ಬಿಜೆಪಿ ಹೈಕಮಾಂಡ್ಗೆ ಬಿಎಸ್ವೈ ಒಲ್ಲದ ಶಿಶು: ಸಿದ್ದರಾಮಯ್ಯ
ಬೆಂಗಳೂರು, ಅ.10: ನಾನು ಹಾಗೂ ಯಡಿಯೂರಪ್ಪ 1983ರಲ್ಲಿ ಮೊದಲ ಬಾರಿ ವಿಧಾನಸಭೆಗೆ ಆಯ್ಕೆಯಾಗಿ ಬಂದೆವು. ಹೋರಾಟದ ಹಿನ್ನೆಲೆಯಿಂದ ಬಂದಿರುವ ಯಡಿಯೂರಪ್ಪ ಬಗ್ಗೆ ನನಗೆ ಪ್ರೀತಿ ಹಾಗೂ ಅನುಕಂಪವಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಗುರುವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಜು.26ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ, ಅವರ ಮಂತ್ರಿ ಮಂಡಲ ರಚನೆಯಾದದ್ದು ಆ.20ರಂದು. ಅಲ್ಲಿಯವರೆಗೆ ಅವರು ಏಕಚಕ್ರಾಧಿಪತಿ ರೀತಿಯಲ್ಲಿ ತಿರುಗಾಡುತ್ತಿದ್ದರು. ಯಡಿಯೂರಪ್ಪ ಬಿಜೆಪಿ ಹೈಕಮಾಂಡ್ ಪಾಲಿಗೆ ಒಲ್ಲದ ಶಿಶುವಾಗಿದ್ದಾರೆ ಎಂದರು.
ಗೋವಿಂದ ಕಾರಜೋಳರನ್ನು ಉಪ ಮುಖ್ಯಮಂತ್ರಿ ಮಾಡಿರುವುದು ಸರಿಯಾಗಿದೆ. ಆದರೆ, ಒಬ್ಬ ಸೋತ ಅಭ್ಯರ್ಥಿಯನ್ನು ಹಾಗೂ ಮತ್ತೊಬ್ಬ ಹೊಸ ಶಾಸಕರನ್ನು ಉಪ ಮುಖ್ಯಮಂತ್ರಿ ಮಾಡಲಾಗಿದೆ. ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಕೈ ಕಟ್ಟಿ ಹಾಕಿದಂತಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.
ಐದು ವರ್ಷಗಳ ನನ್ನ ಸರಕಾರದ ಆಡಳಿತಾವಧಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಎಂದಿಗೂ ಹಸ್ತಕ್ಷೇಪ ಮಾಡಿರಲಿಲ್ಲ. ಅಧಿಕಾರ ನಡೆಸಲು ನನಗೆ ಸಂಪೂರ್ಣ ಸ್ವಾತಂತ್ರ ನೀಡಿತ್ತು. ಸಚಿವ ಸಂಪುಟ ರಚನೆ, ಪುನಾರಚನೆ ಯಾವ ವಿಚಾರದಲ್ಲೂ ಹಸ್ತಕ್ಷೇಪ ಮಾಡಿರಲಿಲ್ಲ. ಅದರಿಂದಾಗಿಯೇ, ನಾನು ಐದು ವರ್ಷ ಪೂರ್ಣ ಪ್ರಮಾಣದಲ್ಲಿ ಸರಕಾರ ನಡೆಸಲು ಸಾಧ್ಯವಾಯಿತು ಎಂದು ಅವರು ಹೇಳಿದರು.
ಸಂತ್ರಸ್ತರಿಗೆ ಸಿಗದ ಪರಿಹಾರ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ, ಈವರೆಗೂ ಸರಕಾರದ ಪರವಾಗಿ ಯಾರೊಬ್ಬರು ಅವರ ಕುಟುಂಬದವರನ್ನು ಸಂಪರ್ಕಿಸಿ ಸಾಂತ್ವನ ಹೇಳುವ ಮತ್ತು ಪರಿಹಾರ ಧನವನ್ನು ನೀಡುವ ಪ್ರಯತ್ನವನ್ನು ಮಾಡಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಆಳುವ ವರ್ಗ ಹೀಗೆ ಮೌನಕ್ಕೆ ಶರಣಾದರೆ ಬಡ ರೈತರಿಗೆ ಯಾರು ದಿಕ್ಕು? ಮೂಡಿಗೆರೆ ತಾಲೂಕಿನಲ್ಲಿ ಗುಡ್ಡ ಕುಸಿದು ಹಲವು ಮನೆಗಳು ನೆಲಸಮಗೊಂಡಿವೆ. ಸಂತ್ರಸ್ತರು ವಾಸಿಸಲು ಇದುವರೆಗೂ ಬದಲಿ ವ್ಯವಸ್ಥೆ ಮಾಡಿಲ್ಲ, ಕನಿಷ್ಠ ಬಾಡಿಗೆ ರೂಪದಲ್ಲಿ ಬೇರೆಡೆಯ ಪ್ರವಾಹ ಸಂತ್ರಸ್ತರಿಗೆ ನೀಡುತ್ತಿರುವ ಹಾಗೆ ಇವರಿಗೆ 10 ಸಾವಿರ ರೂ.ಸಹಾಯಧನವನ್ನು ನೀಡಿಲ್ಲ. ಅವರ ಬದುಕು ಬೀದಿಗೆ ಬಂದಿದೆ ಎಂದು ಅವರು ಹೇಳಿದರು.
ಕೊಡಗು ಜಿಲ್ಲೆಯಲ್ಲಿ ಪ್ರವಾಹ ಉಂಟಾದಾಗ ಸಮ್ಮಿಶ್ರ ಸರಕಾರ 10 ಸಾವಿರ ರೂ.ಬಾಡಿಗೆ ಹಾಗೂ ಹೊಸ ಮನೆ ನಿರ್ಮಾಣಕ್ಕೆ 9.80 ಲಕ್ಷ ರೂ.ಸಹಾಯಧನ ನೀಡಿತ್ತು. ಈಗ ಪ್ರವಾಹ ಬಂದು 2 ತಿಂಗಳಾಗಿದೆ, ಬಾಗಲಕೋಟೆ ಜಿಲ್ಲೆಯಲ್ಲಿ ಇನ್ನೂ ಅಗತ್ಯ ಪ್ರಮಾಣದ ತಾತ್ಕಾಲಿಕ ಶೆಡ್ಗಳನ್ನು ನಿರ್ಮಾಣ ಮಾಡಿಲ್ಲ. ರಾಜ್ಯಾದ್ಯಂತ ಶೆಡ್ಗಳ ನಿರ್ಮಾಣಕ್ಕೆ ಕೇವಲ 18 ಕೋಟಿ ರೂ.ನೀಡಲಾಗಿದೆ ಎಂದು ಅವರು ಆರೋಪಿಸಿದರು.