ಕೇಂದ್ರದ ಅವೈಜ್ಞಾನಿಕ ನೀತಿಗಳೇ ಆರ್ಥಿಕ ಹಿಂಜರಿತಕ್ಕೆ ಕಾರಣ: ಶಾಸಕ ಎನ್.ಮಹೇಶ್
ಬೆಂಗಳೂರು,ಅ 13: ಇಂದಿನ ದೇಶದ ಆರ್ಥಿಕ ಸಂಕಷ್ಟಕ್ಕೆ ಕೇಂದ್ರ ಸರಕಾರ ಜಾರಿ ಮಾಡುತ್ತಿರುವ ಅವೈಜ್ಞಾನಿಕ ನೀತಿಗಳೇ ಕಾರಣವಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎನ್.ಮಹೇಶ್ ಆರೋಪ ಮಾಡಿದ್ದಾರೆ.
ರವಿವಾರ ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬಹುಜನ ವಿದ್ಯಾರ್ಥಿ ಸಂಘಟನೆ(ಬಿವಿಎಸ್) ವತಿಯಿಂದ ಆಯೋಜಿಸಿದ್ದ ‘ಭಾರತದ ಆರ್ಥಿಕ ಹಿಂಜರಿತಕ್ಕೆ ಕಾರಣ, ಪರಿಣಾಮ ಹಾಗೂ ಪರಿಹಾರ’ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹೊಸ ಆರ್ಥಿಕ ನೀತಿಗಳಾದ ಉದಾರೀಕರಣ, ಖಾಸಗೀಕರಣ, ಜಾಗತೀಕರಣದಿಂದ ಪ್ರಭಾವದಿಂದ ಉತ್ಪಾದನಾ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳಾಗಿವೆ. ಜೊತೆಗೆ ಕೇಂದ್ರದ ಕೆಲವು ಅವೈಜ್ಞಾನಿಕ ನೀತಿಗಳು ದೇಶವನ್ನು ಆರ್ಥಿಕ ಸಂಕಷ್ಟಕ್ಕೆ ಕರೆದೊಯ್ದಿವೆ ಎಂದರು.
ದೇಶದ ಆರ್ಥಿಕ ವ್ಯವಸ್ಥೆಗೆ ಪುನರ್ ಚೇತನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಅವೈಜ್ಞಾನಿಕ ನೀತಿಗಳನ್ನು ಪ್ರಕಟಿಸಿದೆ. ಇದರಲ್ಲಿ ಪ್ರಮುಖವಾಗಿ ನೋಟು ಅಮಾನೀಕರಣ, ಜಿಎಸ್‌ಟಿ ಸೇರಿದಂತೆ ಇನ್ನಿತರ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಿದ್ದದ್ದೇ ಕಾರಣವಾಗಿದೆ. ಜಿಎಸ್‌ಟಿ ಸಮರ್ಪಕವಾಗಿ ಅನುಷ್ಠಾನವಾಗದ ಕಾರಣ ಸಣ್ಣ ಹಾಗೂ ಮಧ್ಯಮ ವರ್ಗದ ಕಾರ್ಖಾನೆಗಳು ಮುಚ್ಚುವ ಸ್ಥಿತಿ ತಲುಪಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದಲ್ಲಿ ಶೇ. 80 ರಷ್ಟು ಜನರು ಕೃಷಿ ಕ್ಷೇತ್ರವನ್ನೇ ಅವಲಂಬಿಸಿರುವುದರಿಂದ ಈ ಬಂಡವಾಳ ಪ್ರಗತಿಗೆ ಪೂರಕವಾಗುತ್ತದೆ. ನಮ್ಮ ದೇಶದ ಅರ್ಥವ್ಯವಸ್ಥೆಗೆ ಶೇ.26 ರಷ್ಟು ಕೃಷಿ ವಲಯ ಕೊಡುಗೆ ನೀಡುತ್ತಿದ್ದು, ಇಂದು ಶೇ.2ಕ್ಕೆ ನಿಂತಿದೆ. ಕೃಷಿ ಕ್ಷೇತ್ರವೂ ಹೆಚ್ಚು ಉದ್ಯೋಗ ನೀಡುವ ಕ್ಷೇತ್ರವಾಗಿದ್ದು, ಶೇ 56 ರಷ್ಟು ಮಂದಿ ಗ್ರಾಮೀಣ ಜನತೆ ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಆಳುವ ವರ್ಗ ಕೃಷಿ ಕ್ಷೇತ್ರವನ್ನೇ ನಿರ್ಲಕ್ಷಿಸಿದೆ ಎಂದು ನುಡಿದರು.
ಪ್ರಾಚೀನ ಕಾಲದಿಂದಲೂ ‘ಟಾಪ್ ಟು ಬಾಟಮ್’ ಆರ್ಥಿಕ ಸಿದ್ದಾಂತವನ್ನು ಅನುಸರಿಸಲಾಗುತ್ತಿದೆ. ಸಾಮ್ರಾಜ್ಯಶಾಹಿ ಆಡಳಿತದಲ್ಲಿ ರಾಜರು ಹೂಡಿಕೆ ಮಾಡುತ್ತಿದ್ದರು, ಬಂಡವಾಳಶಾಹಿ ಆಡಳಿತದಲ್ಲಿ ಉದ್ಯಮಿಗಳು ಹೂಡಿಕೆ ಮಾಡುತ್ತಿದ್ದರು, ಪ್ರಜಾಪ್ರಭುತ್ವದಲ್ಲಿ ಆಳುವ ಸರಕಾರಗಳು ಹೂಡಿಕೆ ಮಾಡುತ್ತಿವೆ. ಆದರೆ, ಎಲ್ಲಾ ಆಡಳಿತದಲ್ಲೂ ಕಾರ್ಮಿಕ ವರ್ಗ ಶ್ರಮದಾನ ಮಾಡುತ್ತಿದ್ದು, ಆಡಳಿತ ನಡೆಸುವವರು ಹೂಡಿಕೆ ಮಾಡುತ್ತಿದ್ದಾರೆ. ಇದು ಬದಲಾಗಬೇಕು ಗ್ರಾಮೀಣ ಭಾಗಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಸ್ವಯಂ ಉದ್ಯೋಗಕ್ಕೆ ಸರಕಾರಗಳು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಬೆಂಗಳೂರು ವಿವಿಯ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ.ರಾಮಾಂಜನಯಲು ಮಾತನಾಡಿ, ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲಗಳ ಕೊಡುಗೆ ಅಪಾರವಾಗಿದೆ. ಯಾವುದೇ ಸರಕಾರಗಳು ಕಾರ್ಮಿಕ ವರ್ಗಗಳನ್ನು ಕಡೆಗಣಿಸುವುದು ಸರಿಯಲ್ಲ. ಬಲಿಷ್ಠ ರಾಷ್ಟ್ರಗಳು ಅಭಿವೃದ್ಧಿಶೀಲ ರಾಷ್ಟ್ರಗಳನ್ನು ನಿಯಂತ್ರಿಸುತ್ತಿವೆ. ಇದರಿಂದ ಆರ್ಥಿಕ ದುಃಸ್ಥಿತಿಗೆ ಕಾರಣವಾಗಿದೆ ಎಂದು ಹೇಳಿದರು. ಪೂರ್ವಸಿದ್ಧತೆ ಇಲ್ಲದೆ ನೋಟ್ ಬ್ಯಾನ್, ಜಿಎಸ್‌ಟಿ ಜಾರಿ ಮಾಡಲಾಯಿತು. ಬ್ಯಾಂಕ್ ಸಾಲ ಮರುಪಾವತಿಯಾಗದೆ ಇರುವುದು ದೇಶದ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿದೆ. ಸಣ್ಣ ರೈತರಿಗೆ, ಮಹಿಳಾ ಸ್ವ ಸಹಾಯ ಸಂಘಗಳಿಗೆ ಧನಸಹಾಯ, ಅಸಂಘಟಿತ ವಲಯಕ್ಕೆ ಹೆಚ್ಚು ಪ್ರಾಧ್ಯಾನತೆ ನೀಡಿದರೆ ಮಾನವ ಸಂಪನ್ಮೂಲ ಪ್ರಗತಿ ಸಾಧಿಸುತ್ತದೆ ಎಂದು ಐ.ಐ.ಬಿ.ಸಹಾಯಕ ಪ್ರಾಧ್ಯಾಪಕಿ ಶೈಲಜಾ ಪ್ರಬಂಧ ಮಂಡಿಸಿ ದೇಶದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಬಿವಿಎಸ್ ಮುಖಂಡ ಎ.ಹರಿರಾಮ್, ಮಹೇಶ್ ದಾಸ್, ಎಚ್ ಎಎಲ್ ನೌಕರರ ಸಂಘದ ಪದಾಧಿಕಾರಿ ಶಿವಲಿಂಗ ಮತ್ತು ಹೊಸಕೋಟೆ ತಾಲೂಕು ಬಿಜೆಪಿ ಉಪಾಧ್ಯಕ್ಷ ಎಚ್.ಎಸ್.ಸುಬ್ಬರಾಜು ಉಪಸ್ಥಿತರಿದ್ದರು.
ಆರ್ಥಿಕ ಬೆಳವಣೆಗೆಗೆ ಕಾರ್ಮಿಕರ ಕೊಡುಗೆ ಮುಖ್ಯವಾಗಿದೆ. ಆದರೆ ಇದನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸಮಾಜದಲ್ಲಿ ಕಾರ್ಮಿಕರ ಬಗ್ಗೆ ಏನಾದರೂ ಮಾತನಾಡಿದರೆ ಎಡಪಂಥೀಯರು ಎಂಬ ಹಣೆಪಟ್ಟಿ ಕಟ್ಟುತ್ತಾರೆ.
- ಎನ್.ಮಹೇಶ್, ಶಾಸಕ