ಪರದೆಯ ಮೇಲಿನ ಯುದ್ಧವೂ ನೆಲದ ಮೇಲಿನ ಬುದ್ಧನೂ
ನಮ್ಮಲ್ಲಿಯೇ ಉಳಿಸಿಕೊಳ್ಳಲಾಗದ ಬುದ್ಧನನ್ನು ನಾವು ಅನ್ಯ ದೇಶಗಳಿಗೆ ನೀಡುವುದಾದರೂ ಹೇಗೆ. ಪರಿವ್ರಾಜಕನಂತೆ ತನ್ನ ದಮ್ಮದ ಸೂತ್ರಗಳನ್ನು ಕಟ್ಟಕಡೆಯ ಮನುಷ್ಯನಿಗೂ ತಲುಪಿಸಲು ಯತ್ನಿಸಿದ ಬುದ್ಧ ಎಂದೋ ಭಾರತದ ಸಾಗರಗಳನ್ನು ದಾಟಿ ಹೋಗಿರುವುದು ಸತ್ಯ. ಇಂದು ನಾವು ಜಗತ್ತಿಗೆ ಬುದ್ಧನನ್ನು ಕೊಟ್ಟಿದ್ದೇವೆ ಎಂದು ಹೇಳಿದರೆ ಅದು ಅಮೆಜಾನ್ ಕಂಪೆನಿಯ ಜಾಹೀರಾತಿನಂತೆ ಕಾಣುತ್ತದೆ. ನಾವು ಬುದ್ಧನನ್ನು ಕಳೆದುಕೊಂಡಿದ್ದೇವೆ ಎಂದು ಹೇಳಿದರೆ ಸಾರ್ಥಕವಾಗುತ್ತದೆ.
ವಿಶ್ವ ಸಂಸ್ಥೆಯ ವೇದಿಕೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ‘‘ವಿಶ್ವಕ್ಕೆ ಭಾರತ ಬುದ್ಧನನ್ನು ನೀಡಿದೆ’’ ಎಂದು ಹೇಳಿದ್ದಾರೆ. ಇದೇನೂ ಇತಿಹಾಸದ ಸಂಶೋಧನೆಯಲ್ಲ ಅಥವಾ ಹೊಸ ಅನ್ವೇಷಣೆಯೂ ಅಲ್ಲ. ಭಾರತವೊಂದನ್ನು ಹೊರತುಪಡಿಸಿ ಉಳಿದ ಹಲವಾರು ರಾಷ್ಟ್ರಗಳಲ್ಲಿ ಬುದ್ಧನಿಗೆ ಹೆಚ್ಚಿನ ಮಾನ್ಯತೆ ದೊರೆತಿರುವುದನ್ನು ನೋಡಿದರೆ ನಾವು ಬುದ್ಧನನ್ನು ವಿಶ್ವಕ್ಕೆ ಕೊಟ್ಟಿದ್ದೇವೆ ಎನ್ನುವುದಕ್ಕಿಂತಲೂ ಕೊಟ್ಟುಬಿಟ್ಟಿದ್ದೇವೆ ಎನ್ನುವುದು ಸೂಕ್ತ. ಏಕೆಂದರೆ ಭಾರತದ ನೆಲದಲ್ಲಿ ಬುದ್ಧನ ಅವಶೇಷವೂ ಉಳಿಯದಂತೆ ಎಚ್ಚರ ವಹಿಸಿಯೇ ಬೌದ್ಧ ದಮ್ಮವನ್ನು ಅಳಿಸಿಹಾಕುವ ಪ್ರಯತ್ನಗಳನ್ನು ಶತಮಾನಗಳ ಕಾಲ ನಡೆಸಲಾಗಿದೆ. ನಮ್ಮಲ್ಲಿಯೇ ಉಳಿಸಿಕೊಳ್ಳಲಾಗದ ಬುದ್ಧನನ್ನು ನಾವು ಅನ್ಯ ದೇಶಗಳಿಗೆ ನೀಡುವುದಾದರೂ ಹೇಗೆ. ಪರಿವ್ರಾಜಕನಂತೆ ತನ್ನ ದಮ್ಮದ ಸೂತ್ರಗಳನ್ನು ಕಟ್ಟಕಡೆಯ ಮನುಷ್ಯನಿಗೂ ತಲುಪಿಸಲು ಯತ್ನಿಸಿದ ಬುದ್ಧ ಎಂದೋ ಭಾರತದ ಸಾಗರಗಳನ್ನು ದಾಟಿ ಹೋಗಿರುವುದು ಸತ್ಯ. ಇಂದು ನಾವು ಜಗತ್ತಿಗೆ ಬುದ್ಧನನ್ನು ಕೊಟ್ಟಿದ್ದೇವೆ ಎಂದು ಹೇಳಿದರೆ ಅದು ಅಮೆಜಾನ್ ಕಂಪೆನಿಯ ಜಾಹೀರಾತಿನಂತೆ ಕಾಣುತ್ತದೆ. ನಾವು ಬುದ್ಧನನ್ನು ಕಳೆದುಕೊಂಡಿದ್ದೇವೆ ಎಂದು ಹೇಳಿದರೆ ಸಾರ್ಥಕವಾಗುತ್ತದೆ.
ಜಗತ್ತಿಗೆ ಬುದ್ಧನನ್ನು ಕೊಡುವುದು ಎಂದರೇನು? ಬುದ್ಧನ ಕನಸಿನ ಭಾರತ ಇನ್ನೂ ಕನಸಾಗಿಯೇ ಇರುವಾಗ ಬುದ್ಧನನ್ನು ಕೊಡುವುದಾದರೂ ಹೇಗೆ ? ಇದು ಕೇವಲ ರಾಜತಾಂತ್ರಿಕತೆಯ ಪ್ರಶ್ನೆಯಲ್ಲ. ನಾವು ಬುದ್ಧನ ನಾಡಿನಿಂದ ಬಂದವರು. ಯುದ್ಧ ಬಯಸುವವರಲ್ಲ ಎಂದು ಹೇಳುವ ಆತ್ಮಸ್ಥೈರ್ಯ ನಮ್ಮೆಳಗಿದೆಯೇ ಎಂಬ ಪ್ರಶ್ನೆ ನಮ್ಮ ಪ್ರಜ್ಞೆಯನ್ನೇ ಕದಡಿಬಿಡುತ್ತದೆ. 2,500 ವರ್ಷಗಳ ಹಿಂದೆಯೇ ಈ ದೇಶವನ್ನು ಕಾಡುತ್ತಿದ್ದ ಅವೈಚಾರಿಕತೆ, ಮೌಢ್ಯ, ಜಾತಿ ವ್ಯವಸ್ಥೆ ಮತ್ತು ಅಸಮಾನತೆಯ ವಿರುದ್ಧ ದನಿ ಎತ್ತಿ ಯಜ್ಞ, ಹೋಮ ಹವನ, ಆರಾಧನೆ, ಕರ್ಮ, ಪುನರ್ಜನ್ಮ ಮತ್ತು ಇತರ ವೈದಿಕ ಪರಂಪರೆಗಳನ್ನು ತಿರಸ್ಕರಿಸಿ ಭೇದ ಭಾವವಿಲ್ಲದ, ತಾರತಮ್ಯವಿಲ್ಲದ, ದೌರ್ಜನ್ಯವಿಲ್ಲದ ಸಮ ಸಮಾಜದ ಕನಸು ಕಟ್ಟಿದ ಬುದ್ಧನ ನಾಡು ಸಾಕಾರಗೊಂಡಿಯೇ ಇಲ್ಲ ಎನ್ನುವುದು ನಮ್ಮ ಕಣ್ಣೆದುರಿನ ಸತ್ಯ. ಯುದ್ಧ ಪರಂಪರೆಯನ್ನು ಧಿಕ್ಕರಿಸಿಯೇ ತನ್ನ ಸಕಲ ಸಂಪತ್ತು ಮತ್ತು ಅಧಿಕಾರವನ್ನು ತ್ಯಜಿಸಿ ಮನುಕುಲದ ಪುನರುತ್ಥಾನಕ್ಕಾಗಿ ಜ್ಞಾನಮಾರ್ಗವನ್ನು ಅನುಸರಿಸಿದ ಬುದ್ಧ ಭಾರತದ ಇತರ ಎಲ್ಲ ದಾರ್ಶನಿಕರಂತೆ ಬಳಕೆಯ ಸ್ಥಾವರವಾಗಿದ್ದಾನೆಯೇ ಹೊರತು ಬೌದ್ಧಿಕ ಪ್ರಜ್ಞೆಯ ಜಂಗಮನಾಗಿ ಉಳಿದಿಲ್ಲ. ಇದಕ್ಕೆ ಬೌದ್ಧ ದಮ್ಮದ ದೌರ್ಬಲ್ಯ ಕಾರಣವಲ್ಲ. ವೈದಿಕ ಧರ್ಮದ ಆಧಿಪತ್ಯ ಮತ್ತು ಆ ಕಾಲಘಟ್ಟದ ಸಮಾಜೋ ಸಾಂಸ್ಕೃತಿಕ ಬೆಳವಣಿಗೆಗಳು ಕಾರಣ. ಇದರ ಪರಿಣಾಮವನ್ನು ಇಂದಿನ ಜಾತಿ ದೌರ್ಜನ್ಯದಲ್ಲಿ, ಜಾತಿ ತಾರತಮ್ಯದಲ್ಲಿ, ದಲಿತರ ಅಸ್ಪಶ್ಯರ ಹತ್ಯೆಗಳಲ್ಲಿ ಕಾಣುತ್ತಿದ್ದೇವೆ.
ಬದಲಾದ ರಾಜಕೀಯ ಸಂದರ್ಭದಲ್ಲಿ ನಾವು ಹೊಸ ಭಾರತ ಉದಯಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಆದರೆ ಹೊಸತೆಲ್ಲವೂ ಸುಂದರ ಅಲ್ಲ ಎನ್ನುವ ಕಟು ವಾಸ್ತವವನ್ನೂ ಕಾಣುತ್ತಿದ್ದೇವೆ. ಇಡೀ ಸಮಾಜವೇ ಯುದ್ಧ ಸನ್ನದ್ಧವಾಗಿರುವಂತೆ ಎಲ್ಲೆಡೆ ಬಿತ್ತರಿಸಲಾಗುತ್ತಿರುವುದನ್ನು ನೋಡಿದರೆ ಬಹುಶಃ ಭಾರತದ ಸಮಾಜೋ ಸಾಂಸ್ಕೃತಿಕ ಸಂಕಥನಗಳ ಮೂಲ ಸ್ವರೂಪವೇ ಬದಲಾಗುವ ಸೂಚನೆಗಳು ಕಾಣುತ್ತಿವೆ. ಕ್ಷಿಪಣಿ, ರಫೇಲ್, ಡ್ರೋನ್ ಮುಂತಾದ ವಿನಾಶಕಾರಿ ಶವವಾಹಕಗಳು ಎಳೆಯ ಶಾಲಾ ಮಕ್ಕಳ ಬಣ್ಣದ ಚಿತ್ತಾರದ ವಸ್ತುವಾದರೂ ಹೆಚ್ಚೇನಿಲ್ಲ. ಏಕೆಂದರೆ ನವ ಭಾರತದಲ್ಲಿ ಭಾರತದ ವಿಸ್ತೀರ್ಣವನ್ನು ಹೆಚ್ಚಿಸುವ ಭ್ರಮಾಲೋಕವನ್ನು ಸೃಷ್ಟಿಸಲಾಗುತ್ತಿದೆ. ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಸ್ತಂಭ ಅಥವಾ ನಾಗರಿಕ ಪ್ರಜ್ಞೆಯ ಕನ್ನಡಿ ಎಂದೇ ಪರಿಗಣಿಸಲಾಗುತ್ತಿದ್ದ ಮಾಧ್ಯಮ ಲೋಕ ಈ ಪ್ರಕ್ರಿಯೆಗೆ ಚಾಲನೆ ನೀಡುತ್ತಿರುವುದು ದುರಂತ. ಆಧುನಿಕ ಪ್ರಪಂಚದಲ್ಲಿ ಯುದ್ಧಗಳು ನಡೆಯುವುದು ಕೇವಲ ಸಾಮ್ರಾಜ್ಯ ವಿಸ್ತರಣೆಗೆ ಅಲ್ಲ. ಯುದ್ಧ ಪರಂಪರೆಯ ಹಿಂದೆ ಬಂಡವಾಳ ವ್ಯವಸ್ಥೆಯ ಕ್ರೌರ್ಯ, ಧನ ದಾಹ ಇರುವುದನ್ನು ವಿಯೆಟ್ನಾಂನಿಂದ ಸೂಡಾನ್ವರೆಗೂ ಕಾಣಬಹುದು.
ವಿಶ್ವದ ದೊಡ್ಡಣ್ಣ, ವಿನಾಶಕಾರಿ ಅಸ್ತ್ರಗಳ ತವರು ಅಮೆರಿಕದಲ್ಲಿಯೇ ಅತಿ ಹೆಚ್ಚಿನ ಯುದ್ಧ ವಿರೋಧಿ ಮನಸ್ಸುಗಳೂ ಇರುವುದು ವಿಡಂಬನೆ ಎನಿಸಿದರೂ ಸತ್ಯ. ವಿಶ್ವದ ಯಾವುದೇ ಪ್ರಾಂತದಲ್ಲಿ ನಡೆಯುವ ಯುದ್ಧಗಳು ಅಮೆರಿಕದ ಜನಜೀವನದ ಮೇಲೆ ಪ್ರಭಾವ ಬೀರುವುದಿಲ್ಲ. ಏಕೆಂದರೆ ಅಲ್ಲಿನ ಅರ್ಥವ್ಯವಸ್ಥೆಗೆ ಶಸ್ತ್ರಾಸ್ತ್ರ ವ್ಯಾಪಾರವೇ ಬುನಾದಿ. ಪೆಂಟಗನ್ ಎನ್ನುವ ಶಸ್ತ್ರಾಸ್ತ್ರಗಳ ತವರು ವಿಶ್ವದ ಹಲವು ರಾಷ್ಟ್ರಗಳನ್ನು ಇನ್ನಿಲ್ಲದಂತೆ ನೆಲಸಮ ಮಾಡಿರುವುದನ್ನು ಕಳೆದ ಐವತ್ತು ವರ್ಷಗಳಲ್ಲಿ ಕಂಡಿದ್ದೇವೆ. ಈ ಶಸ್ತ್ರಾಸ್ತ್ರಗಳು ಪಾಕಿಸ್ತಾನಕ್ಕೂ ಸರಬರಾಜಾಗುತ್ತವೆ, ಭಾರತಕ್ಕೂ, ಆಫ್ರಿಕಾದ ದೇಶಗಳಿಗೂ, ಕೊಲ್ಲಿ ರಾಷ್ಟ್ರಗಳಿಗೂ. ಇರಾನ್ ಇರಾಕ್ ನಡುವೆ ವರ್ಷಗಟ್ಟಲೆ ನಡೆದ ವಿನಾಶಕಾರಿ ಸಮರದಲ್ಲಿ ಎರಡೂ ದೇಶಗಳು ಬಳಸಿದ್ದು ಅಮೆರಿಕದ ಶಸ್ತ್ರಾಸ್ತ್ರಗಳನ್ನೇ ಅಲ್ಲವೇ? ಆದರೂ ಅಲ್ಲಿ ಶಾಂತಿ ಸ್ಥಾಪಿಸುವ ಪ್ರಯತ್ನವನ್ನೂ ಅಮೆರಿಕವೇ ಮಾಡುತ್ತದೆ. ಸಾಮ್ರಾಜ್ಯಶಾಹಿಯ ಪದಕೋಶದಲ್ಲಿ ಶಾಂತಿಸ್ಥಾಪನೆ ಎಂದರೆ ಒಂದು ದೇಶದಲ್ಲಿ ತನ್ನ ಕೈಗೊಂಬೆ ಸರಕಾರವನ್ನು ಸ್ಥಾಪಿಸಿ, ತನ್ನ ಸೇನೆಯನ್ನು ಅಲ್ಲಿ ನಿಯೋಜಿಸಿ ಪ್ರತಿರೋಧದ ದನಿಗಳನ್ನು ನಿರಂತರವಾಗಿ ದಮನಿಸುವುದು ಎಂದಷ್ಟೇ ಅರ್ಥ. ಭಾರತದಲ್ಲಿ ಇಂದು ಇದೇ ರೀತಿಯ ಶಾಂತಿ ಸ್ಥಾಪನೆಯನ್ನು ಕಾಣುತ್ತಿದ್ದೇವೆ. ಸಾಂವಿಧಾನಿಕ ಸಂಸ್ಥೆಗಳು ಇಲ್ಲಿ ಪೆಂಟಗನ್ ನಿರ್ವಹಿಸುವ ಕಾರ್ಯವನ್ನು ನಿರ್ವಹಿಸುತ್ತಿವೆ.
ಭಾರತ ಜಗತ್ತಿಗೆ ಬುದ್ಧನನ್ನು ನೀಡಿದೆ, ಬುದ್ಧ ಚಿಂತನೆಯನ್ನೂ ನೀಡಿದೆ ಆದರೆ ಭಾರತ ಬುದ್ಧ ಮಾರ್ಗದಲ್ಲಿ ನಡೆಯುತ್ತಿದೆಯೇ ಎಂದು ನೋಡಿದಾಗ ಗೌತಮ ಬುದ್ಧ ಎರಡು ಬಾರಿ ನಕ್ಕಿದ್ದು ನೆನಪಾಗುತ್ತದೆ. ‘‘ಬುದ್ಧ ನಕ್ಕಾಗ’’ ನಾವು ಸಂಭ್ರಮಿಸಿದ್ದು ಗೌತಮನ ಅಷ್ಟಾಂಗ ಮಾರ್ಗವನ್ನು ಅನುಷ್ಠಾನ ಮಾಡಿದ್ದಕ್ಕಾಗಿ ಅಲ್ಲ. ಬುದ್ಧ ನಕ್ಕಿದ್ದಾದರೂ ಏಕೆ? ಭಾರತ ಅಣ್ವಸ್ತ್ರ ಪರೀಕ್ಷೆಯಲ್ಲಿ ಸಫಲವಾಗಿದ್ದಕ್ಕೆ. ಮೊದಲು ಇಂದಿರಾ ನಂತರ ವಾಜಪೇಯಿ ಅಧಿಕಾರಾವಧಿಯಲ್ಲಿ. ಅಣ್ವಸ್ತ್ರವನ್ನು ನಾವು ಮೊದಲು ಪ್ರಯೋಗಿಸುವುದಿಲ್ಲ ಎಂದು ಎಲ್ಲ ದೇಶಗಳೂ ಹೇಳುತ್ತವೆ. ಆದರೆ ಇಲ್ಲಿ ಮೊದಲು ಕೊನೆ ಮುಖ್ಯವಾಗುವುದಿಲ್ಲ. ಒಬ್ಬರು ಪ್ರಯೋಗಿಸಿದರೆ ಮತ್ತೊಬ್ಬರು ಅವಸಾನ ಹೊಂದುತ್ತಾರೆ. ಮೊದಲ ಹೆಜ್ಜೆಗೆ ಅವಕಾಶವೇ ಸಿಗದಂತೆ ಅಳಿಸಿಹೋಗುವ ದುರಂತವನ್ನು ನಾವು ಕಾಣಬೇಕಾಗುತ್ತದೆ. ಆದರೂ ಭಾರತದ ಮಾಧ್ಯಮಗಳಲ್ಲಿ ಯುದ್ಧವನ್ನು, ಯುದ್ಧ ಪರಂಪರೆಯನ್ನು ವೈಭವೀಕರಿಸಲಾಗುತ್ತಿದೆ. ಇನ್ನೆರಡೇ ದಿನದಲ್ಲಿ ಭಾರತ ಪಾಕ್ ಯುದ್ಧ ಸಂಭವಿಸಿ ಪಾಕಿಸ್ತಾನವನ್ನು ಧೂಳೀಪಟ ಮಾಡಲಾಗುತ್ತದೆ ಎನ್ನುವ ಕಲ್ಪಿತ ಚಿತ್ರಣವನ್ನು ಕನ್ನಡದ ಕೆಲವು ವಾಹಿನಿಗಳು ಜನಸಾಮಾನ್ಯರ ಮುಂದಿಡುತ್ತಿವೆ. ಸೇನಾ ವಲಯದಿಂದ ಆಗಾಗ ಕೇಳಿಬರುವ ಸುರಕ್ಷತಾ ಹೇಳಿಕೆಗಳಲ್ಲೂ ಕಾಣದ ಉತ್ಸುಕತೆ, ಉತ್ಕರ್ಷ, ಉನ್ಮಾದ ಟಿವಿ ಪರದೆಯ ಮೇಲೆ ಕಾಣುತ್ತಿದೆ.
ಇಲ್ಲಿ ವಿದ್ಯುನ್ಮಾನ ಮಾಧ್ಯಮಗಳ ಉದ್ದೇಶ ಮತ್ತು ಹೊಣೆಗಾರಿಕೆ ಎರಡೂ ನಿಷ್ಕರ್ಷೆಗೊಳಗಾಗಬೇಕಿದೆ. ಮೊದಲನೆಯ ಮಹಾಯುದ್ಧದಿಂದ ಇಂದಿನವರೆಗೂ ಒಂದು ಶತಮಾನದ ಯುದ್ಧಪರಂಪರೆಯ ಇತಿಹಾಸವನ್ನು ಗಮನಿಸುತ್ತಾ ಬಂದರೆ, ಬಹುಪಾಲು ಸಂದರ್ಭಗಳಲ್ಲಿ ಮಾಧ್ಯಮಗಳು ಯುದ್ಧ ವಿರೋಧಿ ನಿಲುವಿಗೆ ಬದ್ಧವಾಗಿರುವುದನ್ನು ಗಮನಿಸಬಹುದು. ಆಳುವ ವರ್ಗಗಳ ಕೈಗೊಂಬೆ ಮಾಧ್ಯಮಗಳನ್ನು ಹೊರತುಪಡಿಸಿದರೆ ಸ್ವತಂತ್ರ ಮಾಧ್ಯಮ ಲೋಕ ವಿಯಟ್ನಾಂ, ಇರಾಕ್, ಅಫ್ಘಾನಿಸ್ತಾನ, ಸೊಮಾಲಿಯಾ, ಸೂಡಾನ್, ಫೆಲೆಸ್ತೀನ್ ಹೀಗೆ ಯಾವುದೇ ಯುದ್ಧದ ಸಂದರ್ಭದಲ್ಲೂ ಯುದ್ಧ ಪರಂಪರೆಯನ್ನು ವೈಭವೀಕರಿಸಿಲ್ಲ. ಏಕೆಂದರೆ ವಿನಾಶಕಾರಿ ಸಮರಶೀಲತೆ ಮನುಕುಲದ ಉಳಿವಿಗೆ ಮಾರಕ ಎನ್ನುವ ಸತ್ಯ ಎಲ್ಲರಿಗೂ ತಿಳಿದದ್ದೇ. ಮನುಕುಲದ ಉಳಿವಿಗೆ ಸ್ಪಂದಿಸುವುದು ಮಾಧ್ಯಮ ಲೋಕದ ಹೊಣೆಗಾರಿಕೆ. ಬಹುಶಃ ಭಾರತದ ಮಾಧ್ಯಮ ಲೋಕ ಈ ವಾಸ್ತವವನ್ನು ಜಾಣ್ಮೆಯಿಂದಲೇ ಮರೆತಿದೆ. ಏಕೆಂದರೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಸಂವೇದನೆಯ ಕೊರತೆ ತೀವ್ರವಾಗುತ್ತಿದೆ. ಆಡಳಿತಾರೂಢ ವ್ಯವಸ್ಥೆಯನ್ನು ಆಲಂಗಿಸುವ ವಂದಿಮಾಗಧ ಸಂಸ್ಕೃತಿ ಹೆಚ್ಚಾಗುತ್ತಿದೆ. ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಸ್ತಂಭ ಕಾರ್ಪೋರೇಟ್ ಉದ್ಯಮಗಳಿಗೆ ಶರಣಾಗಿ ಶಿಥಿಲವಾಗುತ್ತಿರುವುದು ಸ್ಪಷ್ಟವಾಗುತ್ತಿದೆ.
ಸೇನಾ ವಲಯದಿಂದ ಗಡಿ ಪ್ರದೇಶದಲ್ಲಿನ ಉದ್ವಿಗ್ನ ಪರಿಸ್ಥಿತಿಯ ಬಗ್ಗೆ ಹೊರಬರುವ ಒಂದು ಪುಟ್ಟ ಸಂದೇಶ ಅಥವಾ ಮಾಹಿತಿ ಪರದೆಯ ಮೇಲೆ ಒಂದು ಬಾಲಿವುಡ್/ಹಾಲಿವುಡ್ ಮಾದರಿಯ ದೃಶ್ಯಕಾವ್ಯ(?)ವನ್ನೇ ಸೃಷ್ಟಿಸುತ್ತಿರುವುದನ್ನು ನಾಗರಿಕ ಸಮಾಜ ಮೌನವಾಗಿ ಸಹಿಸುತ್ತಿದೆ. ನೆರೆ ರಾಷ್ಟ್ರಗಳಿಂದ ಹೊರಬರುವ ಒಂದು ಪ್ರಚೋದನಕಾರಿ ಹೇಳಿಕೆ ಪರದೆಯ ಮೇಲಿನ ಮತ್ತು ಹಿಂದಿರುವ ಬಾಹುಬಲಿಗಳನ್ನು ಉದ್ವಿಗ್ನತೆಯ ಪರಾಕಾಷ್ಠೆಗೆ ಕೊಂಡೊಯ್ಯುತ್ತಿರುವುದನ್ನೂ ಮೌನವಾಗಿ ಸಹಿಸುತ್ತಿದೆ. ಇದನ್ನು ಹೇಗೆ ಅರ್ಥೈಸುವುದು? ಮಾಧ್ಯಮಗಳು ತಮ್ಮ ಹೊಣೆಗಾರಿಕೆಯನ್ನು ಮರೆತಿವೆ ಎನ್ನುವುದು ನಿರೂಪಿತ ಸತ್ಯ, ಕೆಲವು ವಾಹಿನಿಗಳು ಸ್ವಂತಿಕೆಯನ್ನು ಕಳೆದುಕೊಂಡಿರುವುದು ವಾಸ್ತವ, ಆದರೆ ಆಡಳಿತ ವ್ಯವಸ್ಥೆ ಇಂತಹ ಪ್ರಚೋದಕ ಸಾಮಗ್ರಿಗೆ ಕಡಿವಾಣ ಹಾಕಬೇಕಲ್ಲವೇ? ಸುಶಿಕ್ಷಿತರು ಎಂದು ನಮ್ಮ ಬೆನ್ನನ್ನು ನಾವೇ ತಟ್ಟಿಕೊಂಡು ಮೆರೆಯುವ ನಾವು, ಅಂದರೆ ನಾಗರಿಕ ಪ್ರಜ್ಞೆ ಇನ್ನೂ ಜೀವಂತವಾಗಿರುವ ನಾಗರಿಕ ಸಮಾಜ, ಇದರ ವಿರುದ್ಧ ದನಿ ಎತ್ತಬೇಕಲ್ಲವೇ? ದೇಶದ ಕಾನೂನು ವ್ಯವಸ್ಥೆಯ ಪರಿಪಾಲಕರು ಜನಸಾಮಾನ್ಯರಲ್ಲಿ ಅನಗತ್ಯ ಉನ್ಮಾದ ಸೃಷ್ಟಿಸುವ ‘‘ಪರದೆಯ ಮೇಲಿನ ಯುದ್ಧಗಳ’’ ವಿರುದ್ಧ ಕ್ರಮ ಕೈಗೊಳ್ಳಬೇಕಲ್ಲವೇ?
ಹಾಗಾಗುತ್ತಿಲ್ಲ. ಏಕೆಂದರೆ ಮುಕ್ತವಾಗಿ ಮಾತನಾಡಲೂ ಭಯ ಪಡುವಂತಹ ವಾತಾವರಣ ನಿರ್ಮಾಣವಾಗಿದೆ. ‘ಯುದ್ಧವಿರೋಧಿ’ ಪದವನ್ನು ‘ದೇಶವಿರೋಧಿ’ ಪದಕ್ಕೆ ಸಂವಾದಿಯಾಗಿ ಬಳಸಲಾಗುತ್ತಿದೆ. ಹಿಂಸೆಗೆ ವಿರೋಧಿಸುವುದನ್ನು ಪ್ರಭುತ್ವ ವಿರೋಧಿ ಎಂದು ಪರಿಗಣಿಸಲಾಗುತ್ತಿದೆ. ಗುಂಪುಥಳಿತ ಮತ್ತು ಹಿಂಸಾಚಾರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ, ಪ್ರಜಾತಾಂತ್ರಿಕ ಮಾರ್ಗದಲ್ಲೇ ತಮ್ಮ ಅಹವಾಲು ಸಲ್ಲಿಸಿದ್ದ 49 ಚಿಂತಕರ ವಿರುದ್ಧ ಎಫ್ಐಆರ್ ದಾಖಲಾಗಿರುವುದು ಇದನ್ನೇ ಸೂಚಿಸುತ್ತದೆ. ಈ ಪ್ರಕರಣದ ಬಗ್ಗೆ ಸರಕಾರದ ಮೌನ ಮತ್ತೇನನ್ನೋ ಸೂಚಿಸುತ್ತದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಒಂದು ವೇಳೆ ಯುದ್ಧ ಸಂಭವಿಸುವುದೇ ಆದರೆ ಯುದ್ಧ ವಿರೋಧಿ ಸ್ವರಗಳು ಏನಾಗಬಹುದು? ಅಣ್ವಸ್ತ್ರ ಬಳಕೆಯ ವಿರುದ್ಧ ಹೊರಹೊಮ್ಮುವ ದನಿಗಳ ಪಾಡು ಏನಾಗಬಹುದು ? ಇತ್ತೀಚಿನ ಒಂದು ಸಮೀಕ್ಷೆಯ ಅನುಸಾರ ಭಾರತ ಪಾಕ್ ನಡುವೆ ಅಣ್ವಸ್ತ್ರ ಸಮರ ನಡೆದರೆ 12 ಕೋಟಿ ಜನರು ಸಾಯುತ್ತಾರೆ ಎಂದು ಹೇಳಲಾಗಿದೆ. ನಾವು 21ನೆಯ ಶತಮಾನದಲ್ಲಿರುವುದರಿಂದ ಜಾನುವಾರುಗಳು, ಪರಿಸರ, ನಿಸರ್ಗ ಸಂಪತ್ತು, ಪಕ್ಷಿ ಸಂಕುಲ ಇದಾವುದೂ ಗಣನೆಗೆ ಬರುವುದಿಲ್ಲ. ಚೆನ್ನೈ, ಹೈದರಾಬಾದ್, ಬೆಂಗಳೂರಿನಲ್ಲಿರುವ ಸುರಕ್ಷಿತ ವಲಯ ‘‘ಅಬ್ ದಿಲ್ಲಿ ಬಹೋತ್ ದೂರ್ ಹೈ’’ (ದಿಲ್ಲಿ ಇನ್ನೂ ದೂರದಲ್ಲಿದೆ) ಎಂದು ಭಾವಿಸಿ ನಿರುಮ್ಮಳವಾಗಿರಬಹುದೇನೋ. ಆದರೆ ದಿಲ್ಲಿ ದೂರವೇ ಇರುತ್ತದೆ ಗಗನದಲ್ಲಿ ದಾಳಿಯಿಡುವ ಬಾವಲಿಗಳು ತಲೆಯ ಮೇಲಿರುತ್ತವೆ.
ಆಧುನಿಕ ಶಸ್ತ್ರಾಸ್ತ್ರಗಳಿಗೆ ಕೈ ಕಾಲುಗಳಿವೆ ಕಣ್ಣಿಲ್ಲ ಎನ್ನುವುದನ್ನು ಗಮನಿಸಬೇಕಿದೆ. ಸಾವಿರಾರು ಮೈಲು ದೂರದಲ್ಲಿ ಕುಳಿತು ಒತ್ತಲಾಗುವ ಒಂದು ಗುಂಡಿ ನಮ್ಮ ಸುತ್ತಲೂ ಬೃಹತ್ ಗುಂಡಿಗಳನ್ನು ನಿರ್ಮಿಸಿ ಶವಗಳ ರಾಶಿಯನ್ನೇ ಪೇರಿಸಿಬಿಡುತ್ತವೆ. ಸಾಮ್ರಾಜ್ಯಶಾಹಿ ಶಕ್ತಿಗಳ ಜಾಗತಿಕ ರಾಜಕಾರಣ ಇಂತಹ ಕಣ್ಣಿಲ್ಲದ ಗುಲಾಮಿ ಅಸ್ತ್ರಗಳನ್ನು ತಯಾರಿಸಿದೆ. ಡ್ರೋನ್ಗಳು ನಡೆಸುವ ದಾಳಿಗೆ ನಮ್ಮ ನೆಲವೊಂದೇ ಗೋಚರಿಸುತ್ತದೆ, ಕುಲ, ಜಾತಿ, ಭಾಷೆ, ಧರ್ಮ ಮತ್ತು ಲಿಂಗ ಯಾವುದೂ ಗೋಚರಿಸುವುದಿಲ್ಲ. ವಯಸ್ಸಿನ ಪರಿವೆಯೂ ಇರುವುದಿಲ್ಲ. ಕೊಲ್ಲುವುದೊಂದೇ ಉದ್ದೇಶವಾಗಿರುತ್ತದೆ. ಸರ್ವನಾಶವೊಂದೇ ಗುರಿಯಾಗಿರುತ್ತದೆ. ದಿಗ್ವಿಜಯವೊಂದೇ ಧ್ಯೇಯವಾಗಿರುತ್ತದೆ. ನಾಶವಾಗುವುದಾದರೂ ಏನು? ನಾವು ಭವಿಷ್ಯದ ಪೀಳಿಗೆಗಾಗಿ ನಮ್ಮದೇ ಬೆವರು ನೆತ್ತರು ಸುರಿಸಿ ನಿರ್ಮಿಸಿರುವ ಸಂಪತ್ತು ಮತ್ತು ಸುಂದರ ಪ್ರಪಂಚ. ಮತ್ತು ನಮ್ಮ ನಂತರ ಭೂ ಸ್ಪರ್ಶ ಮಾಡಲು ಕಾತರದಿಂದಿರುವ ಅಗೋಚರ ಪೀಳಿಗೆ. ಭ್ರೂಣಗಳನ್ನು ಕಿವುಚಿ ಗರ್ಭವನ್ನು ಸೀಳಿ ಉತ್ತಮ ಸಮಾಜವನ್ನು ನಿರ್ಮಿಸುವ ಕನಸು ಕಟ್ಟುತ್ತಿರುವ ಒಂದು ವಿಚಿತ್ರ ಸನ್ನಿವೇಶದಲ್ಲಿ ನಾವಿದ್ದೇವೆ. ದುರಂತ ಎಂದರೆ ಭಾರತದ ಯುವ ಪೀಳಿಗೆ, ತಿಳಿದೋ ತಿಳಿಯದೆಯೋ ಈ ಉನ್ಮಾದದಲ್ಲಿ ತೇಲುತ್ತಿದೆ. ಮಾಧ್ಯಮಗಳು ಈ ಉನ್ಮಾದಕ್ಕೆ ರಂಗು ತುಂಬುತ್ತಿವೆ.
ಬುದ್ಧ ಎಂದಿಗೂ ನಗುವುದಿಲ್ಲ. ನಾವು ನಗಿಸಲು ಯತ್ನಿಸುತ್ತಿದ್ದೇವೆ. ಈಗ ಹೇಳಿ ನಾವು ಬುದ್ಧನನ್ನು ಜಗತ್ತಿಗೆ ನೀಡಿದ್ದೇವೆ ಎಂದರೆ ಅರ್ಥವೇನು?