ಭಾರತದ ಆರ್ಥಿಕತೆಗೆ ಅಭಿಜಿತ್ ಬ್ಯಾನರ್ಜಿ ಮದ್ದು
ಪ್ರಧಾನಿ ಕಚೇರಿ ಹಸ್ತಕ್ಷೇಪ ತಡೆ, ನರೇಗಾ ವೇತನ ಏರಿಕೆ ಮತ್ತು ಪ್ರಾರ್ಥನೆ
ಬ್ಯಾನರ್ಜಿ ಸಲಹೆಯು ಭಾರತೀಯರ ಕೈಗೆ ಹಣ ನೀಡುವುದರ ಮೇಲೆ ಗಮನಹರಿಸಿದೆ. ಅದು ಉದ್ಯೋಗ ಖಾತ್ರಿ ಯೋಜನೆಗಳಲ್ಲಿ ವೇತನವನ್ನು ಏರಿಸುವ ಮೂಲಕ ಆಗಬಹುದು, ರೈತರಿಗೆ ನೀಡುವ ದರವನ್ನು ಹೆಚ್ಚುಗೊಳಿಸುವ ಮೂಲಕ ಮತ್ತು ಹಣವನ್ನು ಸರಾಗವಾಗಿ ಹರಿಯುವಂತೆ ಮಾಡುವ ಮೂಲಕ ಆಗಬಹುದು. ಜನರು ಏನು ಯೋಚಿಸುತ್ತಾರೆ ಮತ್ತು ಹೇಗೆ ವರ್ತಿಸುತ್ತಾರೆ ಎಂಬುದನ್ನು ಸರಕಾರ ನಿಯಂತ್ರಿಸದೆ ಒಂದು ಸ್ಪಷ್ಟ ನಿಯಂತ್ರಕವನ್ನು ಜಾರಿಗೊಳಿಸಲು ಅವರು ಸಲಹೆ ನೀಡುತ್ತಾರೆ.
ಸೋಮವಾರ ಅರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪಡೆದ ಮೂವರು ಪ್ರತಿಷ್ಠಿತ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾದ ಅಭಿಜಿತ್ ಬ್ಯಾನರ್ಜಿ ಸದ್ಯ ಭಾರತದ ಆರ್ಥಿಕತೆ ಚೇತರಿಸಿಕೊಳ್ಳಲು ತುರ್ತಾಗಿ ಅಗತ್ಯವಿರುವ ಕೆಲವು ಔಷಧಿಗಳನ್ನು ಹೆಸರಿಸಿದ್ದಾರೆ. ಈ ಪಟ್ಟಿಯಲ್ಲಿ ಕೊನೆಯಲ್ಲಿರುವ ಔಷಧಿಯೆಂದರೆ, ಪ್ರಾರ್ಥನೆ ಮತ್ತು ಅದರಿಂದಾಚೆಗೆ, ಇನ್ನಷ್ಟು ಪ್ರಾರ್ಥನೆ.
ಅಮೆರಿಕದ ಬ್ರೌನ್ ವಿಶ್ವವಿದ್ಯಾನಿಲಯದಲ್ಲಿ ಕಳೆದ ವಾರ ಆಯೋಜಿಸಲಾಗಿದ್ದ ಒ.ಪಿ. ಜಿಂದಾಲ್ ಉಪನ್ಯಾಸದಲ್ಲಿ ಭಾಗವಹಿಸಿದ್ದ ಭಾರತದ ಮತ್ತೋರ್ವ ಆರ್ಥಿಕತಜ್ಞ ಮತ್ತು ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಜೊತೆ ಭಾಗವಹಿಸಿದ್ದ ಬ್ಯಾನರ್ಜಿ ಈ ಸಲಹೆಯನ್ನು ನೀಡಿದ್ದರು.
ವಿಶ್ವವಿದ್ಯಾನಿಲಯ ಈ ಕಾರ್ಯಕ್ರಮದ ಒಂದು ಗಂಟೆ ಐದು ನಿಮಿಷಗಳ ಅವಧಿಯ ಸಂಪೂರ್ಣ ವೀಡಿಯೊವನ್ನು ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದು ಮೊದಲಿಗೆ ರಘುರಾಮ್ ರಾಜನ್ ಅವರ ಉಪನ್ಯಾಸ ಮತ್ತು ನಂತರ ಬ್ಯಾನರ್ಜಿಯ ಪ್ರತಿಕ್ರಿಯೆಯನ್ನು ಹೊಂದಿದೆ.
ಭಾರತೀಯ ನೀತಿನಿರೂಪಕರು ಪ್ರಾರ್ಥಿಸುವಂತೆ ಬ್ಯಾನರ್ಜಿ ಸಲಹೆ ನೀಡಿರುವುದು ಸದ್ಯ ಕುಸಿತಕ್ಕೊಳಗಾಗಿರುವ ಭಾರತದ ಆರ್ಥಿಕತೆಯನ್ನು ಸರದಾರಿಗೆ ತರುವುದು ಎಷ್ಟೊಂದು ಪ್ರಯಾಸದ ಕೆಲಸವಾಗಿದೆ ಎಂಬುದನ್ನು ಬಿಂಬಿಸುತ್ತದೆ.
ಬ್ಯಾನರ್ಜಿ ಸಲಹೆಯು ಭಾರತೀಯರ ಕೈಗೆ ಹಣ ನೀಡುವುದರ ಮೇಲೆ ಗಮನಹರಿಸಿದೆ. ಅದು ಉದ್ಯೋಗ ಖಾತ್ರಿ ಯೋಜನೆಗಳಲ್ಲಿ ವೇತನವನ್ನು ಏರಿಸುವ ಮೂಲಕ ಆಗಬಹುದು, ರೈತರಿಗೆ ನೀಡುವ ದರವನ್ನು ಹೆಚ್ಚುಗೊಳಿಸುವ ಮೂಲಕ ಮತ್ತು ಹಣವನ್ನು ಸರಾಗವಾಗಿ ಹರಿಯುವಂತೆ ಮಾಡುವ ಮೂಲಕ ಆಗಬಹುದು. ಜನರು ಏನು ಯೋಚಿಸುತ್ತಾರೆ ಮತ್ತು ಹೇಗೆ ವರ್ತಿಸುತ್ತಾರೆ ಎಂಬುದನ್ನು ಸರಕಾರ ನಿಯಂತ್ರಿಸದೆ ಒಂದು ಸ್ಪಷ್ಟ ನಿಯಂತ್ರಕವನ್ನು ಜಾರಿಗೊಳಿಸಲು ಅವರು ಸಲಹೆ ನೀಡುತ್ತಾರೆ.
ಬ್ಯಾನರ್ಜಿ ತನ್ನ ಜೀವನದುದ್ದಕ್ಕೂ, ಕ್ರಿಯಾತ್ಮಕ ಲೆಕ್ಕ ರಚಿಸುವ ಮೂಲಕ ವಿತ್ತೀಯ ಪ್ರಮಾಣದ ನಿಜ ಪರಿಸ್ಥಿತಿಯನ್ನು ಮರೆಮಾಚಲು ಪ್ರಯತ್ನಿಸುವ ಅನೇಕ ಸರಕಾರಗಳ ದೃಷ್ಟಿಕೋನವನ್ನು ಪ್ರಶ್ನಿಸುತ್ತಾ ಬಂದವರು ಮತ್ತು ಸಾಂಖ್ಯಿಕ ಸಂಸ್ಥೆಗಳಲ್ಲಿ ರಾಜಕೀಯ ಹಸ್ತಕ್ಷೇಪ ಕೊನೆಗೊಳಿಸುವಂತೆ ಸದ್ಯದ ಆಡಳಿತಕ್ಕೆ ಪತ್ರ ಬರೆದವರಲ್ಲಿ ಒಬ್ಬರಾಗಿದ್ದಾರೆ. ಸರಕಾರದ ಮುಂಗಡ ಪತ್ರ ಊಹಾತ್ಮಕ ಆರ್ಥಿಕ ಚಮತ್ಕಾರದ ಮೇಲೆ ಅವಲಂಬಿತವಾಗದೆ ಇರುವುದು ಬಹಳ ಮುಖ್ಯ ಎಂದು ಬ್ಯಾನರ್ಜಿ ತಿಳಿಸುತ್ತಾರೆ.
ಸರಕಾರದ ನೀತಿಗಳು ಮತ್ತು ಅವುಗಳನ್ನು ಅನುಷ್ಠಾನಗೊಳಿಸುವ ರೀತಿಯ ಬಗ್ಗೆ ಬ್ಯಾನರ್ಜಿ ನೇರಾನೇರ ಅಭಿಪ್ರಾಯಗಳನ್ನು ನೀಡುತ್ತಾರೆ. ಬ್ರೌನ್ ವಿಶ್ವವಿದ್ಯಾನಿಲಯದಲ್ಲಿ ಅವರು ರಾಜನ್ ಪ್ರಸ್ತಾಪಿಸಿದ ವಿಷಯದ ಬಗ್ಗೆ ಮಾತನಾಡಿದರೂ ತನ್ನ ಅಭಿಪ್ರಾಯವನ್ನು ನೇರ ಮತ್ತು ಸ್ಪಷ್ಟವಾಗಿಟ್ಟಿದ್ದರು.
ಸದ್ಯ ಭಾರತದ ಇಂದಿನ ಆರ್ಥಿಕತೆ ಪರಿಸ್ಥಿತಿಯನ್ನು ಬ್ಯಾನರ್ಜಿ ಯಾವ ರೀತಿ ನೋಡುತ್ತಾರೆ ಎನ್ನುವುದಕ್ಕೆ ಇದು ಉತ್ತಮ ನಿದರ್ಶನವಾಗಿದೆ. ತಮ್ಮ ಮಾತಿನಲ್ಲಿ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವನ್ನು ಪ್ರಸ್ತಾಪಿಸುವ ಬ್ಯಾನರ್ಜಿ ನಂತರ ವಿವಿಧ ಆರ್ಥಿಕ ಸವಾಲುಗಳಿಗೆ ಹಾಲಿ ಸರಕಾರ ಸ್ಪಂದಿಸುತ್ತಿರುವ ರೀತಿಯ ಬಗ್ಗೆ ಉಲ್ಲೇಖಿಸುತ್ತಾರೆ.
ಬ್ಯಾನರ್ಜಿ ಹಾಲಿ ಸರಕಾರದ ಅನೇಕ ನೀತಿಗಳ ಟೀಕಾಕಾರರಾಗಿದ್ದಾರೆ, ಮುಖ್ಯವಾಗಿ, ಮೋದಿಯ ಮಹಾತ್ವಾಕಾಂಕ್ಷಿ ನೋಟು ಅಮಾನ್ಯೀಕರಣ. ಇದನ್ನು ಬ್ಯಾನರ್ಜಿ ಅಸಂಬದ್ಧ ಮತ್ತು ಗೊಂದಲ ಹುಟ್ಟಿಸುವಂತಹದ್ದು ಎಂದು ಕರೆದಿದ್ದರು. ಸರಕು ಮತ್ತು ಸೇವಾ ತೆರಿಗೆಯ ಅನುಷ್ಠಾನವನ್ನೂ ಅವರು ಟೀಕಿಸಿದ್ದರು. ಬ್ಯಾನರ್ಜಿ ಜಿಎಸ್‌ಟಿ ಪರವಾಗಿದ್ದರೂ ಸರಕಾರ ಮತ್ತು ಆರ್‌ಬಿಐ ಆರ್ಥಿಕವಾಗಿ ಸ್ಪಂದಿಸಿದ ರೀತಿಯನ್ನು ಅವರು ಟೀಕಿಸಿದ್ದರು.
ಭಾರತದ ಆರ್ಥಿಕತೆಗೆ ಏನು ಅಗತ್ಯ ಎನ್ನುವ ಕುರಿತು ಬ್ಯಾನರ್ಜಿಗಿರುವ ಅಭಿಪ್ರಾಯದ ಬಗ್ಗೆ ತಿಳಿಯಲು ಒಂದೊಂದೇ ಅವಕಾಶವಲ್ಲ. ಭಾರತ ಹೇಗಾದರೂ ಕನಿಷ್ಠ ಆದಾಯ ಯೋಜನೆಯನ್ನು ಜಾರಿಗೆ ತರಬೇಕು ಎಂದು ಅವರು ತಿಳಿಸಿದ್ದರು. ಇದು ಸುಲಭವಿಲ್ಲ, ಆದರೆ ರಾಜಕೀಯ ಇಚ್ಛಾಶಕ್ತಿಯಿದ್ದರೆ ಕೆಲವು ವರ್ಷಗಳ ಕಾಲ ಜಿಡಿಪಿಯ ಶೇಕಡಾ ಒಂದು ಹೆಚ್ಚುವರಿಯನ್ನು ತೆಗೆದಿಡುವುದು ಸಾಧ್ಯ. ಇದರಿಂದ ಕುಂಠಿತಗೊಂಡಿರುವ ನಮ್ಮ ಬೆಳವಣಿಗೆ ಪ್ರಕ್ರಿಯೆಗೆ ಉತ್ತಮ ಆರಂಭ ನೀಡಲು ಸಾಧ್ಯವಾಗಬಹುದು ಎಂದು ಅವರು ಅಭಿಪ್ರಾಯಿಸಿದ್ದರು.
2019ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಸರ್ವರಿಗೂ ಕನಿಷ್ಠ ಆದಾಯ ಯೋಜನೆ ಬ್ಯಾನರ್ಜಿಯ ಮಿದುಳಿನ ಕೂಸಾಗಿತ್ತು.
ಕಳೆದ ವರ್ಷ ರಾಜನ್ ಹಾಗೂ ಇತರರ ಜೊತೆಗಿನ ಸಂಪಾದಕತ್ವದಲ್ಲಿ ಬರೆದ ಪುಸ್ತಕದಲ್ಲಿ ಬ್ಯಾನರ್ಜಿ ಭಾರತ ಮುಂದಕ್ಕೆ ಸಾಗಲು ನಿಯಂತ್ರಣಗಳನ್ನು ಕಡಿಮೆಗೊಳಿಸುವುದು ಮತ್ತು ರಾಜ್ಯಗಳ ಎಲ್ಲ ಸಾಲವನ್ನು ಕೇಂದ್ರ ಬೆಂಬಲಿಸುವುದನ್ನು ಕೊನೆಗೊಳಿಸುವುದು ಸೇರಿದಂತೆ ಎಂಟು ಮಾರ್ಗಸೂಚಿಗಳನ್ನು ನೀಡಿದ್ದಾರೆ.
ಬ್ಯಾನರ್ಜಿ ಮತ್ತು ಅವರ ಪತ್ನಿ, ಪ್ರತಿಷ್ಠಿತ ಅರ್ಥಶಾಸ್ತ್ರಜ್ಞೆ ಎಸ್ತರ್ ಡಫ್ಲೊ ಅವರೂ ಪತಿಯೊಂದಿಗೆ ನೊಬೆಲ್ ಪಡೆದುಕೊಂಡಿದ್ದು ಇವರಿಬ್ಬರು ದಶಕಗಳ ಹಿಂದೆ ಬರೆದಿದ್ದ ಸಂಶೋಧನಾ ಪತ್ರಗಳನ್ನು ಹೊಂದಿರುವ ಬಡ ಆರ್ಥಿಕತೆಯ ಕುರಿತ ಪುಸ್ತಕ ಈ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ. ಸದ್ಯ ಈ ಇಬ್ಬರು ನೊಬೆಲ್ ವಿಜೇತರ ಯೋಚನೆಯನ್ನು ಅರ್ಥಮಾಡಿಕೊಳ್ಳಲು ಈ ಪುಸ್ತಕವನ್ನು ಅತ್ಯಂತ ಸೂಕ್ಷ್ಮವಾಗಿ ಓದುವವರ ಸಂಖ್ಯೆಯಲ್ಲೂ ಏರಿಕೆಯಾಗುವುದರಲ್ಲಿ ಸಂಶಯವಿಲ್ಲ.
ಕೃಪೆ: scroll.in