ಬಿಜೆಪಿಗೆ ಮತ ಹಾಕುವುದು ಎಂದರೆ ಪಾಕಿಸ್ತಾನಕ್ಕೆ ಅಣುಬಾಂಬ್ ಬೀಳಿಸುವುದು ಎಂದರ್ಥ: ಕೇಶವ ಮೌರ್ಯ
ಮುಂಬೈ, ಅ.14: ಬಿಜೆಪಿ ಪರವಾಗಿ ಮತ ಚಲಾಯಿಸುವುದೆಂದರೆ ಪಾಕಿಸ್ತಾನಕ್ಕೆ ಪರಮಾಣು ಬಾಂಬ್ ಸ್ವಯಂಚಾಲಿತವಾಗಿ ಬಿದ್ದಂತೆ ಎಂದರ್ಥ ಎಂದು ಉತ್ತರಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಹೇಳಿದ್ದಾರೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿರುವ ಮೀರಾ-ಬಾಯಂದರ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ನರೇಂದ್ರ ಮೆಹ್ತಾ ಪರ ರವಿವಾರ ಚುನಾವಣಾ ಪ್ರಚಾರ ನಡೆಸುತ್ತಿರುವ ವೇಳೆ ಮೌರ್ಯ ಈ ಹೇಳಿಕೆ ನೀಡಿದರು.
‘‘ಕಮಲ ಚಿಹ್ನೆ(ಬಿಜೆಪಿ ಚುನಾವಣಾ ಚಿಹ್ನೆ)ಒತ್ತಿದರೆ ಕೇವಲ ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ನರೇಂದ್ರ ಮೆಹ್ತಾಗೆ ಮಾತ್ರ ಲಾಭವಾಗುವುದಿಲ್ಲ. ಕಮಲಕ್ಕೆ ಮತ ಹಾಕುವುದೆಂದರೆ ಪಾಕಿಸ್ತಾನಕ್ಕೆ ಅಣುಬಾಂಬ್ ಹಾಕುವುದು ಎಂದರ್ಥ’’ ಎಂದು ಮೌರ್ಯ ಹೇಳಿದ್ದಾರೆ.
ಮಹಾರಾಷ್ಟ್ರ ಹಾಗೂ ಹರ್ಯಾಣದ ಅಸೆಂಬ್ಲಿ ಚುನಾವಣೆಯನ್ನು ಇಡೀ ವಿಶ್ವ ಆಸಕ್ತಿಯಿಂದ ನೋಡುತ್ತಿದೆ. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಬಳಿಕ ಮೊದಲ ಬಾರಿ ದೇಶದಲ್ಲಿ ಚುನಾವಣೆ ನಡೆಯುತ್ತಿದೆ. ಹೀಗಾಗಿ ಇದಕ್ಕೆ ಭಾರೀ ಮಹತ್ವವಿದೆ. ಈ ಎರಡು ರಾಜ್ಯಗಳ ಫಲಿತಾಂಶ ಜನರ ದೇಶಭಕ್ತಿಯನ್ನು ಬಹಿರಂಗಪಡಿಸಲಿದೆ’’ ಎಂದು ಬಿಜೆಪಿ ನಾಯ ಕ ಹೇಳಿದ್ದಾರೆ.