ಡಾ.ಜಿ.ಪರಮೇಶ್ವರ್, ಆರ್.ಎಲ್.ಜಾಲಪ್ಪ ಮನೆ ಮೇಲೆ ಐಟಿ ದಾಳಿ: ನಾಳೆ ಕೂಡಾ ಶೋಧ ?
ಬೆಂಗಳೂರು, ಅ.10: ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಕೇಂದ್ರ ಸಚಿವ ಆರ್.ಎಲ್.ಜಾಲಪ್ಪ ಮನೆ, ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ (ಐ.ಟಿ) ದಿಢೀರ್ ದಾಳಿ ನಡೆಸಿದ್ದು, ಶುಕ್ರವಾರ ಸಹ ಆಸ್ತಿ ದಾಖಲೆ ಪತ್ರಗಳ ಶೋಧ ಕಾರ್ಯ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಟ್ರಸ್ಟ್ನ ಮಹಾ ನಿರ್ದೇಶಕರೂ ಆಗಿರುವ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಸದಾಶಿವನಗರದ ನಿವಾಸ, ಕಚೇರಿ, ತುಮಕೂರಿನ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯ, ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಗುರುವಾರ ಮುಂಜಾನೆಯೇ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಸದಾಶಿವನಗರದ ನಿವಾಸ ಕಚೇರಿಯ ಮೇಲೆ ಅಧಿಕಾರಿಗಳ ಒಂದು ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದರೆ ಮತ್ತೊಂದು ಅಧಿಕಾರಿಗಳ ತಂಡ, ತುಮಕೂರಿನ ಮರಳೂರಿನಲ್ಲಿರುವ ಸಿದ್ದಾರ್ಥ ಕಾಲೇಜು, ಇನ್ನಿತರ ಕಡೆಗಳಲ್ಲಿರುವ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
ದಾಳಿ ಕಾರಣ?: ಸಿದ್ಧಾರ್ಥ್ ಶಿಕ್ಷಣ ಸಂಸ್ಥೆಯಲ್ಲಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಸೀಟು ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ. ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸರಕಾರಿ ಸೀಟು ಹೊರತುಪಡಿಸಿ ಮ್ಯಾನೇಜ್ಮೆಂಟ್ ಸೀಟುಗಳಿರುತ್ತವೆ. ಈ ಸೀಟುಗಳಿಗೆ ಕಾಲೇಜುಗಳು ಶುಲ್ಕ ವಿಧಿಸಬಹುದಾಗಿದ್ದು, ಇದರಲ್ಲಿ ಕೋಟ್ಯಂತರ ರೂ. ಅಕ್ರಮ ನಡೆದಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ತೆರಿಗೆಯನ್ನು ಮರೆಮಾಚಲು ಶುಲ್ಕವನ್ನು ನಗದು ರೂಪದಲ್ಲಿ ಪಾವತಿಸಲಾಗಿದೆ ಎನ್ನುವ ಆರೋಪದ ಹಿನ್ನೆಲೆ ಈ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಅದೇ ರೀತಿ, ನೆಲಮಂಗಲದ ಪುರಸಭೆಯ ಜೆಡಿಎಸ್ ಸದಸ್ಯ ಶಿವಕುಮಾರ್ ಹಾಗೂ ಜಾಲಪ್ಪಅವರ ಪುತ್ರ, ರಾಜೇಂದ್ರ ಸೋದರಳಿಯ ನಾಗರಾಜು ಮನೆ ಮೇಲೂ ಐ.ಟಿ. ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಕೇಂದ್ರದ ಮಾಜಿ ಸಚಿವ ಜಾಲಪ್ಪ ಒಡೆತನದ ಕೋಲಾರದಲ್ಲಿನ ಜಾಲಪ್ಪ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ಮೇಲೆ ಐಟಿ ಅಧಿಕಾರಿಗಳು 2 ತಂಡಗಳಲ್ಲಿ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿ, ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಮುಖ್ಯಸ್ಥರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆ ಹಾಕಲಾಗಿದೆ ಎಂದು ತಿಳಿದುಬಂದಿದೆ.
‘ಪುತ್ರಿಯಿಂದಲೂ ಮಾಹಿತಿ’
ಇಲ್ಲಿನ ಸದಾಶಿವನಗರದ ನಿವಾಸದಲ್ಲಿ ನೆಲೆಸಿರುವ ಪರಮೇಶ್ವರ್ ಪುತ್ರಿ ಶಾನಾ ಅವರಿಂದಲೂ ಐಟಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿದರು ಎನ್ನಲಾಗಿದೆ.
ಗುರುವಾರ ಮುಂಜಾನೆಯೇ ಆದಾಯ ಇಲಾಖೆ ಅಧಿಕಾರಿಗಳು ಸುಮಾರು 30 ತಂಡಗಳಲ್ಲಿ ತುಮಕೂರು, ನೆಲಮಂಗಲ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ನಗರದಲ್ಲಿ ಏಕಕಾಲಕ್ಕೆ ದಾಳಿ ನಡೆದಿವೆ ಎಂದು ಮೂಲಗಳು ತಿಳಿಸಿವೆ.
ವಿದೇಶದಲ್ಲೂ ಶಿಕ್ಷಣ ಸಂಸ್ಥೆ ಸ್ಥಾಪನೆ?
ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಟ್ರಸ್ಟ್ನ ಮಹಾ ನಿರ್ದೇಶಕರೂ ಆಗಿರುವ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಒಡೆತನದ ಶಿಕ್ಷಣ ಸಂಸ್ಥೆಗಳು ವಿದೇಶದಲ್ಲೂ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿದುಬಂದಿದೆ.
1988ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಹೆಗ್ಗೆರೆಯಲ್ಲಿನ ಮೆಡಿಕಲ್ ಕಾಲೇಜು 21 ಕಟ್ಟಡಗಳನ್ನು ಒಳಗೊಂಡಿದ್ದು, 73,875 ಚದರ ಅಡಿಯ ಅಂದಾಜು 20 ಕೋಟಿ ರೂ. ಮೌಲ್ಯದ್ದಾಗಿದೆ. ಅದೇ ರೀತಿ ಜಿಲ್ಲೆಯ ವಿವಿಧೆಡೆ 10ಕ್ಕೂ ಹೆಚ್ಚು ಶಾಲಾ-ಕಾಲೇಜುಗಳು ಅಸ್ತಿತ್ವದಲ್ಲಿವೆ. ಇದಲ್ಲದೆ, ಆಸ್ಟ್ರೇಲಿಯಾ ಮತ್ತು ಮಲೇಷಿಯಾಗಳಲ್ಲೂ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳಿವೆ ಎನ್ನಲಾಗಿದೆ.
ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಟ್ರಸ್ಟಿಯಾಗಿ, ಮಹಾನಿರ್ದೇಶಕರಾಗಿ ಜಿ.ಪರಮೇಶ್ವರ್ ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆ, ಸಾವಿರಾರು ಕೋಟಿ ರೂ.ಗೂ ಹೆಚ್ಚು ಬೆಲೆ ಬಾಳುವ ಆಸ್ತಿ-ಪಾಸ್ತಿ ಇದೆ ಎನ್ನಲಾಗಿದೆ. ಈ ಹಿಂದೆಯೇ ಹಲವು ಬಾರಿ ಐಟಿ ದಾಳಿ ನಡೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿತ್ತು. ಆ ಸಂದರ್ಭದಲ್ಲಿ ಎಚ್ಚೆತ್ತುಕೊಂಡಿದ್ದ ಡಾ.ಪರಮೇಶ್ವರ್, ತಮ್ಮ ಶಿಕ್ಷಣ ಸಂಸ್ಥೆಯ ಎಲ್ಲಾ ವ್ಯವಹಾರಗಳ ಲೆಕ್ಕಪತ್ರಗಳ ಲೆಕ್ಕ ಪರಿಶೋಧನೆ(ಆಡಿಟ್) ಮಾಡಿಸಿದ್ದರು ಎಂದು ಮೂಲಗಳು ತಿಳಿಸಿವೆ.