ಪೊಲೀಸರಿಗೆ ತಲೆನೋವಾಗಿರುವ ಅನಾಥ ಮೃತದೇಹಗಳ ವಿಲೇವಾರಿ
ಬಂಟ್ವಾಳ ತಾಲೂಕು ಆಸ್ಪತ್ರೆಗೆ ಬೇಕಿದೆ ಶವ ಶೈತ್ಯಾಗಾರ
ಬಂಟ್ವಾಳ, ಅ. 12: ಬಂಟ್ವಾಳ ತಾಲೂಕು ವ್ಯಾಪ್ತಿಯು ಬಹುಭಾಗ ನೇತ್ರಾವತಿ ನದಿ ತಟದಲ್ಲಿ ಹರಡಿಕೊಂಡಿದ್ದು, ಆಗಾಗ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗುತ್ತಿರುತ್ತವೆ. ಇಂತಹ ಸಂದರ್ಭದಲ್ಲಿ ಮೃತರ ಮಕ್ಕಳು ಅಥವಾ ಸಂಬಂಧಿಕರು ಬರುವವರೆಗೆ ಶವವನ್ನು ಕೊಳೆಯದಂತೆ ಕಾಪಾಡಲು ಶೈತ್ಯಾಗಾರದ ಅಗತ್ಯವಿದೆ. ಆದರೆ, ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ಶೈತ್ಯಾಗಾರ ಇಲ್ಲದ ಕಾರಣ ಪೊಲೀಸರಿಗೆ ಅನಾಥ ಮೃತದೇಹಗಳ ವಿಲೇವಾರಿಯೂ ತಲೆನೋವಾಗಿದ್ದು, ಮೃತದೇಹಗಳ ಸಂರಕ್ಷಣೆ ಪೊಲೀಸರಿಗೆ ಮತ್ತೊಂದು ಸವಾಲಾಗಿ ಪರಿಣಮಿಸಿದೆ.
ಜೊತೆಗೆ ಸಾರ್ವಜನಿಕ ಸ್ಥಳ, ಗುಡ್ಡಗಾಡು, ನಿರ್ಜನ ಪ್ರದೇಶಗಳಲ್ಲೂ ಮೃತದೇಹ ಪತ್ತೆ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಅಂತಹ ಅಪರಿಚಿತ ಮೃತದೇಹಗಳ ಗುರುತು ಪತ್ತೆ ಹಚ್ಚಿ, ಮೃತದೇಹ ಕೊಂಡೊಯ್ಯುವಷ್ಟರಲ್ಲಿ ಅದು ಕೊಳೆತು ಹೋಗಿರುತ್ತದೆ.
ದುಬಾರಿ ಶುಲ್ಕ-ಸಾಗಾಟ ವೆಚ್ಚ: ಪ್ರಸಕ್ತ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಸಿಗುವ ಅಪರಿಚಿತ ಮೃತದೇಹಗಳನ್ನು ಮಂಗಳೂರಿಗೆ ಕೊಂಡೊಯ್ಯಬೇಕಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಸ್ಥಳಾವಕಾಶವಿಲ್ಲದ ಕಾರಣ ಖಾಸಗಿ ಆಸ್ಪತ್ರೆಗಳನ್ನು ಆಶ್ರಯಿಸಬೇಕಾದ ಅನಿವಾರ್ಯ ಇದೆ. ಅಲ್ಲಿ ದುಬಾರಿ ಶುಲ್ಕ ಪಾವತಿಸಬೇಕಾಗುತ್ತಿದ್ದು, ಸಾಗಾಟ ವೆಚ್ಚ ಭರಿಸುವಲ್ಲಿ ಬಡವರಿಗೆ ತುಂಬ ಕಷ್ಟವಾಗುತ್ತಿದೆ. ಕೆಲವೊಮ್ಮೆ ಪೊಲೀಸರೇ ಈ ವೆಚ್ಚ ಭರಿಸಬೇಕಾಗುತ್ತದೆ.
ವೈದ್ಯರಿಗೆ ಹೊರೆ: ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಕರಣಗಳಿಗೆ ಸಂಬಂಧಿಸಿದ ಮೃತದೇಹಗಳ ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ತರುವುದರಿಂದ ಮರಣೋತ್ತರ ಪರೀಕ್ಷೆ ನಡೆಸುವುದು ವೈದ್ಯರಿಗೆ ಹೊರೆಯಾಗುತ್ತಿದ್ದು, ಬದಲಾಗಿ ಪುಂಜಾಲಕಟ್ಟೆ ಅಥವಾ ವಾಮದಪದವು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಾಗಿಸಿದರೆ ಒಳಿತು ಎಂದು ತಾಲೂಕು ಆಸ್ಪತ್ರೆಯು ಪೊಲೀಸ್ ಇಲಾಖೆಗೆ ಮನವಿ ಮಾಡಿದೆ.
ಕೆಲವೊಂದು ಜಿಲ್ಲೆಗಳಲ್ಲಿ ಖಾಸಗಿ ಸಂಘ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಸಂಚಾರಿ ಮೃತದೇಹ ಶೈತ್ಯಾಗಾರಗಳು ಕಾರ್ಯನಿರ್ವಹಿಸುತ್ತಿವೆ. ಆ ಮೂಲಕ ಅಪರಿಚಿತ ಮೃತದೇಹಗಳು ಮಾತ್ರವಲ್ಲದೆ ವಿದೇಶ, ದೂರದ ಊರುಗಳಿಂದ ಬಂಧುಗಳು ಬರುವವರೆಗೆ ಸಂರಕ್ಷಿಸಿಡಲು ಅನುಕೂಲವಾಗುತ್ತದೆ. ಬಡವರಿಗೆ ರಿಯಾಯಿತಿ ಬಾಡಿಗೆ ದರದಲ್ಲಿಯೂ ಸೇವೆ ಒದಗಿಸಲಾಗುತ್ತದೆ. ಈ ರೀತಿಯ ವ್ಯವಸ್ಥೆ ಬಂದರೂ ಒಳ್ಳೆಯದು ಹಾಗೂ ಬಂಟ್ವಾಳ ತಾಲೂಕು ಸಾರ್ವಜನಿಕರ ಆಸ್ಪತ್ರೆಯಲ್ಲಿ ಶವಾಗಾರ ವ್ಯವಸ್ಥೆಯನ್ನು ಶೀಘ್ರ ಒದುಗಿಸ ಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಶವ ಶೈತ್ಯಾಗಾರ ಇಲ್ಲದಿರುವುದರಿಂದ ಅಪರಿಚಿತ ಮೃತದೇಹಗಳನ್ನು ಮಂಗಳೂರಿನ ವೆನ್ಲಾಕ್ ಅಥವಾ ಖಾಸಗಿ ಆಸ್ಪತ್ರೆಗಳಿಗೆ ಸಾಗಿಸಬೇಕಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ದಿನಕ್ಕೆ 800 ರೂ. ಶುಲ್ಕ ಹಾಗೂ 3 ಸಾವಿರ ರೂ. ಸಾಗಾಟ ವೆಚ್ಚವನ್ನು ನೀಡಬೇಕಾಗಿರುವುದರಿಂದ ಬಡವರಿಗೆ ವೆಚ್ಚ ಭರಿಸಲು ಕಷ್ಟವಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಲಾಗಿದೆ.
-ಪ್ರಸನ್ನ, ಎಸ್ಸೈ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ
ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ಶವ ಶೈತ್ಯಾಗಾರ ಒದಗಿಸುವಂತೆ ಎಂಆರ್‌ಪಿಎಲ್ ಸಂಸ್ಥೆಯ ಸಿಎಸ್‌ಆರ್ ಫಂಡ್‌ನಲ್ಲಿ ಮನವಿ ಸಲ್ಲಿಸಲಾಗಿದ್ದು, ಶೀಘ್ರ ನೀಡುವುದಾಗಿ ಎಂಆರ್‌ಪಿಎಲ್ ತಿಳಿಸಿದೆ. ಅದಲ್ಲದೆ, ಶಾಸಕರು ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಶವ ಶೈತ್ಯಾಗಾರ ಒದಗಿಸುವ ಭರವಸೆ ನೀಡಿದ್ದಾರೆ.
-ಡಾ.ದೀಪಾ ಪ್ರಭು, ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ