ಕೊಲ್ಲಿ ರಾಷ್ಟ್ರಗಳಿಂದ ಬರುವ ಹಣ ಎಲ್ಲಿ ಹೂಡಿಕೆಯಾಗಬೇಕು?
ಅನಿವಾಸಿ ಕೇರಳೀಯರು ಕಳೆದ ಎರಡು ದಶಕಗಳಲ್ಲಿ ತಾವು ತಮ್ಮ ರಾಜ್ಯಕ್ಕೆ ಕಳುಹಿಸಿದ್ದ ಭಾರೀ ಮೊತ್ತದ ಕೇವಲ ಶೇ. ಒಂದರಷ್ಟನ್ನು ನೌಕರಿ ಸೃಷ್ಟಿಸುವ ವ್ಯಾಪಾರ ಉದ್ಯಮಗಳಲ್ಲಿ ತೊಡಿಸುತ್ತಿದ್ದರೂ ಕೇರಳದ ಮುಂದಿನ ತಲೆಮಾರಿಗೆ ಕೊಲ್ಲಿ ರಾಷ್ಟ್ರಗಳಲ್ಲಿ ನೌಕರರಿಗಾಗಿ ಪರದಾಡುವ, ಒದ್ದಾಡುವ ಅವಶ್ಯಕತೆ ಇರುತ್ತಿರಲಿಲ್ಲ.
‘‘ಹೊಸ ಕಾರು ಕೊಂಡುಕೊಳ್ಳುವ ನಿಮ್ಮ ಯೋಜನೆಯನ್ನು ಬಿಟ್ಟು ಬಿಡಿ. ನಿಮಗೆ ಅನಿವಾರ್ಯವಾಗಿ ಬೇಕೇ ಬೇಕಾದ ವಸ್ತುಗಳನ್ನು ಮಾತ್ರ ಕೊಂಡುಕೊಳ್ಳಿ. ಸಾರ್ವಜನಿಕ ಸಾರಿಗೆಯನ್ನು ಬಳಸಿಕೊಳ್ಳಿ. ಸರಕಾರಿ ಆಸ್ಪತ್ರೆಗಳಿಗೆ ಹೋಗಿ. ದುಬಾರಿ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಡಿ.’’
ಎರಡು ತಿಂಗಳ ಹಿಂದೆ ಕೊಲ್ಲಿ ರಾಷ್ಟ್ರದಲ್ಲಿ ಕಾರ್ಯಾಚರಿಸುವ ಸಂಘಟನೆಯೊಂದು ಕಳುಹಿಸಿದ್ದ ವಾಟ್ಸ್ಆ್ಯಪ್ ಸಲಹಾ ಪಟ್ಟಿಯ ಮುಖ್ಯಾಂಶಗಳಿವು. ಭಾರತದಲ್ಲಿ ಉಂಟಾಗಿರುವ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಗಲ್ಫ್ನಲ್ಲಿ ದುಡಿಯುತ್ತಿರುವ ಅನಿವಾಸಿ ಕೇರಳದ ಉದ್ಯೋಗಿಗಳ ಕುಟುಂಬದ ಸದಸ್ಯರಿಗೆ ಕಳುಹಿಸಲಾದ ಸಲಹೆಗಳ ಪಟ್ಟಿ ಅದು. ಆ ಪಟ್ಟಿಯಲ್ಲಿದ್ದ ಅಂತಿಮ ಸಲಹೆ: ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುತ್ತಿರುವವರು ಅವರಿಗೆ ಸೂಕ್ತ ಕಾಲಕ್ಕೆ ವೇತನ ಸಿಗದೇ ಇದ್ದರೂ, ಅವರು ಎಂದಿಗೂ ಯಾವ ಕಾರಣಕ್ಕೂ ತಮ್ಮ ನೌಕರಿ ಬಿಡಬಾರದು. ಯಾಕೆಂದರೆ ಆರ್ಥಿಕ ಹಿನ್ನಡೆಯಿಂದಾಗಿ ಊರಿನಲ್ಲಿ ಯಾವುದೇ ನೌಕರಿ ಸಿಗುತ್ತಿಲ್ಲ.’’
ಎರಡು ಕಾರಣಗಳಿಗಾಗಿ ಆ ಸಲಹೆಗಳು ಕುತೂಹಲಕರವಾಗಿದ್ದು ಮೊದಲನೆಯದಾಗಿ ಭಾರತದ ಅರ್ಥ ವ್ಯವಸ್ಥೆ ಹದಗೆಡಲಿದೆ ಎಂಬುದನ್ನು ಭಾರತದಲ್ಲಿರುವವರಿಗಿಂತ ಹೆಚ್ಚಾಗಿ ಕೊಲ್ಲಿ ದೇಶಗಳಲ್ಲಿದ್ದ ಕೇರಳೀಯರು ಅದಾಗಲೇ ಊಹಿಸಿದ್ದರು. ಎರಡನೆಯದಾಗಿ ಅನಿವಾಸಿ ಕೇರಳೀಯ ಕುಟುಂಬಗಳು ಈ ಹಿಂದೆ ಕೊಲ್ಲಿಯಿಂದ ಬರುತ್ತಿದ್ದ ಭಾರೀ ಮೊತ್ತದ ಹಣವನ್ನು ಇಷ್ಟರವರೆಗೆ ಖರ್ಚು ಮಾಡುತ್ತಿದ್ದಂತೆ ಇನ್ನು ಮುಂದೆ ಮಾಡಕೂಡದೆಂದು ತಡವಾಗಿಯಾದರೂ ಅವರಿಗೆ ಮನವರಿಕೆಯಾಗಿದೆ.
ಕೇರಳದ ಜನಸಂಖ್ಯೆಯ (34 ಮಿಲಿಯ) ಸುಮಾರು ಹತ್ತನೇ ಒಂದು ಪಾಲು ವಿದೇಶಗಳಲ್ಲಿ ಮುಖ್ಯವಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ದುಡಿಯುತ್ತಿದ್ದಾರೆ. ಪರಿಣಾಮವಾಗಿ ಒಂದು ಅಂದಾಜಿನಂತೆ ಅನಿವಾಸಿ ಕೇರಳೀಯರು ಪ್ರತಿದಿನ ಸುಮಾರು 200 ಕೋಟಿ ರೂ. ಗಳನ್ನು ಕೇರಳಕ್ಕೆ ಕಳುಹಿಸುತ್ತಿದ್ದಾರೆ. ಅನಿವಾಸಿ ಭಾರತೀಯರಿಂದ ಭಾರತಕ್ಕೆ ಹರಿದು ಬರುವ ಒಟ್ಟು ಹಣದ ಸುಮಾರು ಐದನೇ ಒಂದು ಪಾಲು ಕೇರಳಕ್ಕೆ ಬರುತ್ತದೆ.
ಉತ್ತಮ ಮಟ್ಟದ ಸಾಕ್ಷರತೆ, ತುಂಬಾ ಮುಂದುವರಿದ ರಾಜ್ಯ ಕಲ್ಯಾಣ ವ್ಯವಸ್ಥೆ ಇತ್ಯಾದಿ ಸಂಪನ್ಮೂಲಗಳಿದ್ದಾಗ್ಯೂ, ಆಹಾರ ವಸ್ತುಗಳು, ಆಹಾರ ಧಾನ್ಯಗಳು ಹಾಗೂ ತರಕಾರಿಗಳೂ ಸೇರಿದಂತೆ ಕೇರಳ ತನ್ನ ದೈನಂದಿನ ಅವಶ್ಯಕತೆಗಳಲ್ಲಿ ತಾನು ಅತ್ಯಲ್ಪವನ್ನು ಮಾತ್ರ ಉತ್ಪಾದಿಸುತ್ತಿದೆ. ರಾಜ್ಯದ ಜಿಡಿಪಿಯಲ್ಲಿ ಉತ್ಪಾದನಾ ವಸ್ತುಗಳ ಪಾಲು ಶೇ. 10ಕ್ಕಿಂತಲೂ ಕಡಿಮೆ ಇದೆ. ಜಿಡಿಪಿಗೆ ಕೃಷಿಯ ಕೊಡುಗೆ ಶೇ. 10ಕ್ಕಿಂತ ಸ್ವಲ್ಪಹೆಚ್ಚು ಇದೆ. ನಿರುದ್ಯೋಗ ದರ ತುಂಬಾ ಹೆಚ್ಚು ಇದೆ. ಆದರೂ ಕೂಡ ಕೇರಳದ ತಲಾ ಆದಾಯ ರಾಷ್ಟ್ರೀಯ ಸರಾಸರಿ ಆದಾಯಕ್ಕಿಂತ ಹೆಚ್ಚು. ಕೇರಳದ ಹಲವು ಭಾಗಗಳಲ್ಲಿ ರಸ್ತೆಗಳ ಎರಡೂ ಬದಿಗಳಲ್ಲಿ ಆಧುನಿಕ ಬಂಗಲೆಗಳು, ಅದ್ದೂರಿಯ ಮನೆಗಳು ಕಂಡು ಬರುತ್ತವೆ. ಹಾಗೆಯೇ ದುಬಾರಿ ಕಾರುಗಳು, ಚಿನ್ನಾಭರಣ ಮಳಿಗೆಗಳು ಕೂಡ ಅಲ್ಲಿ ತೀರಾ ಸಾಮಾನ್ಯ.
ಇದಕ್ಕೆಲ್ಲಾ ಕಾರಣ ಗಲ್ಫ್ ರಾಷ್ಟ್ರಗಳಿಂದ ಕೇರಳಕ್ಕೆ ಅನಿವಾಸಿ ಕೇರಳೀಯರು ಕಳುಹಿಸುವ ಹಣ. 1960ರ ದಶಕದಲ್ಲಿ ಕೊಲ್ಲಿ ದೇಶಗಳಿಗೆ ಕೆಲಸಗಾರರ ವಲಸೆ ಆರಂಭವಾದಂದಿನಿಂದ ಬೃಹತ್ ಮೊತ್ತದ ಹಣ ಕೇರಳಕ್ಕೆ ಹರಿದು ಬಂದಿದೆ. ಒಂದು ಅಂದಾಜಿನ ಪ್ರಕಾರ 21ನೇ ಶತಮಾನದ ಆರಂಭದಿಂದ ಇಂದಿನವರೆಗೆ ಹತ್ತು ಟ್ರಿಲಿಯನ್ ರೂಪಾಯಿ ಕೇರಳಕ್ಕೆ ಹರಿದು ಬಂದಿದೆ. ಆದರೆ ಯುಎಇ, ಸೌದಿ ಅರೇಬಿಯ, ಕುವೈತ್, ಕತರ್ ಮತ್ತು ಒಮನ್ ಸೇರಿದಂತೆ ವಿದೇಶಗಳಿಂದ ಬಂದಿರುವ ಭಾರೀ ಮೊತ್ತದ ಹಣ ಯಾವುದಕ್ಕೆ ಹೂಡಿಕೆಯಾಗಿದೆ ಎಂಬ ಪ್ರಶ್ನೆಗೆ ಸಿಗುವ ಉತ್ತರ: ಈ ಮೊತ್ತದ ಬಹುತೇಕ ಪಾಲು ಉಪಭೋಗ ವಸ್ತುಗಳು ಹಾಗೂ ಅನುತ್ಪಾದಕವಾದ ಜಮೀನು, ರಿಯಲ್ ಎಸ್ಟೇಟ್ ಮತ್ತು ಚಿನ್ನದ ಮೇಲೆ ವ್ಯಯವಾಗಿದೆ. ಉತ್ಪಾದಕ ರಂಗಗಳಲ್ಲಿ ತೊಡಗಿಸುವ ಬದಲು ಅನಿವಾಸಿ ಕೇರಳೀಯರು ತಾವು ಕಷ್ಟಪಟ್ಟು ಸಂಪಾದಿಸಿದ ಈ ಬೃಹತ್ ಮೊತ್ತದ ಹಣವನ್ನು ಯಾಕಾಗಿ ಹೀಗೆ ಖರ್ಚು ಮಾಡಿದರು? ಇದಕ್ಕೆ ಹಲವು ಕಾರಣಗಳಿವೆ: ವ್ಯವಸ್ಥೆಯಲ್ಲಿನ ಕಟ್ಟುನಿಟ್ಟಾದ ಕೆಲವು ನಿಯಮಗಳು, ಜಿಗುಟುತನ, ಕಾರ್ಮಿಕ ಸಂಘಗಳ ಅತಿಯಾದ ಕಾರ್ಯವಿಧಾನಗಳು, ದೂರದರ್ಶಿತ್ವವುಳ್ಳ ಪರಿಕಲ್ಪನೆಗಳ ಕೊರತೆ ಮತ್ತು ಭವಿಷ್ಯದ ಸ್ಪಷ್ಟ ಚಿತ್ರಣವಿಲ್ಲದ ನೀತಿಯ ಒಂದು ಚೌಕಟ್ಟು.
ಉಪಭೋಗವನ್ನು (ಕಂನ್ಸಂಪ್ಶನ್) ಕಡಿತಗೊಳಿಸಿದಲ್ಲಿ ಆರ್ಥಿಕ ಕುಸಿತ ಇನ್ನಷ್ಟು ತೀವ್ರಗೊಳ್ಳಬಹುದು ಎಂದು ಮೈಕ್ರೋ ಅರ್ಥಶಾಸ್ತ್ರಜ್ಞರು ಹೇಳುತ್ತಾರೆ. ಇದು ವಾಟ್ಸ್ಆ್ಯಪ್ ಸಲಹಾ ಪಟ್ಟಿಯ ಸಲಹೆಗಳಿಗೆ ಪೂರಕವಾಗಿಲ್ಲದೇ ಇರಬಹುದು. ಅದೇನಿದ್ದರೂ ಈಗ ನಮಗೆ ಕಾಣಿಸದೇ ಇರುವ ಒಂದು ವಾಸ್ತವವೆಂದರೆ ಕೇರಳದ ಮುಖ್ಯ ಕೊರತೆಯಾಗಿರುವ ನೌಕರಿಗಳು. ಕೇರಳದಲ್ಲಿ ಇನ್ನೊಂದು ತಲೆಮಾರಿನ ಕೊನೆಯವರೆಗೂ ಉಳಿಯುವಷ್ಟು ಕಾರುಗಳಿವೆ, ಬಂಗಲೆಗಳಿವೆ ಮತ್ತು ಚಿನ್ನಾಭರಣಗಳಿವೆ. ಆದರೆ ಉದ್ಯೋಗಗಳಿಲ್ಲ. ರಾಜ್ಯದಲ್ಲಿರುವ ನಿರುದ್ಯೋಗಿ ನಿವಾಸಿಗಳಿಗೂ ಉದ್ಯೋಗಗಳಿಲ್ಲ. ಹಾಗೆಯೇ ಗಲ್ಫ್ ರಾಷ್ಟ್ರಗಳಿಂದ ದಿಢೀರನೆ ನೌಕರಿ ಕಳೆದುಕೊಂಡು ತಮ್ಮ ರಾಜ್ಯಕ್ಕೆ ಮರಳಿ ಬರುವವರೆಗೂ ಉದ್ಯೋಗಗಳಿಲ್ಲ. ಅನಿವಾಸಿ ಕೇರಳೀಯರು ಕಳೆದ ಎರಡು ದಶಕಗಳಲ್ಲಿ ತಾವು ತಮ್ಮ ರಾಜ್ಯಕ್ಕೆ ಕಳುಹಿಸಿದ್ದ ಭಾರೀ ಮೊತ್ತದ ಕೇವಲ ಶೇ. ಒಂದರಷ್ಟನ್ನು ನೌಕರಿ ಸೃಷ್ಟಿಸುವ ವ್ಯಾಪಾರ ಉದ್ಯಮಗಳಲ್ಲಿ ತೊಡಿಸುತ್ತಿದ್ದರೂ ಕೇರಳದ ಮುಂದಿನ ತಲೆಮಾರಿಗೆ ಕೊಲ್ಲಿ ರಾಷ್ಟ್ರಗಳಲ್ಲಿ ನೌಕರರಿಗಾಗಿ ಪರದಾಡುವ, ಒದ್ದಾಡುವ ಅವಶ್ಯಕತೆ ಇರುತ್ತಿರಲಿಲ್ಲ.
(ಲೇಖಕರು ದಿ ಹಿಂದೂ ಪತ್ರಿಕೆಯ ಮಾಜಿ ಸಹಸಂಪಾದಕರು ಮತ್ತು ಓರ್ವ ಸ್ವತಂತ್ರ ಪತ್ರಕರ್ತರು)
ಕೃಪೆ: ದಿ ಹಿಂದು