ಜನೌಷಧ ಕೇಂದ್ರಗಳಲ್ಲಿ ಸಿಗುತ್ತಿಲ್ಲ ಜನರು ಕೇಳಿದ ಔಷಧ
ಬೆಂಗಳೂರು, ಅ.15: ನಗರದ ಪ್ರಮುಖ ಸರಕಾರಿ ಆಸ್ಪತ್ರೆಗಳ ಆವರಣ ಸೇರಿ ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ಮಟ್ಟದಲ್ಲಿರುವ ಜನೌಷಧ ಕೇಂದ್ರಗಳಿಗೆ ಜನರು ಕಡಿಮೆ ಬೆಲೆಗೆ ಔಷಧಿಗಳು ಸಿಗುತ್ತವೆ ಎಂದು ಖರೀದಿಸಲು ಹೋದರೆ, ಪ್ರತಿ ಬಾರಿಯೂ ನಮ್ಮಲ್ಲಿ ಈ ಔಷಧ ಖಾಲಿಯಾಗಿದೆ, ಬಂದಾಗ ಬನ್ನಿ ಎಂದು ಸಬೂಬು ಹೇಳಿ ಕಳುಹಿಸಿರುವ ನೂರಾರು ಘಟನೆಗಳು ಬೆಳಕಿಗೆ ಬಂದಿವೆ.
ಬಡರೋಗಿಗಳಿಗೆ ಶೇ.30ರಿಂದ ಶೇ.70ರಷ್ಟು ರಿಯಾಯಿತಿ ದರದಲ್ಲಿ ಔಷಧ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಜನೌಷಧ ಕೇಂದ್ರಗಳನ್ನು ಆರಂಭಿಸಿದೆ. ಅಂತೆಯೇ ವಿಕ್ಟೋರಿಯಾ ಸಮುಚ್ಛಯ ಆಸ್ಪತ್ರೆಗಳು, ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆ, ಶಿವಾಜಿನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಸೇರಿ ಬಹುತೇಕ ಸರಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧ ಕೇಂದ್ರಗಳನ್ನು 3-4 ವರ್ಷಗಳ ಹಿಂದೆಯೇ ಆರಂಭಿಸಲಾಗಿದೆ. ಆದರೆ, ಈ ಕೇಂದ್ರಗಳು ಸದಾ ಬಾಗಿಲು ಮುಚ್ಚಿರುತ್ತವೆ. ಬಾಗಿಲು ತೆರೆದಿದ್ದರೂ ಅಗತ್ಯ ಔಷಧಗಳು ಸಿಗುವುದಿಲ್ಲ. ಹೀಗಾಗಿ, ಕೇಂದ್ರ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆ ಬಡರೋಗಿಗಳಿಗೆ ಮರೀಚಿಕೆಯಾಗಿದ್ದು, ಅವರು ಖಾಸಗಿ ಔಷಧ ಮಳಿಗೆಗಳಿಗೆ ತೆರಳಿ ಹೆಚ್ಚು ಹಣ ವ್ಯಯಿಸುವುದು ತಪ್ಪಿಲ್ಲ.
ಈ ಕೇಂದ್ರಗಳು ಖಾಸಗಿ ವ್ಯಕ್ತಿ ಹಾಗೂ ಸಂಸ್ಥೆಗಳು ಸರಕಾರದಿಂದ ಗುತ್ತಿಗೆ ಪಡೆದು ನಡೆಸುತ್ತಿವೆ. ಸರಕಾರದಿಂದ ಔಷಧ ಕೇಂದ್ರ ತೆರೆಯಲು ಉಚಿತ ಸ್ಥಳ, ಔಷಧ ಖರೀದಿಗೆ ಸಬ್ಸಿಡಿ ಮತ್ತು ಕಂಪ್ಯೂಟರ್, ಇತರೆ ಉಪಕರಣಗಳಿಗೆಂದು ಎರಡು ಲಕ್ಷ ರೂ.ವರೆಗೆ ಆರ್ಥಿಕ ನೆರವು ನೀಡುತ್ತದೆ. ನಿಯಮದ ಪ್ರಕಾರ ಈ ಜನೌಷಧ ಮಳಿಗೆಗಳು ದಿನದ 24 ಗಂಟೆಯೂ ಸೇವೆ ಒದಗಿಸುವ ಜತೆಗೆ ನಿಗದಿ ಪಡಿಸಿರುವ ರಿಯಾಯಿತಿ ದರದಲ್ಲಿ ಜನರಿಗೆ ಔಷಧ ನೀಡಬೇಕು. ಆದರೆ, ಈ ನಿಯಮಗಳು ಪಾಲನೆಯಾಗುತ್ತಿಲ್ಲ. ಜನೌಷಧ ಕೇಂದ್ರ ಏಕೆ ತೆರೆದಿಲ್ಲ ಎಂದು ಕೇಳಲು ಹೋದರೆ ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ವೈದ್ಯರು, ನಿವಾಸಿ ವೈದ್ಯಾಧಿಕಾರಿಗಳು, ಆಡಳಿತಾಧಿಕಾರಿಗಳು ಉತ್ತರಿಸುತ್ತಾರೆ ಎಂದು ರೋಗಿಗಳು ಹಾಗೂ ಅವರ ಸಂಬಂಧಿಕರು ತಿಳಿಸುತ್ತಾರೆ.
ವಿಕ್ಟೋರಿಯಾ ಸಮುಚ್ಛಯದಲ್ಲಿ ವಾಣಿವಿಲಾಸ, ಮಿಂಟೊ, ನೆಫ್ರೊ ಹಾಗೂ ಯುರಾಲಜಿ ವಿಭಾಗ, ದಂತ ವೈದ್ಯಕೀಯ ಆಸ್ಪತ್ರೆಗಳಿದ್ದು, ನಿತ್ಯ ಒಂದು ಸಾವಿರಕ್ಕೂ ಹೆಚ್ಚು ರೋಗಿಗಳು ಭೇಟಿ ನೀಡುತ್ತಾರೆ. ಇಲ್ಲಿ ಒಂದು ಜನೌಷಧ ಕೇಂದ್ರ ಸ್ಥಾಪಿಸಲಾಗಿದೆ. ಈ ಕೇಂದ್ರ ಬೆಳಗ್ಗೆಯಿಂದ ಸಂಜೆಯವರೆಗೆ ಮಾತ್ರ ತೆರೆದಿರುತ್ತದೆ. ಸರಕಾರಿ ರಜಾ ದಿನಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಇದರಿಂದ, ವಿಕ್ಟೋರಿಯಾ ಸಮುಚ್ಛಯ ಆಸ್ಪತ್ರೆಗಳಿಗೆ ಬರುವ ಬಹುತೇಕ ರೋಗಿಗಳು ಖಾಸಗಿ ಔಷಧ ಮಳಿಗೆಗಳಲ್ಲಿ ಎಂಆರ್ಪಿ ನೀಡಿ ಔಷಧ ಖರೀದಿ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ. ಔಷಧ ಕೇಂದ್ರ ತೆರೆದಿರುವ ಸಮಯ ಹಾಗೂ ಲಭ್ಯವಿರುವ ಔಷಧಗಳ ಕುರಿತು ವಿಚಾರಣೆ ನಡೆಸಲು ಗುತ್ತಿಗೆ ಪಡೆದವರ ಹೆಸರು, ದೂರವಾಣಿ ಅಥವಾ ಸಹಾಯವಾಣಿ ಸಂಖ್ಯೆ ಸಿಗುವುದಿಲ್ಲ. ದೂರು ನೀಡಲು, ಕೇಂದ್ರ ಯಾರ ವ್ಯಾಪ್ತಿಗೆ ಬರುತ್ತದೆ ಎಂಬುದೂ ತಿಳಿದಿಲ್ಲ ಎನ್ನುತ್ತಾರೆ ರೋಗಿಗಳ ಸಂಬಂಧಿಕರು.
ಕೇಂದ್ರ ಹಾಗೂ ರಾಜ್ಯ ಸರಕಾರದ ನೆರವಿನೊಂದಿಗೆ ನಗರದ ವಿವಿಧೆಡೆ ಸರಕಾರಿ ಸಂಸ್ಥೆಗಳ ಆವರಣದಲ್ಲಿ 150 ಜನೌಷಧ ಮಳಿಗೆಗಳಿದ್ದರೂ ದುಬಾರಿ ಬೆಲೆ ಮಾತ್ರೆಗಳು ಸಿಗುವುದು ಕಷ್ಟಕರವಾಗಿದೆ. ಆಯಾ ಆಸ್ಪತ್ರೆಗಳ ಆವರಣದಲ್ಲಿ ಪ್ರಾರಂಭಿಸಿರುವ ಜನೌಷಧ ಕೇಂದ್ರಗಳ ಸಂಪೂರ್ಣ ಮೇಲ್ವಿಚಾರಣೆ ಹೊಣೆ ಆಡಳಿತ ವೈದ್ಯಾಧಿಕಾರಿಗಳದ್ದಾಗಿದೆ ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಜೊತೆಗೆ ವಾರಕ್ಕೊಮ್ಮೆ ಕೇಂದ್ರಗಳು ನಿಯಮ ಪಾಲಿಸುತ್ತಿವೆಯೇ ಎಂಬ ಕುರಿತು ತಪಾಸಣೆ ನಡೆಸಿ ಆಯುಕ್ತರು ಕಚೇರಿಗೆ ವರದಿ ನೀಡಲು ಆದೇಶಿಸಿದೆ. ಈ ನಿಯಮ ವಿಕ್ಟೋರಿಯಾ, ಬೌರಿಂಗ್ ಆಸ್ಪತ್ರೆ ಸೇರಿ ನಗರದ ಬಹುತೇಕ ಆಸ್ಪತ್ರೆಗಳಲ್ಲಿ ಪಾಲನೆ ಆಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ದಿನದ 24 ಗಂಟೆ ಸೇವೆ ಎಂಬ ಬೋರ್ಡ್ ಇದ್ದರೂ ವಿಕ್ಟೋರಿಯಾ ಆಸ್ಪತ್ರೆ ಜನೌಷಧ ಕೇಂದ್ರ ಬೆಳಗ್ಗೆಯಿಂದ ಸಂಜೆವರೆಗೆ ಮಾತ್ರ ತೆರೆದಿರುತ್ತದೆ. ಕಡಿಮೆ ಬೆಲೆ ಎಂದು ಔಷಧ ಖರೀದಿಸಲು ಹೋದರೆ, ಪ್ರತಿ ಬಾರಿಯೂ ನಮ್ಮಲ್ಲಿ ಈ ಔಷಧ ಇಲ್ಲ ಎನ್ನುತ್ತಾರೆ.
-ಬಸವರಾಜ, ರೋಗಿ ಸಂಬಂಧಿ
ಖಾಸಗಿ ಮೆಡಿಕಲ್ ಸ್ಟೋರ್ನಲ್ಲಿ ತೆಗೆದುಕೊಳ್ಳಲು ಈ ಔಷಧ ನಮಗೆ ಕಷ್ಟವಾಗುತ್ತದೆ, ನಿಮ್ಮಲ್ಲಿಯೇ ಈ ಔಷಧ ಇದ್ದರೆ ಕೊಡಿ ಎಂದು ಮನವಿ ಮಾಡಿಕೊಂಡರೆ ಮುಂದಿನ ವಾರ ಬನ್ನಿ ನೋಡೋಣ ಎಂದು ಹೇಳುತ್ತಾರೆ. ಇಲ್ಲವೇ ಯಾವುದಕ್ಕೂ ಫೋನ್ ಮಾಡಿ ಎನ್ನುತ್ತಾರೆ.
-ಹರೀಶ್, ರೋಗಿ ಸಂಬಂಧಿ