ಎಚ್‌ಎಎಲ್ ಮುಷ್ಕರ: ನಿಯಮಗಳಂತೆ ನೌಕರರಿಗೆ ವೇತನ ಪರಿಷ್ಕರಿಸಲಾಗಿದೆ- ಸಂಸ್ಥೆಯ ಆರ್ಥಿಕ ವಿಭಾಗದ ನಿರ್ದೇಶಕ
ಬೆಂಗಳೂರು, ಅ.15: ಎಚ್‌ಎಎಲ್ ಸಿಬ್ಬಂದಿ ಮುಷ್ಕರಕ್ಕೂ, ಆರ್ಥಿಕ ಹಿಂಜರಿತಕ್ಕೂ ಯಾವುದೇ ಸಂಬಂಧ ಇಲ್ಲ. ಕೇಂದ್ರ ಸರಕಾರದ ಮಾರ್ಗಸೂಚಿ ಪ್ರಕಾರವೇ ನೌಕರರ ವೇತನ ಪರಿಷ್ಕರಣೆ ಮಾಡಲಾಗಿದೆ ಎಂದು ಎಚ್‌ಎಎಲ್‌ನ ಆರ್ಥಿಕ ವಿಭಾಗದ ನಿರ್ದೇಶಕ ಸಿ.ಬಿ.ಅನಂತಕೃಷ್ಣನ್ ತಿಳಿಸಿದ್ದಾರೆ.
20 ಸಾವಿರ ಎಚ್‌ಎಎಲ್ ಉದ್ಯೋಗಿಗಳ ಮುಷ್ಕರ ಹಿನ್ನೆಲೆ ಮಂಗಳವಾರ ಎಚ್‌ಎಎಲ್ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂಸ್ಥೆಯ ಆರ್ಥಿಕ ವಹಿವಾಟು ಆಧರಿಸಿ ವೇತನ ಪರಿಷ್ಕರಿಸಲಾಗಿದೆ. ನೌಕರರು ಹೇಳುತ್ತಿರುವ ಹಾಗೆ ಯಾವುದೇ ತಾರತಮ್ಯ ಇಲ್ಲ ಎಂದರು.
ಹಿಂದಿನ ಪರಿಸ್ಥಿತಿಗೂ ಇಂದಿನ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ. ಇಂದು ಕಾರ್ಮಿಕರ ವೆಚ್ಚ ಹೆಚ್ಚಿದೆ. ವೇತನ ಪರಿಷ್ಕರಣೆ ವೇಳೆ ಸಂಸ್ಥೆಯ ವರ್ಕ್ ಆರ್ಡರ್, ಉತ್ಪಾದನೆ, ವಹಿವಾಟು, ಖರ್ಚು-ವೆಚ್ಚ ಎಲ್ಲವನ್ನೂ ಗಂಭೀರವಾಗಿ ಪರಿಶೀಲಿಸಲಾಗುತ್ತಿದೆ. ನೌಕರರ ಹಿತದ ಜತೆಗೆ ಸಂಸ್ಥೆಯ ಷೇರುದಾರರ ಹಿತವನ್ನೂ ಕಾಯಬೇಕು. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟು ವೇತನ ಪರಿಷ್ಕರಿಸಲಾಗಿದೆ ಎಂದು ಅವರು ವಿವರಿಸಿದರು.
ನಿಯಮ ಪ್ರಕಾರ 10 ವರ್ಷಗಳಿಗೆ ಒಮ್ಮೆ ವೇತನ ಪರಿಷ್ಕರಣೆ ಮಾಡಬೇಕು. ಆದರೂ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಸಂಸ್ಥೆಯ ಆರ್ಥಿಕ ಅಭಿವೃದ್ಧಿಗೆ ಸರಿಸಮನಾಗಿ 2007 ಮತ್ತು 2012ರಲ್ಲಿ ಎರಡು ಬಾರಿ ವೇತನ ಪರಿಷ್ಕರಿಸಲಾಗಿದೆ. ಆದರೂ ಹಿರಿಯ ಅಧಿಕಾರಿಗಳ ವೇತನ ಪರಿಷ್ಕರಣೆ ಮಾದರಿಯಲ್ಲೇ ನೌಕರರಿಗೂ ಪರಿಷ್ಕರಿಸುವಂತೆ ಬೇಡಿಕೆ ಈಡೇರಿಸುವಂತೆ ಹೇಳುವುದು ಸರಿಯಲ್ಲ ಎಂದರು.
ಎಚ್‌ಎಎಲ್‌ನ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ವಿ.ಎಂ.ಚಮೋಲಾ ಮಾತನಾಡಿ, ಪ್ರಸ್ತುತ ನಗರದ ಎಚ್‌ಎಎಲ್‌ನ ಘಟಕದಲ್ಲಿ 9 ಸಾವಿರ ನೌಕರರು ಇದ್ದಾರೆ. ಆ ಪೈಕಿ ಶೇ.10ರಷ್ಟು ನೌಕರರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಇದರಿಂದ ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಉಂಟಾಗಿಲ್ಲ. ಸಂಸ್ಥೆ ಆಡಳಿತ ಮಂಡಳಿ ನೌಕರರ ಹಿತಕಾಯಲು ಬದ್ಧವಾಗಿದೆ. ನೌಕರರ ಸಂಘದೊಂದಿಗೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಸಿದ್ಧವಿರುವುದಾಗಿ ಅವರ ಹೇಳಿದರು.