ಗಣ್ಯರ ವಿರುದ್ಧ ದೇಶದ್ರೋಹ ಪ್ರಕರಣ: ಕೇಂದ್ರದ ಕ್ರಮ ಖಂಡಿಸಿ ಬೆಂಗಳೂರಿನಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಬೆಂಗಳೂರು, ಅ. 7: ‘ಗುಂಪು ಹತ್ಯೆ’ ಕುರಿತು ಪ್ರಧಾನಿ ಮೋದಿಗೆ ಬಹಿರಂಗ ಪತ್ರ ಬರೆದ 49 ಗಣ್ಯರ ವಿರುದ್ಧ ದೇಶದ್ರೋಹದ ಮೊಕದ್ದವೆು ದಾಖಲಿಸಿದ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಫ್ಯಾಸಿಸ್ಟ್ ವಿರೋಧಿ ಒಕ್ಕೂಟದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸೋಮವಾರ ಇಲ್ಲಿನ ಪುರಭವನದಲ್ಲಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ನೂರಾರು ಕಾರ್ಯಕರ್ತರು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಪ್ರಜಾಪ್ರಭುತ್ವ ವಿರೋಧಿ, ಫ್ಯಾಸಿಸ್ಟ್ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಪ್ರಜಾಪ್ರಭುತ್ವದ ಹತ್ಯೆ: ಪ್ರತಿಭಟನೆ ನೇತೃತ್ವ ವಹಿಸಿದ್ದ ವಕೀಲ ಎಸ್.ಬಾಲನ್, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿನ ಎಲ್ಲ ಸಂವಿಧಾನಿಕ ಸಂಸ್ಥೆಗಳನ್ನು ಹತ್ಯೆ ಮಾಡಲಾಗಿದೆ. ಇದೀಗ ಅರ್ಥಿಕ ಮತ್ತು ಪ್ರಜಾಪ್ರಭುತ್ವವನ್ನು ಹತ್ಯೆ ಮಾಡಿರುವುದು ದೇಶ ನಾಶದ ಆತಂಕ ಸೃಷ್ಟಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವ್ಯವಸ್ಥೆಯನ್ನು ಪ್ರಶ್ನಿಸುವ ಧ್ವನಿಯನ್ನು ಅಡಗಿಸಲು ಪ್ರಧಾನಿ ಮೋದಿ ಸರ್ವಾಧಿಕಾರಿ, ಫ್ಯಾಸಿಸ್ಟ್ ನೀತಿಯನ್ನು ಅನುಸರಿಸುತ್ತಿದ್ದಾರೆ. ಗುಂಪು ಹತ್ಯೆ ಬಗ್ಗೆ ಕಳವಳ ವ್ಯಕ್ತಪಡಿಸಿದ ದೇಶದ ಗಣ್ಯರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು ಕಾನೂನು ಮತ್ತು ಸಂವಿಧಾನ ಬಾಹಿರ. ಕೂಡಲೇ ಎಫ್‌ಐಆರ್ ಹಿಂಪಡೆಯಬೇಕೆಂದು ಬಾಲನ್ ಆಗ್ರಹಿಸಿದರು.
ಅಕ್ಷಮ್ಯ: ಅಲ್ಪಸಂಖ್ಯಾತರು ಮತ್ತು ದಲಿತರ ಮೇಲೆ ನಡೆಯುತ್ತಿರುವ ಗುಂಪು ಹಲ್ಲೆ, ಅನ್ಯಾಯ, ದೌರ್ಜನ್ಯದ ವಿರುದ್ಧ ಪತ್ರ ಬರೆದ ಗಣ್ಯರ ವಿರುದ್ಧ ಮೊಕದ್ದಮೆ ದಾಖಲಿಸಿದ್ದು ಅಕ್ಷಮ್ಯ. ಇದರಿಂದ ಪ್ರಜಾಪ್ರಭುತ್ವದ ವಿರುದ್ಧ ಧ್ವನಿ ಎತ್ತುವವರನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಆಕ್ರೋಶ ವ್ಯಕ್ತಪಡಿಸಿದರು.
ಗೋವಿನ ಹೆಸರಿನಲ್ಲಿ ಸಾರ್ವಜನಿಕವಾಗಿ ನಿರಪರಾಧಿಗಳನ್ನು ಹೊಡೆದು ಕೊಲ್ಲುವಾಗ ಅವರ ವಿರುದ್ಧ ಮೊಕದ್ದಮೆ ದಾಖಲಿಸಲು ಮುಂದಾಗದವರು, ಅಕ್ರಮ ಕೃತ್ಯಗಳನ್ನು ವಿರುದ್ಧ ದೇಶದ್ರೋಹದ ಆರೋಪ ಹೊರಿಸುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮ. ಇದನ್ನು ದಲಿತರು ಮತ್ತು ಅಲ್ಪಸಂಖ್ಯಾತರು ಸಹಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ಸಾತ್ವಿಕತೆ ದುರ್ಬಳಕೆ: ಗುಂಪು ಹತ್ಯೆ ಕುರಿತು ಸಾಮಾಜಿಕ ಕಳಕಳಿ ವ್ಯಕ್ತಿಪಡಿಸಿದ ಗಣ್ಯರ ವಿರುದ್ಧ ಕೇಸು ದಾಖಲಿಸಿದ್ದು ಖಂಡನೀಯ. ಸರ್ವಾಧಿಕಾರಿ ಧೋರಣೆಯ ಕೇಂದ್ರ ಸರಕಾರ ಜನರ ಸಾತ್ವಿಕತೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಬೆದರಿಕೆಗಳು ಸಲ್ಲ ಎಂದು ಅಂಕಣಕಾರ ಯೋಗೇಶ್ ಮಾಸ್ಟರ್ ಆಕ್ಷೇಪಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ, ಪ್ರಜಾಪರಿವರ್ತನಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಗೋಪಾಲ್, ದಲಿತ ಕ್ರೈಸ್ತರ ಒಕ್ಕೂಟದ ಡಾ.ಮನೋಹರ್ ಚಂದ್ರಪ್ರಸಾದ್, ದುಡಿಯೋರ ಹೋರಾಟದ ಜಗದೀಶ್, ರಾಜನ್, ಪ್ರೊ.ನರಸಿಂಹಯ್ಯ, ಸರ್ದಾರ್ ಅಹ್ಮದ್ ಖುರೇಶಿ, ಷಣ್ಮುಗಂ, ರವಿ ಸೇರಿ ಹಲವು ಗಣ್ಯರು ಭಾಗವಹಿಸಿದ್ದರು.
‘ಮನ್‌ಕೀಬಾತ್‌ನಲ್ಲಿ ದೇಶದ ಜನರ ಸಲಹೆ ಕೇಳುವ ಮೋದಿಗೆ ನನ್ನ ಒಂದು ಸಲಹೆ. ಗುಂಪು ಹತ್ಯೆ ಖಂಡಿಸಿದ 49 ಮಂದಿ ಗಣ್ಯರ ವಿರುದ್ಧ ಅಷ್ಟೇ ಏಕೆ ಕೇಸು ದಾಖಲಿಸಿದ್ದೀರಿ, ದೇಶದಲ್ಲಿನ ದಲಿತರು, ಮುಸ್ಲಿಮರು ಸೇರಿ ಎಲ್ಲ ಬಹುಜನರ ವಿರುದ್ಧ ಮೊಕದ್ದಮೆ ದಾಖಲಿಸಿ, ಜೈಲಿಗೆ ಕಳುಹಿಸಿ’
-ಬಿ.ಗೋಪಾಲ್, ಪ್ರಜಾ ಪರಿವರ್ತನಾ ವೇದಿಕೆ ಅಧ್ಯಕ್ಷ