ನೀರಿನ ಸೋರಿಕೆ ತಡೆಗಟ್ಟಲು ಡಿಸಿಎಂ ಅಶ್ವಥ್ ನಾರಾಯಣ ಸಲಹೆ
ಬೆಂಗಳೂರು, ಅ.11: ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ನೀರು ಸೋರಿಕೆಯನ್ನು ತಡೆಗಟ್ಟಿದ್ದೇ ಆದರೆ, ಉಳಿತಾಯವಾದ ನೀರನ್ನು ಮತ್ತಷ್ಟು ಪ್ರದೇಶಕ್ಕೆ ಸರಬರಾಜು ಮಾಡಬಹುದು ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ತಿಳಿಸಿದರು.
ಶುಕ್ರವಾರ ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರ ಸಭಾಂಗಣದಲ್ಲಿ ಇಂಡಿಯನ್ ಪ್ಲಂಬಿಂಗ್ ಅಸೋಸಿಯೇಷನ್ ಹಮ್ಮಿಕೊಂಡಿರುವ, ಎರಡು ದಿನಗಳ ಕಾಲ ಪ್ಲಂಬಿಂಗ್(ಕೊಳಾಯಿ) ಸಮ್ಮೇಳನ ಹಾಗೂ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಗರ ವ್ಯಾಪ್ತಿಯಲ್ಲಿರುವ ಕಾವೇರಿ, ಅರ್ಕಾವತಿ ನದಿ ನೀರಿನ ಪೈಪ್ ಲೈನ್ ಸೇರಿದಂತೆ ಕುಡಿಯುವ ನೀರಿನ ಸಣ್ಣಪುಟ್ಟ ಪೈಪ್ ಲೈನ್‌ಗಳಲ್ಲಿ ಸೋರಿಕೆಯಾಗುತ್ತಿದ್ದ ನೀರನ್ನು ತಡೆಗಟ್ಟುವ ಕಾರ್ಯ ಚಾಲ್ತಿಯಲ್ಲಿದೆ. ಇದರಿಂದ, ಲಕ್ಷಾಂತರ ಲೀಟರ್ ನೀರು ಉಳಿಕೆಯಾಗಲಿದೆ ಎಂದರು.
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ನೀರು ಸೋರಿಕೆಯನ್ನು ತಟೆಗಟ್ಟಲು ಕ್ರಮವಹಿಸಲಾಗಿದೆ ಎಂದ ಅವರು, ಸೋರಿಕೆ ತಡೆಗಟ್ಟಿದರೆ ನೀರಿನ ಸಮಸ್ಯೆವುಳ್ಳವರಿಗೆ ಪೂರೈಸಬಹುದಾಗಿದೆ. ಈ ಬಗ್ಗೆ ಜಲಮಂಡಳಿ ಗಂಭೀರವಾಗಿ ಆಲೋಚಿಸಬೇಕು ಎಂದರು.
ಅಸೋಸಿಯೇಷನ್ ಅಧ್ಯಕ್ಷ ಗುರ್ಮಿತ್ ಸಿಂಗ್ ಅರೋರಾ ಮಾತನಾಡಿ, ಪ್ರಸ್ತುತ ಸಾಲಿನಲ್ಲಿ ದೇಶದೆಲ್ಲೆಡೆ ಬರೋಬ್ಬರಿ 130 ಕೋಟಿ ಲೀಟರ್ ನೀರು ಉಳಿಸುವ ಗುರಿಯನ್ನು ಪ್ಲಂಬಿಂಗ್ ಸಂಘವು ಇಟ್ಟುಕೊಂಡಿದ್ದು, ಈ 26ನೇ ಸಮ್ಮೇಳನದಲ್ಲಿ 700 ಪ್ರತಿನಿಧಿಗಳು, 10 ಸಾವಿರಕ್ಕೂ ಅಧಿಕ ವ್ಯಾಪಾರ ಸಂದರ್ಶಕರು ಮತ್ತು ಕೊಳಾಯಿ ಸಲಹೆಗಾರರು, ಕೊಳಾಯಿ ಗುತ್ತಿಗೆದಾರರು, ವಾಸ್ತುಶಿಲ್ಪಿಗಳು, ಒಳಾಂಗಣ ವಿನ್ಯಾಸಕರು ಭಾಗಿಯಾಗಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೆಂಗಳೂರು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಸೇರಿದಂತೆ ಪ್ರಮುಖರಿದ್ದರು.