕಣ್ಣೀರು ಹಾಕಿದವರೇ ಎಲ್ಲ. ಈ ಹಾಡನ್ನು ಬರೆದವನು ಒಬ್ಬ ಅನಾಮಿಕ. ಈ ಲೇಖಕನ ಹಿನ್ನೆಲೆಯನ್ನು ತಿಳಿಯುವ ಪ್ರಯತ್ನವನ್ನು ಹಲವು ಸಂಶೋಧಕರು ಮಾಡಿದ್ದಾರೆ. ಕೊನೆಯ ಪಕ್ಷದಲ್ಲಿ ಬರುವ ‘ಮದ್ದುರ ಶ್ರೀ ನಾರಸಿಂಹನೆ’ ಸ್ತೋತ್ರದಿಂದ ಈತ ಮದ್ದೂರಿನವನಿರಬೇಕು ಎಂದೂ ಊಹಿಸಲಾಗಿದೆ. ಅದೇನೇ ಇರಲಿ. ಈ ಹಾಡು ನೂರಾರು ಪಾಠಾಂತರಗಳನ್ನು ಪಡೆದಿದೆ. ಮೂಲದಲ್ಲಿ ಸರಳವಾಗಿದ್ದ ಹಾಡು, ಜನರಿಂದ ಜನರಿಗೆ ಹರಡುತ್ತಾ ಬೆಳೆಯುತ್ತಾ ಹೋಗಿದೆ. ಈ ಪದ್ಯದ ಗಾತ್ರವನ್ನು ಊಹಿಸುವುದೇ ಅಸಾಧ್ಯವಾಗಿದೆ. ಹೀಗಿರುವಲ್ಲಿ, ಮೂಲ ಪದ್ಯವೆಂದು ಗುರುತಿಸಲಾಗುವ ಪಠ್ಯವೊಂದನ್ನು ಕನ್ನಡ ಸಾಹಿತ್ಯ ಪರಿಷತ್ ಅಚ್ಚು ಹಾಕಿದೆ. ಮೂಲ ಪಠ್ಯವನ್ನು ಹುಡುಕುವ ಪ್ರಯತ್ನ ಹಲವರು ಮಾಡಿದ್ದಾರೆ. ಡಿ. ಎಲ್. ನರಸಿಂಹಾಚಾರ್ಯರು ಇಂತಹ ಪ್ರಯತ್ನವನ್ನು ಮೊದಲಿಗೆ ಮಾಡಿದ್ದರು. ಟಿ. ಕೇಶವಭಟ್ಟರು ಕೂಡ ಒಂದು ಪಠ್ಯವನ್ನು ಪ್ರಕಟಿಸಿದ್ದಾರೆ. ಅಥವಾ ಸರಳ ರೂಪದ ಹಾಡು ವಿವಿಧ ಕವಿಗಳಿಂದಾಗಿ ಅದು ಕಠಿಣವಾಗುತ್ತಾ ಹೋಯಿತೋ ಎಂಬ ವಾದವೂ ಇದೆ.

ಈ ‘ಗೋವಿನ ಹಾಡು’ ಶಾಲೆಯ ಪಠ್ಯದಲ್ಲಿ ಕಲಿತಿರುವುದಕ್ಕಿಂತ ಭಿನ್ನವಾಗಿದೆ ಮತ್ತು ತುಂಬಾ ದೀರ್ಘವಾಗಿದೆ. ಅಲ್ಲಿರುವಷ್ಟು ಸರಳವೂ ಅಲ್ಲ. ಸಾಧಾರಣವಾಗಿ ಜಾನಪದ ಹಾಡುಗಳನ್ನು ಶ್ರೀಸಾಮಾನ್ಯರು ಕಟ್ಟುತ್ತಾರೆ. ಅದು ಅವರ ಬದುಕಿನ ಕಾಯಕದ ಜೊತೆಗೆ ಹುಟ್ಟಿರುವಂತಹದು. ಅಲ್ಲಿ ಪಾಂಡಿತ್ಯಕ್ಕಿಂತ ಹೃದಯವಂತಿಕೆಯೇ ಕೆಲಸ ಮಾಡಿರುತ್ತದೆ. ಆ ಕಾರಣದಿಂದಲೇ ಸರಳ ಪದಗಳಲ್ಲಿ ಬದುಕಿಗೆ ಸಂಬಂಧಪಟ್ಟ ಹಿರಿದಾದುದನ್ನು ಹೇಳುತ್ತಾರೆ. ಆದರೆ ಗೋವಿನ ಹಾಡು ತುಸು ಕ್ಲಿಷ್ಟವಿದೆ. ಹಳೆಗನ್ನಡವೂ ಈ ಪದ್ಯದಲ್ಲಿ ಬಳಕೆಯಾಗಿದೆ. ಈ ಪದ್ಯದಲ್ಲಿ ಒಟ್ಟು 114 ಚರಣಗಳಿವೆ. ಬರೇ ಗೋವಿನ ಸತ್ಯವಂತಿಕೆಗಷ್ಟೇ ಪದ್ಯಗಳು ಸೀಮಿತವಾಗಿಲ್ಲ. ಬದಲಿಗೆ ಕಾಡಿನ ವರ್ಣನೆ, ಗೋವುಗಳ ವರ್ಣನೆ, ಗಿಡಮರಗಳ ವರ್ಣನೆ, ಕಾಡುಮೃಗಗಳ ವರ್ಣನೆ ಇತ್ಯಾದಿಗಳಿಗೆ ಹೆಚ್ಚು ಆದ್ಯತೆಯನ್ನು ನೀಡಲಾಗಿದೆ. ಹೀಗೆ ವರ್ಣನೆಗಳ ನಡುವೆ ಪುಣ್ಯಕೋಟಿಯ ಸತ್ಯದ ಕತೆಯನ್ನೂ ಹೇಳುವ ಪ್ರಯತ್ನ ನಡೆಸಲಾಗಿದೆ.

ಗೋವಿನ ಹಾಡಿನ ಕತೆಯನ್ನು ಕೆಲವು ಕವಿಗಳು ಮಕ್ಕಳ ಕಣ್ಣಿನಲ್ಲಿ ನೋಡಿದ್ದರೆ, ಹಿರಿಯ ಚಿಂತಕರು ಅದನ್ನು ‘ಸಂಸ್ಕೃತಿ ಸಂಘರ್ಷ’ವಾಗಿಯೂ ಗುರುತಿಸಿದ್ದಾರೆ. ಪುಣ್ಯಕೋಟಿಯೂ ಭಾವಾನಾತ್ಮಕವಾಗಿ ಹುಲಿಯನ್ನು ಸೋಲಿಸುತ್ತದೆ. ಹುಲಿ ಸ್ವಭಾವತಃ ಮಾಂಸಾಹಾರಿ. ಹಸಿದ ಸಂದರ್ಭದಲ್ಲಿ ಗೋವನ್ನು ತಿನ್ನುವುದರಲ್ಲಿ ತಪ್ಪೇನಿದೆ? ಅದು ಹುಲ್ಲು ತಿಂದು ಬದುಕಲು ಸಾಧ್ಯವೇ? ಹಸಿದ ಹೊತ್ತಿನಲ್ಲೂ ಪುಣ್ಯಕೋಟಿಯ ಮಾತು ಕೇಳಿ ಅದನ್ನು ಹೋಗಕೊಟ್ಟದ್ದು ಹುಲಿಯ ತ್ಯಾಗ ತಾನೆ. ಹುಲಿಯ ತ್ಯಾಗವನ್ನು ಬದಿಗಿಟ್ಟು ಪುಣ್ಯಕೋಟಿಯನ್ನು ವೈಭವೀಕರಿಸುವುದು ಎಷ್ಟು ಸರಿ? ಪುಣ್ಯಕೋಟಿಯದು ಮೋಸ ಎಂದು ಬರೆದ ವಿಮರ್ಶಕರಿದ್ದಾರೆ. ಪುಣ್ಯಕೋಟಿಯನ್ನು ಬ್ರಾಹ್ಮಣ್ಯಕ್ಕೂ, ಹುಲಿಯನ್ನು ದಲಿತರಿಗೂ ಸಮೀಕರಿಸಿದವರೂ ಇದ್ದಾರೆ. ಅದೇನೇ ಇರಲಿ, ಗೋವಿನ ಹಾಡನ್ನು ಸಮಗ್ರವಾಗಿ ಪದ್ಯ ರೂಪದಲ್ಲಿ ಓದುವ ಅವಕಾಶವನ್ನು ಈ ಕೃತಿ ನೀಡುತ್ತದೆ.

22 ಪುಟಗಳ ಈ ಕೃತಿಯ ಮುಖಬೆಲೆ 25 ರೂಪಾಯಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)