ಸೈಕಲ್ ಮೋನು
ಕಥಾಸಂಗಮ
ಇನ್ನೇನೋ ಕೋಳಿ ಕೂಗುವ ಮುನ್ನ ಮಂಗಳೂರಿನ ಬಂದರ್ ದಕ್ಕೆಗೆ ಹೊರಡಬೇಕು ಎಂದು ನಿರ್ಧರಿಸಿ ನಿದ್ದೆಗೆ ಜಾರಿದ್ದ 55ರ ಹರೆಯದ ಸೈಕಲ್ ಮೋನುಗೆ ಭೂಕಂಪವಾದರೂ ಅರಿವಿಗೆ ಬಾರದಷ್ಟು ಸವಿನಿದ್ದೆ. ಪತ್ನಿ ಝೀನತ್ ಮತ್ತು ಇತ್ತೀಚೆಗೆ ಸೈಕಲ್‌ನಲ್ಲೇ ವ್ಯಾಪಾರ ಶುರುಮಾಡಿರುವ ಇಬ್ಬರು ಗಂಡು ಮಕ್ಕಳಿಗೂ ಸಕ್ಕರೆ ನಿದ್ದೆ.
‘ವಿ’ ಆಕಾರದ ಹೆಂಚಿನ ಪುಟ್ಟದಾದ ಆ ನಾಲ್ಕು ಮಂದಿಯ ಕುಟುಂಬದ ಪ್ರೀತಿಯ ನಾಯಿ ಮಾತ್ರ ಇನ್ನೂ ಎಚ್ಚರದಲ್ಲಿತ್ತು. ಮನೆಯ ಮುಂದಿದ್ದ ರಸ್ತೆಯ ಅಂಚಿನಲ್ಲಿ ನಿಂತ ಜೀಪಿನಿಂದ ಇಳಿದ ಪೊಲೀಸರು ಮನೆಯತ್ತ ಬರುವುದನ್ನು ಗಮನಿಸಿದ ನಾಯಿ ಒಂದೇ ಸವನೆ ಬೊಗಳತೊಡಗಿತು. ಪೊಲೀಸರು ತಮ್ಮಲ್ಲಿದ್ದ ದೊಣ್ಣೆ ಬೀಸಿ ನಾಯಿಯನ್ನು ದೂರ ಸರಿಸಿದರಲ್ಲದೆ ಆ ಮನೆಯ ಕದ ತಟ್ಟಿದರು. ‘‘ಮೋನು... ಮೋನು’’ ಎಂದು ನಾಲ್ಕು ಬಾರಿ ಕೂಗಿ ಕರೆದರು. ಎಚ್ಚರಗೊಂಡ ಮೋನು ನಿದ್ದೆಗಣ್ಣಿನಲ್ಲೇ ‘‘ಓಹ್, ತಡವಾಯಿತೇ?’’ ಎಂದು ತನ್ನಲ್ಲೇ ಕೇಳಿ ಎದ್ದು ಕಣ್ಣೊರೆಸಿದರು. ಹೊರಗೆ ಯಾರೋ ತನ್ನನ್ನು ಕೂಗಿ ಕರೆಯುತ್ತಿದ್ದುದನ್ನು ಕೇಳಿ ಆಶ್ಚರ್ಯ ಚಕಿತರಾದರು.
‘‘ಮೋನು... ನಾನು ಇನ್‌ಸ್ಪೆಕ್ಟರ್ ಮುಕುಂದ್... ಬೇಗ ಬಾಗಿಲು ತೆಗೆ’’
ಪರಿಚಯ ಇದ್ದರೂ ತಬ್ಬಿಬ್ಬಾದ ಮೋನು ‘‘ಏನಾಯಿತು ಸಾರ್?’’ ಎಂದು ಕೇಳಿ ಬಾಗಿಲು ತೆರೆಯಲು ಮುಂದಾದರು. ಹೆದರಿದ ಪತ್ನಿ ಗಂಡನನ್ನು ತಡೆದರೂ ಕೇಳಿಸಿಕೊಳ್ಳದ ಮೋನು, ಯಾರದೋ ಮನೆಯ ದಾರಿ ಕೇಳಲಿಕ್ಕೆ ಬಂದಿರಬಹುದು ಎಂದು ಪತ್ನಿಗೆ ಹೇಳಿ ಬಾಗಿಲು ತೆರೆದು ‘‘ಬನ್ನಿ ಸಾರ್... ಬನ್ನಿ...’’ ಎಂದು ಒಳಗೆ ಕರೆದರು. ‘‘ಮೋನು... ನಿನ್ನ ಮನೆಯೊಳಗೆ ಬರುವ ಸ್ಥಿತಿಯಲ್ಲಿ ನಾವೀಗ ಇಲ್ಲ. ನಿನ್ನ ಜೊತೆ ಸ್ವಲ್ಪ ಮಾತನಾಡಲಿಕ್ಕಿದೆ. ಜೀಪು ಹತ್ತು’’ ಎಂದು ಇನ್‌ಸ್ಪೆಕ್ಟರ್ ಹೇಳಿದರು.
‘‘ಹೇಳಿ... ಸಾರ್... ಅಂಥದ್ದು ಏನಾಯಿತು?’’-ಪರಿಚಯ ಇದ್ದರೂ ಪೊಲೀಸರನ್ನು ನಂಬಬಾರದು ಎಂದು ಗೆಳೆಯರು ಹೇಳಿದ್ದನ್ನು ಜ್ಞಾಪಿಸಿಕೊಂಡ ಮೋನು ‘‘ಯಾಕೆ... ಏನು?’’ ಎಂಬಂತೆ ಪೊಲೀಸರ ಮುಖ ದಿಟ್ಟಿಸಿದರು. ‘‘ಗೊತ್ತಿಲ್ಲ. ಡಿವೈಎಸ್ಪಿ ಠಾಣೆಯಲ್ಲಿದ್ದಾರೆ. ನಿನ್ನ ಜೊತೆ ಅವರಿಗೆ ಮಾತನಾಡಲಿಕ್ಕಿದೆಯಂತೆ’’ ಎನ್ನುತ್ತಾ ಇನ್‌ಸ್ಪೆಕ್ಟರ್, ಮೋನುನನ್ನು ಜೀಪು ಹತ್ತಿಸಿದರು. ಪತ್ನಿ ಝೀನತ್ ಮತ್ತು ಇಬ್ಬರು ಗಂಡು ಮಕ್ಕಳು ಕೂಡ ಪೊಲೀಸರ ಜೊತೆ ಹೊರಡಲು ಮುಂದಾದರು. ಅದನ್ನು ತಡೆದ ಪೊಲೀಸರು ‘‘ಹಾಗೇನೂ ಇಲ್ಲ. ಆದಷ್ಟು ಬೇಗ ಬಿಟ್ಟು ಬಿಡುತ್ತೇವೆ’’ ಎಂದರು. ಪೊಲೀಸರು ತಂದೆಯ ಪರಿಚಯಸ್ಥರಾದ ಕಾರಣ ಮಕ್ಕಳು ತಾಯಿಯನ್ನೇ ಸಮಾಧಾನಪಡಿಸಿ ಸುಮ್ಮನಾದರು.
‘‘ಸಾರ್... ಏನು ವಿಷಯ?’’ ಜೀಪು ಸಾಗುತ್ತಿದ್ದಂತೆಯೇ ಮೋನು ಪ್ರಶ್ನಿಸಿದರು.
ಕನಿಷ್ಟ 2-3 ವಾರ ಜೈಲಲ್ಲಿರಬೇಕಾಗಬಹುದು ಎಂದು ಅರಿತಿದ್ದ ಇನ್‌ಸ್ಪೆಕ್ಟರ್ ‘‘ಮೋನು... ನಿನ್ನ ವಿರುದ್ಧ ಒಂದು ದೂರು ಬಂದಿದೆ. ಆದರೆ, ಅದನ್ನು ದಾಖಲಿಸದೆ ಇರಲಿಕ್ಕೆ ನಮ್ಮಿಂದ ಆಗುವುದಿಲ್ಲ. ಯಾಕೆಂದರೆ ಇದು ರಾಜಿಪಂಚಾತಿಗೆ ಮಾಡಿ ಮುಗಿಸುವ ಕೇಸಲ್ಲ. ಪೊಕ್ಸೊ... ಪೊಕ್ಸೊ ಕೇಸು. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ. ಇದನ್ನು ರಾಜಿಯಲ್ಲಿ ಮುಗಿಸಿದರೆ ನ್ಯಾಯಾಲಯ ನಮ್ಮ ಮೇಲೆ ಸ್ವತಃ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟಬಹುದು’’ ಎಂದರು.
‘‘ನನ್ನ ಮೇಲೆ ಅಂತಹ ದೂರಾ? ಯಾರು ಕೊಟ್ಟರು ಸಾರ್?’’ ಮೋನು ಪ್ರಶ್ನಿಸಿದ.
ಇನ್‌ಸ್ಪೆಕ್ಟರ್ ಮಾತನಾಡಲಿಲ್ಲ. ಮೋನುಗೆ ಠಾಣೆಯ ಉದ್ದಗಲ ಪರಿಚಯ ಇದೆ. ಅಲ್ಲಿರುವ ಪೊಲೀಸರೊಂದಿಗೆ ಸಲುಗೆಯೂ ಇದೆ. ಪೊಲೀಸರಿಗೂ ಮೋನು ಮೇಲೆ ವಿಶೇಷ ಪ್ರೀತಿ. ತಮಗೆ ಒಳ್ಳೆಯ ಮಾಂಸ, ಮೀನು ಮಾತ್ರವಲ್ಲ ಹಳ್ಳಿಯ ಮದ್ದು, ಜೇನು ಇತ್ಯಾದಿ ಏನೇ ಬೇಕಾಗಿದ್ದರೂ ಮೋನುಗೆ ಹೇಳಿದರೆ ಸಾಕು. ಮರುದಿನವೇ ಅವರು ಪೊಲೀಸರಿಗೆ ಒಪ್ಪಿಸಿ ಬಿಡುತ್ತಾರೆ. ಪೊಲೀಸರೂ ಅಷ್ಟೆ, ಚೌಕಾಸಿ ಮಾಡದೆ ಮೋನು ಹೇಳಿದಷ್ಟು ಹಣ ಕೊಟ್ಟು ಬಿಡುತ್ತಾರೆ. ಕೆಲವು ಪೊಲೀಸರಿಗಂತೂ ಮೋನು ಆಪತ್ಭಾಂದವ. ತಮ್ಮ ಗರ್ಭಿಣಿ ಹೆಂಡತಿ, ಬಾಣಂತಿ ಹೆಂಡತಿಯರಿಗೆ ಬೇಕಾದ ಆಹಾರ-ಔಷಧಿ ಬೇಕಿದ್ದರೆ ಮೋನು ಬಳಿ ಹೇಳಿಕೊಂಡರೆ ಸಾಕು, ಯಾವ ಸಮಸ್ಯೆಯಲ್ಲಿದ್ದರೂ ತೋರಿಸಿಕೊಳ್ಳದೆ ತಕ್ಷಣ ಅದನ್ನು ಪೂರೈಸುತ್ತಿದ್ದರು. ಕೆಲವೊಮ್ಮೆ ಇರಲಿ... ನನ್ನ ತಂಗಿಗೆ ಸಮಾನ ಎಂದು ಮೋನು ಹೇಳುವುದುಂಟು. ಅಂತಹ ಮೋನು ಜೈಲು ಪಾಲಾಗುವುದನ್ನು ಊಹಿಸಿಕೊಳ್ಳಲು ಪೊಲೀಸರಿಗೂ ಆಗುತ್ತಿಲ್ಲ.
‘‘ಮೋನು... ನಿನ್ನ ಮೇಲೆ ಒಂದು ದೂರು ಬಂದಿದೆ. ಈ ದೂರನ್ನು ನಮಗೆ ನಿರ್ಲಕ್ಷಿಸಲು ಸಾಧ್ಯವಿಲ್ಲ. ಸತ್ಯ ಸಂಗತಿ ಏನು ಎಂಬುದು ತನಿಖೆಯ ಬಳಿಕ ತಿಳಿಯಬಹುದು. ಆದರೆ ಪ್ರಕರಣ ದಾಖಲಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸುತ್ತೇವೆ. ಸ್ವಲ್ಪ ದಿನ ನೀನು ಜೈಲಿನಲ್ಲಿರಬೇಕಾದೀತು’’ ಎಂದು ಡಿವೈಎಸ್ಪಿ ಕಾಮತ್ ನುಡಿದರು.
ಮೋನು ಒಂದು ಕ್ಷಣ ಔಹಾರಿದರು. ಆಕಾಶವೇ ಕಳಚಿ ಬಿದ್ದಂತೆ ಅವರಿಗೆ ಆಯಿತು. ಬಾಯಿ ಕಟ್ಟಿದಂತಾಯಿತು. ಹೊರಗೆ ಮೆಲ್ಲನೆ ಇಣುಕಿದರು. ಮಂದ ಬೆಳಕಿನಲ್ಲಿ ತನ್ನಿಬ್ಬರು ಮಕ್ಕಳು, ನೆರೆಯ ನಾಲ್ಕೈದು ಯುವಕರನ್ನು ಕಂಡರು. ‘‘ಅಲ್ಲಾಹು ದೊಡ್ಡವ. ಅವ ನನ್ನನ್ನು ಕೈ ಬಿಡಲಾರ. ನಾನು ಯಾರಿಗೂ ಅನ್ಯಾಯ, ಅಕ್ರಮ ಮಾಡಿದವನಲ್ಲ. ಅದೇ ನನ್ನನ್ನು ರಕ್ಷಿಸುತ್ತದೆ’’ ಎಂದು ಮೋನು ನಂಬಿದರು. ಸಮಯ ಉರುಳುತ್ತಲೇ ಠಾಣೆಯ ಸುತ್ತಮುತ್ತ ನೂರಾರು ಮಂದಿ ಜಮಾಯಿಸಿ ಮೋನುವನ್ನು ಬಿಟ್ಟುಬಿಡಿ ಎಂದು ಆಗ್ರಹಿಸತೊಡಗಿದರು. ಕಳೆದ ರಾತ್ರಿ ಊರಿನ ಉರೂಸ್ ಸಂದರ್ಭ ಮೋನು ಒಬ್ಬ ಬಾಲಕಿಯ ಕೆನ್ನೆ ಚಿವುಟಿದ್ದಾರಂತೆ. ಅದಕ್ಕೆ ಸಂಬಂಧಿಸಿ ಬಾಲಕಿಯ ತಂದೆ ದೂರು ಕೊಟ್ಟಿದ್ದಾರೆ. ಅದರ ಆಧಾರದ ಮೇಲೆ ದೂರು ದಾಖಲಿಸಲಾಗಿದೆ ಎಂದು ಒಬ್ಬ ಪೊಲೀಸ್ ತನ್ನ ಪರಿಚಯದ ಯುವಕನಲ್ಲಿ ಹೇಳಿದರು.
‘‘ಬಾಲಕಿ ಯಾರು? ಆಕೆಯ ತಂದೆ ಯಾರು?’’ ಯುವಕ ಕೇಳಿದ.
ಬಾಲಕಿಯ ತಂದೆಯ ಹೆಸರು ಬಹಿರಂಗಪಡಿಸಿದ ಪೊಲೀಸ್ ಬಾಲಕಿಯ ತಂದೆಗೆ ಹಣದ ಆಮಿಷ ಒಡ್ಡಿ ನಿಮ್ಮ ವಾರ್ಡಿನ ಗ್ರಾಮ ಪಂಚಾಯತ್ ಸದಸ್ಯ ಪ್ರೇರಣೆ ನೀಡಿರುವ ಸಾಧ್ಯತೆ ಇದೆ ಎಂದು ಸಂಶಯ ವ್ಯಕ್ತಪಡಿಸಿದರು. ಅಷ್ಟು ಮಾಹಿತಿ ಹೊರ ಬಿದ್ದದ್ದೇ ತಡ, ಯುವಕರ ಪಿತ್ತ ನೆತ್ತಿಗೇರಿತು.
***
ಮೋನುವಿನ ನಿಜ ನಾಮ ಏನು ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಊರಿನ ಸಣ್ಣ ಮಕ್ಕಳಿಂದ ಹಿಡಿದು ಹಿರಿಯರೆಲ್ಲರೂ ಅವರನ್ನು ‘ಸೈಕಲ್ ಮೋನು’ ಎಂದೇ ಕರೆಯುತ್ತಾರೆ. ಹಾಗಾಗಿ ಸೈಕಲ್ ಮೋನು ಊರಿನ ಎಲ್ಲರಿಗೂ ಚಿರಪರಿಚಿತ. ಶಾಲೆ-ಮದ್ರಸದ ಮುಖ ನೋಡದ ಸೈಕಲ್ ಮೋನು ತನ್ನ 10ರ ಹರೆಯದಲ್ಲೇ ಸಣ್ಣಪುಟ್ಟ ವ್ಯಾಪಾರಕ್ಕಿಳಿದವರು. ಮೀನು-ಮಾಂಸ, ಮಾವಿನ ಹಣ್ಣು. ಈರೋಲ್, ಬುಗುರಿ, ಐಸ್‌ಕ್ಯಾಂಡಿ ಹೀಗೆ ಎಲ್ಲ ವ್ಯಾಪಾರದಲ್ಲೂ ತೊಡಗಿಸಿಕೊಂಡ ಶ್ರಮಜೀವಿ. ಅಕ್ಷರ ಜ್ಞಾನವಿಲ್ಲದಿದ್ದರೂ ಇತರರ ಸಹಾಯ ಪಡೆದು ಊರವರಿಗೆ ರೇಶನ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿ, ಸ್ಕಾಲರ್‌ಶಿಪ್, ಸರಕಾರದ ಬೇರೆ ಬೇರೆ ಪಿಂಚಣಿಯನ್ನು ಮಾಡಿಸಿಕೊಡುತ್ತಿದ್ದರು. ಆದರೆ ಯಾರಿಂದಲೂ ನಯಾಪೈಸೆ ತೆಗೆದುಕೊಳ್ಳುತ್ತಿರಲಿಲ್ಲ. ಇಂತಹ ಮೋನುಗೆ ಒಂದು ಖಯಾಲಿ ಇತ್ತು. ಗ್ರಾಮದ ಪ್ರತಿಯೊಂದು ಚುನಾವಣೆಯಲ್ಲಿ ಸ್ಪರ್ಧಿಸುವುದು. ಹಾಗಂತ ಗೆಲ್ಲಬೇಕು ಎಂಬ ಆಸೆ ಅವರಿಗೆ ಇರಲಿಲ್ಲ. ಬದಲಾಗಿ ಅವಿರೋಧ ಆಯ್ಕೆಯನ್ನು ತಪ್ಪಿಸುವುದು ಅವರ ಗುರಿಯಾಗಿತ್ತು. ನಾಮಪತ್ರ ಸಲ್ಲಿಸಿದ ಬಳಿಕ ಅವರೆಂದೂ ಮತ ಯಾಚಿಸಿದವರಲ್ಲ. ತನ್ನ ಪಾಡಿಗೆ ತನ್ನ ಕೆಲಸ ಮಾಡುತ್ತಿದ್ದರು. ಇವರ ಈ ಖಯಾಲಿಯು ಊರಿನ ರಾಜಕೀಯ ಪುಢಾರಿಗಳ ಪ್ರತಿಷ್ಠೆಗೆ ಹೊಡೆತ ಬಿದ್ದಿತ್ತು. ಗ್ರಾಮ ಪಂಚಾಯತ್ ಸದಸ್ಯನಾಗಿ ಅವಿರೋಧ ಆಯ್ಕೆಯಾಗುವ ಎಲ್ಲ ಸಾಧ್ಯತೆಗಳಿದ್ದರೂ ಕೂಡ ಮೋನುನಿಂದಾಗಿ ಅದೆಲ್ಲಾ ಕೈ ತಪ್ಪುತ್ತಿತ್ತು. ಎಲ್ಲ ವಿಷಯದಲ್ಲಿ ಮೃದುವಾಗುತ್ತಿದ್ದ ಮೋನು ಈ ವಿಷಯದಲ್ಲಿ ಮಾತ್ರ ಕಟುವಾಗುತ್ತಿದ್ದರು. ಯಾರ ಮಾತನ್ನೂ ಕೇಳದೆ ನಾಮಪತ್ರ ಸಲ್ಲಿಸಿ ಕೆಲವು ದಿನ ಕಣ್ಮರೆಯಾಗುವುದುಂಟು. ಇದರಿಂದಾಗಿ ಅವರು ಪುಢಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಕೆಲವರು ನಿಮ್ಮನ್ನು ಒಂದು ಕೈ ನೋಡುತ್ತೇನೆ ಎಂದು ಬೆದರಿಸಿದ್ದೂ ಇದೆ. ಆದರೆ, ಮೋನು ಯಾವುದನ್ನೂ ಗಣನೆಗೆ ತೆಗೆದುಕೊಂಡವರಲ್ಲ.
***
ಮೋನು ಜೈಲು ಸೇರಿ ಒಂದು ವಾರ ಕಳೆದಿದೆ. ಮೊದಲ ದಿನ ಕೈದಿಗಳಿಂದಲೇ ಒಂದೆರಡು ಏಟು ಬಿದ್ದಿತ್ತು. ಎರಡ್ಮೂರು ದಿನ ಜೀತದಾಳುವಿನಂತೆ ಕಳೆದ ಮೋನು ಬಗ್ಗೆ ತಿಳಿದುಕೊಂಡಿದ್ದ ಪಕ್ಕದ ಊರಿನ ಇತರ ಕೈದಿಗಳು ಮೋನುನನ್ನು ಪ್ರೀತಿಯಿಂದ ಕಾಣತೊಡಗಿದರು.
ಶ್ರಮಜೀವಿ ಮೋನುಗೆ ಪದೇ ಪದೇ ಹೆಂಡತಿ-ಮಕ್ಕಳ ನೆನಪು ಕಾಡತೊಡಗಿತ್ತು. ಜೈಲಿನಲ್ಲಿ ಸುಮ್ಮನೆ ಕೂರಲು ಆಗಲಿಲ್ಲ. ಏನಾದರು ಕೆಲಸ ಕೊಡಿ ಎಂದು ಜೈಲು ಅಧೀಕ್ಷಕರಲ್ಲಿ ಕೇಳುತ್ತಿದ್ದರು. ತನ್ನನ್ನು ನೋಡಲು ಬಂದ ಮಕ್ಕಳು, ಸ್ನೇಹಿತರು, ಸಂಬಂಧಿಕರ ಬಳಿ ತನ್ನ ಜಾಮೀನು, ಬಿಡುಗಡೆಯ ಬಗ್ಗೆ ಕೇಳುತ್ತಿದ್ದರು. ಇಂದು... ನಾಳೆ ಎನ್ನುತ್ತಲೇ ಮೂರು ವಾರ ಉರುಳಿದುದು ಗೊತ್ತೇ ಆಗಲಿಲ್ಲ. ಗಂಡನಿಗಾಗಿ ಸದಾ ಕೊರಗುತ್ತಿದ್ದ ಪತ್ನಿ ಝೀನತ್ ಇನ್ನಿಲ್ಲದ ಹರಕೆ, ಪ್ರಾರ್ಥನೆಯಲ್ಲಿ ಮುಳುಗಿ ಹೋದರು.
ಅಂತೂ ಒಂದು ತಿಂಗಳ ಬಳಿಕ ಮೋನು ಜೈಲಿನಿಂದ ಬಿಡುಗಡೆ ಹೊಂದಿ ಮನೆಗೆ ಕಾಲಿಟ್ಟರು. ಹೆಂಡತಿಯನ್ನು ಅಪ್ಪಿ ಹಿಡಿದು ‘‘ನಾನು ಅಂತಹ ನೀಚ ಅಲ್ಲ. ಯಾವ ತಪ್ಪೂ ಮಾಡಿಲ್ಲ’’ ಎಂದರು. ಗಂಡನ ಬಗ್ಗೆ ತಿಳಿದುಕೊಂಡಿದ್ದ ಆಕೆ ಕೂಡ ಅಲ್ಲಾಹು ದೊಡ್ಡವ ಎಂದು ಹೇಳಿ ಸಮಾಧಾನಪಡಿಸಿದರು.
ಜೈಲಿನಿಂದ ಹೊರ ಬಂದ ಬಳಿಕ ಮೋನು ವಿಚಲಿತರಾಗಲಿಲ್ಲ. ತಾನು ಯಾವ ತಪ್ಪು ಮಾಡಿಲ್ಲ ಎಂದು ಊರಿಗೆ ಊರೇ ಹೇಳುವಾಗ ತಾನು ಕಣ್ತಪ್ಪಿಸಿ ಓಡಾಡುವ ಅಗತ್ಯವಿಲ್ಲ ಎಂದು ಭಾವಿಸಿ ಅವರು ಎಂದಿನಂತೆ ದಿನ ಕಳೆಯತೊಡಗಿದರು.
ಮೋನುನ ಹಿರಿಯ ಮಗ ಸಾದಿಕ್ ಪೊಕ್ಸೊ ಕಾಯ್ದೆಯ ಬಗ್ಗೆ ತನ್ನ ಪರಿಚಯದ ವಕೀಲರ ಬಳಿ ಚರ್ಚಿಸಿದ. ಸುಳ್ಳು ದೂರು ಕೊಟ್ಟದ್ದು ಸಾಬೀತಾದರೆ ದೂರು ಕೊಟ್ಟವರ ಮತ್ತು ಅದಕ್ಕೆ ಪ್ರೇರೇಪಿಸಿದವರ ಮೇಲೂ ಕೇಸು ದಾಖಲಿಸಬಹುದು ಎಂದು ಕೇಳಿ ತಿಳಿದುಕೊಂಡ. ತನ್ನ ವಿರುದ್ಧ ದೂರು ಕೊಟ್ಟ ಬಾಲಕಿಯ ತಂದೆಯ ಬಳಿ ಒಮ್ಮೆ ಹೋಗಿ ಮಾತನಾಡಿಸಿ ಬರಬೇಕು ಎಂದು ತಂದೆ ಹೇಳುತ್ತಿದ್ದುದನ್ನು ಕೇಳಿಸಿಕೊಂಡಿದ್ದ ಸಾದಿಕ್, ತಂದೆಯ ಅಂಗಿಯ ಕಿಸೆಯಲ್ಲಿ ಗುಪ್ತ ಕ್ಯಾಮರಾ ಸಿಕ್ಕಿಸಿ ‘‘ಇದನ್ನು ಆ ಮನೆಗೆ ಹೋಗಿ ಬರುವವರೆಗೆ ತೆಗೆಯಬೇಡಿ ಮತ್ತು ಯಾರಿಗೂ ಕೊಡಬೇಡಿ’’ ಎಂದ.
‘‘ಛೇ.. ಓದಲು-ಬರೆಯಲು ಬಾರದ ನನಗೆ ಯಾಕೆ ಈ ಪೆನ್ನು?’’ ಎಂದು ಮೋನು ಕೇಳಿಕೊಂಡರೂ ಸಾದಿಕ್ ತಂದೆಯ ಮನ ಒಲಿಸಿದ.
ಮೋನು ಚಾಕ್ಲೆಟ್ ಪ್ರಿಯ. ತನ್ನ ಅಂಗಿಯ ಕಿಸೆ ತುಂಬಾ ಚಾಕ್ಲೆಟ್ ಹಾಕಿ ದಾರಿಯಲ್ಲಿ ಎದುರಾದ ಮಕ್ಕಳಿಗೆ ಪ್ರೀತಿಯಿಂದ ಕೊಟ್ಟು ಮುದ್ದಿಸುತ್ತಾರೆ. ಆವತ್ತೂ ಉರೂಸ್ ದಿನ ಐಸ್‌ಕ್ಯಾಂಡಿಗಾಗಿ ಬಂದಿದ್ದ ಬಾಲಕಿಗೆ ಚಾಕ್ಲೆಟ್ ನೀಡಿ ಕೆನ್ನೆ ಚಿವುಟಿದ ನೆನಪಿದೆ. ಅದರ ಹೊರತು ತಾನೇನೂ ಮಾಡಿಲ್ಲ. ಈ ಚಾಕ್ಲೆಟ್ ನನ್ನನ್ನು 1 ತಿಂಗಳು ಜೈಲು ಸೇರುವಂತೆ ಮಾಡಿತು. ಇನ್ನು ಇದರ ಸಹವಾಸ ಬೇಡ ಎಂದು ನಿರ್ಧರಿಸಿದಾಗಲೇ ಮಗ ಚಾಕ್ಲೆಟ್ ಬದಲು ಪೆನ್ನು ಸಿಕ್ಕಿಸಿದ್ದು ಮೋನುಗೆ ಕಿರಿಕಿರಿಯಾಯಿತು. ಆದರೂ ಪ್ರೀತಿಯ ಮಗನಿಗಾಗಿ ಅದನ್ನು ಸಹಿಸಿದರು.
ತನ್ನ ವಿರುದ್ಧ ದೂರು ನೀಡಿದ ಬಾಲಕಿಯ ಮನೆಗೆ ಹೋದ ಮೋನುಗೆ ಭರ್ಜರಿ ಸ್ವಾಗತವೇ ಸಿಕ್ಕಿತು. ಮೋನು ವಿಷಯ ಪ್ರಸ್ತಾಪಿಸುವ ಮುನ್ನವೇ ಬಾಲಕಿಯ ತಂದೆ ಕ್ಷಮೆ ಯಾಚಿಸಿದರು. ನಾನು ಮನೆ ನಿವೇಶನಕ್ಕಾಗಿ ಪಂಚಾಯತ್‌ಗೆ ಅರ್ಜಿ ಹಾಕಿ ಅಲೆದಾಡುತ್ತಿದ್ದೆ. ಉರೂಸ್‌ನ ತಡರಾತ್ರಿ ಗ್ರಾಮ ಪಂಚಾಯತ್ ಸದಸ್ಯನ ಮಗ ಮನೆ ಬಳಿ ಬಂದು ನನ್ನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ 10 ಸಾವಿರ ರೂಪಾಯಿ ಕೊಟ್ಟು ಒಂದು ಕಾಗದಕ್ಕೆ ಸಹಿ ಹಾಕಿಸಿದ. ಅಲ್ಲದೆ ಇದು ನಿಮ್ಮ ನಿವೇಶನದ ಅರ್ಜಿಗೆ ಸಂಬಂಧಿಸಿದ ಕಾಗದ ಪತ್ರ ಎಂದ. ನನಗೆ ತುಂಬಾ ಖುಷಿಯಾಯಿತು. ಮತ್ತೆ ಹಣ ಯಾಕೆ ಎಂದು ಕೇಳಿದ್ದಕ್ಕೆ ‘‘ನಿಮ್ಮ ಎಂಟರ ಹರೆಯದ ಮಗಳಿಗೆ ಈವತ್ತು ಮುಸ್ಸಂಜೆ ಸೈಕಲ್ ಮೋನು ಚಾಕ್ಲೆಟ್ ನೀಡಿ ಅವಳ ಕೆನ್ನೆ ಚಿವುಟಿದ್ದಾನೆ. ಅದರ ವೀಡಿಯೊವನ್ನು ನಾವು ಅಲ್ಲೇ ಕದ್ದು ಚಿತ್ರೀಕರಿಸಿದ್ದೇವೆ. ಅದರ ಆಧಾರದ ಮೇಲೆ ನೀವೊಂದು ದೂರನ್ನು ಪೊಲೀಸರಿಗೆ ನೀಡಬೇಕು ಎಂದರು. ನಾನು ಆಗೋದಿಲ್ಲ, ಬೇಡ ಎಂದರೂ ಕೇಳಲಿಲ್ಲ. ಅವರೇ ಒತ್ತಾಯಿಸಿ ದೂರು ಬರೆದು ಠಾಣೆಗೆ ಕರೆದೊಯ್ದರು. ಅಲ್ಲದೆ ಕೇಳಿದಷ್ಟು ಹಣ ನಿಮಗೆ ಕೊಡುವೆವು ಎಂದರು. ಹಣದಾಸೆಗೆ ಒಳಗಾದ ನಾನು ಆಯ್ತು ಎಂದು ಒಪ್ಪಿಗೆ ಕೊಟ್ಟೆ. ಆದರೆ ನೀವು ಇಷ್ಟು ದಿನ ಜೈಲಲ್ಲಿ ಕೂರಬೇಕಾದೀತು ಎಂದು ನಾನು ಭಾವಿಸಿರಲಿಲ್ಲ’’ ಎಂದರು.
‘‘ಅದು ಸರಿ, ಯಾಕಾಗಿ ಈ ಕಿತಾಪತಿ?’’-ಸೈಕಲ್ ಮೋನು ಕೇಳಿದರು.
‘‘ನೀವು ಪ್ರತೀ ಸಲ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ತಪ್ಪಿಸಲು ಈ ತಂತ್ರಗಾರಿಕೆಯಂತೆ’’
‘‘ಸರಿ... ಇಂತಹ ನಾಲ್ಕು ತಂತ್ರಗಾರಿಕೆ ಮಾಡಿದರೂ ನಾನು ಸ್ಪರ್ಧಿಸದೆ ಇರಲಾರೆ’’ ಎಂದು ಸೈಕಲ್ ಮೋನು ನುಡಿಯುತ್ತಾ ಅಲ್ಲಿಂದ ಹೊರ ಬಂದರು.
ಮನೆಗೆ ಬಂದ ಅಪ್ಪನ ಕಿಸೆಯಲ್ಲಿದ್ದ ಗುಪ್ತ ಕ್ಯಾಮರಾವನ್ನು ಸಾದಿಕ್ ಪರಿಶೀಲಿಸಿದ. ಬಳಿಕ ವಕೀಲರೊಂದಿಗೆ ಚರ್ಚಿಸಿದ. ಹಾಗೇ ಹಿರಿಯ ಪೊಲೀಸರ ಗಮನಕ್ಕೆ ತಂದು ಅವರ ಮಾರ್ಗದರ್ಶನದಂತೆ ಗ್ರಾಮ ಪಂಚಾಯತ್ ಸದಸ್ಯ ಮತ್ತು ಮಗನ ವಿರುದ್ಧ ತಂದೆ ಮೂಲಕ ಮರು ದೂರು ದಾಖಲಿಸಿದ.
ಪೊಲೀಸರು ರಾತ್ರೋ ರಾತ್ರಿ ಬಂದು ಗ್ರಾಮ ಪಂಚಾಯತ್ ಸದಸ್ಯ ಮತ್ತು ಅವರ ಮಗ ಹಾಗೂ ವೀಡಿಯೊ ಚಿತ್ರೀಕರಿಸಿದ ಇತರ ಇಬ್ಬರನ್ನು ಬಂಧಿಸಿ ಜೈಲಿನ ಕಂಬಿ ಎಣಿಸುವಂತೆ ಮಾಡಿದರು. ಜೈಲೂಟದ ರುಚಿ ನೋಡಿಸಿದರು.
ತಿರುಗುಬಾಣವಾದ ಸುಳ್ಳು ದೂರು: ಗ್ರಾಪಂ ಸದಸ್ಯ ಸಹಿತ ಮೂವರ ಮೇಲೆ ಪೊಕ್ಸೊ ಪ್ರಕರಣ ದಾಖಲು ಎಂಬ ತಲೆಬರೆಹದಡಿ ವಿವಿಧ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಗೊಳ್ಳತೊಡಗಿತು.
ಸೈಕಲ್ ಮೋನುನ ಮಗ ಸಾದಿಕ್ ಪತ್ರಿಕೆಗಳ ಬಂಡಲನ್ನು ಸ್ನೇಹಿತನ ಬೈಕೇರಿ ಊರೂರು ಹಂಚತೊಡಗಿದ.