varthabharthi


ಕಾಲಂ 9

ನವ ಉದಾರವಾದದ ಗಾಯಗಳು ಮತ್ತು ಅಭಿಜಿತ್ ಬ್ಯಾನರ್ಜಿಯವರ ಮುಲಾಮುಗಳು

ವಾರ್ತಾ ಭಾರತಿ : 19 Oct, 2019
ಶಿವಸುಂದರ್

ಕಳೆದ ಹದಿನೈದು ವರ್ಷಗಳಲ್ಲಿ ಬಡತನ ನಿರ್ಮೂಲನೆಗೆಂದು ಅಭಿಜಿತ್ ಮತ್ತವರ ನೊಬೆಲ್ ಸಂಗಡಿಗರು ಕೊಟ್ಟಿರುವ ಸಲಹೆಗಳು ಬಡತನದ ದಾರುಣತೆಯನ್ನು ನಿರ್ದಿಷ್ಟ ವಲಯಗಳಲ್ಲಿ ಮತ್ತು ವಿವಿಧ ಪ್ರಮಾಣಗಳಲ್ಲಿ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿರುವುದು ನಿಜ. ಆದರೆ ಬಡತನದ ಒಟ್ಟಾರೆ ದಾರುಣತೆಯನ್ನಾಗಲೀ ಅಥವಾ ಪ್ರಮಾಣವನ್ನಾಗಲೀ ಕಡಿಮೆ ಮಾಡುವಲ್ಲಿ ಅವು ಸಫಲವಾಗಿಲ್ಲ. ಇದರ ಮೂಲವು ಅವರ ಪ್ರಯೋಗಗಳಲ್ಲಿ ಮಾತ್ರವಲ್ಲದೆ ಬಡತನದ ನಿರ್ಮೂಲನೆಯ ಕುರಿತು ಅವರು ಆಯ್ದುಕೊಂಡಿರುವ ತಿಳುವಳಿಕೆಯಲ್ಲೇ ಅಡಗಿದೆ.

ಭಾರತೀಯ ಸಂಜಾತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಮತ್ತು ಎಸ್ತರ್ ಡಫ್ಲೊ ಹಾಗೂ ಮೈಕೆಲ್ ಕ್ರೆಮೆರ್ ಅವರಿಗೆ ಈ ಸಾಲಿನ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯು ಸಂದಿದೆ. ಸಹಜವಾಗಿಯೇ ಭಾರತೀಯರಿಗೆ ಇದು ಹೆಮ್ಮೆಯ ವಿಷಯವಾಗಿದೆ. ಆದರೆ, ದೇಶದ ಪ್ರಸ್ತುತ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಗಳ ಬಗ್ಗೆ ಕಳವಳ ಹೊಂದಿರುವವರಿಗೆ ಈ ಪ್ರಶಸ್ತಿಯು ಇನ್ನೂ ಎರಡು ಕಾರಣಗಳಿಗೆ ಸಮಾಧಾನ ತಂದಿದೆ. ಮೊದಲನೆಯದಾಗಿ ಜಗತ್ತಿನ ಬಹುಪಾಲು ಅರ್ಥಶಾಸ್ತ್ರಜ್ಞರು ಅಭಿವೃದ್ಧಿ ಎಂಬ ಮಾಯಾಜಾಲವನ್ನು ಇನ್ನಷ್ಟು ವಿಸ್ತರಿಸುವುದು ಹೇಗೆ ಎಂದು ತಲ್ಲೀನರಾಗಿರುವಾಗ ಈ ಮೂವರೂ ಅರ್ಥಶಾಸ್ತ್ರಜ್ಞರು ಜಗತ್ತಿನ ಬಡತನದ ದಾರುಣತೆಯನ್ನು ಕಡಿಮೆ ಮಾಡುವುದು ಹೇಗೆ ಎಂದು ಅಧ್ಯಯನ ಮಾಡುತ್ತಾ ಬಂದಿದ್ದಾರೆ. ಕೇವಲ ವಿಶ್ವವಿದ್ಯಾನಿಲಯಗಳ ನಾಲ್ಕುಗೋಡೆಗಳು ಮತ್ತು ಪುಸ್ತಕಗಳ ಪುಟಗಳ ನಡುವೆ ಕಳೆದುಹೋಗದೆ ಕಳೆದ ಹದಿನೈದು ವರ್ಷಗಳಿಂದ ಜಗತ್ತಿನ ಹಲವಾರು ಬಡದೇಶಗಳಲ್ಲಿ ತಮ್ಮ ಗ್ರಹಿಕೆಯನ್ನು ಪ್ರಯೋಗ, ಕ್ಷೇತ್ರಾಧ್ಯಯನಗಳಿಗೆ ಒಡ್ಡಿಕೊಳ್ಳುತ್ತಾ ಬಡತನವನ್ನು ಅಧ್ಯಯನ ಮಾಡಲು ಮತ್ತು ಅದರ ದಾರುಣತೆಯನ್ನು ತಗ್ಗಿಸಲು ಹಲವಾರು ಕಾರ್ಯಸಾಧು ಮತ್ತು ಪರಿಣಾಮಕಾರಿ ಯೋಜನೆಗಳನ್ನು ಹಲವಾರು ಸರಕಾರಗಳಿಗೆ ರೂಪಿಸಿಕೊಟ್ಟಿದ್ದಾರೆ. ಎರಡನೆಯದಾಗಿ, ಸರಕಾರದ ಕೆಂಗಣ್ಣಿಗೆ ಹೆದರಿಯೋ ಅಥವಾ ಸದಾ ಅದರ ಕೃಪಾಕಟಾಕ್ಷದಲ್ಲಿ ಇರಬೇಕೆಂಬ ಅವಕಾಶವಾದದಿಂದಲೋ ಇಂದು ಬಹುಪಾಲು ಪಂಡಿತ ವಲಯ ಸರಕಾರಗಳ ಭಟ್ಟಂಗಿಗಳಂತಾಗಿವೆ. ಹಾಗೆ ನೋಡಿದರೆ, ಅಭಿಜಿತ್ ಬ್ಯಾನರ್ಜಿ ಮತ್ತವರ ಸಂಗಾತಿ ಎಸ್ತರ್ ಡಫ್ಲೊ ಅವರು ಭಾರತ ಸರಕಾರಕ್ಕೆ ಮಾತ್ರವಲ್ಲದೆ ಗುಜರಾತಿನ ಬಿಜೆಪಿ ಸರಕಾರ, ತಮಿಳುನಾಡಿವಿನ ಎಡಿಎಂಕೆ ಸರಕಾರಗಳನ್ನೂ ಒಳಗೊಂಡಂತೆ ಹಲವಾರು ಸರಕಾರಿ ಯೋಜನೆಗಳ ಸಮಾಲೋಚಕರಾಗಿದ್ದಾರೆ. ಆದರೂ ಅವರು ಮೋದಿ ಸರಕಾರದ ನೋಟು ನಿಷೇಧದ ಕ್ರಮವನ್ನು ಮತ್ತು ತಾನು ಒಲ್ಲದ ಅಂಕಿಅಂಶಗಳನ್ನು ಹತ್ತಿಕ್ಕುವ ಅಥವಾ ಮರೆಮಾಚುವ ಈ ಸರಕಾರದ ಆಡಳಿತವನ್ನು ನಿರ್ಭಿಡೆಯಿಂದ ಟೀಕಿಸುತ್ತಾ ಬಂದಿದ್ದಾರೆ. ನೊಬೆಲ್ ಪ್ರಶಸ್ತಿ ಪಡೆದ ನಂತರ ನೀಡಿದ ಸಂದರ್ಶನದಲ್ಲೂ ಸಹ ಭಾರತದ ಆರ್ಥಿಕತೆ ತೀವ್ರವಾದ ಹಿಂಜರಿತವನ್ನು ಅನುಭವಿಸುತ್ತಿದೆಯೆಂದೂ ಅದರ ನಿವಾರಣೆಗೆ ಸರಕಾರ ತೆಗೆದುಕೊಂಡಿರುವ ಕ್ರಮಗಳು ಸರಿಯಾಗಿಲ್ಲವೆಂದೂ ಅವರು ಮೋದಿ ಸರಕಾರವನ್ನು ಬಹಿರಂಗವಾಗಿ ವಿಮರ್ಶಿಸಿದ್ದಾರೆ. ಆ ಕಾರಣಕ್ಕಾಗಿಯೇ ಈಗಾಗಲೇ ಮೋದಿ ಭಕ್ತರು ಬ್ಯಾನರ್ಜಿಯವರನ್ನು ಹಿಗ್ಗಾಮುಗ್ಗಾ ತೆಗಳುತ್ತಾ ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ. ಹೀಗಾಗಿ ಈ ನೊಬೆಲ್ ವಿಜೇತರನ್ನು ಬಡವರ ಬಗೆಗಿನ ಅವರ ಕಾಳಜಿಗೂ ಮತ್ತು ನಿರ್ಭಿಡತೆಗೂ ಕೂಡಾ ಅಭಿನಂದಿಸಬೇಕಿದೆ. ಆದರೆ ಅಷ್ಟು ಮಾತ್ರಕ್ಕೆ ಅಭಿಜಿತ್ ಮತ್ತವರ ನೊಬೆಲ್ ಸಂಗಡಿಗರು ಬಡತನವನ್ನು ಅರ್ಥಮಾಡಿಕೊಳ್ಳಲು ಅಭಿವೃದ್ಧಿಪಡಿಸಿರುವ ತಂತ್ರವನ್ನು ಹಾಗೂ ಅದನ್ನು ಆಧರಿಸಿ ಬಡತನ ನಿರ್ಮೂಲನೆಗೆಂದು ಅವರು ಕೊಡುತ್ತಿರುವ ಸಲಹೆಗಳನ್ನೂ ಸಂಪೂರ್ಣವಾಗಿ ಒಪ್ಪಿಕೊಳ್ಳಲು ಕೂಡಾ ಸಾಧ್ಯವಿಲ್ಲ. ಕಳೆದ ಹದಿನೈದು ವರ್ಷಗಳಲ್ಲಿ ಬಡತನ ನಿರ್ಮೂಲನೆಗೆಂದು ಅವರು ಕೊಟ್ಟಿರುವ ಸಲಹೆಗಳು ಬಡತನದ ದಾರುಣತೆಯನ್ನು ಕೆಲವು ನಿರ್ದಿಷ್ಟ ವಲಯಗಳಲ್ಲಿ ಮತ್ತು ವಿವಿಧ ಪ್ರಮಾಣಗಳಲ್ಲಿ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿರುವುದು ನಿಜ. ಆದರೆ ಬಡತನದ ಒಟ್ಟಾರೆ ದಾರುಣತೆಯನ್ನಾಗಲೀ ಅಥವಾ ಪ್ರಮಾಣವನ್ನಾಗಲೀ ಕಡಿಮೆ ಮಾಡುವಲ್ಲಿ ಅವು ಸಫಲವಾಗಿಲ್ಲ. ಇದರ ಮೂಲವು ಅವರ ಪ್ರಯೋಗಗಳಲ್ಲಿ ಮಾತ್ರವಲ್ಲದೆ ಬಡತನದ ನಿರ್ಮೂಲನೆಯ ಕುರಿತು ಅವರು ಆಯ್ದುಕೊಂಡಿರುವ ತಿಳುವಳಿಕೆಯಲ್ಲೇ ಅಡಗಿದೆ. ಮೊದಲಿಗೆ ಅವರು ಬಡತನಕ್ಕೆ ಕಾರಣವಾಗಿರುವ ಸಂಪನ್ಮೂಲ ವಿತರಣೆಯಲ್ಲಿರುವ ಸಾಂಸ್ಥಿಕ ತಾರತಮ್ಯ, ಅಸಮಾನತೆಯನ್ನು ಆಧರಿತ ರಾಜಕೀಯ ಆರ್ಥಿಕತೆಗಳ ವಿಶಾಲ ವಿದ್ಯಮಾನಗಳ ಉಸಾಬರಿಗೆ ಹೋಗುವುದಿಲ್ಲ. ಹಾಗೆಯೇ ಕಳೆದ ಹದಿನೈದು ವರ್ಷಗಳಲ್ಲಿ ನವ ಉದಾರೀಕರಣದ ಭಾಗವಾಗಿ ಸಂಪತ್ತು ಕೆಲವೇ ಜನರ ಬಳಿ ಕೇಂದ್ರೀಕೃತವಾಗಿ ಉಳಿದವರು ದಿವಾಳಿಯೇಳುತ್ತಿರುವುದೂ ಸಹ ಬಡತನಕ್ಕೆ ಕಾರಣವೆಂಬ ಸಂಗತಿಯು ಕೂಡಾ ಅವರ ಸಂಶೋಧನೆ ಅಥವಾ ಪ್ರಯೋಗಗಳ ವಸ್ತುವಲ್ಲ. ವಾಸ್ತವವಾಗಿ 2017ರಲ್ಲಿ ಎಸ್ತರ್ ಡಫ್ಲೊ ಅವರು ಮಾಡಿದ ರಿಚರ್ಡ್ ಎಲಿ ಸ್ಮಾರಕ ಭಾಷಣದಲ್ಲಿ ‘‘ಇನ್ನು ಮುಂದೆ ಅರ್ಥಶಾಸ್ತ್ರಜ್ಞರು ದೊಡ್ಡ ದೊಡ್ಡ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು ಸಣ್ಣ ಸಣ್ಣ ಸಂಗತಿಗಳನ್ನು ದುರಸ್ತಿ ಮಾಡುವ ಪ್ಲಂಬರ್‌ಗಳ ಕರ್ತವ್ಯವನ್ನು ನಿರ್ವಹಿಸಬೇಕು’’ ಎಂದು ಸಹ ಕರೆ ನೀಡಿದ್ದರು. ಹೀಗಾಗಿ ಅವರು ಬಡತನವನ್ನು ಅಧ್ಯಯನ ಮಾಡುವುದೇ ಅದರ ಸ್ಥೂಲ ರೂಪದಲ್ಲಲ್ಲ. ಬದಲಿಗೆ ಪರಿಣಾಮದ ಸೂಕ್ಷ್ಮಗಳಲ್ಲಿ.

ಅದಕ್ಕಾಗಿ ಅವರು ಬಡತನದ ಅಭಿವ್ಯಕ್ತಿಗಳನ್ನು ಹಲವು ಸಣ್ಣಸಣ್ಣ ವಿಭಾಗಗಳಾಗಿ ವಿಂಗಡಿಸಿ, ಅವುಗಳನ್ನು ಹೇಗೆ ಸುಧಾರಿಸಬಹುದು ಎಂಬ ಬಗ್ಗೆ ಪ್ರಯೋಗಗಳನ್ನು ನಡೆಸುತ್ತಾರೆ. ಈ ಪ್ರಯೋಗದ ಮಾದರಿಯನ್ನು ಅವರು ಆರೋಗ್ಯ-ಔಷಧಿ ಕ್ಷೇತ್ರದಲ್ಲಿ ನಡೆಯುವ ಸಂಶೋಧನಾ ಮಾದರಿಯಿಂದ ಎರವಲು ಪಡೆದುಕೊಂಡಿದ್ದಾರೆ. ಅದನ್ನು (Randomised Control Trial) (RCT) ಎಂದು ಕರೆಯುತ್ತಾರೆ.

ಆದರೆ ಯಾವುದಾದರೊಂದು ಹೊಸ ಔಷಧದ ಪರಿಣಾಮವು ಏನೆಂದು ಅಂದಾಜಿಸಲು ಎಲ್ಲಾ ಪ್ರಯೋಗಾರ್ಥಿಗಳನ್ನು ಒಂದೇ ಸನ್ನಿವೇಶದಲ್ಲಿ ಇರುವಂತೆ ಮಾಡಿ, ಎಲ್ಲರಿಗೂ ಒಂದೇ ಬಗೆಯ ಊಟ ಇತ್ಯಾದಿ ವ್ಯವಸ್ಥೆಗಳನ್ನು ಮಾಡುವುದು. ಅವರಲ್ಲಿ ಕೆಲವರಿಗೆ ಮಾತ್ರ ಔಷಧಿಯನ್ನು ನೀಡುವುದು. ಉಳಿದವರಿಗೆ ಇಲ್ಲ. ಆಗ ಉಳಿದ ಎಲ್ಲಾ ಸನ್ನಿವೇಶಗಳೂ ಸ್ಥಾಯಿಯಾಗಿದ್ದಾಗ ಔಷಧ ತೆಗೆದುಕೊಂಡವರ ಮೇಲೆ ಏನು ಪರಿಣಾಮ ಮತ್ತು ತೆಗೆದುಕೊಳ್ಳದವರ ಮೇಲೆ ಏನು ಪರಿಣಾಮ ಎಂದು ಹೋಲಿಸಿ ಗುರುತಿಸುವುದು ಮತ್ತು ಆ ಮೂಲಕ ಔಷಧದ ಪರಿಣಾಮವನ್ನು ಅಂದಾಜಿಸುವುದು. ಇದು ಸ್ಥೂಲವಾಗಿ (RCT) ಮಾದರಿ. ಅಭಿಜಿತ್ ಮತ್ತವರ ಸಂಗಡಿಗರು ಇದೇ ಪದ್ಧತಿಯನ್ನು ಸಾಮಾಜಿಕ ಸಮಸ್ಯೆಗಳ ಪರಿಹಾರಗಳನ್ನು ಕಂಡುಕೊಳ್ಳಲು ಬಳಸಿದರು. ಉದಾಹರಣೆಗೆ ಬಡತನವನ್ನು ಆರೋಗ್ಯ, ಶಿಕ್ಷಣ ಮತ್ತು ಆಹಾರದ ಕೊರತೆಯ ಸಮಸ್ಯೆ ಯೆಂದು ವಿಭಾಗೀಕರಿಸುತ್ತಾರೆ. ಶಿಕ್ಷಣದ ಸಮಸ್ಯೆಯನ್ನು ಬಡವಿದ್ಯಾರ್ಥಿಗಳು ಒಂದು ನಿರ್ದಿಷ್ಟ ಪ್ರದೇಶದಲ್ಲಿ ಏಕೆ ಶಾಲೆಗೆ ಹೋಗುತ್ತಿಲ್ಲ ಎಂದು ಇನ್ನೂ ಸೂಕ್ಷ್ಮವಾದ ಸಂಶೋಧನಾ ಪ್ರಶ್ನೆಯನ್ನಾಗಿ ಮಾಡಿಕೊಳ್ಳುವುದು. ಹಾಗೆಯೇ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಮಲೇರಿಯಾದಿಂದ ಬಚಾವಾಗಲು ಏನು ಮಾಡಬೇಕು ಮತ್ತು ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು ಯಾವ ನಿರ್ದಿಷ್ಟ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕೆಂಬ ಮತ್ತಷ್ಟು ಮೈಕ್ರೋ ಪ್ರಶ್ನೆಗಳನ್ನು ಹಾಕಿಕೊಳ್ಳುವುದು ಇದರ ಮೊದಲ ಹಂತ. ಆನಂತರದಲ್ಲಿ ಬಡ ವಿದ್ಯಾರ್ಥಿಗಳು ಶಾಲೆಗೆ ಏಕೆ ಹೋಗುತ್ತಿಲ್ಲ ಎಂಬುದಕ್ಕೆ ಸ್ಥಳೀಯ ಕಾರಣಗಳನ್ನು ಗುರುತಿಸುವುದು. ಉದಾಹರಣೆಗೆ, ಶಾಲೆಯ ಪಠ್ಯ ಆಸಕ್ತಿದಾಯಕವಲ್ಲದಿರುವುದು, ಮಕ್ಕಳು ಹೊಟ್ಟೆಹುಳಗಳ ಬಾಧೆಯಿಂದ ಶಾಲೆಗೆ ಬರಲು ಹಿಂಜರಿಯುವುದು ಇನ್ನಿತ್ಯಾದಿ ಸ್ಥಳೀಯ ಕಾರಣಗಳನ್ನು ಪಟ್ಟಿ ಮಾಡುವುದು.. ಹಾಗೆಯೇ ಆಫ್ರಿಕಾದ ಬಡಜನರು ಬಿಟ್ಟಿ ಕೊಟ್ಟರೂ ಸೊಳ್ಳೆ ಪರದೆ ಬಳಸದಿರುವುದಕ್ಕೆ ಅಭ್ಯಾಸ ಇಲ್ಲದಿರುವುದು, ಸೊಳ್ಳೆ ಪರದೆಯನ್ನು ಮೀನುಹಿಡಿಯುವ ಬಲೆಯಾಗಿ ಬಳಸಿಕೊಳ್ಳುವುದು ಹೆಚ್ಚು ಪ್ರಯೋಜನಕಾರಿಯಾಗಿ ಕಾಣುವುದು ಇತ್ಯಾದಿ. ಈ ಹಂತದಲ್ಲಿ ಪರಿಣಾಮಕಾರಿ ಪರಿಹಾರವನ್ನು ಕಂಡುಕೊಳ್ಳಲು ಅಭಿಜಿತ್ ಮತ್ತವರ ಸಂಗಡಿಗರು (RCT)  ಪ್ರಯೋಗವನ್ನು ಮಾಡುತ್ತಾರೆ. ಅಂದರೆ ಕೆಲವು ಶಾಲಾ ಮಕ್ಕಳಿಗೆ ಹೊಟ್ಟೆಹುಳ ಔಷಧಿಯನ್ನು ತಿಂಗಳ ಕಾಲ ಕೊಡುವುದು ಮತ್ತು ಅವರ ವರ್ತನೆಗಳನ್ನು ಹೊಟ್ಟೆಹುಳು ಔಷಧಿಯನ್ನು ತೆಗೆದುಕೊಂಡಿರದ ಮಕ್ಕಳ ವರ್ತನೆಯೊಂದಿಗೆ ಹೋಲಿಸುವುದು. ಅಥವಾ ಸೊಳ್ಳೆ ಪರದೆಯನ್ನು ಉಚಿತವಾಗಿ ಕೆಲವು ಕುಟುಂಬಗಳಿಗೆ ಕೊಡುವುದು, ಕೆಲವು ಕುಟುಂಬಗಳಿಗೆ ಉಚಿತವಾಗಿ ಕೊಟ್ಟು ಉತ್ತೇಜನಕಾರಿ ಕೊಡುಗೆಗಳನ್ನು ನೀಡುವುದು. ಇವೆರಡೂ ಮಾದರಿಗಳಲ್ಲಿ ಯಾರು ಹೆಚ್ಚು ಸೊಳ್ಳೆ ಪರದೆ ಬಳಸುತ್ತಾರೆ ಎಂಬುದನ್ನು ಗುರುತಿಸಲಾಗುತ್ತದೆ. ಹಾಗೂ ಅವುಗಳನ್ನು ಒದಗಿಸುವ ರೀತಿಯಲ್ಲಿ ಸರಕಾರಿ ನೀತಿಗಳನ್ನು ರೂಪಿಸಲು ಅಭಿಜಿತ್ ಮತ್ತವರ ಸಂಗಡಿಗರು ಸಹಾಯ ಮಾಡುತ್ತಾರೆ. ಹಾಗೆಯೇ ಹೊಟ್ಟೆಹುಳ ಔಷಧಿ ತೆಗೆದುಕೊಂಡ ವಿದ್ಯಾರ್ಥಿಗಳು ಹೆಚ್ಚು ಶಾಲೆಗೆ ಬರಲಾರಂಭಿಸಿದ್ದನ್ನು ಗುರುತಿಸಿ ಸರಕಾರಕ್ಕೆ ಉಚಿತವಾಗಿ ಹೊಟ್ಟೆಹುಳ ಔಷಧವನ್ನು ಸರಬರಾಜು ಮಾಡುವ ನೀತಿ ರೂಪಿಸಿಕೊಡುತ್ತಾರೆ. ಇತ್ಯಾದಿ. ಬಡತನಕ್ಕೆ ಸಂಬಂಧಪಟ್ಟ ಇಂತಹ 300ಕ್ಕೂ ಹೆಚ್ಚು ಪ್ರಯೋಗಗಳನ್ನು ಈ ನೊಬೆಲ್ ಪ್ರಶಸ್ತಿ ವಿಜೇತರು ಮತ್ತು ಜಗತ್ತಿನ ಹಲವಾರು ಪ್ರಖ್ಯಾತ ವಿಶ್ವವಿದ್ಯಾನಿಲಯಗಳಲ್ಲಿರುವ 200ಕ್ಕೂ ಹೆಚ್ಚು ಅರ್ಥಶಾಸ್ತ್ರಜ್ಞರು ರೂಪಿಸಿಕೊಂಡಿರುವ (J- PAL) (Abdul Jameel- Poverty Alleviation Lab ಅಬ್ದುಲ್ ಜಮೀಲ್ ಬಡತನ ಸುಧಾರಣೆ ಪ್ರಯೋಗಾಲಯ) ಸಂಸ್ಥೆಯು ಕಳೆದ 15 ವರ್ಷಗಳಿಂದ ಆಫ್ರಿಕಾ ಹಾಗೂ ಏಶ್ಯದ ಬಡದೇಶಗಳಲ್ಲಿ ಮಾಡುತ್ತಾ ಬಂದಿದೆ. ಆ ಮೂಲಕ ಆಯಾ ದೇಶಗಳ ಸರಕಾರದ ಬಡತನ ನಿರ್ಮೂಲನಾ ಯೋಜನೆಗಳು ಇನ್ನಷ್ಟು ಪರಿಣಾಮಕಾರಿಯಾಗಲು ಬೇಕಾದ ಪುರಾವೆ ಆಧಾರಿತ ಸಲಹೆಗಳನ್ನು ನೀಡುತ್ತಾ ಬಂದಿದ್ದಾರೆ. ಸಹಜವಾಗಿಯೇ ಈ ಪ್ರಯೋಗಾಧಾರಿತ ಸಲಹೆಗಳನ್ನು ಅಳವಡಿಸಿಕೊಂಡ ನಂತರ ಈ ಯೋಜನೆಗಳು ಮೊದಲಿಗಿಂತ ಹೆಚ್ಚು ಪರಿಣಾಮಕಾರಿಯಾಗಿವೆ. ಹೀಗಾಗಿಯೇ ಇಂದು ಅಭಿವೃದ್ಧಿ ಆರ್ಥಿಕತೆಯಲ್ಲಿ ಅಭಿಜಿತ್ ಮತ್ತವರ ಸಂಗಡಿಗರ (RCT) ಮಾದರಿ ಸಂಶೋಧನೆಗಳೇ ಹೆಚ್ಚು ಪ್ರಾಧಾನ್ಯತೆಯನ್ನು ಪಡೆಯುತ್ತಿವೆ. ಸರಕಾರಗಳಿಗೆ ರಾಜಕೀಯ ಕಾರಣಕ್ಕೆ ಮತ್ತು ಹಣಕಾಸು ಅನುದಾನ ನೀಡುವ ವಿಶ್ವಬ್ಯಾಂಕ್ ಹಾಗೂ ಕಾರ್ಪೊರೇಟ್ ಅನುದಾನ ಸಂಸ್ಥೆಗಳಿಗೆ ಆರ್ಥಿಕ ಹಾಗೂ ಸೈದ್ಧಾಂತಿಕ ಕಾರಣಗಳಿಗಾಗಿ ತಾವು ನೀಡುವ ಅನುದಾನ ಹೆಚ್ಚು ಪರಿಣಾಮವನ್ನು ಹೊಂದಿರುವುದು ಅಪೇಕ್ಷಣೀಯವಾಗಿರುತ್ತದೆ. ಈ ಕಾರಣಗಳಿಗಾಗಿಯೂ ಈ ಸಂಶೋಧನಾ ಪದ್ಧತಿಗೆ ಮತ್ತು ಅಭಿಜಿತ್ ಮಾದರಿ ಪ್ರಯೋಗ-ಪರಿಹಾರಗಳಿಗೆ ಜಗತ್ತಿನಾದ್ಯಂತ ಹೆಚ್ಚು ಮಾನ್ಯತೆ ದೊರೆಯುತ್ತಿದೆ. ಈಗ ಅವರಿಗೆ ನೊಬೆಲ್ ಪ್ರಶಸ್ತಿ ಸಿಕ್ಕಿರುವುದು ಸಹ ಈ ನಿರ್ದಿಷ್ಟ ಪರ್ಯಾಯದ ಜಾಗತಿಕ ಅನುಮೋದನೆಯೇ ಆಗಿದೆ. ಒಂದು ವೈಜ್ಞಾನಿಕ ಸಂಶೋಧನಾ ಪದ್ಧತಿಯಾಗಿ (RCT)  ಮಾದರಿಯ ಬಗ್ಗೆ ಹೆಚ್ಚು ತಕರಾರಿರಬೇಕಿಲ್ಲ. ಆದರೆ ಅದನ್ನು ಸಾಮಾಜಿಕ ಬದುಕಿಗೆ ಅದರಲ್ಲೂ ಆರ್ಥಿಕ-ರಾಜಕೀಯ-ಇನ್ನಿತ್ಯಾದಿ ಬಹು ಆಯಾಮದ ಬಡತನ ನಿರ್ಮೂಲನೆಯಂತಹ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳಲು ಪರ್ಯಾಯವೆಂದು ಮುಂದಿಡುತ್ತಿರುವಾಗ ಹತ್ತು ಹಲವು ಮೂಲಭೂತ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಮೊದಲನೆಯದಾಗಿ ಇಂದಿನ ಜಾಗತಿಕ ಬಡತನವು ಹಾಲಿ ಜಾರಿಯಲ್ಲಿರುವ ಕಾರ್ಪೊರೇಟ್ ಬಂಡವಾಳಶಾಹಿ ಆರ್ಥಿಕತೆಯ ಸ್ವರೂಪದ ಪರಿಣಾಮವಲ್ಲವೇ? ಆಯಾ ದೇಶಗಳ ಬಡಜನತೆಯ ಪಾಲಿನ ಸಂಪನ್ಮೂಲವನ್ನು ಆಯಾ ದೇಶಗಳ ಬಂಡವಾಳಶಾಹಿಗಳು ಹಾಗೂ ಅಂತರ್‌ರಾಷ್ಟ್ರೀಯ ಮಾರುಕಟ್ಟೆ ಶಕ್ತಿಗಳು ಲೂಟಿಮಾಡುತ್ತಿರುವುದರಿಂದಲೇ ಆ ದೇಶಗಳ ಬಡಜನರ ಬಳಿ ಸೊಳ್ಳೆ ಪರದೆಯನ್ನು ಅಥವಾ ಮೊಟ್ಟೆಯನ್ನೂ ಕೂಡಾ ಕೊಳ್ಳಲಾಗದ ಪರಿಸ್ಥಿತಿಯುಂಟಾಗಿರುವುದಲ್ಲವೇ? ಪಾಶ್ಚಿಮಾತ್ಯ ದೇಶಗಳ ಬಂಡವಾಳಶಾಹಿ ಆರ್ಥಿಕತೆ ಮತ್ತು ಐಷಾರಾಮಿ ಜೀವನ ಪದ್ಧತಿಗಳಿಂದಾಗಿಯೇ ಅಲ್ಲವೇ ಪರಿಸರ ಅಸಮತೋಲನ ಉಂಟಾಗಿರುವುದು ಮತ್ತು ಅದರಿಂದಾಗಿ ಬಡದೇಶಗಳ ಬಡಜನತೆಯ ಪಾರಂಪರಿಕ ಬದುಕು ನಾಶವಾಗಿ ಅವರು ಇನ್ನಷ್ಟು ದೀನರಾಗಿಯೂ ನಿರ್ಗತಿಕರಾಗಿಯೂ ಆಗಿರುವುದು?

ಬಡತನದ ಈ ‘ಕಾರಣ’ಗಳನ್ನು ನಿವಾರಿಸಿಕೊಳ್ಳದೆ ಬಡತನದ ‘ಪರಿಣಾಮ’ಗಳಲ್ಲಿ ಮಾತ್ರ ಬರಬಹುದಾದ ಬದಲಾವಣೆ ಎಷ್ಟು ಪರಿಣಾಮಕಾರಿಯಾಗಿರಲು ಸಾಧ್ಯ? ದೀರ್ಘಕಾಲೀನವಾಗಿರಲು ಸಾಧ್ಯ?

ಅಷ್ಟು ಮಾತ್ರವಲ್ಲ ಮಾರಣಾಂತಿಕ ಗಾಯಗಳನ್ನು ಮಾಡಿದ ‘ಕಾರಣಕರ್ತರೇ’ ಮುಲಾಮನ್ನೂ ಕೂಡಾ ಸರಬರಾಜು ಮಾಡುವುದರ ಹಿಂದಿನ ಗೋಮುಖ ರಾಜಕಾರಣವನ್ನು ಇದು ಮರೆಮಾಚುವುದಿಲ್ಲವೇ? ಹಾಗೆಯೇ ಆರ್ಥಿಕ ರಾಜಕೀಯ ಆಯಾಮಗಳನ್ನು ಹೊಂದಿರುವ ಬಡತನದ ಕಾರಣಗಳನ್ನು ಬಡವರ ‘ವರ್ತನೆಯನ್ನು ಆಧರಿಸಿದ’ ಮನಶಾಸ್ತ್ರೀಯ ಸಮಸ್ಯೆಯನ್ನಾಗಿ ಮಾಡಿಬಿಡುವುದಿಲ್ಲವೇ? ಅದು ಬಡತನಕ್ಕೆ ಬಡವರೇ ಕಾರಣ ಎಂಬ ಮಾರುಕಟ್ಟೆ ಆರ್ಥಿಕತೆಯ ವ್ಯಾಖ್ಯಾನವನ್ನು ಪರೋಕ್ಷವಾಗಿ ಸರ್ವಮಾನ್ಯಗೊಳಿಸಿಬಿಡುವುದಿಲ್ಲವೇ?

ಭಾರತದ ಅತ್ಯಂತ ಬಡಜನತೆಯ ಜೊತೆಗೆ ಆ್ಯಕ್ಟಿವಿಸ್ಟ್ ಆಗಿ ಕೆಲಸ ಮಾಡುತ್ತಿರುವ ಅತ್ಯಂತ ಮಹತ್ವದ ಅರ್ಥಶಾಸ್ತ್ರಜ್ಞರಾದ ಜೀನ್ ಡ್ರೇಜ್ ಹೇಳುವಂತೆ ಈ ದೇಶದ ಬಡತನದ ಪರಿಹಾರಗಳಿಗೆ ಅಗತ್ಯವಿರುವುದು ಪುರಾವೆಯಾಧಾರಿತ ಸಂಶೋಧನೆಯೇನಲ್ಲ.. ಬದಲಿಗೆ ಅಗತ್ಯವಿರುವುದು ಅದನ್ನು ‘ಅರ್ಥಮಾಡಿಕೊಳ್ಳುವ’ ರಾಜಕೀಯ ಗ್ರಹಿಕೆ. ಉದಾಹರಣೆಗೆ ಶಾಲಾ ಮಕ್ಕಳಿಗೆ ಮೊಟ್ಟೆ ನೀಡಿದರೆ ಅವರ ದೈಹಿಕ ಆರೋಗ್ಯ ಉತ್ತಮಗೊಳ್ಳುತ್ತದೆ ಮತ್ತು ಅದು ಅವರ ಗ್ರಹಿಕಾ ಶಕ್ತಿ ಮತ್ತು ಕಲಿಕೆಯಲ್ಲೂ ಪ್ರತಿಫಲಿಸುತ್ತದೆ ಎಂಬುದು ಗೊತ್ತಿದ್ದರೂ ಅದು ಜಾರಿಯಾಗದಿರುವುದಕ್ಕೆ ಕಾರಣ ಪುರಾವೆಯಾಧಾರಿತ ಸಂಶೋಧನೆ ಇಲ್ಲವೆಂಬುದಲ್ಲ. ಬದಲಿಗೆ ಆ ಸತ್ಯವನ್ನು ನಿರಾಕರಿಸುವ ಶಾಖಾಹಾರಿ ಮತ್ತು ಧರ್ಮಾಂಧ ರಾಜಕೀಯ ಶಕ್ತಿಗಳು ಅಧಿಕಾರದಲ್ಲಿರುವುದರಿಂದಾಗಿಯೇ ಮೊಟ್ಟೆಯ ವಿತರಣೆಯಾಗುವುದಿಲ್ಲ. ಹೀಗಾಗಿ ಬಡತನದ ಸಮಸ್ಯೆಯನ್ನು ಅಧ್ಯಯನ ಮಾಡುವಾಗ ಇಂತಹ ರಾಜಕೀಯಗಳನ್ನು ‘ನಿಯಂತ್ರಿತ’ ಸನ್ನಿವೇಶಗಳಿಗೆ ಒಳಪಡಿಸಿ (RCT) ಮಾದರಿ ಸಂಶೋಧನೆ ಮಾಡಲು ಸಾಧ್ಯವಿಲ್ಲ. ಹೀಗಾಗಿಯೇ, ಅಭಿಜಿತ್ ಬ್ಯಾನರ್ಜಿ, ಎಸ್ತರ್ ಡಫ್ಲೊ ಮತ್ತು ಕ್ರೆಮೆರ್ ಅವರು ಪ್ರತಿಪಾದಿಸುತ್ತಿರುವ ಬಡತನ ನಿವಾರಣೆಯ ಪರ್ಯಾಯಗಳನ್ನು ಹಲವು ಪ್ರಖ್ಯಾತ ಅರ್ಥಶಾಸ್ತ್ರಜ್ಞರು (“palliative economics”) ಎಂದು ಕರೆಯುತ್ತಾರೆ. ಅಂದರೆ ರೋಗಶಮನವು ಸಾಧ್ಯವಾಗದ ಹಂತ ತಲುಪಿದಾಗ ನೋವು ಶಮನ ಮಾಡುವ ಉಪಾಯಗಳಿಗೆ ಮೊರೆ ಹೋಗುವ ಆರ್ಥಿಕತೆ ಎಂದರ್ಥ. ಇಂದಿನ ಜಾಗತಿಕ ಮಾರುಕಟ್ಟೆ ಆರ್ಥಿಕತೆಯು ಜಗತ್ತಿನ ಬಡಜನರ ಬದುಕಿನ ಮೇಲೆ ಮಾರಣಾಂತಿಕ ಗಾಯಗಳನ್ನು ಮಾಡುತ್ತಿದೆ. ಆದರೆ ಅದಕ್ಕೆ ಸಾಂಸ್ಥಿಕವಾಗಿ ಸವಾಲು ಹಾಕಿ ನಿಜ ಪರ್ಯಾಯಗಳನ್ನು ಒದಗಿಸಬಲ್ಲ ಶಕ್ತಿಗಳ ತಾಕತ್ತು ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅಭಿಜಿತ್ ಮಾದರಿ ಆರ್ಥಿಕ ಚಿಂತನೆಗಳು ಇರುವ ವ್ಯವಸ್ಥೆಯಲ್ಲೇ, ಇರುವ ಸಂದರ್ಭದಲ್ಲೇ, ಇರುವ ಸ್ಥಿತಿಗಿಂತ ಒಂದಷ್ಟು ಉತ್ತಮ ಪರಿಣಾಮಗಳನ್ನು ದೊರಕಿಸಬಹುದಾದ ಸಾಧ್ಯತೆಗಳಿವೆ ಮತ್ತು ಅವು ಸರಕಾರಗಳಿಗೆ, ಕಾರ್ಪೊರೇಟ್ ಸಂಸ್ಥೆಗಳಿಗೆ ಮಾತ್ರವಲ್ಲ ಹತಾಶ ಮತ್ತು ದಣಿದ ಚಳವಳಿಗಳಿಗೂ ಕಾರ್ಯಸಾಧು ಪರ್ಯಾಯವಾಗಿ ಕಂಡುಬರುತ್ತದೆ. ಅಭಿಜಿತ್ ಬ್ಯಾನರ್ಜಿಯವರು ಒಂದು ಸಂದರ್ಶನದಲ್ಲಿ ತಮ್ಮ ಉದ್ದೇಶ ಮ್ಯಾಕ್ರೋ ಮಟ್ಟದಲ್ಲಿ ಮೂಲಭೂತ ಬದಲಾವಣೆ ತರುವುದಲ್ಲವೆಂದೂ, ಅಂತಹ ಫ್ಯಾಂಟಸಿಗಳು ತಮ್ಮ ಸಂಶೋಧನೆಗಳಿಗಿಲ್ಲವೆಂದೂ ಹೇಳುತ್ತಾ ಇರುವುದನ್ನು ಉತ್ತಮಗೊಳಿಸುವುದಷ್ಟೇ ತಮ್ಮ ಉದ್ದೇಶವೆಂದು ಸ್ಪಷ್ಟಪಡಿಸಿದ್ದಾರೆ ಹಾಗೂ ತಮ್ಮ ಸಲಹೆಗಳನ್ನು ಸಾಂಪ್ರದಾಯಿಕ ಮಾರ್ಕ್ಸ್ ವಾದಿಗಳನ್ನು ಬಿಟ್ಟರೆ ಇತರ ಯಾವುದೇ ರಾಜಕೀಯ ತಾತ್ವಿಕತೆಯುಳ್ಳವರೂ ಸಹ ಅನುಷ್ಠಾನಕ್ಕೆ ತಂದು ಬಡತನವನ್ನು ಕಡಿಮೆಮಾಡಬಹುದು ಎಂದು ಹೇಳುತ್ತಾರೆ. ಆ ಮೂಲಕ ಅವರು ಬಡತನವನ್ನು ಕೇವಲ ಆರ್ಥಿಕ ಪ್ರಶ್ನೆಯನ್ನಾಗಿ ಮಾಡಿ ನಿರಾಜಕೀಯಗೊಳಿಸುತ್ತಾರೆ. ಇದನ್ನು ಒಪ್ಪಲಾಗದು. ವಾಸ್ತವವಾಗಿ ಮೂಲಭೂತ ಬದಲಾವಣೆಗಳ ಪರ್ಯಾಯಗಳು ದೀರ್ಘಕಾಲೀನವಾದವು. ಆದರೆ ಜನರಿಗೆ ತಕ್ಷಣದ ಸಮಸ್ಯೆಗಳು ಮತ್ತು ಸುಧಾರಣೆಗಳೇ ಅತ್ಯಂತ ಜರೂರಿನದ್ದಾಗಿರುತ್ತದೆ. ಹೀಗಾಗಿ ಪರ್ಯಾಯ ಬಯಸುವ ಚಳವಳಿಗಳೂ ಸಹ ಇರುವ ವ್ಯವಸ್ಥೆಯೊಳಗೇ ಜನರ ಬದುಕು ಉತ್ತಮಗೊಳ್ಳಲು ಬೇಕಾದ ಸುಧಾರಣೆಗಳಿಗಾಗಿ ಹೋರಾಡಲೇ ಬೇಕಾಗುತ್ತದೆ. ಆದರೆ ಆ ಸುಧಾರಣೆಗಳಿಗಾಗಿ ನಡೆಯುವ ಹೋರಾಟಗಳು ವಿಶಾಲವಾದ ಮೂಲಭೂತ ಬದಲಾವಣೆಯ ಭಾಗವಾಗಿದ್ದರೆ ಮಾತ್ರ ಅದು ಪರ್ಯಾಯವಾಗಿ ಉಳಿಯಲು ಸಾಧ್ಯ. ಇಲ್ಲವಾದರೆ ಅದು ಹಾಲೀ ಅಸಮಾನ ವ್ಯವಸ್ಥೆಯನ್ನು ನಿರಂತರಗೊಳಿಸುವ ಯೋಜನೆಯಲ್ಲಿ ಪರೋಕ್ಷ ಪಾತ್ರಧಾರಿಯಾಗಿ ಬಿಡುತ್ತದೆ. ಸುಧಾರಣೆ ಮತ್ತು ಮೂಲಭೂತ ಬದಲಾವಣೆಗಳ ನಡುವಿನ ಈ ನಿರಂತರ ತಾಕಲಾಟ ಮತ್ತು ಅಪಾಯಗಳ ಬಗ್ಗೆ ಈಗ ಮೊದಲಿಗಿಂತಲೂ ಹೆಚ್ಚಿನ ಎಚ್ಚರವನ್ನು ವಹಿಸಬೇಕಾದ ಅಗತ್ಯವಿದೆ. 1970ರ ದಶಕದಲ್ಲಿ ಟ್ರೇಡ್ ಯೂನಿಯನ್‌ಗಳು ಸುಧಾರಣವಾದಿ ಜಾಲದೊಳಗೆ ಸಿಲುಕಿ ಸಾಯುತ್ತಿರುವ ಬಗ್ಗೆ ತೀಕ್ಷ್ಣವಾಗಿ ಬರೆದಿದ್ದ ಅರ್ಥಶಾಸ್ತ್ರಜ್ಞ ಆ್ಯಂಡ್ರೆ ಗ್ರೋಜ್ ಅವರು ‘‘ಸುಧಾರಣೆಗಾಗಿ ನಡೆಯುವ ಹೋರಾಟಗಳು ಎಂದೂ ಬಂಡವಾಳಶಾಹಿ ತರ್ಕದ ಭಾಗವಾಗಿರಬಾರದೆಂದೂ ಮತ್ತವು (‘Non Reformist Reforms')

ಗಳನ್ನು (ಸುಧಾರಣವಾದಿಯಾಗದ ಸುಧಾರಣೆಗಳನ್ನು)ಉದ್ದೇಶಿಸಿರಬೇಕು’’ ಎಂದು ಎಚ್ಚರಿಸಿದ್ದರು. ಆಗ ಚಳವಳಿಗಳು ದಣಿದಿರಲಿಲ್ಲ. ಸಮಾಜವಾದದ ವಿರುದ್ಧ ಬಂಡವಾಳ ಶಾಹಿಯೂ ಇವತ್ತಿನಷ್ಟು ಸೈದ್ಧಾಂತಿಕ ವಿಜಯವನ್ನೂ ಸಾಧಿಸಿರಲಿಲ್ಲ. ಆದರೆ ಇಂದು ಇನ್ನಷ್ಟು ಪ್ರತಿಕೂಲವಾಗಿದೆ. ಆದ್ದರಿಂದಲೇ ಇಂದಿನ ಪರಿಸ್ಥಿತಿಯಲ್ಲಿ ಈ ಎಚ್ಚರ ಇನ್ನೂ ಹೆಚ್ಚು ಅಗತ್ಯವಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)