ನೌಕರಿ
ಕಥಾಸಂಗಮ
ಅದಾಗಲೇ ಕೆಲಸ ಮುಗಿಸಿ ಮನೆಯ ದಾರಿ ಹಿಡಿದಿದ್ದ ಮಂಜಣ್ಣ ಮನೆಯ ಯೋಚನೆಯಲ್ಲೇ ಕಳೆದು ಹೋಗಿದ್ದ. ಐದು ವರ್ಷಗಳ ಹಿಂದೆ ಸಾಲ ಮಾಡಿ ಬೀದಿಗೆ ಬಂದಿದ್ದ ಮಂಜಣ್ಣ ವಿಧಿಯಿಲ್ಲದೆ ಹುಟ್ಟೂರನ್ನು ತೊರೆದು ಶ್ರೀರಾಂಪುರಕ್ಕೆ ಗುಳೆ ಬಂದವನು. ಶ್ರೀರಾಂಪುರವನ್ನು ಪೇಟೆ ಅಂತ ಹೇಳಲಾಗದಿದ್ದರೂ ಗೂಡಂಗಡಿ, ದಿನಸಿ ಅಂಗಡಿ ಸೇರಿ ಅಲ್ಲಲ್ಲಿ ಒಂದಷ್ಟು ಜನ ಹರಟೆಯಲ್ಲಿರುವುದು ವಾಡಿಕೆ. ಸಣ್ಣದೊಂದು ಪ್ರೈಮರಿ, ದವಾಖಾನೆ. ಕಳೆದ ಸಾರಿ ತಾರಾಮಾರಿ ಚಲಿಸಿದ ಜೀಪೊಂದು ಇಬ್ಬರನ್ನು ಬಲಿ ಪಡೆದದ್ದು ಬಿಟ್ಟರೆ ಶ್ರೀರಾಂಪುರದಲ್ಲಿ ಆಕಸ್ಮಿಕವಾಗಿ ಜೀವಹೋದದ್ದು ಬಲು ಕಡಿಮೆ. ಹಾಗೆ ನೋಡಿದರೆ, ಶ್ರೀರಾಂಪುರಕ್ಕೂ ಅದಕ್ಕೆ ತಾಗಿಕೊಂಡೇ ಇರುವ ಬೆದ್ರಹಳ್ಳಿಗೂ ಹೇಳಿಕೊಳ್ಳಲೇಬೇಕಾದ ವ್ಯತ್ಯಾಸವೇನೂ ಇಲ್ಲ. ಎರಡೂ ಕಡೆ ದುಡಿಮೆಯ ಜನ. ತಾವಾಯಿತು, ತಮ್ಮ ಗದ್ದೆಯಾಯಿತು ಅಂತ ಇರೋರು. ಮೊನ್ನೆ ಬಂದ ಮಂತ್ರಿ ಯೊಬ್ಬರು ಊರಿಗೆ ಟಾರು ಕೊಡಿಸಿದ್ದರು. ಮಳೆಗಾಲಕ್ಕೆ ಮಳೆ, ಬೇಸಗೆಗೆ ಬಿಸಿಲು, ಚಳಿಗೆ ಚಳಿ ಕೊಡುವ ಊರು ಯಾವತ್ತೂ ಕಡಿಮೆ ಮಾಡಿದ್ದಿಲ್ಲ. ತಂದೆಯಿಂದ ವಾರಿಸಾಗಿ ಸಿಕ್ಕಿದ ಒಂದು ತುಂಡು ಜಮೀನು ಮತ್ತು ಮನೆಯನ್ನು ಮಾರಿ ಹೇಗೋ ಸಾಲ ಮುಗಿಸಿದ ಮಂಜಣ್ಣ ಶ್ರೀರಾಂಪುರದ ಖಾಯಂ ನಿವಾಸಿಯಾದ. ಚಿಕ್ಕ ಮಗಳು ಇನ್ನೂ ಐದನೆಯ ವರ್ಗ. ಇಬ್ಬರು ಗಂಡುಮಕ್ಕಳು ಎಳವೆಯಲ್ಲೇ ಕೂಲಿನಾಲಿಗೆ ಹೋಗುತ್ತಿರುವುದು ಕಂಡು ಮಂಜಣ್ಣನಿಗೆ ಕರುಳು ಕಿತ್ತು ಬರುತ್ತದೆ. ನನ್ನ ಕಾರಣದಿಂದ ಮಕ್ಕಳು ಅಲೆಮಾರಿಯಾದರಲ್ಲ ಅಂತ ಹಲವು ಬಾರಿ ಮಂಜಣ್ಣ ನಿಗೆ ಅನಿಸಿದ್ದಿದೆ. ಅಪ್ಪ ಕಷ್ಟದಿಂದ ಸಂಪಾದಿಸಿದ ಭೂಮಿ, ಪ್ರೀತಿಯಿಂದ ಬೆಳೆಸಿದ ತೋಟವೆಲ್ಲವೂ ತನ್ನ ದುರಾಸೆಗೆ ಬಲಿ ಯಾಗಿದ್ದು ಅವನಿಗೂ ಗೊತ್ತಿದೆ. ಹಾಗೋ ಹೇಗೋ ಕುಟುಂಬ ಹೊರೆಯುತ್ತಿದ್ದ ಮಂಜಣ್ಣನಿಗೆ ಹಲವು ಬಾರಿ ಬದುಕು ಸಾಕೆನಿಸಿದೆ. ಮೊನ್ನೆ ತಾನೆ ಬಂದ ಸಂಬಂಧಿಕನೊಬ್ಬ ಮಗನಿಗೆ ಬೆಂಗಳೂರಲ್ಲಿ ನೌಕರಿ ಕೊಡಿಸುವುದಾಗಿಯೂ ಒಳ್ಳೆ ಸಂಬಳ ನೀಡುವುದಾಗಿಯೂ ಹೇಳಿ ಹೋದ ಬಳಿಕ ಆತನ ಇರವೇ ಇರಲಿಲ್ಲ. ಊರಿಗೊಂದೇ ಇದ್ದ ಇಕ್ಬಾಲ್ ಸಾಬರ ಲ್ಯಾಂಡ್ ಲೈನಿನ ನಂಬರ್ ತೆಗೆದುಕೊಂಡ ಬಳಿಕ ಫೋನು ಬಂತಾ ಅಂತ ಕೇಳೋದೆ ಮಂಜಣ್ಣನಿಗೆ ಖಾಯಂ ಕೆಲಸ ಆಗಿ ಬಿಟ್ಟಿತ್ತು. ತಿಂಗಳು ಕಳೆದರೂ ಕರೆ ಬರದಿದ್ದಾಗ ಬೇಸತ್ತು ಮಂಜಣ್ಣ ಕೇಳೊದನ್ನೆ ಖೈದು ಮಾಡಿದ್ದ. ಒಂದು ಸಂಜೆ ಹಿತ್ತಲಲ್ಲಿ ಬೆಳೆದ ಬೆಂಡೆಕಾಯಿಯ ಚೀಲಯೇರಿಸಿಕೊಂಡು ಪೇಟೆಯೆಡೆಗೆ ಹೊರಟಿದ್ದ ಮಂಜಣ್ಣನಿಗೆ ಇಕ್ಬಾಲ್ ಸಾಬರ ಅಡುಗೆ ಭಟ್ಟ ನಿಮ್ಮನ್ನು ಕೇಳಿ ಕರೆ ಬಂದಿದ್ದಾಗಿಯೂ ನಿಮ್ಮ ಮಗನಿಗೆ ಬೆಂಗಳೂರಿನ್ಯಾಗ ಕೆಲಸ ಇರುವುದಾಗಿಯೂ ತಿಳಿಸಿ ಹೋದ. ಬೆಂಗಳೂರಿಗೆ ಹೋಗುವುದು ಬಿಡಿ, ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದ ಮಂಜಣ್ಣನಿಗೆ ಮಗನನ್ನು ಪರವೂರಿಗೆ ಕಳಿಸುವುದು ಸಮಧಾನದ ಸಂಗತಿಯಂತೂ ಆಗಿರಲಿಲ್ಲ.
ಮನೆಯ ಕಷ್ಟ ಸುಧಾರಿಸಿತು ಅನ್ನುವ ಮಂಜಣ್ಣನ ಒಳಮನಸ್ಸು ಅರೆಮನಸ್ಸಿಂದಲೇ ಒಪ್ಪಿಗೆ ಕೊಟ್ಟಿತಷ್ಟೇ. ಶ್ರೀರಾಂಪುರದ ಆಚೆ ಏನನ್ನೂ ಕಂಡಿರದ ಮಗ ಸುಬ್ರಾಯ ನಿಗೆ ಅಳುಕು ಮತ್ತು ಬೆಂಗಳೂರಿಗೆ ಹೋಗುವವ ಅನ್ನುವ ಒಣಜಂಭ ಒಟ್ಟಿಗೆ ಸ್ಥಾಪಿತವಾಗಿ ಬಿಟ್ಟಿತು. ಊರವರೆಲ್ಲಾ ಸೇರಿ ಸುಬ್ರಾಯನನ್ನು ಬೆಂಗಳೂರಿಗೆ ಕಳಿಸಿಕೊಟ್ಟರು. ಬೆಂಗಳೂರು, ಮಾಯಾನಗರಿ. ಭಟ್ಟರ ಸಣ್ಣ ಹೊಟೇಲು, ಇಕ್ಬಾಲ್ ಸಾಬರ ದಿನಸಿ ಅಂಗಡಿ, ಊರಿನ ಕಟ್ಟೆಯನ್ನೇ ಜಗತ್ತು ಅಂದುಕೊಂಡಿದ್ದ ಸುಬ್ರಾಯನ ಮುಂದೆ ಬೆಂಗಳೂರಿತ್ತು. ಉಟ್ಟ ಹಳೆ ಪಂಚೆ ಮತ್ತು ಶರ್ಟು ಶ್ರೀರಾಂಪುರದ ಇಡಿಯ ಚಿತ್ರಣ ಕೊಡುತ್ತಿದ್ದುವು. ಇದ್ದುದರಲ್ಲಿ ಒಳ್ಳೆಯದನ್ನೇ ಆರಿಸಿ ಕೊಟ್ಟ ಶಿವಮ್ಮ ತಾಯತವನ್ನೂ ಸುಬ್ರಾಯನ ಚೀಲಕ್ಕೆ ಹಾಕಿದ್ದಳು. ಸಂಬಂಧಿಕನ ಜೊತೆ ಸುಬ್ರಾಯನಿಗೆ ಫೇಕ್ಟರಿಯೊಂದರಲ್ಲಿ ನೌಕರಿ. ನೂರಾರು ಕಾರ್ಮಿಕರು, ಭಿನ್ನ ಭಾಷೆಯೆಡೆಯಲ್ಲಿ ಹೊಂದಿಕೊಳ್ಳಲು ಸುಬ್ರಾಯನಿಗೆ ತಿಂಗಳುಗಳೇ ಹಿಡಿದಿತ್ತು. ಬೆಂಗಳೂರಿಗೆ ಬಂದ ಬಳಿಕ ವಾರಕ್ಕೊಮ್ಮೆ ಇಕ್ಬಾಲ್ ಸಾಬರ ಲ್ಯಾಂಡ್ ಲೈನಿಗೆ ಕರೆ ಮಾಡುವುದನ್ನು ಸುಬ್ರಾಯ ಮರೆತಿರಲಿಲ್ಲ. ಮೊದಲ ಸಲ ಕರೆ ಬಂದಾಗವಂತೂ ಇಡೀ ಕುಟುಂಬವೇ ಇಕ್ಬಾಲ್ ಸಾಬರ ಲ್ಯಾಂಡ್ ಫೋನಿಗೆ ನೊಣಗಳಂತೆ ಮುತ್ತಿದ್ದವು. ಇಕ್ಬಾಲ್ ಸಾಬರಿಗೆ ಇದು ತೀವ್ರ ಕಿರಿಕಿರಿ ಅನಿಸಿದರೂ ನಮ್ಮ ಊರಿನವನೊಬ್ಬ ಬೆಂಗಳೂರಿಗೆ ಹೋದನಲ್ಲ ಅನ್ನುವ ಖುಷಿ ಅವರನ್ನು ಸುಮ್ಮನಾಗಿಸಿತ್ತು. ನಗರಕ್ಕೆ ಹೊಂದಿಕೊಂಡ ನಂತರ ಸುಬ್ರಾಯ ಬದಲಾಗಿದ್ದ. ಪಂಚೆಗೆ ಪ್ಯಾಂಟು, ಕೈಗೆ ಫೋನು ಅಂತ ತಾನೂ ಬೆಂಗಳೂರಿಗನಾಗುವ ಹೊಸ್ತಿಲಲ್ಲಿದ್ದ. ಶ್ರೀರಾಂಪುರದ ಬದುಕು ಮತ್ತು ಬೆಂಗಳೂರಿನ ಲೈಫು ಉಳಿಸಿಕೊಂಡ ರಹಸ್ಯ ಪರಿಚಯವಾದ ಬಳಿಕವಂತೂ ಹಳ್ಳಿಯ ಬದುಕು ಸುಬ್ರಾಯನಿಗೆ ದುಸ್ತರವೆನಿಸತೊಡಗಿದವು. ಮನೆಯ ಬದುಕು, ಪರಿಸರ, ಜೀವನ ಶೈಲಿಯೆಲ್ಲವೂ ಒಂಥರಾ ಆದವು. ಇದಾದ ಮೇಲೆ ವಾರಕ್ಕೆ ಮಾಡುತ್ತಿದ್ದ ಕರೆಯೂ ಮೆಲ್ಲನೆ ನಿಂತು ಹೋಯಿತು. ಬೆಂಗಳೂರಿಗರು ಮಕ್ಕಳಿಗೆ ಕೊಡುತ್ತಿದ್ದ ಐಷಾರಾಮದ ಬದುಕು ಮತ್ತು ಮಂಜಣ್ಣ ಕೊಟ್ಟ ಕೆಲಸದ ಹೊರೆಯೆಲ್ಲವೂ ಸುಬ್ರಾಯನ ಕಣ್ಣ ಮುಂದೆ ಹಾದು ಹೋದವು. ಅಪ್ಪನ ಬಗ್ಗೆ ಕೋಪ ಮೊದಲ ಬಾರಿ ಸುಬ್ರಾಯನಿಗೆ ಉಕ್ಕಿ ಬಂದಿದ್ದವು. ಪಡ್ಡೆ ಹುಡುಗರ ಗೆಳೆತನ, ಬಾರು ಎಲ್ಲವೂ ಸುಬ್ರಾಯನಿಗೆ ಮನೆಯ ನೆನಪನ್ನೇ ಕೊಂದು ಹಾಕಿದುವು. ಇತ್ತ ಮಂಜಣ್ಣ, ಶಿವಮ್ಮ ಕಾಣದ ಊರಿಗೆ ಮಗನನ್ನು ಕಳಿಸಿ ಕೆಟ್ಟೆವೋ ಅನ್ನುವ ಚಿಂತೆಯಲ್ಲಿ ದಿನ ದೂಡುತ್ತಿದ್ದರು. ಮಗನ ವಾರದ ಕರೆ ಸಂಪೂರ್ಣ ನಿಂತ ನಂತರವಂತೂ ಶಿವಮ್ಮ ಮಂಕಾದಳು.
ನೆರೆಹೊರೆ ಮನೆಯಲ್ಲಿ ಕೂಲಿ ಮಾಡಿ ಬದುಕು ಕಟ್ಟಿಕೊಂಡಿದ್ದ ಮಂಜಣ್ಣನೂ ದಿನ ಕಳೆದಂತೆಯೇ ಕಳೆದು ಹೋಗತೊಡಗಿದ. ಸುಬ್ರಾಯ ಮನೆಯ ನೆನಪೂ ಇಲ್ಲದೆ ಮೋಜು, ಜೂಜಿನಲ್ಲೇ ಕಾಲ ಹಾಕುತ್ತಿದ್ದ. ತಾಯಿ ಮನಸ್ಸು ಮಕ್ಕಳ ಮೇಲೆ ಮಕ್ಕಳ ಮನಸು ಬೇಲಿಯ ಮೇಲೆ ಅನ್ನುತ್ತಾರಲ್ಲ ಹಾಗೆ. ಸಿಕ್ಕಿದ ಸಂಬಳವೆಲ್ಲಾ ಬಾರಿಗೆ, ಜುಗಾರಿ ಅಡ್ಡೆಗೆ ಅದಾಗಲೇ ಸಂದಿಯಾಗಿತ್ತು. ಅಪ್ಪ, ಅಮ್ಮ, ಮನೆಯೆಲ್ಲವೂ ಸುಬ್ರಾಯನಿಗೆ ದೂರವಾದುವು. ಇತ್ತ ಶಿವಮ್ಮ ಇದ್ದ ಬದ್ದ ದೇವರಿಗೆಲ್ಲಾ ಹರಕೆ ಹೊತ್ತೂ ಹೊತ್ತೂ ಸಾಕಾಗಿ ಹೋದಳು. ಶಿವಮ್ಮ ದಿನವೂ ಆಸುಪಾಸಿನಲ್ಲಿ ಮುಸುರೆ ತಿಕ್ಕೋಳು. ಸ್ವಂತ ಸೂರಿಲ್ಲದೆ, ಬಾಡಿಗೆ ಮನೆಯ ಹಂಗಿಗೆ ಮಗ ಕಳೆದುಹೋದ ದುಃಖ ಬೇರೆ. ಪ್ರೈಮರಿಗೆ ಸೀಮಿತವಾಗಿದ್ದ ಶ್ರೀರಾಂಪುರ ವಿದ್ಯಾಭ್ಯಾಸದಿಂದ ದೂರ ಹೋಗಿ ಕಲಿಯುವ ತಾಕತ್ತು ಇಲ್ಲದಿದ್ದರಿಂದಲೂ ಮಗಳೂ ಮನೆಯಲ್ಲೇ ಉಳಿದಳು. ಮತ್ತೊಬ್ಬ ಮಗನ ಕೂಲಿಯೂ ನಿಂತಿತು. ಮಂಜಣ್ಣ ಮಾತ್ರ ಯಂತ್ರದಂತೆ ದುಡಿಯುತ್ತಲೇ ಇದ್ದ. ರಾಜನಂತೆ ಬದುಕುತ್ತಿದ್ದ ಮಂಜಣ್ಣ ಸಾಲದ ಹೊರೆಯಿಂದ ಮನೆ, ಜಮೀನು ಮಾರಿದ್ದು, ಸುಂದರ ದಿನಗಳ ಆಶೆಯಲ್ಲಿ ಮಗನನ್ನು ಬೆಂಗಳೂರಿಗೆ ಕಳುಹಿಸಿದ್ದೆಲ್ಲವೂ ಅವನನ್ನು ಅಪಶಕುನದಂತೆ ಕಾಡತೊಡಗಿದವು. ಅಪ್ಪ ಮಾಡಿದ ಸೊತ್ತನ್ನು ತಿಂದು ತೇಗಿ ಸಾಲದ್ದಕ್ಕೆ ಸಾಲವೂ ಮಾಡಿಕೊಂಡ ತನ್ನ ಬದುಕಿನ ಬಗ್ಗೆ ಮಂಜಣ್ಣನಿಗೂ ಈಗ ಹೇಸಿಗೆ ಅನಿಸುತ್ತದೆ. ಸುಬ್ರಾಯ ಬೆಂಗಳೂರಿಗೆ ಸಂದಿ ಹೋಗಿ ನಾಕು ವರುಷ. ಅಂದು ಕುಡಿದ ಮತ್ತಿನಲ್ಲಿ ಗೆಳೆಯರೊಂದಿಗೆ ಹರಟುತ್ತಾ ಬೆಂಗಳೂರಿನ ಬೀದಿಯಲ್ಲಿ ಸಾಗುತ್ತಿದ್ದ ಸುಬ್ರಾಯನಿಗೆ ಲಾರಿ ಹೊಡೆದು ಕೊನೆ ಉಸಿರಿನ ಸಮಯದಲ್ಲಿರಬೇಕಾದರೆ ಇತ್ತ ಒಂದೂ ತಿಳಿಯದ ಅನಕ್ಷರಸ್ಥ ಬಡ ಅಪ್ಪ ಅಮ್ಮ ರಾತ್ರಿಯೂಟದ ಚಿಂತೆಯಲ್ಲಿದ್ದರು.
ಸುಬ್ರಾಯನ ಬದುಕು ಬೆಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ಕೊನೆಗೊಳ್ಳುವಾಗ ಮಂಜಣ್ಣನ ಮನೆಯ ಪಕ್ಕದ ಮರದಿಂದ ಹಕ್ಕಿಯೊಂದು ಚೀರಿಡುತ್ತಾ ಹಾರಿ ಹೋಯಿತು. ತೀರಾ ಅಪರೂಪವಾಗಿ ಶ್ರೀರಾಂಪುರದ ರಸ್ತೆಯಲ್ಲಿ ವಾಹನಗಳು ಓಡಾಡುವುದಿದೆ. ಸಂಜೆ ಬಂದು ನಿಂತ ವ್ಯಾನಿನ ಸುತ್ತಲೂ ಇಡಿಯ ಶ್ರೀರಾಂಪುರದ ಮಕ್ಕಳಿಂದ ಹಿಡಿದು ವಯೋವೃದ್ಧರೂ ಒಂದುಗೂಡಿದ್ದರು. ವ್ಯಾನಿನಿಂದ ಸುಬ್ರಾಯನ ಹೆಣ ಕೆಳಗಿಳಿಸಬೇಕಾದರೆ ಶ್ರೀರಾಂಪುರದಲ್ಲಿ ನೀರವ ಮೌನ. ದುಡಿದು ದುಡಿದೂ ಕೃಶವಾಗಿದ್ದ ಮಂಜಣ್ಣ ಮೂಕನಾಗಿ ಹೆಣವನ್ನು ನೋಡುತ್ತಲೇ ಇದ್ದ. ತಾನೇ ಕಳಿಸಿ ಕೈಯಾರೆ ಮಗನನ್ನು ಕೊಂದೆ ಎಂದೆನಿಸಿತೋ ಏನೋ? ಮರುದಿನ ಮಲಗಿದ ಮಂಜಣ್ಣನೂ ಏಳಲೇ ಇಲ್ಲ. ಶ್ರೀರಾಂಪುರದ ಸಣ್ಣ ಗುಡಿಸಲಿನ ಮೂಲೆಯಿಂದ ಅಮಾಯಕ ಹೆಂಗಸೊಬ್ಬಳ ಅಳು ಮಾತ್ರ ಅಸ್ಪಷ್ಟವಾಗಿ ಕೇಳುತ್ತಲೇ ಇತ್ತು.