ರಕ್ತ ಪರಿಚಲನೆಗೆ ವ್ಯತ್ಯಯ:ಲಕ್ಷಣಗಳು ಮತ್ತು ಕಾರಣಗಳು
ನಮ್ಮ ಶರೀರದಲ್ಲಿ ಸಮಾರು 60,000 ಮೈಲುಗಳಷ್ಟು ಉದ್ದದ ರಕ್ತನಾಳಗಳಿವೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಅಲ್ಲದೆ ಹೃದಯದಿಂದ ಸ್ನಾಯುಗಳವರೆಗೆ ರಕ್ತ ಪರಿಚಲನೆ ವ್ಯವಸ್ಥೆಯನ್ನು ಅವು ರೂಪಿಸಿರುತ್ತವೆ. ರಕ್ತನಾಳಗಳ ಈ ಜಾಲವು ಶರೀರದ ಪ್ರತಿಯೊಂದೂ ಭಾಗಕ್ಕೂ ರಕ್ತವನ್ನು ಪೂರೈಸುತ್ತದೆ. ಆದರೆ ಈ ವ್ಯವಸ್ಥೆಗೆ ವ್ಯತ್ಯಯವುಂಟಾದಾಗ ರಕ್ತದ ಹರಿವು ನಿಧಾನಗೊಳ್ಳುತ್ತದೆ ಅಥವಾ ಅದಕ್ಕೆ ತಡೆಯುಂಟಾಗುತ್ತದೆ. ಹೀಗಾದಾಗ ಶರೀರದ ಜೀವಕೋಶಗಳಿಗೆ ಸಾಕಷ್ಟು ಆಮ್ಲಜನಕ ಮತ್ತು ಅಗತ್ಯ ಪೋಷಕಾಂಶಗಳು ದೊರೆಯುವುದಿಲ್ಲ. ಆದರೆ ಶರೀರದಲ್ಲಿ ರಕ್ತ ಪರಿಚಲನೆಗೆ ವ್ಯತ್ಯಯವುಂಟಾದಾಗ ಆ ಸ್ಥಿತಿಯನ್ನು ತಿಳಿದುಕೊಳ್ಳುವುದು ನಮಗೆ ಕಷ್ಟವಾಗುತ್ತದೆ. ಹೀಗಾಗಿ ಅದನ್ನು ಸೂಚಿಸುವ ಲಕ್ಷಣಗಳು ತಿಳಿದಿರುವುದು ಅಗತ್ಯವಾಗಿದೆ. ಇಲ್ಲಿವೆ ಈ ಕುರಿತು ಮಾಹಿತಿಗಳು......
►ರಕ್ತ ಪರಿಚಲನೆಯಲ್ಲಿ ವ್ಯತ್ಯಯ ಸೂಚಿಸುವ ಲಕ್ಷಣಗಳು
ನಮ್ಮ ಅಂಗಾಂಗಗಳಿಗೆ ಸಾಕಷ್ಟು ರಕ್ತ ಪೂರೈಕೆಯಾಗದಿದ್ದಾಗ ನಮ್ಮ ಕೈಗಳು ಮತ್ತು ಪಾದಗಳು ತಣ್ಣಗಾಗುತ್ತಿರುವ ಮತ್ತು ಮರಗಟ್ಟಿದ ಅನುಭವವಾಗುತ್ತದೆ. ನಮ್ಮ ಚರ್ಮವು ಸ್ವಚ್ಛವಾಗಿದ್ದರೆ ಪಾದದ ಮೇಲೆ ನೀಲಿ ಗೆರೆಗಳು ಕಾಣತೊಡಗುತ್ತವೆ. ರಕ್ತ ಪೂರೈಕೆಯಲ್ಲಿ ಕೊರತೆಯು ಚರ್ಮವು ಒಣಗುವಂತೆ ಮಾಡುತ್ತದೆ. ಉಗುರುಗಳು ದುರ್ಬಲಗೊಂಡು ಬಿರುಕು ಬಿಡಲು ಆರಂಭವಾಗಬಹುದು. ಕೂದಲು,ವಿಶೇಷವಾಗಿ ಕಂಕುಳು ಮತ್ತು ಕಾಲುಗಳಲ್ಲಿಯ ಕೂದಲು ಉದುರತೊಡಗಬಹುದು. ಕೆಲವು ಪುರುಷರಿಗೆ ಲೈಂಗಿಕ ನಿಶ್ಶಕ್ತಿಯೂ ಉಂಟಾಗಬಹುದು. ಮಧುಮೇಹಿಗಳಾಗಿದ್ದರೆ ಗಾಯಗಳು ಮಾಯುವುದು ವಿಳಂಬವಾಗಬಹುದು.
►ರಕ್ತ ಪರಿಚಲನೆ ನಿಧಾನಗೊಳ್ಳಲು ಕಾರಣಗಳು
ತಂಬಾಕು: ಸಿಗರೇಟ್,ಇ-ಸಿಗರೇಟ್ ಮತ್ತು ಹೊಗೆರಹಿತ ತಂಬಾಕಿನಲ್ಲಿರುವ ನಿಕೋಟಿನ್ ಅಪಧಮನಿಗಳ ಭಿತ್ತಿಗಳಿಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ರಕ್ತವನ್ನು ದಪ್ಪಗಾಗಿಸುತ್ತದೆ. ಇದರಿಂದಾಗಿ ರಕ್ತವು ಸುಲಭವಾಗಿ ಹರಿಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಧೂಮ್ರಪಾನದ ಚಟವಿದ್ದವರು ಅದನ್ನು ಬಿಡುವುದು ಒಳ್ಳೆಯದು.
ರಕ್ತದೊತ್ತಡ: ರಕ್ತದೊತ್ತಡ ಅಧಿಕವಾಗಿದ್ದರೆ ಅದು ಅಪಧಮನಿ ಕಾಠಿಣ್ಯವನ್ನುಂಟು ಮಾಡುತ್ತದೆ. ಇದು ಅಪಧಮನಿಗಳನ್ನು ಬಿಗಿಗೊಳಿಸಿ ರಕ್ತದ ಹರಿವಿಗೆ ವ್ಯತ್ಯಯವನ್ನುಂಟು ಮಾಡುವ ಸ್ಥಿತಿಯಾಗಿದೆ. ಸಾಮಾನ್ಯವಾಗಿ ರಕ್ತದೊತ್ತಡ 120ಕ್ಕಿಂತ ಹೆಚ್ಚಿರಬಾರದು ಮತ್ತು 80ಕ್ಕಿಂತ ಕಡಿಮೆಯಿರಬಾರದು,ಆದರೆ ನಿಮ್ಮ ಆರೋಗ್ಯ ಮತ್ತು ವಯಸ್ಸಿಗೆ ತಕ್ಕಂತೆ ರಕ್ತದೊತ್ತಡದ ಪ್ರಮಾಣವನ್ನು ನಿಮ್ಮ ವೈದ್ಯರಿಂದ ತಿಳಿದುಕೊಳ್ಳಬಹುದು. ಕನಿಷ್ಠ ತಿಂಗಳಿಗೊಮ್ಮೆಯಾದರೂ ರಕ್ತದೊತ್ತಡವನ್ನು ಪರೀಕ್ಷಿಸುವುದು ಒಳ್ಳೆಯದು.
ನೀರಿನ ಕೊರತೆ: ರಕ್ತವು ಅರ್ಧದಷ್ಟು ನೀರನ್ನು ಒಳಗೊಂಡಿರುತ್ತದೆ. ಹೀಗಾಗಿ ಶರೀರದ ಜಲೀಕರಣ ಮುಖ್ಯವಾಗಿದೆ. ಪ್ರತಿ ದಿನ ಎಂಟು ಗ್ಲಾಸ್ ನೀರು ಕುಡಿಯುವುದನ್ನು ರೂಢಿಸಿಕೊಳ್ಳಬೇಕು. ನೀವು ಹೆಚ್ಚು ದೈಹಿಕ ಶ್ರಮ,ವ್ಯಾಯಾಮ ಮಾಡುತ್ತಿದ್ದರೆ ಅಥವಾ ಬೇಸಿಗೆಯಲ್ಲಿ ಹೆಚ್ಚೆಚ್ಚು ನೀರು ಸೇವಿಸಬೇಕು.
ತುಂಬ ಹೊತ್ತು ಕುಳಿತಿರುವುದು:
ಒಂದೇ ಜಾಗದಲ್ಲಿ ಗಂಟೆಗಟ್ಟಲೆ ಸಮಯ ಕುಳಿತುಕೊಳ್ಳುವುದರಿಂದ ರಕ್ತ ಪರಿಚಲನೆ ಕುಂಠಿತಗೊಳ್ಳತೊಡಗುತ್ತದೆ. ಇದು ಕಾಲುಗಳ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಪಾದದಲ್ಲಿ ರಕ್ತ ಸಂಚಲನೆಯನ್ನು ನಿಧಾನಗೊಳಿಸುತ್ತದೆ ಮತ್ತು ರಕ್ತ ಹೆಪ್ಪುಗಟ್ಟಲು ಕಾರಣವಾಗುತ್ತದೆ. ನೀವು ಕುಳಿತೇ ಕೆಲಸ ಮಾಡುವ ಅನಿವಾರ್ಯತೆಯಿದ್ದರೆ ಡೆಸ್ಕ್ನ್ನು ಬಳಸಬೇಕು. ಇದರಿಂದ ನಿಮ್ಮ ಇಡೀ ಶರೀರದಲ್ಲಿಯ ರಕ್ತ ಸಂಚಲನೆಯು ಹೃದಯವನ್ನು ತಲುಪುವುದಕ್ಕೆ ವ್ಯತ್ಯಯವಾಗುವುದಿಲ್ಲ.