ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ವಿಟಿಯು ವಿದ್ಯಾರ್ಥಿಗಳ ಧರಣಿ
ಬೆಂಗಳೂರು, ಅ.18: ಇಯರ್‌ಬ್ಯಾಕ್ ವ್ಯವಸ್ಥೆ ತೆಗೆದುಹಾಕಬೇಕು ಹಾಗೂ ಸಿಬಿಸಿಎಸ್ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನಡೆಸಲು ಒತ್ತಾಯಿಸಿ, ವಿಟಿಯು ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ತರಗತಿ ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದರು.
ಶುಕ್ರವಾರ ನಗರದ ಪುರಭವನ ಮುಂಭಾಗ ಜಮಾಯಿಸಿದ ನೂರಾರು ವಿದ್ಯಾರ್ಥಿಗಳು, ಸಿಬಿಸಿಎಸ್‌ನ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನು ನಡೆಸಬೇಕು ಮತ್ತು ಸಿಬಿಸಿಎಸ್ ವಿದ್ಯಾರ್ಥಿಗಳು ಗಳಿಸಿರುವ ಅಂಕಗಳನ್ನು ಪ್ರಕಟಿಸಬೇಕು ಎಂದು ಒತ್ತಾಯಿಸಿದರು.
ಈ ಹಿಂದಿನ ಸಾಲಿನಲ್ಲಿ ನಡೆದ ಇಂಜಿನಿಯರಿಂಗ್ ಪರೀಕ್ಷೆಗಳ ಫಲಿತಾಂಶವನ್ನು ವಿಟಿಯು ಸಾಕಷ್ಟು ವಿಳಂಬವಾಗಿ ಪ್ರಕಟಿಸಿದ್ದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಸಾವಿರಾರು ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆ ಹಿಡಿಯಲಾಗಿತ್ತು. ಫಲಿತಾಂಶ ಮತ್ತು ಮರುಮೌಲ್ಯಮಾಪನ ಫಲಿತಾಂಶ ಪರೀಕ್ಷೆಯ ಹಿಂದಿನ ರಾತ್ರಿ ಪ್ರಕಟಗೊಂಡಿತ್ತು.
ಇದರೊಂದಿಗೆ ಕ್ರಾಷ್ ಸೆಮಿಸ್ಟರ್‌ಗೆ ಅರ್ಹತೆ ಪಡೆದ ವಿದ್ಯಾರ್ಥಿಗಳಂತೂ ಕೇವಲ 50 ದಿನಗಳ ಅಂತರದಲ್ಲಿ 16 ರಿಂದ 20 ವಿಷಯಗಳ ಪರೀಕ್ಷೆ ಬರೆಯುವಂತಾಯಿತು. ಕೆಲ ವಿದ್ಯಾರ್ಥಿಗಳು ಒಂದೇ ದಿನ ಎರಡು ಪರೀಕ್ಷೆಗಳನ್ನು ಎದುರಿಸಬೇಕಾದ ಪರಿಸ್ಥಿತಿಯೂ ಇತ್ತು. ಪರೀಕ್ಷೆ ಫಲಿತಾಂಶದ ಪ್ರಕಟಣೆಯಲ್ಲಿನ ಈ ಅನಿಶ್ಚಿತತೆ ವಿದ್ಯಾರ್ಥಿಗಳಲ್ಲಿ ದಿನದಿಂದ ದಿನಕ್ಕೆ ಆತಂಕ ಹೆಚ್ಚುವಂತೆ ಮಾಡಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
2010ರ ಸ್ಕೀಮ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ 2015, 16 ಹಾಗೂ 17 ರಿಂದ ವಿಟಿಯು ಸಿಬಿಸಿಎಸ್ ಮಾದರಿ ಅಳವಡಿಸಿಕೊಂಡಿದೆ. ಸಿಬಿಸಿಎಸ್ ಮಾದರಿ ರಚನೆಯ ಹಿಂದಿನ ಎಲ್ಲ ಮಾದರಿಗಳಿಗಿಂತ ವಿಭಿನ್ನವಾಗಿದ್ದು, 2010ರ ಮಾದರಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಒಂದು ವೇಳೆ ಮುಂದಿನ ವರ್ಷಕ್ಕೆ ಅರ್ಹತೆಯಿಲ್ಲದೇ ತಡೆ ಹಿಡಿದರೆ, ಅವರು ಕೋರ್ಸ್‌ನ ಉಳಿದ ವರ್ಷಗಳನ್ನು ಹೊಸದೊಂದು ಮಾದರಿಯಲ್ಲಿ ಕಲಿಯಬೇಕಾಗುತ್ತದೆ.
ಕೋರ್ಸ್‌ನ ಅರ್ಧ ಭಾಗವನ್ನು 2010ರ ಮಾದರಿಯಲ್ಲಿ ಹಾಗೂ ಉಳಿದರ್ಧ ಭಾಗವನ್ನು ಸಿಬಿಸಿಎಸ್ ಮಾದರಿಯಲ್ಲಿ ಕಲಿಯುವುದು ವಿದ್ಯಾರ್ಥಿಗಳ ಸಮಗ್ರ ಜ್ಞಾನಾರ್ಜನೆಗೆ ತೊಡಕನ್ನುಂಟು ಮಾಡುತ್ತದೆ. ಇದು ವಿಶ್ವವಿದ್ಯಾಲಯದ ಗುರಿಯಾದ ಉತ್ತಮ ಇಂಜಿನಿಯರ್‌ಗಳ ಸೃಷ್ಟಿಗೆ ಸರಿಯಾದ ಕ್ರಮವಲ್ಲ ಎಂದು ಪ್ರತಿಭಟನಾ ನಿರತರು ದೂರಿದರು.