ಹಿರಿಯರ ಪರೀಕ್ಷಾಕೊಠಡಿ!
ಸಂಜೆ ಶಾಲೆಯಿಂದ ಬಂದು ಆಟದಲ್ಲೇ ಮುಳುಗಿದ್ದ ನನ್ನ ಮಗಳಿಗೆ ಹೇಳಿದೆ ‘‘ಎಕ್ಸಾಂ ಬರ್ತಿದೆ, ಸ್ವಲ್ಪ ಓದು’’. ನಾಲ್ಕನೇ ಕ್ಲಾಸಿನಲ್ಲಿ ಕಲಿಯುವ ಅವಳು ಒಮ್ಮೆಲೇ ಬಿದ್ದುಬಿದ್ದು ನಕ್ಕಳು. ‘‘ಅಮ್ಮಾ, ಎಕ್ಸ್ ಕ್ಯೂಸ್ ಮಿ ಸರ್! ನೆನಪಿದೆಯಾ?’’. ನಗುತ್ತಿದ್ದ ಅವಳೊಂದಿಗೆ ನಾನೂ ನಕ್ಕೆ. ಇತ್ತೀಚೆಗೆ ಪರೀಕ್ಷೆ ಎಂಬ ಶಬ್ದ ಕೇಳಿದ ತಕ್ಷಣ ಈ ತುಂಟಿ ನಗ್ತಾಳೆ. ಅವಳ ನಗುವಿಗೆ ಕಾರಣವಾದ ಕತೆಯ ನಾಯಕಿ ನಾನೇ. ಅದು ನಡೆದಿದ್ದು ಹೀಗೆ. ಕೆಲವು ತಿಂಗಳುಗಳ ಹಿಂದೆ ನಡೆದ ಪಿ.ಯು. ಉಪನ್ಯಾಸಕರ ಅರ್ಹತಾ ಪರೀಕ್ಷೆಗೆ ನಾನೂ ಹೋಗಿದ್ದೆ. ಮೊದಲ ದಿನ ಬೆಳಗ್ಗೆ ಒಂದು ಮಧ್ಯಾಹ್ನದ ಬಳಿಕ ನಮ್ಮ ಸ್ನಾತಕೋತ್ತರ ಪದವಿಯ ಐಚ್ಛಿಕ ವಿಷಯ ಕುರಿತಾದ ಪರೀಕ್ಷೆಯಿತ್ತು. ಆದಿನ ಬೆಳಗ್ಗೆ ಬೇಗ ಪರೀಕ್ಷಾ ಕೇಂದ್ರ ತಲುಪಿದ್ದೆ.
ಪ್ರವೇಶ ಪತ್ರದಲ್ಲಿದ್ದ ಸೂಚನೆಯಂತೆ ಅರ್ಧ ಗಂಟೆ ಮೊದಲು ಪರೀಕ್ಷಾ ಕೊಠಡಿಯಲ್ಲೂ ಇದ್ದೆ. ಒಎಂಆರ್ ಶೀಟಲ್ಲಿ ಸರಿ ಉತ್ತರ ಗುರುತಿಸುವ ಬಹು ಆಯ್ಕೆ ಪ್ರಶ್ನೆಗಳಷ್ಟೇ ಪ್ರಶ್ನೆ ಪತ್ರಿಕೆಯಲ್ಲಿದ್ದು ದೀರ್ಘ ಉತ್ತರದ ಯಾವುದೇ ಪ್ರಶ್ನೆ ಇಲ್ಲದ್ದರಿಂದ ಪರೀಕ್ಷೆಗೆ ನಿಗದಿಯಾದ ಮೂರು ಗಂಟೆಗಳು ತೀರಾ ಅತಿಯಾಯಿತು ಎನಿಸಿತು. ಒಂದು ಗಂಟೆಯ ಅವಧಿಯೊಳಗೆ ಬಹುತೇಕ ಎಲ್ಲರೂ ಪರೀಕ್ಷೆ ಬರೆದು ಮುಗಿಸಿ, ಹೊರಹೋಗುವ ಬೆಲ್ ಯಾವಾಗ ಆಗುತ್ತದೋ ಎಂದು ಕಾಯುತ್ತಿದ್ದರು. ಕುತೂಹಲಕ್ಕಾಗಿ ತಮಾಷೆಗೆಂದು ಕತ್ತು ತಿರುಗಿಸಿ ಎಲ್ಲರನ್ನೂ ಗಮನಿಸತೊಡಗಿದೆ. ನನ್ನದೇ ಬೆಂಚಿನ ಆ ತುದಿಯಲ್ಲಿ ಕುಳಿತ, ಕೂದಲು ಅರ್ಧ ಉದುರಿ ಸಾಣೆ ಮಂಡೆಯಾಗುವತ್ತ ತಿರುಗುತ್ತಿದ್ದ ವ್ಯಕ್ತಿ ಅರ್ಧ ಗಂಟೆಯಲ್ಲೇ ಒಎಂಆರ್ ತುಂಬಿಸಿದ್ದ. ಕುಳಿತಲ್ಲೇ ತಟಸ್ಥವಾಗಿ ನೇರವಾಗಿ ಒಂದು ಚೂರೂ ಅಲ್ಲಾಡದೇ ಕುಳಿತ ಆತ ಬಹುಶಃ ಗಾಢನಿದ್ರೆಯಲ್ಲಿದ್ದ.
ಆ ಪರೀಕ್ಷಾ ಕೊಠಡಿಯಲ್ಲಿದ್ದ ಎಲ್ಲರೂ ಮಧ್ಯವಯಸ್ಸಿನ ಆಸುಪಾಸಿನವರೇ. ಸ್ನಾತಕೋತ್ತರ ಪದವಿ ಜೊತೆಗೆ ಬಿ.ಎಡ್. ಕೂಡಾ ಕಡ್ಡಾಯವಾಗಿದ್ದರಿಂದ ಕನಿಷ್ಠ ವಯಸ್ಸು 25 ಆಗಿರುವ ಸಾಧ್ಯತೆಯಿತ್ತು. ಆದರೆ 2012ರಲ್ಲಿ ಅರ್ಜಿ ಕರೆದು, 2018ರ ಕೊನೆಯಲ್ಲಿ ಪರೀಕ್ಷೆ ನಡೆಸಿದ ಕಾರಣ ಎಲ್ಲರೂ ಮೂವತ್ತು ವಯಸ್ಸು ದಾಟಿದವರೇ ಇದ್ದರು. ಅರ್ಜಿ ಆಹ್ವಾನಿಸುವಾಗ ಗರಿಷ್ಠ ಪ್ರಾಯವಿದ್ದವರಿಗೆ ಈಗ 40 ದಾಟಿರುವ ಸಂಭವವಿತ್ತು. ಹಾಗಾಗಿ ಇದು ಅಂತಿಂಥ ಪರೀಕ್ಷಾ ಕೊಠಡಿಯಲ್ಲ, ಹಿರಿಯರ ಪರೀಕ್ಷಾ ಕೊಠಡಿಯಾಗಿತ್ತು. ಕೆಲವರ ಶರೀರಕ್ಕೆ ಬೊಜ್ಜು ಬಂದಿದ್ದರೆ, ಹಲವರ ಕೂದಲು ಬೆಳ್ಳಗಾಗತೊಡಗಿತ್ತು. ಕೆಲವರು ಕನ್ನಡಕ ಧರಿಸಿದ್ದರೆ ಕನ್ನಡಕವಿಲ್ಲದ ಕೆಲವರು ಪ್ರಶ್ನೆಪತ್ರಿಕೆ ಓದಲು ಹರಸಾಹಸ ಪಡುತ್ತಿದ್ದರು. ಕೆಲವು ಗಂಡಸರ ತಲೆ ಬೋಳಾಗುತ್ತಾ ಬಂದಿತ್ತು. ಒಟ್ಟಿನಲ್ಲಿ ಬಹುತೇಕರು ಯಾವ ಕರ್ಮಕ್ಕೆ ಈ ವಯಸ್ಸಿನಲ್ಲಿ ಈ ಪರೀಕ್ಷೆ ಬರೆಯಬೇಕಾಯಿತೋ ಎಂಬ ಮುಖಭಾವದಲ್ಲಿ ಕುಳಿತಿದ್ದರು. ಶಿಕ್ಷಕ/ ಉಪನ್ಯಾಸಕ ವೃತ್ತಿಯಲ್ಲಿ ತೊಡಗಿಕೊಂಡು ವಿದ್ಯಾರ್ಥಿಗಳನ್ನು ದಿನವಿಡೀ ಕುಳಿತು ಪಾಠ ಕೇಳುವಂತೆ ಮಾಡಲು ಶಕ್ತರಾದ ಅವರಿಗೆ ಈ ಮೂರು ಗಂಟೆಗಳು ಒಂದು ಯುಗದಂತೆ ಅನಿಸಿರಬೇಕು.ಈ ನೀರವತೆ ಹಾಗೂ ನೀರಸ ವಾತಾವರಣದಿಂದ ಬೇಸತ್ತ ಹಲವರು ಡೆಸ್ಕಿಗೆ ತಲೆಯಿಟ್ಟು ನಿದ್ರೆಗೆ ಶರಣಾಗಿದ್ದರು.
ಇದಾದ ಒಂದೆರಡು ದಿನಗಳ ನಂತರ ಎಲ್ಲಾ ವಿಷಯದವರಿಗೂ ಕಡ್ಡಾಯ ಕನ್ನಡ ಪರೀಕ್ಷೆಯಿತ್ತು. ಹತ್ತನೇ ತರಗತಿಯ ಮಟ್ಟದ ಪ್ರಶ್ನೆಗಳು ಅಲ್ಲಿ ಇರಲಿದ್ದವು. ನಾನು ವಿದ್ಯಾರ್ಥಿಯಾಗಿದ್ದಾಗಿಂದಲೇ ಕನ್ನಡ ನನಗೆ ಬಹಳ ಇಷ್ಟ. ವ್ಯಾಕರಣ ನನಗೆ ನೀರು ಕುಡಿದಷ್ಟೇ ಸುಲಭ. ಹಾಗಾಗಿ ಈ ಪರೀಕ್ಷೆಗೆ ನನಗೆ ಯಾವುದೇ ತಯಾರಿ ಅಗತ್ಯವಿರಲಿಲ್ಲ. ನಾನೇನೂ ಅಭ್ಯಾಸ ಮಾಡುವ ಗೋಜಿಗೆ ಹೋಗಲಿಲ್ಲ. ಅಷ್ಟಾದರೆ ತೊಂದರೆಯಿರಲಿಲ್ಲ. ನಾನು ಪ್ರವೇಶ ಪತ್ರ ಸೂಚನೆಗಳನ್ನೂ ಓದುವ ರಗಳೆಗೆ ಹೋಗಲಿಲ್ಲ. ಮಧ್ಯಾಹ್ನದ ಎರಡು ಗಂಟೆಯಿಂದ ನಡೆಯಲಿದ್ದ ಆ ಪರೀಕ್ಷೆಗಾಗಿ 12 ಗಂಟೆಯ ಹೊತ್ತಿಗೆ ಮನೆಯಿಂದ ಹೊರಟೆ. ಬಸ್ಸು ಹೊರಟಾಗ ಹನ್ನೆರಡೂವರೆಯ ಸಮೀಪ. ಟ್ರಾಫಿಕ್‌ನೆಡೆಯಲ್ಲಿ ಹಾಗೂ ಹೀಗೂ ಬಸ್ಸು ನಿಧಾನವಾಗಿ ಜ್ಯೋತಿ ಸರ್ಕಲ್ ಬಳಿ ತಲುಪಿದಾಗ ಒಂದೂ ಮುಕ್ಕಾಲು ಕಳೆದಿತ್ತು. ಅಲ್ಲಿ ಜನ ಇಳಿಸಿ ಮತ್ತೆ ಹೊರಟ ಬಸ್ ಹಂಪನಕಟ್ಟೆ ತಲುಪುವಾಗ ಎರಡು ಗಂಟೆಗೆ ಐದೇ ನಿಮಿಷ ಉಳಿದಿತ್ತು. ಓಡಿ ಹೋಗಿ ಆಟೋ ಒಂದರಲ್ಲಿ ಕುಳಿತು ನನಗೆ ಹೋಗಬೇಕಾದ ಕಾಲೇಜಿನ ಹೆಸರು ಹೇಳಿ ‘‘ಹೇಗಾದರೂ ಮಾಡಿ ಎರಡು ಗಂಟೆಗೆ ಮೊದಲು ಅಲ್ಲಿ ತಲುಪಿಸಿ ಪ್ಲೀಸ್’’ ಎಂದೆ. ಆಗಲೇ ಇನ್ನೊಂದು ನಿಮಿಷ ಕಳೆದು ನಾಲ್ಕು ನಿಮಿಷಗಳಷ್ಟೇ ಉಳಿದಿತ್ತು. ಆತ ವೇಗವಾಗಿ ಆಟೋ ಚಲಾಯಿಸಿ ಕಾಲೇಜಿನ ಬಳಿ ತಲುಪಿಸಿದ. ಗಾಡಿ ನಿಲ್ಲುವ ಮೊದಲೇ ಇಪ್ಪತ್ತೈದು ರೂ. ಆತನ ಕೈಗೆ ತುರುಕಿ ಓಡಿದೆ.
ಮೂರ್ನಾಲ್ಕು ಕಡೆಗಳಲ್ಲಿ ಆ ಕಟ್ಟಡದ ಸಾಲು ಹಬ್ಬಿತ್ತು. ನನ್ನ ಕೊಠಡಿ ಎಲ್ಲಿ ಎಂದು ಹುಡುಕಲಿ! ಬೆನ್ನುಹಾಕಿ ಆ ಕಡೆ ನಡೆಯುತ್ತಿದ್ದ ಸೆಕ್ಯೂರಿಟಿ ಒಬ್ಬನ ಹಿಂದೆ ಓಡಿ ನನ್ನ ಕೊಠಡಿಯಿರುವ ವಿಂಗ್ ಯಾವುದೆಂದು ಕೇಳಿದೆ. ಆತ ಕೈ ತೋರಿಸಿದ ದಿಕ್ಕಿನಲ್ಲಿ ಓಡಿ, ಕೈಯಲ್ಲೇ ಇದ್ದ ಹಾಲ್ ಟಿಕೆಟ್ ನೋಡಿ ಬೋರ್ಡಲ್ಲಿ ರೂಮ್ ನಂಬರ್ ಹುಡುಕಬೇಕೆಂದುಕೊಂಡೆ. ಆದರೆ ನನಗೆ ಸಹಾಯ ಮಾಡಲೆಂದೇ ನಿಂತುಕೊಂಡಂತಿದ್ದ ಆಯಾ ಒಬ್ಬಳು ನನ್ನ ನಂಬರ್ ಕೇಳಿ ಪ್ರಥಮ ಮಹಡಿಯಲ್ಲಿರುವ ಒಂದು ಕೊಠಡಿಗೆ ಕೈತೋರಿಸಿದಳು. ಓಡೋಡಿ ಮೆಟ್ಟಲು ಹತ್ತಿ ಮೇಲೆ ಬಂದು ಬ್ಯಾಗ್ ವರಾಂಡದ ಮೂಲೆಗೆಸೆದು ನೀರಿನ ಬಾಟಲ್ , ಪರ್ಸ್ ಕೈಯಲ್ಲಿ ಹಿಡಿದು ಆ ಕೊಠಡಿಯತ್ತ ನೋಡಿದೆ. ನನ್ನ ಕಣ್ಣಿಗೆ ಕತ್ತಲು ಕವಿದಂತಾಯ್ತು. ಈಗಾಗಲೇ ಎಲ್ಲರ ಕೈಯಲ್ಲಿ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಹಾಳೆಗಳಿದ್ದವು. ಇಷ್ಟು ಕಷ್ಟಪಟ್ಟು ಇಲ್ಲಿ ತಲುಪಿ ಕೊನೆಗೆ ಪರೀಕ್ಷೆ ಬರೆಯಲು ಅವಕಾಶ ಸಿಗದಿದ್ದರೆ ಎಂಬ ದಿಗಿಲಿನಿಂದಲೇ ತಡವರಿಸುತ್ತಾ, ಏದುಸಿರು ಬಿಡುತ್ತಾ ‘‘ಎಕ್ಸ್ ಕ್ಯೂಸ್ ಮಿ ಸರ್’’ ಎಂದೆ. ‘‘ಯೆಸ್ ಕಮಿನ್’’ ಕೊಠಡಿ ಮೇಲ್ವಿಚಾರಕ ಅಪ್ಪಣೆ ಕೊಟ್ಟಾಗ ಕುಸಿದು ಬೀಳುವ ಹಂತದಲ್ಲಿದ್ದ ನನಗೆ ಸ್ವಲ್ಪ ಧೈರ್ಯ ಬಂತು. ನನ್ನ ಸೀಟು ಹುಡುಕಿ ಕುಳಿತು ಗಟಗಟನೆ ಸ್ವಲ್ಪ ನೀರು ಕುಡಿದೆ. ಪ್ರಶ್ನೆ ಪತ್ರಿಕೆ, ಉತ್ತರ ಹಾಳೆ ಹಿಡಿದು ಬಂದ ಆತ ರಿಜಿಸ್ಟರಲ್ಲಿ ನನ್ನ ನಂಬರ್ ನಮೂದಿಸುವಂತೆ ಹೇಳಿ ಸಹಿ ತಗೊಂಡರು. ನನ್ನ ಆತಂಕ ನೋಡಿ, ‘‘ರಿಲಾಕ್ಸ್ ಮೇಡಂ, ಈಗಷ್ಟೇ ಎಲ್ಲರಿಗೂ ಪೇಪರ್ ಹಂಚಿದ್ದೆ. ನಿಧಾನವಾಗಿ ಬರೆಯಿರಿ’’ ಎಂದರು. ಪ್ರಶ್ನೆಪತ್ರಿಕೆ ಕೈಗೆತ್ತಿಕೊಂಡು ಮೊದಲಿಂದ ಕೊನೆಯವರೆಗೆ ಓದಿದೆ. ನನ್ನ ನಿರೀಕ್ಷೆಯಂತೆ ನನಗದು ಬಹಳ ಸುಲಭವಾಗಿತ್ತು. ಉತ್ತರ ಹಾಳೆಯಲ್ಲಿ ಉತ್ತರ ಗುರುತಿಸಲಾರಂಭಿಸಿದೆ. ಹೊರಗಡೆ ಯಾರದೋ ಮೊಬೈಲ್ ಕೂಗಿಕೊಳ್ಳಲಾರಂಭಿಸಿತು. ‘‘ಯಾರಪ್ಪಾ, ಪರೀಕ್ಷಾ ಕೊಠಡಿಯ ಬಳಿ ಸ್ವಿಚ್ ಆಫ್ ಮಾಡದೆ ಇಟ್ಟವರು?’’ ಮನಸ್ಸಲ್ಲೇ ಯೋಚಿಸುತ್ತಾ ಬರಹ ಮುಂದುವರಿಸಿದೆ. ಶಿಕ್ಷಕಿಯಾದ ನನಗಂತೂ ಶಾಲಾ ಅವಧಿಯಲ್ಲಿ ಯಾರ ಕರೆಯೂ ಬರುತ್ತಿರಲಿಲ್ಲ.
ಹಾಗಾಗಿ ಇದು ನನ್ನದಲ್ಲ ಎಂಬ ಖಚಿತತೆ ನನಗಿತ್ತು. ಓಪ್ಪೋ ಫೋನಿನ ಡಿಫಾಲ್ಟ್ ರಿಂಗ್ ಟೋನ್ ಅದಾಗಿತ್ತು. ನನ್ನ ರಿಂಗ್ ಟೋನೂ ಅದೇ. ಸ್ವಲ್ಪ ಹೊತ್ತಿನ ಬಳಿಕ ಪುನಃ ಫೋನ್ ಒದರತೊಡಗಿತು. ಹೀಗೆ ಐದಾರು ಬಾರಿ ಪುನರಾವರ್ತನೆಯಾಯಿತು. ತಡವಾಗಿ ಬಂದ ನಾನು ಸ್ವಿಚ್ ಆಫ್ ಮಾಡಿರಲಿಲ್ಲ, ಸೈಲೆಂಟ್ ಮೋಡ್‌ನಲ್ಲೂ ಇಟ್ಟಿರಲಿಲ್ಲ ಎಂಬುದು ಫಕ್ಕನೆ ನೆನಪಾಯ್ತು. ನನ್ನ ಅಪ್ಪನಿಗೆ ಆಗಾಗ ಕಾಯಿಲೆ ಉಲ್ಬಣಿಸುತ್ತಿತ್ತು. ಅಪ್ಪನಿಗೇನಾದರೂ ಆಗಿದೆ. ಹಾಗಾಗಿ ಮನೆಯಿಂದ ನನಗೆ ಕರೆ ಮಾಡುತ್ತಿರಬೇಕು ಎಂಬ ಯೋಚನೆ ಮಿಂಚಿನಂತೆ ಮನದಲ್ಲಿ ಹಾದುಹೋಯಿತು. ಪರೀಕ್ಷೆ ಬರೆದಾಗಿತ್ತು. ಫೈನಲ್ ಬೆಲ್ ಆಗದೇ ಹೊರಗೆ ಹೋಗುವಂತಿರಲಿಲ್ಲ. ಆತಂಕದಿಂದಲೇ ಸಮಯ ದೂಡಿದೆ. ಬೆಲ್ ಆಗಿ ಪೇಪರ್ ಕೊಟ್ಟವಳೇ ಹೊರಗೆ ಬಂದು ಫೋನ್ ಕೈಗೆತ್ತಿಕೊಂಡು ಪರಿಶೀಲಿಸಿದೆ. ಆರು ಮಿಸ್ಡ್ ಕಾಲ್. ಎಲ್ಲವೂ ನನ್ನ ಅಣ್ಣನ ಮಗನದ್ದೇ ಕರೆಗಳು. ನನ್ನ ಸಂದೇಹ ನಿಜವಾಯಿತೆಂದು ಕೈಕಾಲು ನಡುಗಲಾರಂಭಿಸಿತು. ಈಗಲೇ ಕರೆ ಮಾಡಿ ಆ ಕೆಟ್ಟ ಸುದ್ದಿ ತಿಳಿದರೆ ಬಸ್ ಸ್ಟಾಪ್ ತನಕ ನಾನು ನಡೆಯಲಾರೆ. ಬಸ್ಸಲ್ಲಿ ಕುಳಿತ ಮೇಲೆ ಕರೆ ಮಾಡುವಾ ಎಂದುಕೊಂಡೆ. ಆದರೂ ತಡೆಯದೇ ಬಸ್ ಸ್ಟಾಪ್ ಕಡೆಗೆ ನಡೆಯುತ್ತಲೇ ಕರೆ ಮಾಡಿದೆ. ನನಗೆ ನಾನೇ ಸಾಂತ್ವನ ಹೇಳುತ್ತಾ ಏನೇ ಆದರೂ ಧೈರ್ಯವಾಗಿರುತ್ತೇನೆಂದು ನಿರ್ಧಾರ ಮಾಡಿದೆ. ಅಣ್ಣನ ಮಗ ಕರೆ ಸ್ವೀಕರಿಸಿದ. ‘‘ಆಂಟೀ, ನೀನು ಹೇಳಿದ ನಾಯಿಮರಿಗಳನ್ನು ಮನೆಯಲ್ಲಿ ತಂದಿಟ್ಟಿದ್ದೇನೆ. ಆದಷ್ಟು ಬೇಗ ತೆಗೆದುಕೊಂಡು ಹೋಗು’’. ನನಗೆ ನಗು, ಸಿಟ್ಟು ಎಲ್ಲಾ ಒಟ್ಟಿಗೇ ಬಂದಿತ್ತು. ಅಂತೂ ಪರೀಕ್ಷೆಯೂ, ಮಿಸ್ಡ್ ಕಾಲ್ ಪ್ರಕರಣವೂ ಸುಖಾಂತವಾದ ನೆಮ್ಮದಿಯೊಂದಿಗೆ ಬಸ್ ಹತ್ತಿದೆ. ಮನೆಗೆ ಬಂದು ಮಕ್ಕಳಿಗೆ ಕತೆ ಹೇಳಿದೆ. ಹಾಗಾಗಿ ನೆನಪಾದಾಗಲೆಲ್ಲಾ ನನ್ನ ಮಗಳು ‘‘ಅಮ್ಮಾ, ಎಕ್ಸ್ ಕ್ಯೂಸ್ ಮಿ ಸರ್!’’ ಎನ್ನುತ್ತಾ ನನ್ನನ್ನು ಛೇಡಿಸುತ್ತಿರುತ್ತಾಳೆ.