varthabharthi


ಭೀಮ ಚಿಂತನೆ

ಡಾ. ಬಿ. ಆರ್. ಅಂಬೇಡ್ಕರ್ ಅವರ ಆಯ್ದ ಭಾಷಣ-ಬರಹಗಳು

ನನ್ನ ಜನರ ಹಿತಸಂಬಂಧದ ಪ್ರತಿನಿಧಿ ನಾನೇ ಆಗಿದ್ದೇನೆ

ವಾರ್ತಾ ಭಾರತಿ : 10 Oct, 2019

 ಅಕ್ಟೋಬರ್ 8, 1931ರ ಗುರುವಾರ ದುಂಡು ಮೇಜಿನ ಪರಿಷತ್ತಿನ ಇತಿಹಾಸದಲ್ಲಿ ಮಹತ್ವದ ದಿನವಾಗಿತ್ತು. ಅಲ್ಪಸಂಖ್ಯಾತರ ಪ್ರಶ್ನೆಗಳನ್ನು ಬಿಡಿಸಲು ಒಂದು ಕಮಿಟಿಯನ್ನು ಮ. ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನೇಮಿಸಲಾಗಿತ್ತು. ಎಂಟೂ ದಿನಗಳು ಸಾಕಷ್ಟು ಚರ್ಚೆಗಳಾಗಿಯೂ ಪ್ರಶ್ನೆಗಳು ಪ್ರಶ್ನೆಗಳಾಗೇ ಉಳಿದುಹೋದವು. ಆ ದಿನ ಈ ಕಮಿಟಿಯ ಕೆಲವು ಸದಸ್ಯರು ಭಾಷಣ ಮಾಡಿದರು. ಅಲ್ಪ ಸಂಖ್ಯಾತರ ಪ್ರಶ್ನೆಗಳು ಹಾಗೇ ಉಳಿದುಕೊಂಡವು ಹಾಗೂ ಪಂಜಾಬ್‌ನಲ್ಲಿಯ ಹಿಂದೂ, ಮುಸಲ್ಮಾನ, ಸಿಖ್ಖರ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗದೆ ಈ ಕಮಿಟಿ ಅಪಯಶಸ್ಸಿಗೆ ಗುರಿಯಾಯಿತು ಅನ್ನುವುದರ ಬಗ್ಗೆ ಎಲ್ಲರೂ ದುಃಖ ವ್ಯಕ್ತಪಡಿಸಿದರು. ಕಾಂಗ್ರೆಸ್ ವತಿಯಿಂದ ಮಹಾತ್ಮಾ ಗಾಂಧೀಜಿಯವರು ಅಸ್ಪಶ್ಯರ ಬಗ್ಗೆ ತಳೆದ ಪಕ್ಷಪಾತ ಹಾಗೂ ಅನ್ಯಾಯದ ಧೋರಣೆಯನ್ನು ಸ್ಪಷ್ಟವಾಗಿ ಡಾ. ಅಂಬೇಡ್ಕರರು ವಿರೋಧಿಸಲೇ ಬೇಕಾಯಿತು. ಆದರೆ ಅಂಬೇಡ್ಕರ್ ಅವರು ಗಾಂಧಿಯವರನ್ನು ವಿರೋಧಿಸಿದರು ಅನ್ನುವ ಒಂದೇ ವಿಷಯವನ್ನು ದೊಡ್ಡದು ಮಾಡಿ ಅಂಬೇಡ್ಕರ್ ಬಗ್ಗೆ ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸುವ ಪ್ರಯತ್ನ ಕಾಂಗ್ರೆಸ್, ಹಿಂದೂ ರಾಷ್ಟ್ರೀಯ ಪತ್ರಕರ್ತರು ಹಾಗೂ ದೇಶಭಕ್ತರ ಧರ್ಮವಾಗಿಬಿಟ್ಟಿದೆ. ಡಾ. ಅಂಬೇಡ್ಕರರು ಗಾಂಧೀಜಿಯವರನ್ನು ವಿರೋಧಿಸಿದರು ನಿಜ. ಅವರು ಯಾಕೆ ವಿರೋಧಿಸಿದರು ಅನ್ನುವುದನ್ನು ನಿರ್ವಿಕಾರವಾಗಿ ಯೋಚಿಸುವ ಔದಾರ್ಯ ಈ ದೇಶಭಕ್ತರಲ್ಲಿರಲಿಲ್ಲ. ಮಹಾತ್ಮಾ ಗಾಂಧೀಜಿಯವರ ಯೋಜನೆ ಸುಸಂಗತವಾಗಿರಲಿ ಅಸಂಗತವಾಗಿರಲಿ ಅವರನ್ನು ವಿರೋಧಿಸುವುದೆಂದರೆ ಪರಮೇಶ್ವರನನ್ನು ವಿರೋಧಿಸುವಷ್ಟೆ ಮಹಾಪಾಪ. ಸರಕಾರ ಎತ್ತಿ ಕಟ್ಟದೆ ಹೀಗೆ ಮಾಡುವ ಧೈರ್ಯ ಯಾರಲ್ಲೂ ಇಲ್ಲ ಅನ್ನುವ ತಪ್ಪು ಕಲ್ಪನೆಗಳನ್ನು ಮನಸಲ್ಲಿಟ್ಟುಕೊಂಡು ದಿನಾ ಜನತೆಗೆ ಈ ಕಲ್ಪನೆಗಳನ್ನು ತಲುಪಿಸುತ್ತಿದ್ದಾರೆ. ‘‘ಡಾ.ಅಂಬೇಡ್ಕರ್‌ಅವರು ದಲಿತರ ಪ್ರತಿನಿಧಿಗಳು ಇಲ್ಲವೇ ನೇತಾರರಲ್ಲ. ಸರಕಾರ ಅವರನ್ನು ಆರಿಸಿ ಕಳಿಸಿದೆ, ಅಸ್ಪಶ್ಯರ ನಿಜವಾದ ನೇತಾರರು ಬೇರೆ ಜನರಿದ್ದಾರೆ. ಅವರು ಕಾಂಗ್ರೆಸ್‌ನ ಅಧೀನದಲ್ಲಿದ್ದಾರೆ. ಕಾಂಗ್ರೆಸ್ ಹಾಗೂ ನಾನು ಇವರೇ ಅಸ್ಪಶ್ಯಾದಿ ಎಲ್ಲ ಅಲ್ಪಸಂಖ್ಯಾಕ ಸಮಾಜದ ಪ್ರತಿನಿಧಿಗಳಾಗಿದ್ದೇವೆ’’ ಅನ್ನುವ ಬುಡಬುಡಿಕೆಯನ್ನು ಗಾಂಧೀಜಿಯವರು ಮೊದಲಿನಿಂದಲೂ ಬಾರಿಸುತ್ತಿದ್ದರು. ಗುರುವಾರದ ತುಂಬು ಸಭೆಯಲ್ಲೂ ಅವರು ಇದೇ ವಿಷಯಕ್ಕೆ ಹೆಚ್ಚು ಒತ್ತುಕೊಟ್ಟರು. ಸರ್ ಮುಹಮ್ಮದ್ ಶಫಿಯವರು ಗಾಂಧೀಜಿಯವರ ಈ ಹೇಳಿಕೆಯನ್ನು ಅಲ್ಲಗಳೆದರು. ಹಾಗೂ ಡಾ. ಅಂಬೇಡ್ಕರ್ ಅವರು ಕೂಡ ಗಾಂಧೀಜಿಯವರ ಈ ಹೇಳಿಕೆಯನ್ನು ಒಪ್ಪಿಕೊಳ್ಳಲಿಲ್ಲ. ಯಾರಿಗೂ ತಿಳಿಯದೆ ಸುಮ್ಮನೆ ಚಿವುಟುವವರ ಕೈ ಕಾಣುವುದಿಲ್ಲ ಆದರೆ ಬೊಬ್ಬೆ ಹೊಡೆಯುವವನ ಬಾಯಿ ಮಾತ್ರ ಕಾಣುತ್ತದೆ ಅನ್ನುವಂತೆಯೇ ಆಯಿತು. ಗಾಂಧೀಜಿಯವರು ಸತ್ಪುರುಷರು, ಅಲ್ಲದೆ ಅವರು ಅಸ್ಪಶ್ಯೋದ್ಧಾರಕರು, ಅವರ ಪ್ರತಿಯೊಂದು ಶಬ್ದವನ್ನೂ ವೇದವಾಕ್ಯವೆಂದು ತಿಳಿಯಬೇಕು, ಅವರು ಯಾವುದೇ ಹೇಳಿಕೆಯನ್ನು ಕೊಟ್ಟರೂ, ಸರಿಯೋ ತಪ್ಪೋ ಯಾವುದೇ ರೀತಿಯ ಧೋರಣೆಯನ್ನು ಸ್ವೀಕರಿಸಿದರೂ ಜನತೆ ಅದನ್ನು ಒಪ್ಪಿಕೊಳ್ಳಬೇಕು ಅನ್ನುವಂತಹ ಯೋಚನೆಯುಳ್ಳ ಜನರಿಗೆ ಡಾ. ಅಂಬೇಡ್ಕರ್ ಅವರು ಈ ಕೆಳಗಿನಂತೆ ಮಾಡಿದ ಭಾಷಣ ಕಹಿಯೆನಿಸಿದರೆ ಆಶ್ಚರ್ಯವಿಲ್ಲ. ಇಲ್ಲಿಯ ಸಣ್ಣಪುಟ್ಟ ರಾಷ್ಟ್ರೀಯ ವೃತ್ತ ಪತ್ರಿಕೆಗಳು ಟೆಲಿಗ್ರಾಂನಿಂದ ಬಂದ ಗಾಂಧೀಜಿಯವರ ಭಾಷಣಗಳನ್ನು ಪ್ರಕಟಿಸಿದರು. ಆದರೆ ಡಾ. ಅಂಬೇಡ್ಕರ್ ಅವರ ಭಾಷಣವನ್ನು ಪ್ರಕಟಿಸದೆ ಜನರ ಮನಸ್ಸನ್ನು ಕಲುಷಿತಗೊಳಿಸುವಂತಹ ಸಾರಾಂಶವನ್ನಷ್ಟೆ ಪ್ರಕಟಿಸಿ ತಮ್ಮ ಸೇಡು ತೀರಿಸಿಕೊಂಡರು. 8ನೇ ತಾರೀಕಿನಂದು ಡಾ. ಅಂಬೇಡ್ಕರ್ ಅವರ ಪ್ರಕಟವಾದ ಭಾಷಣದ ಸಾರಾಂಶ ಕೆಳಗಿನಂತಿದೆ. ತಮ್ಮ ಭಾಷಣದಲ್ಲವರು,

‘‘ತಮ್ಮ ಪ್ರಯತ್ನಕ್ಕೆ ಯಶಸ್ಸು ಸಿಗಲಿಲ್ಲ’’ ಅನ್ನುವ ಭಾವನೆಯಿಂದ ರಾತ್ರಿಯ ವಿಫಲವಾದ ಸಮಾಲೋಚನೆಯಿಂದ ಕಮಿಟಿಯ ಪ್ರತಿನಿಧಿಗಳು ಪರಸ್ಪರರನ್ನು ಬೀಳ್ಕೊಟ್ಟರೂ ಇಂದು ಅದಕ್ಕೆ ಸಂಬಂಧಿಸಿದಂತೆ ಮಾತನಾಡುವಾಗ ವಾದಗ್ರಸ್ತ ವಿಷಯ ಇಲ್ಲವೇ ಮತಭೇದಕ್ಕೆ ಈಡುಮಾಡುವಂತಹ ಭಾಷಣಗಳನ್ನು ಮಾಡಬಾರದು ಅನ್ನುವ ಸಾಧಾರಣ ಪರಸ್ಪರ ಒಪ್ಪಂದವಾಗಿತ್ತು. ಆದರೆ ಗಾಂಧೀಜಿಯವರ ಇವತ್ತಿನ ಭಾಷಣವನ್ನು ಕೇಳಿದಾಗ ಅವರು ಈ ಒಪ್ಪಂದವನ್ನು ಮುರಿದಿದ್ದನ್ನು ನೋಡಿ ಬಹಳ ದುಃಖವಾಯಿತು. ಗಾಂಧೀಜಿಯವರು ಭಾಷಣವನ್ನಾರಂಭಿಸುವಾಗಲೇ ಕಮಿಟಿಯ ಕಾರ್ಯ ಯಶಸ್ವಿಯಾಗಲಿಲ್ಲವೇಕೆ ಅನ್ನುವುದರ ಬಗ್ಗೆ ತಮ್ಮ ಅನಿಸಿಕೆಗಳನ್ನು ಹೇಳುತ್ತ ವಾದಗ್ರಸ್ತ ವಿಷಯವನ್ನಾರಂಭಿಸಿದರು. ಕಮಿಟಿಯ ಕಾರ್ಯಕ್ಕೆ ಅಪಯಶಸ್ಸು ಯಾಕೆ ಬಂತು ಅನ್ನುವುದನ್ನು ಹೇಳುವ ಸಾಕಷ್ಟು ಪುರಾವೆಗಳು ನನ್ನಲ್ಲೂ ಇವೆ. ಆದರೆ ಅದನ್ನು ಇಲ್ಲಿ ಉಲ್ಲೇಖಿಸುವುದು ಅಪ್ರಾಸಂಗಿಕವಾಗಿರುವುದರಿಂದ ನಾನು ಹಾಗೆ ಮಾಡಲಾರೆ.

ಕಮಿಟಿಯ ಸಭೆಯನ್ನು ಅನಿರ್ದಿಷ್ಟ ಕಾಲದವರೆಗೆ ಮುಂದೂಡಬೇಕೆ ಇಲ್ಲವೇ ಅನ್ನುವ ಸಮಯೋಚಿತ ವಿಷಯದ ಬಗ್ಗೆಯಷ್ಟೆ ಮಾತನಾಡುವುದನ್ನು ಬಿಟ್ಟು ಕಮಿಟಿಯ ಸಭಾಸದರು ಆಯಾ ಸಮಾಜದ ಪ್ರತಿನಿಧಿಗಳಾಗಿದ್ದಾರೆಯೇ ಇಲ್ಲವೇ ಅನ್ನುವ ವಾದಗ್ರಸ್ತ ಹಾಗೂ ಅಪ್ರಾಸಂಗಿಕ ವಿಷಯವನ್ನು ಕೆರೆದು ತೆಗೆದು ಗಾಂಧೀಜಿಯವರು ಬೇರೆಯೇ ವಾದಕ್ಕೆ ಎಡೆಮಾಡಿಕೊಟ್ಟಿದ್ದಾರೆ. ಸರಕಾರ ನಮ್ಮನ್ನು ನೇಮಿಸಿ ಕಳಿಸಿದೆ ಅನ್ನುವುದು ನೀವ್ಯಾರೂ ಅಲ್ಲಗೆಳೆಯಲಾರಿರಿ. ಆದರೆ, ನನ್ನ ಬಗ್ಗೆಯೇ ಮಾತಾಡುವುದಿದ್ದರೆ ತಮ್ಮ ಪ್ರತಿನಿಧಿ ಯಾರಾಗಿರಬೇಕು ಅನ್ನುವುದನ್ನು ಆರಿಸುವ ಅವಕಾಶ ದಲಿತರಿಗೆ ಕೊಟ್ಟರೆ ಅವರಾರಿಸುವ ಪ್ರತಿನಿಧಿಗಳಲ್ಲಿ ನನ್ನ ಸ್ಥಾನ ಮೊದಲನೆಯದಾಗಿರುತ್ತದೆ ಅನ್ನುವುದನ್ನು ಆತ್ಮವಿಶ್ವಾಸದಿಂದ ಗಾಂಧೀಜಿಯವರಿಗೆ ಹೇಳುತ್ತೇನೆ. ಗಾಂಧೀಜಿಯವರು ಆರಂಭಿಸಿರುವ ಈ ವಾದಗ್ರಸ್ತ ವಿಷಯಕ್ಕೆ ಉತ್ತರಿಸುತ್ತ ಉಳಿದವರಂತೆಯೇ ಸರಕಾರ ನನ್ನನ್ನು ಆರಿಸಿದ್ದರೂ ನನ್ನ ಜನರ ಹಿತ ಸಂಬಂಧದ ನಿಜವಾದ ಪ್ರತಿನಿಧಿಯಾಗಿದ್ದೇನೆ ಅನ್ನುವ ವಸ್ತುಸ್ಥಿತಿಯನ್ನು ಕಡೆಗಣಿಬಾರದು ಎಂದಷ್ಟೇ ಹೇಳುತ್ತೇನೆ.

ಕಾಂಗ್ರೆಸ್ ದಲಿತರಿಗಾಗಿ ಅಹೋರಾತ್ರಿ ಕಷ್ಟಪಡುತ್ತಿದೆ ಹಾಗೂ ನಾನು ಹಾಗೂ ನನ್ನ ದಲಿತ ಪ್ರತಿನಿಧಿಗಳಿಗಿಂತ ಕಾಂಗ್ರೆಸ್‌ನವರಲ್ಲಿ ದಲಿತ ಪ್ರತಿನಿಧಿಗಳು ಹೆಚ್ಚು ಪ್ರಮಾಣದಲ್ಲಿ ಬರಬಹುದೆಂದು ಗಾಂಧೀಜಿಯವರು ಯಾವತ್ತೂ ಪ್ರತಿಪಾದಿಸುತ್ತಿರುತ್ತಾರೆ. ನಾನವರಿಗೆ ಹೇಳುವುದಿಷ್ಟೆ, ಬೇಜವಾಬ್ದಾರಿ ಜನರು ಸುಮಾರು ಸಲ ಸುಳ್ಳು ಹಕ್ಕುಗಳನ್ನು ಹೇಳಿಕೊಂಡು ಬರುವಂತೆ ಇದೂ ಕೂಡ ಸುಳ್ಳು ಹಕ್ಕುಗಳಾಗಿದ್ದು ದಲಿತರ ಹೆಸರಿನಿಂದ ಹೇಳಿಕೊಂಡು ಬಂದಿರುವ ಈ ಹಕ್ಕುಗಳನ್ನು ದಲಿತರು ಅಲ್ಲಗೆಳೆದಿದ್ದರೂ ಅವುಗಳನ್ನೇ ಮತ್ತೆ ಮತ್ತೆ ಹೇಳಿಕೊಂಡು ಈ ಜನ ಚೇಷ್ಟೆ ಮಾಡುತ್ತಿದ್ದಾರೆ.

 ಕಾಂಗ್ರೆಸ್ ಬಗ್ಗೆ ದಲಿತರಿಗಿರುವ ಅಪನಂಬಿಕೆ ವ್ಯಕ್ತಪಡಿಸುವ ಒಂದು ಟೆಲಿಗ್ರಾಂ ನನಗೆ ಇತ್ತೀಚೆಗೆ ಕುಗನ್ (ಅಲ್ಮೋರಾ)ದಿಂದ ಅಸ್ಪಶ್ಯ ಸಮಾಜ ಸಂಘದ ಅಧ್ಯಕ್ಷರಿಂದ ಬಂದಿದೆ. ನಾನು ಈ ಜಾಗವನ್ನು ಇದುವರೆಗೂ ನೋಡಿಲ್ಲ ಹಾಗೂ ಟೆಲಿಗ್ರಾಂ ಕಳಿಸಿದವನ ಪರಿಚಯವೂ ನನಗಿಲ್ಲ, ಆದರೆ ಆತನ ಹೇಳಿಕೆಯ ಪ್ರಕಾರ ಕಾಂಗ್ರೆಸ್‌ನ ಕೆಲವು ಜನ ದಲಿತರ ಬಗ್ಗೆ ಸಹಾನುಭೂತಿ ತೋರಿಸುತ್ತಿದ್ದರೂ ಬಹುಜನ ದಲಿತ ಸಮಾಜ ಮಾತ್ರ ಕಾಂಗ್ರೆಸ್‌ನಲ್ಲಿಲ್ಲ ಅನ್ನುವುದು ಮಾತ್ರ ಖಚಿತ.

ಆದರೆ ಈ ವಿಷಯದ ಬಗ್ಗೆ ಚರ್ಚಿಸುವ ಸಮಯವೂ ಇದಲ್ಲ. ಈಗಿನ ಪ್ರಶ್ನೆಯ ಬಗ್ಗೆಯಷ್ಟೆ ಮಾತಾಡುವುದಾದರೆ ಮೈನಾರಿಟಿ ಕಮಿಟಿಯ ಸಭೆಯನ್ನು ಅನಿರ್ದಿಷ್ಟ ಕಾಲದವರೆಗೆ ಮುಂದೂಡಲ್ಪಟ್ಟು ಫೆಡರಲ್ ಸ್ಟ್ರಕ್ಚರ್ ಕಮಿಟಿಯ ಕಾರ್ಯ ಮುಂದುವರಿಸಲ್ಪಡಲಿ ಅನ್ನುವ ಗಾಂಧೀಜಿಯವರ ಮಸೂದೆಗೆ ಶಫಿಯವರಂತೆ ನಾನೂ ವಿರೋಧಿಸು ತ್ತೇನೆ. ಈ ಮಹತ್ವವಾದ ಪ್ರಶ್ನೆಯನ್ನು ಬಿಟ್ಟು ಬೇರೊಂದು ಪ್ರಶ್ನೆಯನ್ನು ಕೈಗೆತ್ತಿಕೊಳ್ಳುವುದು ನನಗೂ ಇಷ್ಟವಿಲ್ಲ. ಒಂದೋ ಮತ್ತೊಮ್ಮೆ ಪ್ರಯತ್ನಿಸಿ ಅಲ್ಪಸಂಖ್ಯಾತರ ಈ ಪ್ರಶ್ನೆಯನ್ನು ನಿಮ್ಮ ನಿಮ್ಮಲ್ಲೇ ಬಿಡಿಸಿಕೊಂಡು ಏನಾದರೂ ವ್ಯವಸ್ಥೆ ಮಾಡಿಕೊಳ್ಳಿ, ಇದು ಅಸಾಧ್ಯವೆನಿಸಿದರೆ ಈ ವಿಷಯವನ್ನು ಇತ್ಯರ್ಥ ಮಾಡುವ ಯೋಜನೆಯೊಂದನ್ನು ಬ್ರಿಟಿಷ್‌ನ ಸರಕಾರ ಹಮ್ಮಿಕೊಂಡು ಮುಂದಿನ ಕೆಲಸಕ್ಕೆ ಕೈಹಾಕಲಿ. ಬೇರೊಂದು ರಾಷ್ಟ್ರದ ಜನರೆದುರು ಮಾತ್ರ ಈ ಪ್ರಶ್ನೆಯನ್ನು ಬಿಡಿಸುವ ಕಾರ್ಯ ವಹಿಸುವಂತಿಲ್ಲ. ಏಕೆಂದರೆ ಈ ವಿಷಯದಲ್ಲಿ ಬ್ರಿಟಿಷ್ ಸರಕಾರ ವಹಿಸಿಕೊಳ್ಳಬಹುದಾದಂತಹ ಜವಾಬ್ದಾರಿಯನ್ನು ಬೇರೊಂದು ರಾಷ್ಟ್ರ ವಹಿಸಿಕೊಳ್ಳಲಾರದು.

ಬ್ರಿಟಿಷರಿಂದ ಈ ರಾಜ್ಯವನ್ನು ಹಿಂದೂ ಜನರ ಕೈಗೆ ಅದೂ ವರಿಷ್ಠ ಜಾತಿಯ ಹಿಂದೂಗಳ ಕೈಗೆ ಅಧಿಕಾರ ಕೊಡಮಾಡುವ ರಾಜಕೀಯ ಚಳವಳಿಯ ದಲಿತ ಸಮಾಜ ಇಂದಿನವರೆಗೆ ಭಾಗವಹಿಸಿಲ್ಲ ಅನ್ನುವುದನ್ನು ಕೂಡ ನಾನಿಂದು ಎಲ್ಲರ ಗಮನಕ್ಕೆ ತರಲಿಚ್ಛಿಸುತ್ತೇನೆ. ಬ್ರಿಟಿಷ್ ಸರಕಾರದ ವಿರುದ್ಧ ದಲಿತರ ದೂರುಗಳಿವೆ. ಅಷ್ಟಕ್ಕೇ ರಾಜಕೀಯ ಬದಲಾವಣೆಗಳಾಗಬೇಕೆಂದು ದಲಿತರೆಂದೂ ಹಟ ಹಿಡಿಯಲಿಲ್ಲ. ಕೇವಲ ರಾಜಕೀಯ ಬದಲಾವಣೆಗಾಗಿ ಅವರು ಉತ್ಸುಕರಾಗಿಲ್ಲ, ಆದರೆ ಕೇವಲ ಇದಕ್ಕಾಗಿಯೇ ಮಾಡುತ್ತಿರುವ ಚಳವಳಿಯನ್ನು ನಿಲ್ಲಿಸುವುದು ಸರಕಾರಕ್ಕೆ ಸಾಧ್ಯವಿರದಿದ್ದರೆ ಹಾಗೂ ರಾಜಕೀಯ ಅಧಿಕಾರವನ್ನು ವಿಭಾಗಿಸುವುದು ಅಗತ್ಯವಾಗಿದ್ದರೆ ಆ ಅಧಿಕಾರಗಳು ಕೇವಲ ಹಿಂದೂ, ಮುಸಲ್ಮಾನರಂತಹ ಕೆಲವೇ ಜನರ ಕೈಯಲ್ಲಿ ಕೊಡುವುದಕ್ಕಿಂತ ಆ ಅಧಿಕಾರವನ್ನು ಯೋಗ್ಯ ಹಾಗೂ ಅವಶ್ಯಕ ಪ್ರಮಾಣದಲ್ಲಿ ಸರ್ವಸಾಮಾನ್ಯ ಜನತೆ ಹಾಗೂ ದಲಿತರಲ್ಲಿ ವಿಭಾಗಿಸಿ ಸಂರಕ್ಷಣೆಯ ಕೆಲವು ನಿಯಮಗಳನ್ನು ಹಾಕಿಕೊಡುವುದು ಅಗತ್ಯವಾಗಿದೆ. ಈ ಎಲ್ಲ ದೃಷ್ಟಿಯಿಂದ ಯೋಚಿಸಿದಾಗ ಈ ಪ್ರಶ್ನೆಯನ್ನು ಮೊದಲು ಬಿಡಿಸದೆ ಹೊಸ ಸಂವಿಧಾನವನ್ನು ತಯಾರಿಸುವುದರಲ್ಲಿ ನಾವು ಮನಸಾರೆ ಭಾಗವಹಿಸಲು ಹೇಗೆ ಸಾಧ್ಯ?

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)