ದಿಢೀರ್ ಹೃದಯ ಸ್ತಂಭನ ರೋಗಿಗಳಲ್ಲಿ ಸಾವಿನ ಪ್ರಮಾಣ ತಗ್ಗಿಸುವ ಐಸಿಡಿ ಚಿಕಿತ್ಸೆ ಬಗ್ಗೆ ನಿಮಗೆ ಗೊತ್ತೇ?
ಇಂಪ್ಲಾಂಟೇಬಲ್ ಕಾರ್ಡಿಯೊವರ್ಟರ್ ಡಿಫಿಬ್ರಿಲೇಟರ್ (ಐಸಿಡಿ)ಗಳ ಬಳಕೆಯು ಐಸಿಡಿಯನ್ನು ಅಳವಡಿಸಿಕೊಂಡಿರದವರಿಗೆ ಹೋಲಿಸಿದರೆ ಸಾವಿನ ಅಪಾಯವನ್ನು ಶೇ.49ರಷ್ಟು ಕಡಿಮೆ ಮಾಡುತ್ತದೆ ಎನ್ನುವುದನ್ನು ದಿಢೀರ್ ಹೃದಯ ಸ್ತಂಭನದ ಹೆಚ್ಚಿನ ಸಾಧ್ಯತೆಯುಳ್ಳ ರೋಗಿಗಳ ಮೇಲೆ ನಡೆಸಲಾದ ಇತ್ತೀಚಿನ ಅಧ್ಯಯನವೊಂದು ಬೆಳಕಿಗೆ ತಂದಿದೆ.
ದಿಢೀರ್ ಹೃದಯ ಸ್ತಂಭನವನ್ನು ತಡೆಯಲು ಐಸಿಡಿ ಚಿಕಿತ್ಸೆಯು ಭಾರತದಲ್ಲಿ ಇನ್ನೂ ಸಾಕಷ್ಟು ಬಳಕೆಯಾಗಿಲ್ಲ. ಜೀವಗಳನ್ನು ಉಳಿಸುವಲ್ಲಿ ಈ ಚಿಕಿತ್ಸೆಯ ಪರಿಣಾಮಕಾರಿತ್ವ ಮತ್ತು ದಿಢೀರ್ ಹೃದಯ ಸ್ತಂಭನವನ್ನುಂಟು ಪ್ರಮುಖ ಅಪಾಯದ ಅಂಶವಾಗಿರುವ ವೆಂಟ್ರಿಕ್ಯುಲರ್ ಎರಿಥ್ಮಿಯಾ ಅಥವಾ ಹೃತ್ಕುಕ್ಷಿಯ ಅನಿಯಮಿತ ಬಡಿತಗಳಿಗೆ ಚಿಕಿತ್ಸೆ ನೀಡುವಲ್ಲಿ ಇದು ಶೇ.99ರಷ್ಟು ಪರಿಣಾಮಕಾರಿ ಎಂದು ಈಗಾಗಲೇ ಸಾಬೀತಾಗಿರುವ ಅಂಶದ ಬಗ್ಗೆ ಜನರಲ್ಲಿ ಅರಿವು ಹೆಚ್ಚಿಸಲು ಇದು ಸಕಾಲವಾಗಿದೆ.
ವೆಂಟ್ರಿಕ್ಯುಲರ್ ಟ್ಯಾಕಿಕಾರ್ಡಿಯಾ (ಹೃತ್ಕುಕ್ಷಿಯ ಹೃದಯಸ್ಪಂದನಾಧಿಕ್ಯ) ಅಥವಾ ವೆಂಟ್ರಿಕ್ಯುಲರ್ ಫಿಬ್ರಿಲೇಷನ್ (ಹೃತ್ಕುಕ್ಷಿಯ ಅನಿಯಂತ್ರಿತ ಕಂಪನ)ದಿಂದಾಗಿ ಹೃದಯದ ಕಾರ್ಯನಿರ್ವಹಣೆ ಸ್ಥಗಿತಗೊಂಡಾಗ ದಿಢೀರ್ ಹೃದಯ ಸ್ತಂಭನ ಸಂಭವಿಸುತ್ತದೆ. ಹೃದ್ರೋಗದ ಕೌಟುಂಬಿಕ ಇತಿಹಾಸ ಅಥವಾ ಈಗಾಗಲೇ ಹೃದ್ರೋಗದಿಂದ ಬಳಲುತ್ತಿರುವವರು ದಿಢೀರ್ ಹೃದಯ ಸ್ತಂಭನದ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ.
ವೆಂಟ್ರಿಕ್ಯುಲರ್ ಟ್ಯಾಕಿಕಾರ್ಡಿಯಾ ಅಥವಾ ವೆಂಟ್ರಿಕ್ಯುಲರ್ ಫಿಬ್ರಿಲೇಷನ್ ರೂಪದಲ್ಲಿ ಅನಿಯಂತ್ರಿತ ಹೃದಯ ಬಡಿತಗಳನ್ನುಂಟು ಮಾಡುವ ಅಸಮರ್ಪಕ ವಿದ್ಯುತ್ ಕ್ರಿಯೆಯಿಂದಾಗಿ ದಿಢೀರ್ ಹೃದಯ ಸ್ತಂಭನವುಂಟಾಗುತ್ತದೆ. ಡಿಫಿಬ್ರಿಲೇಷನ್ ದಿಢೀರ್ ಹೃದಯ ಸ್ತಂಭನದ ಚಿಕಿತ್ಸೆಗೆ ಒಂದು ಮಾರ್ಗವಾಗಿದೆ,ಈ ತಂತ್ರಜ್ಞಾನದಲ್ಲಿ ಹೃದಯಕ್ಕೆ ವಿದ್ಯುತ್ ಆಘಾತವನ್ನು ನೀಡಲಾಗುತ್ತದೆ. ಡಿಫಿಬ್ರಿಲೇಷನ್ ಅಥವಾ ಹೃದಯದ ಸ್ನಾಯುಗಳ ಅನಿಯಂತ್ರಿತ ಕಂಪನವನ್ನು ತಡೆಯಲು ಮತ್ತು ಹೃದಯ ಬಡಿತ ದರವನ್ನು ಸಹಜ ಸ್ಥಿತಿಗೆ ಮರಳಿಸಲು ಹೆಚ್ಚಾಗಿ ಐಸಿಡಿಗಳನ್ನು ಬಳಸಲಾಗುತ್ತದೆ. ರೋಗನಿರ್ಧಾರದಲ್ಲಿ ಬಳಸಬಹುದಾದ ಅಗತ್ಯ ಮಾಹಿತಿಯನ್ನೂ ಈ ಸಾಧನಗಳು ಸಂಗ್ರಹಿಸುತ್ತವೆ ಎನ್ನುತ್ತಾರೆ ವೈದ್ಯಕೀಯ ತಜ್ಞರು.
ಐಸಿಡಿಯು ಪೇಸ್‌ಮೇಕರ್‌ನಂತಹ ಪುಟ್ಟ ಸಾಧನವಾಗಿದ್ದು ಇದನ್ನು ಚರ್ಮದ ಅಡಿಯಲ್ಲಿ ಅಳವಡಿಸಲಾಗುತ್ತದೆ ಮತ್ತು ಇದು ಹೃದಯ ಬಡಿತ ದರವನ್ನು ಮರುಸ್ಥಾಪಿಸುತ್ತದೆ ಅಥವಾ ಸಹಜ ಸ್ಥಿತಿಗೆ ತರುತ್ತದೆ. ಅದು ದಿನದ 24 ಗಂಟೆಯೂ ಹೃದಯದ ಮೇಲೆ ನಿಗಾ ಇರಿಸುತ್ತದೆ ಮತ್ತು ಹೃದಯ ಬಡಿತದ ಸಮಸ್ಯೆಗಳು ಕಂಡು ಬಂದರೆ ಅದನ್ನು ಬಗೆಹರಿಸಲು ವಿದ್ಯುತ್ ಸಂಕೇತಗಳನ್ನು ರವಾನಿಸುತ್ತದೆ.
ದಿಢೀರ್ ಹೃದಯ ಸ್ತಂಭನವುಂಟಾದಾಗ ಬದುಕುವ ಅವಕಾಶಗಳನ್ನು ಹೆಚ್ಚಿಸಲು ಸಕಾಲಿಕ ಹಸ್ತಕ್ಷೇಪ ಮತ್ತು ಡಿಫಿಬ್ರಿಲಿಷನ್ ನಿರ್ಣಾಯಕವಾಗುತ್ತವೆ. ದಿಢೀರ್ ಹೃದಯ ಸ್ತಂಭನದಿಂದಾಗಿ ವ್ಯಕ್ತಿಯು ಕುಸಿದು ಬಿದ್ದ 3ರಿಂದ 5 ನಿಮಿಷಗಳಲ್ಲಿ ಡಿಫಿಬ್ರಿಲೇಷನ್ ಮಾಡಿದರೆ ಬದುಕುಳಿಯುವ ಸಾಧ್ಯತೆಯು ಶೇ.50ರಿಂದ ಶೇ.70ರಷ್ಟಿರುತ್ತದೆ. ವ್ಯಕ್ತಿಯು ಪುನರುಜ್ಜೀವನಗೊಂಡು ಆಸ್ಪತ್ರೆಗೆ ದಾಖಲಿಸಿದ ಬಳಿಕ ಮುಂದಿನ ಚಿಕಿತ್ಸೆಯನ್ನು ಆರಂಭಿಸಬಹುದಾಗಿದೆ ಎನ್ನುತ್ತಾರೆ ವೈದ್ಯಕೀಯ ತಜ್ಞರು.