ನೀಟ್ ತರಬೇತಿ ಕೇಂದ್ರಗಳಿಗೆ ಐಟಿ ದಾಳಿ: 30 ಕೋಟಿ ರೂ. ವಶ
ಸಾಂದರ್ಭಿಕ ಚಿತ್ರ
ಚೆನ್ನೈ,ಅ.13: ತಮಿಳುನಾಡಿನ ವಿವಿಧೆಡೆ ಕೋಚಿಂಗ್ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿದ್ದು, ನಾಮಕ್ಕಲ್ ಪಟ್ಟಣದಲ್ಲಿ ನೀಟ್ ಪರೀಕ್ಷೆಗೆ ತರಬೇತಿ ನೀಡುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ 30 ಕೋಟಿ ರೂ.ಗೂ ಅಧಿಕ ಅಕ್ರಮ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಈ ಕೋಚಿಂಗ್ ಸಂಸ್ಥೆಗಳನ್ನು ನಡೆಸುತ್ತಿರುವ ಉದ್ಯಮ ಸಮೂಹವು ಆದಾಯ ತೆರಿಗೆ ಪಾವತಿಸದೆ ಇರುವ ಮೂಲಕ 150 ಕೋಟಿ ರೂ. ಅಘೋಷಿತ ಆದಾಯವನ್ನು ಹೊಂದಿದೆಯೆಂದು ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರ ಟ್ರಸ್ಟ್ಗೆ ಸೇರಿದ ವೈದ್ಯಕೀಯ ಕಾಲೇಜ್ಗಳ ಮೇಲೆ ಆದಾಯ ತೆರಿಗೆ ದಾಳಿ ನಡೆದ ಬೆನ್ನಲ್ಲೇ ತಮಿಳುನಾಡಿನ ವಿವಿಧೆಡೆ ಕೋಚಿಂಗ್ ಸಂಸ್ಥೆಗಳ ಮೇಲೆಯೂ ಐಟಿ ದಾಳಿ ಆರಂಭಗೊಂಡಿತ್ತು.
ಎಂಬಿಬಿಎಸ್ ಕೋರ್ಸ್ಗಳಿಗೆ ಪ್ರವೇಶಾತಿಗಾಗಿ ಇರುವ ನೀಟ್ ಪರೀಕ್ಷೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕೋಚಿಂಗ್ ಸಂಸ್ಥೆಗಳು ಸೇರಿದಂತೆ ಉದ್ಯಮ ಸಮೂಹವೊಂದು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಶುಕ್ರವಾರದಿಂದೀಚೆಗೆ ದಾಳಿ ನಡೆಸುತ್ತಿದ್ದಾರೆ.
ನಾಮಕ್ಕಲ್,ಪೆರಂದುರೈ, ಕರೂರ್ ಹಾಗೂ ಚೆನ್ನೈಗಳಲ್ಲಿರುವ ಉದ್ಯಮ ಸಮೂಹಕ್ಕೆ ಸೇರಿದ 17 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸಲಾಗಿದೆಯೆಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಡಿಬಿಟಿ) ಹೇಳಿಕೆಯೊಂದರಲ್ಲಿ ತಿಳಿಸಿದೆ. ವಿದ್ಯಾರ್ಥಿಗಳಿಂದ ತಾನು ಪಡೆಯುತ್ತಿರುವ ಶುಲ್ಕಗಳ ರಶೀದಿಯನ್ನು ಬಚ್ಚಿಡುವ ಮೂಲಕ ಉದ್ಯಮ ಸಮೂಹವು ಗಣನೀಯ ಪ್ರಮಾಣದಲ್ಲಿ ತೆರಿಗೆ ವಂಚನೆ ನಡೆಸುತ್ತಿತ್ತೆಂದು ಸಿಡಿಬಿಟಿ ಅಧಿಕಾರಿಗಳು ಆರೋಪಿಸಿದ್ದಾರೆ.
ಸಂಸ್ಥೆಗೆ ಸೇರಿದ ಪ್ರಧಾನ ಶಾಲೆಯೊಂದರ ಆವರಣದಲ್ಲಿರುವ ಸಭಾಭವನದೊಳಗೆ ಗಣನೀಯ ಮೊತ್ತದ ನಗದು ಪತ್ತೆಯಾಗಿದ. 30 ಕೋಟಿ ರೂ.ಗೂ ಅಧಿಕ ಮೊತ್ತದ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆಯೆಂದು ಅದು ಹೇಳಿದೆ.