ಛಲವಿದ್ದರೆ ಮಾತ್ರ ಸಾಧಿಸಲು ಸಾಧ್ಯ: ಭಾರತರತ್ನ ಪುರಸ್ಕೃತ ವಿಜ್ಞಾನಿ ಸಿ.ಎನ್.ಆರ್.ರಾವ್
ಬೆಂಗಳೂರು, ಅ.18: ಇಂದಿನ ವಿದ್ಯಾರ್ಥಿಗಳಲ್ಲಿ ಕೊನೆ ಕ್ಷಣದವರೆಗೂ ಗೆಲ್ಲುತ್ತೇವೆ ಎಂಬ ಛಲ ಇರಬೇಕು. ಆಗಲೇ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂದು ಭಾರತರತ್ನ ಪುರಸ್ಕೃತ ವಿಜ್ಞಾನಿ ಸಿ.ಎನ್.ಆರ್.ರಾವ್ ಹೇಳಿದ್ದಾರೆ.
ಶುಕ್ರವಾರ ನಗರದ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜು ಫಾರ್ ವಿಮೆನ್ಸ್ ವತಿಯಿಂದ ಆಯೋಜಿಸಿದ್ದ ‘ಮೆಂಡೆಲಿವ್ಸ್ ಗ್ರೂಪ್ಸ್ ಆ್ಯಂಡ್ ಪಿರಿಯರ್ಡ್ಸ್ ನೇಚರ್ ಟು ನೇಚರ್' ವಿಷಯ ಕುರಿತ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಪ್ರಪಂಚದಲ್ಲಿ ಬೇಕಾದಷ್ಟು ವಿಜ್ಞಾನಿಗಳಿದ್ದಾರೆ. ಆದರೆ, ಎಲ್ಲರೂ ಗಮನಿಸುವಂಥ ಕೆಲಸ ಮಾಡಲು ಎಲ್ಲರಿಗೂ ಆಗಲ್ಲ ಎಂದ ಅವರು, ಭಾರತ ಮುಂದೆ ಬರಬೇಕು ಅಂದರೆ ವಿಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆಯಾಗಬೇಕು. ಅದರಲ್ಲಿ ಬೆಳವಣಿಗೆಯಾಗದೆ ಪ್ರಯೋಜನವಿಲ್ಲ. ಅಮೆರಿಕವನ್ನು ಹಿಂದಿಟ್ಟು ನಂ.1 ಆಗಬೇಕು ಅಂತ ಚೀನಾ ಯೋಚಿಸುತ್ತೆ. ನಾವು ಹಾಗೆ ಯೋಚಿಸಬೇಕು ಎಂದು ನುಡಿದರು.
ವಿಜ್ಞಾನ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳು ಆಗುತ್ತಲೇ ಇರುತ್ತವೆ. ಆ ಕಾರಣದಿಂದಲೇ ಅದು ಸದಾ ಕಾಲ ಹರಿಯುವ ನೀರಿನಂತೆ. ಹೀಗಾಗಿ ವಿಜ್ಞಾನಿಗಳು ನಿರಂತರವಾಗಿ ಸಂಶೋಧನೆಗಳಲ್ಲಿ ತೊಡಗಬೇಕು. ಅದೇ ರೀತಿಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಶೋಧನಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದು ಸಲಹೆ ನೀಡಿದರು.
ಯಾವುದೇ ದೇಶದಲ್ಲಿ ಆವಿಷ್ಕಾರ-ಅನ್ವೆಷಣೆ ಇಲ್ಲದೆ ಹೊಸ ನಾಯಕತ್ವದ ಪಡೆ ಹುಟ್ಟುವುದಿಲ್ಲ. ಅಮೆರಿಕಾ ತಂತ್ರಜ್ಞಾನ ಮತ್ತು ವಿಜ್ಞಾನಕ್ಕೆ ಹೆಚ್ಚು ಒತ್ತು ಕೊಟ್ಟ ಪರಿಣಾಮವೇ ಇಂದು ಸಂಶೋಧನೆ ಮತ್ತು ಆವಿಷ್ಕಾರದಲ್ಲಿ ಮೊದಲ ಸ್ಥಾನ ಗಳಿಸಿದೆ. ಇಂದಿನ ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿಯೂ ವಿಜ್ಞಾನವನ್ನು ಅಪಾರವಾಗಿ ಕಲಿಸಬೇಕಾದ ಅಗತ್ಯವಿದೆ ಎಂದರು.
ಆವಿಷ್ಕಾರ ಮನುಷ್ಯನ ಜೀವನಕ್ಕೆ ತುಂಬಾ ಮುಖ್ಯ. ಆದರೆ, ಭಾರತದಲ್ಲಿ ಆವಿಷ್ಕಾರ ಆಗುತ್ತಿಲ್ಲ. ಇರುವುದನ್ನೆ ಮಾರ್ಪಡು ಮಾಡಲಾಗುತ್ತಿದೆ. ಹೊಸ ಯಂತ್ರ ಕಂಡುಹಿಡಿಯುವ ಕೆಲಸ ಆಗಬೇಕೆ ವಿನಃ ಹಳೆಯದನ್ನೆ ಆಚೀಚೆ ಮಾಡುವ ಅನಿವಾರ್ಯತೆ ಸೃಷ್ಟಿಯಾಗಬಾರದು ಎಂದು ರಾವ್ ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವಿಜ್ಞಾನಿ ಪ್ರೊ.ರೊದ್ದಂ ನರಸಿಂಹ, ಡಾ.ಇಂದುಮತಿ ರಾವ್ ಸೇರಿದಂತೆ ಅನೇಕರು ಉಪಸ್ಥಿತರಿದ್ದು, ಉಪನ್ಯಾಸ ನೀಡಿದರು.