ಉಳ್ಳಾಲ ತಾಲೂಕಿಗೆ ಸೇರ್ಪಡೆಗೆ ಪ್ರಬಲ ವಿರೋಧ : ಕೊನೆಗೂ ಹೊರಗುಳಿದ ಬಂಟ್ವಾಳದ 3 ಗ್ರಾಪಂಗಳು!
►ಪುದು, ಮೇರಮಜಲು, ತುಂಬೆ ಗ್ರಾಪಂ ಕೈಬಿಡಲು ತೀರ್ಮಾನ
►ತೂಗುಯ್ಯಾಲೆಯಲ್ಲಿ ಸಜಿಪನಡು ಗ್ರಾಪಂ
ಫರಂಗಿಪೇಟೆ, ಅ.14: ಉಳ್ಳಾಲ ತಾಲೂಕಿಗೆ ಸೇರ್ಪಡೆಗೆ ಪ್ರಬಲ ವಿರೋಧವನ್ನು ದಾಖಲಿಸಿದ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ನಾಲ್ಕು ಗ್ರಾಪಂಗಳ ಪೈಕಿ ಮೂರು ಗ್ರಾಪಂಗಳನ್ನು ಕೈಬಿಡುವ ಪ್ರಸ್ತಾವದೊಂದಿಗೆ ಉಳ್ಳಾಲ ತಾಲೂಕು ರಚನೆಗೆ ಯೋಜನೆ ಸಿದ್ಧಗೊಳ್ಳುತ್ತಿದೆ. ಸಜೀಪನಡು ಗ್ರಾಪಂ ಮಾತ್ರ ತೂಗುಯ್ಯಾಲೆಯಲ್ಲಿದೆ. ಕಳೆದ ಫೆಬ್ರವರಿಯಲ್ಲಿ ಮಂಗಳೂರು ವಿಧಾನಸಭಾಕ್ಷೇತ್ರದ ಶಾಸಕ ಯು.ಟಿ.ಖಾದರ್ ಅವರು ಸಚಿವರಾಗಿದ್ದ ವೇಳೆ ರಾಜ್ಯ ಸರಕಾರವು ಉಳ್ಳಾಲ ತಾಲೂಕನ್ನು ಘೋಷಣೆ ಮಾಡಿತ್ತು. ಇದರಿಂದ ಬಂಟ್ವಾಳ ತಾಲೂಕಿನ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಡುವ ಪುದು, ಮೇರಮಜಲು, ತುಂಬೆ, ಸಜಿಪನಡು ಗ್ರಾಪಂಗಳನ್ನು ಉಳ್ಳಾಲ ತಾಲೂಕಿಗೆ ಸೇರಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ, ಈ ನಾಲ್ಕು ಗ್ರಾಮಪಂಚಾಯತ್‌ಗಳು ಕೂಡ ನೂತನವಾಗಿ ಅಸ್ತಿತ್ವಕ್ಕೆ ಬರುವ ಉಳ್ಳಾಲ ತಾಲೂಕಿಗೆ ಸೇರ್ಪಡೆಗೊಳ್ಳುವುದಕ್ಕೆ ಪ್ರಬಲವಿರೋಧ ವ್ಯಕ್ತಪಡಿಸಿತ್ತು. ಸಜೀಪನಡು ಗ್ರಾಮಸ್ಥರು, ಪ್ರಮುಖರು ಪಕ್ಷ ಭೇದ ಮರೆತು ಗ್ರಾಮ ಪಂಚಾಯತ್ ಅಧ್ಯಕ್ಷ ನಾಸೀರ್ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಒಕ್ಕೊರಲ ವಿರೋಧವನ್ನು ವ್ಯಕ್ತಪಡಿಸಿ ತೀರ್ಮಾನ ಕೈಗೊಂಡಿದ್ದರು. ಹಾಗೆಯೇ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲೂ ಈ ಬಗ್ಗೆ ನಿರ್ಣಯವನ್ನು ಕೈಗೊಂಡಿದ್ದರು. ಇತ್ತ ಕಾಂಗ್ರೆಸ್ ಪ್ರಮುಖರ ನಿಯೋಗ ಮಾಜಿ ಜಿಪಂ ಸದಸ್ಯ ಉಮರ್ ಫಾರೂಕ್ ನೇತೃತ್ವದಲ್ಲಿ ಖಾದರ್ ಅವರನ್ನು ಭೇಟಿಯಾಗಿ ಪ್ರತ್ಯೇಕವಾಗಿ ಮನವಿ ಸಲ್ಲಿಸಿತ್ತು.
ಪುದು, ಮೇರಮಜಲು, ತುಂಬೆ ವ್ಯಾಪ್ತಿಯ ಜಿಪಂ ಸದಸ್ಯ ರವೀಂದ್ರ ಕಂಬಳಿ ನೇತೃತ್ವದಲ್ಲಿ ಬಿಜೆಪಿ ಜನಪ್ರತಿನಿಧಿಗಳ ನಿಯೋಗ ಆಗಿನ ಸಚಿವ ಯು.ಟಿ.ಖಾದರ್ ಅವರನ್ನು ಭೇಟಿಯಾಗಿ ಈ ಮೂರು ಗ್ರಾಮಗಳನ್ನು ಉಳ್ಳಾಲ ತಾಲೂಕಿಗೆ ಸೇರ್ಪಡೆಗೆ ಆಕ್ಷೇಪಿಸಿ ಮನವಿ ಸಲ್ಲಿಸಿದ್ದರು.
3 ಗ್ರಾಪಂಗಳಿಗೆ ಮುಕ್ತಿ?
ಸದ್ಯ ಉಳ್ಳಾಲ ತಾಲೂಕಿಗೆ ಸೇರ್ಪಡೆಗೆ ಪ್ರಬಲ ವಿರೋಧ ವ್ಯಕ್ತಪಡಿಸಿದ ಬಂಟ್ವಾಳ ತಾಲೂಕಿನ ನಾಲ್ಕು ಗ್ರಾಮ ಪಂಚಾಯತ್‌ಗಳ ಪೈಕಿ ಸಜಿಪನಡು ಹೊರತುಪಡಿಸಿ ಪುದು, ಮೇರಮಜಲು, ತುಂಬೆ ಗ್ರಾಪಂಗಳನ್ನು ಉಳ್ಳಾಲ ತಾಲೂಕಿನಿಂದ ಕೈ ಬಿಡಲಾಗಿದೆ ಎಂಬುದು ಸದ್ಯದ ಮಾಹಿತಿ. ಇದನ್ನು ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಕೂಡ ಖಚಿತಪಡಿಸಿದ್ದಾರೆ. ಸಜೀಪನಡು ಗ್ರಾಮ ಪಂಚಾಯತ್ ವಿರೋಧಿಸಿ ನಿರ್ಣಯ ಕೈಗೊಂಡಿದ್ದರೂ, ಈ ಬಗ್ಗೆ ಜಿಲ್ಲಾಧಿಕಾರಿಗಾಗಲೀ, ಆಗಿನ ಸಚಿವರಿಗಾಗಲೀ ಲಿಖಿತ ಮನವಿ, ನಿರ್ಣಯದ ಪ್ರತಿಗಳು ಪೂರಕ ದಾಖಲೆಯನ್ನು ಒದಗಿಸದ ಹಿನ್ನ್ನೆಲೆಯಲ್ಲಿ ಸಜಿಪನಡು ಪಂಚಾಯತ್‌ನ್ನು ಕೈಬಿಡುವ ನಿರ್ಧಾರಕ್ಕೆ ಬರಲಿಲ್ಲ ಎಂದು ತಿಳಿದುಬಂದಿದೆ.
ಉಳ್ಳಾಲಕ್ಕೆ ಸುತ್ತು ಬಳಸಿ ತೆರಳಬೇಕಾದ ಪರಿಸ್ಥಿತಿ: ಬಂಟ್ವಾಳ ತಾಲೂಕಿನ ಪುದು, ಮೇರಮಜಲು ಹಾಗೂ ತುಂಬೆ ಗ್ರಾಪಂಗಳು ಉಳ್ಳಾಲಕ್ಕೆ ಸೇರ್ಪಡೆಯಾದಲ್ಲಿ ತಾಲೂಕು ಕಚೇರಿಯನ್ನು ಸಂಪರ್ಕಿಸಬೇಕಾದರೆ, ಮೆಲ್ಕಾರ್‌ಗೆ ತೆರಳಿ ಬಳಿಕ ಮುಡಿಪುರಸ್ತೆ ಅಥವಾ ಪಂಪುವೆಲ್‌ಗೆ ತೆರಳಿ ತೊಕ್ಕೊಟ್ಟು ಮೂಲಕ ಸುತ್ತು ಬಳಸಿ ತೆರಳಬೇಕಿದೆ. ಆದರೆ, ಈಗಿನ ಬಂಟ್ವಾಳ ತಾಲೂಕು ಕೇಂದ್ರವನ್ನು ಸಂಪರ್ಕಿಸಬೇಕಾದರೆ 5-10 ಕಿ.ಮೀ. ವ್ಯಾಪ್ತಿಯ
ಒಂದೇ ಹೆದ್ದಾರಿಯಲ್ಲಿ ಸಾಗಿದರೆ ಸಾಕಾಗುತ್ತದೆ. ಹೀಗಾಗಿ ಅವರು ತಮ್ಮನ್ನು ಬಂಟ್ವಾಳದಲ್ಲೇ ಉಳಿಸಿ ಎಂಬ ತೀರ್ಮಾನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಮೂರು ಗ್ರಾಪಂಗಳನ್ನು ಕೈಬಿಡಲು ತೀರ್ಮಾನಿಸಿದೆ. ತಾಲೂಕು ಅನುಷ್ಠಾನದ ಕಾರ್ಯ ಸದ್ಯದ ಪರಿಸ್ಥಿತಿಯಲ್ಲಿ ನೋಟಿಫಿಕೇಶನ್ ಹಂತದಲ್ಲಿದ್ದು, ಈಗಿನ ಸರಕಾರ ಉತ್ಸುಕತೆ ತೋರಿದ್ದಲ್ಲಿ ಮುಂದೆ ವಿಶೇಷ ತಹಶೀಲ್ದಾರ್ ಅವರನ್ನು ನೇಮಿಸುವ ಕಾರ್ಯ ನಡೆಯಲಿದೆ. ಬಳಿಕ ಉಳ್ಳಾಲ ಹೋಬಳಿ ಘೋಷಣೆ ಮಾಡಿ ತಾಲೂಕು ಅನುಷ್ಠಾನದ ಕಾರ್ಯ ನಡೆಯಬೇಕಿದೆ.
ಗ್ರಾಮಸ್ಥರಿಂದ ಮಾಹಿತಿಯನ್ನು ಸಂಗ್ರಹಿಸಿ ಆಗಿನ ಸಚಿವರಾಗಿದ್ದ ಯು.ಟಿ.ಖಾದರ್ ಅವರಿಗೆ ಸೇರ್ಪಡೆ ಪ್ರಸ್ತಾವ ಕೈಬಿಡುವಂತೆ ಮನವಿ ಮಾಡಲಾಗಿತ್ತು. ಜನರ ಅನುಕೂಲದ ದೃಷ್ಠಿಯಿಂದ ನೂತನ ಉಳ್ಳಾಲ ತಾಲೂಕಿಗೆ ಸೇರ್ಪಡೆಯಿಂದ ಪುದು, ಮೇರಮಜಲು, ತುಂಬೆ ಗ್ರಾಪಂನ್ನು ಕೈಬಿಟ್ಟಿದ್ದು, ನಮ್ಮ ಮನವಿಯನ್ನು ಪುರಸ್ಕರಿಸಿ ಈ ತೀರ್ಮಾನ ತೆಗೆದುಕೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರಿಗೆ ಕೃತಜ್ಞತೆ ಸಲ್ಲಿಸಲು ಇಚ್ಛಿಸುತ್ತೇನೆ.
-ಉಮರ್ ಫಾರೂಕ್,
ಮಾಜಿ ಜಿಪಂ ಸದಸ್ಯ, ಫರಂಗಿಪೇಟೆ,
ಉಳ್ಳಾಲ ತಾಲೂಕಿಗೆ ಸೇರ್ಪಡೆಗೆ ವಿರೋಧಿಸಿ ನಮ್ಮ ಗ್ರಾಪಂನಲ್ಲಿ ಈಗಾಗಲೇ ನಿರ್ಣಯ ಕೈಗೊಳ್ಳಲಾಗಿದೆ. ಇದರ ಪ್ರತಿ, ಮನವಿಯನ್ನು ಇಲ್ಲಿನ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಯವರಿಗೆ ಸಲ್ಲಿಸಬೇಕಾಗಿದೆಯಷ್ಟೇ. ಅತೀ ಶೀಘ್ರದಲ್ಲಿ ಇವರೆಲ್ಲರನ್ನು ಭೇಟಿಯಾಗಿ ಮನವಿ ಸಲ್ಲಿಸಿ ಸಜೀಪನಡು ಗ್ರಾಪಂ ವ್ಯಾಪ್ತಿಯನ್ನು ಉಳ್ಳಾಲ ತಾಲೂಕಿನಿಂದ ಕೈಬಿಡುವಂತೆ ಒತ್ತಾಯಿಸಲಾಗುವುದು.
-ನಾಸೀರ್,
ಅಧ್ಯಕ್ಷರು, ಸಜಿಪನಡು ಗ್ರಾಪಂ
ಗ್ರಾಮಸ್ಥರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದು, ಇದರಿಂದ ಬಂಟ್ವಾಳ ತಾಲೂಕಿನ ಮೂರು ಗ್ರಾಪಂಗಳ ಜನರಿಗೆ ತೊಂದರೆಯಾಗಲಿದೆ ಎಂಬ ದೃಷ್ಟಿಯಿಂದ ಉಳ್ಳಾಲ ತಾಲೂಕಿನ ಪಟ್ಟಿಯಿಂದ ಪುದು, ಮೇರಮಜಲು, ತುಂಬೆಯನ್ನು ಕೈಬಿಡುವ ಕುರಿತು ತೀರ್ಮಾನಿಸಲಾಗಿದೆ. ತಾಲೂಕು ರಚನೆಯ ಪ್ರಸ್ತಾಪ ಸದ್ಯಕ್ಕೆ ನೋಟಿಫಿಕೇಶನ್ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ವಿಶೇಷ ತಹಶೀಲ್ದಾರ್ ನೇಮಕ ಕಾರ್ಯ ನಡೆದ ಬಳಿಕ ಅಧಿಕೃತ ತಾಲೂಕು ಘೋಷಣೆ ಕಾರ್ಯ ಆಗಲಿದೆ.
-ಯು.ಟಿ.ಖಾದರ್, ಶಾಸಕ
ಯಾವ್ಯಾವ ಗ್ರಾಪಂಗಳು?
2 ನಗರಸ್ಥಳೀಯಾಡಳಿತ ಸಂಸ್ಥೆ ಮತ್ತು 18 ಗ್ರಾಮೀಣ ಸ್ಥಳೀಯಾಡಳಿತ ಸಂಸ್ಥೆಯನ್ನು ಒಳಗೊಂಡು ಉಳ್ಳಾಲ ತಾಲೂಕು ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬರಲಿದೆ. ಉಳ್ಳಾಲ ನಗರಸಭೆ, ಕೋಟೆಕಾರು ಪಟ್ಟಣ ಪಂಚಾಯತ್, ಮಂಗಳೂರು ತಾಲೂಕಿನ ಅಂಬ್ಲಮೊಗರು, ಬೆಳ್ಮ, ಬೋಳಿಯಾರು, ಹರೇಕಳ, ಕಿನ್ಯಾ, ಕೋಣಾಜೆ, ಮಂಜನಾಡಿ, ಮುನ್ನೂರು, ಪಾವೂರು, ಸೋಮೇಶ್ವರ, ತಲಪಾಡಿ ಹಾಗೂ ಬಂಟ್ವಾಳ ತಾಲೂಕಿನ ನರಿಂಗಾನ, ಬಾಳೆಪುಣಿ, ಇರಾ, ಕುರ್ನಾಡು, ಪಜೀರು, ಸಜೀಪಪಡು, ಸಜಿಪನಡು ಸೇರ್ಪಡೆಯಾಗಲಿವೆ. ಕೆಆರ್‌ಡಿಸಿಎಲ್ ಮೂಲಕ 22 ಕೋ.ರೂ. ವೆಚ್ಚದಲ್ಲಿ ತುಂಬೆಯಿಂದ ಸಜೀಪಕ್ಕೆ ಸೇತುವೆಯೊಂದನ್ನು ನಿರ್ಮಿಸುವ ಮೂಲಕ ಉಳ್ಳಾಲ ತಾಲೂಕಿನ ಕಚೇರಿಗೆ ಸಂಪರ್ಕಿಸಲು ಅನುಕೂಲ ಮಾಡಿಕೊಡುವ ದೆಸೆಯಲ್ಲಿ ಪ್ರಸ್ತಾವವೊಂದು ಬಂದಿತ್ತು. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ಕೂಡ ನಡೆಸಿ ವರದಿ ತಯಾರಿಸಿದ್ದರು. ಆದರೆ, ಈ ಗ್ರಾಪಂಗಳ ವ್ಯಾಪ್ತಿಯಲ್ಲಿ ಸೇರ್ಪಡೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಸ್ತುತ ಈ ಸೇತುವೆಯ ನಿರ್ಮಾಣ ಪ್ರಸ್ತಾವ ಕನಸಾಗಿಯೇ ಉಳಿಯಲಿದೆಯೇ ಎಂಬುವುದು ಕಾದುನೋಡಬೇಕಾಗಿದೆ.