ಜಗತ್ತಿನ 3ರಲ್ಲಿ ಒಂದು ಮಗುವಿಗೆ ಅಪೌಷ್ಟಿಕತೆ ಅಥವಾ ಬೊಜ್ಜು
ಯುನಿಸೆಫ್ ವಾರ್ಷಿಕ ವರದಿ
ವಿಶ್ವಸಂಸ್ಥೆ, ಅ. 16: ಜಗತ್ತಿನಾದ್ಯಂತವಿರುವ ಐದು ವರ್ಷಕ್ಕಿಂತ ಚಿಕ್ಕ ಮಕ್ಕಳ ಪೈಕಿ ಮೂರರಲ್ಲಿ ಒಬ್ಬರು (ಸುಮಾರು 20 ಕೋಟಿ ಮಕ್ಕಳು) ಒಂದೋ ಅಪೌಷ್ಟಿಕತೆಯಿಂದ ಕೂಡಿರುತ್ತಾರೆ ಅಥವಾ ಬೊಜ್ಜು ಹೊಂದಿರುತ್ತಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯುನಿಸೆಫ್ ಮಂಗಳವಾರ ವರದಿಯೊಂದರಲ್ಲಿ ಹೇಳಿದೆ. ಇದು ಅವರ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅದು ಅಭಿಪ್ರಾಯಪಟ್ಟಿದೆ.
ಅದೇ ವೇಳೆ, 6 ತಿಂಗಳಿಂದ 2 ವರ್ಷದವರೆಗಿನ ಮಕ್ಕಳ ಪೈಕಿ ಮೂರನೇ ಎರಡರಷ್ಟು ಮಕ್ಕಳಿಗೆ ಅವರ ವೇಗವಾಗಿ ಬೆಳೆಯುವ ದೇಹಗಳು ಮತ್ತು ಮೆದುಳುಗಳನ್ನು ಆಧರಿಸುವಷ್ಟು ಪ್ರಮಾಣದ ಆಹಾರ ಲಭಿಸುತ್ತಿಲ್ಲ ಎಂಬುದಾಗಿಯೂ ಅದು ಹೇಳಿದೆ.
ಸರಿಯಾದ ಪ್ರಮಾಣದಲ್ಲಿ ತಿನ್ನದಿರುವ ಮತ್ತು ಉಣಿಸದಿರುವ ಅಭ್ಯಾಸವು ಮಗುವಿನ ಆರಂಭಿಕ ದಿನದಿಂದಲೇ ಆರಂಭಗೊಳ್ಳುತ್ತದೆ ಎಂದು ತನ್ನ ವಾರ್ಷಿಕ ವರದಿಯಲ್ಲಿ ಯುನಿಸೆಫ್ ತಿಳಿಸಿದೆ.
‘‘ಕಳೆದ ಹಲವು ವರ್ಷಗಳಲ್ಲಿ ಸಂಭವಿಸಿದ ತಾಂತ್ರಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಮುನ್ನಡೆಗಳ ಹೊರತಾಗಿಯೂ, ‘‘ಮಕ್ಕಳು ಸರಿಯಾದ ಪ್ರಮಾಣದಲ್ಲಿ ತಿನ್ನದಿದ್ದರೆ ಅವರ ಜೀವನವೂ ಸರಿಯಾಗಿ ಇರುವುದಿಲ್ಲ’’ ಎಂಬ ಈ ಮೂಲ ತತ್ವವನ್ನು ನಾವು ಮರೆತಿದ್ದೇವೆ’’ ಎಂದು ಯುನಿಸೆಫ್ ಕಾರ್ಯಕಾರಿ ನಿರ್ದೇಶಕಿ ಹೆನ್ರೀಟಾ ಫೋರ್ ಹೇಳಿದರು.