ಪೊಲೀಸ್ ಅಧಿಕಾರಿಯ ಹತ್ಯೆಗಿಂತ ಗೋಹತ್ಯೆಗೆ ಮಹತ್ವ ನೀಡಲಾಗುತ್ತಿದೆ: ನಾಸಿರುದ್ದೀನ್ ಶಾ
“ಗುಂಪು ಹತ್ಯೆ ಕುರಿತ ಹೇಳಿಕೆಗೆ ಈಗಲೂ ಬದ್ಧ”
ಮುಂಬೈ, ಅ.12: ಗುಂಪು ಹತ್ಯೆ ಕುರಿತ ತನ್ನ ಈ ಹಿಂದಿನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ . ಅಲ್ಲದೆ ಸಮಾಜದಲ್ಲಿರುವ ಮುಕ್ತ ದ್ವೇಷದ ಪರಿಸ್ಥಿತಿಯಿಂದ ವ್ಯಾಕುಲಗೊಂಡಿದ್ದೇನೆ ಎಂದು ನಟ ನಾಸಿರುದ್ದೀನ್ ಶಾ ಹೇಳಿದ್ದಾರೆ.
ಇತ್ತೀಚೆಗೆ ದೇಶದಲ್ಲಿ ಹೆಚ್ಚುತ್ತಿರುವ ಗುಂಪು ಹತ್ಯೆ ಘಟನೆಯ ಬಗ್ಗೆ ಆತಂಕ ಸೂಚಿಸಿದ್ದ ಶಾ, ಹಲವೆಡೆ ಪೊಲೀಸರ ಹತ್ಯೆಯ ಘಟನೆಗಿಂತ ಹೆಚ್ಚಿನ ಮಹತ್ವವನ್ನು ಗೋ ಹತ್ಯೆ ಪ್ರಕರಣಕ್ಕೆ ನೀಡಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು.
ನಟ ಆನಂದ್ ತಿವಾರಿ ಜೊತೆ ಸಂವಾದದಲ್ಲಿ ಪಾಲ್ಗೊಂಡಿದ್ದ ನಾಸಿರುದ್ದೀನ್ ಶಾ, ರಾಜಕೀಯ ಮತ್ತು ಸಾಮಾಜಿಕ ವಿಷಯದ ಕುರಿತ ತನ್ನ ಅಭಿಪ್ರಾಯದಿಂದ ಸಿನೆಮ ಬಳಗದ ಜೊತೆಗಿನ ಸಂಬಂಧದ ಮೇಲೆ ಪರಿಣಾಮ ಬೀರಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಸಿನೆಮ ಬಳಗ ಅಥವಾ ಕ್ಷೇತ್ರದ ಜೊತೆ ತನಗೆ ಯಾವತ್ತೂ ನಿಕಟ ಸಂಪರ್ಕ ಇರಲಿಲ್ಲ. ನನ್ನ ಅನಿಸಿಕೆ , ಅಭಿಪ್ರಾಯದಿಂದ ಏನಾದರೂ ಪರಿಣಾಮವಾಗಿದೆಯೇ ಎಂಬುದೂ ತಿಳಿದಿಲ್ಲ. ನಾನು ಏನು ಹೇಳಿದ್ದೇನೋ ಅದಕ್ಕೆ ಈಗಲೂ ಬದ್ಧನಾಗಿದ್ದೇನೆ ಎಂದು ಶಾ ಹೇಳಿದ್ದಾರೆ.
ಮಾಡಲು ಬೇರೇನೂ ಕೆಲಸವಿಲ್ಲದ ಜನರಿಂದ ಸಾಕಷ್ಟು ನಿಂದನೆಗೆ ಒಳಗಾಗಿದ್ದೇನೆ. ಆದರೆ ಇದರಿಂದ ನನ್ನ ಮೇಲೆ ಯಾವುದೇ ಪರಿಣಾಮವಾಗಿಲ್ಲ. ಆದರೆ ಮುಕ್ತ ದ್ವೇಷದ ಪರಿಸ್ಥಿತಿಯನ್ನು ಕಂಡು ವ್ಯಾಕುಲನಾಗಿದ್ದೇನೆ ಎಂದು ಹೇಳಿದ್ದಾರೆ.
ಗುಂಪು ಹತ್ಯೆ ಪ್ರಕರಣ ಹೆಚ್ಚುತ್ತಿರುವುದನ್ನು ಉಲ್ಲೇಖಿಸಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ 49 ಚಿಂತಕರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿದ್ದ ಚಿತ್ರರಂಗದ 180 ಸದಸ್ಯರಲ್ಲಿ ನಾಸಿರುದ್ದೀನ್ ಶಾ ಕೂಡಾ ಸೇರಿದ್ದಾರೆ.