ಔಷಧಿಗಳ ಓವರ್ಡೋಸ್ ಸೆರೊಟೋನಿನ್ ಸಿಂಡ್ರೋಮ್ಗೆ ಕಾರಣವಾಗಬಹುದು
ಸೆರೊಟೋನಿನ್ ಶರೀರದಲ್ಲಿ ಉತ್ಪಾದನೆಯಾಗುವ ಹಾರ್ಮೋನ್ ಆಗಿದ್ದು, ಮಿದುಳಿನ ಕೋಶಗಳು ಮತ್ತು ಇತರ ನರಮಂಡಲ ಕೋಶಗಳ ನಡುವೆ ಸಂವಹನವನ್ನು ಸಾಧ್ಯವಾಗಿಸುತ್ತದೆ. ಇದರಿಂದಾಗಿ ನಮ್ಮ ಶರೀರದ ಒಂದು ವ್ಯವಸ್ಥೆಯು ಇನ್ನೊಂದು ವ್ಯವಸ್ಥೆಯೊಂದಿಗೆ ಸಂಪರ್ಕವನ್ನು ಹೊಂದಿರುತ್ತದೆ. ಮಿದುಳಿನಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಸೆರೊಟೋನಿನ್ ಇದ್ದರೆ ವ್ಯಕ್ತಿಯು ಖಿನ್ನತೆಯಂತಹ ಸಮಸ್ಯೆಗಳಿಗೆ ತುತ್ತಾಗುತ್ತಾನೆ. ನಮ್ಮ ನರಕೋಶಗಳಲ್ಲಿ ಅಸಹಜ ಚಲನವಲನವು ಸೆರೊಟೋನಿನ್ ಸಿಂಡ್ರೋಮ್ ಅನ್ನು ಸೂಚಿಸುತ್ತದೆ.
ಶರೀರದಲ್ಲಿ ಸೆರೊಟೋನಿನ್ ಅಧಿಕ ಪ್ರಮಾಣದಲ್ಲಿರುವುದು ಇದಕ್ಕೆ ಕಾರಣವಾಗುತ್ತದೆ. ಸೆರೊಟೋನಿನ್ ಸಿಂಡ್ರೋಮ್ ಹೆಚ್ಚಾಗಿ ಔಷಧಿಗಳ ಬಳಕೆ ಮತ್ತು ಅದರ ಡೋಸೇಜ್ನ ಬದಲಾವಣೆಗಳೊಂದಿಗೆ ಗುರುತಿಸಿಕೊಂಡಿದೆ. ನಾವು ಎರಡು ಅಥವಾ ಹೆಚ್ಚಿನ ಔಷಧಿಗಳನ್ನು ಅಥವಾ ಪೂರಕಗಳನ್ನು ಒಟ್ಟಿಗೆ ಸೇವಿಸಿದಾಗ ಸೆರೊಟೋನಿನ್ ಸಿಂಡ್ರೋಮ್ಗೆ ತುತ್ತಾಗುವ ಅಪಾಯ ಹೆಚ್ಚಿರುತ್ತದೆ. ನಾವು ಔಷಧಿಯೊಂದನ್ನು ಮೊದಲ ಬಾರಿಗೆ ಸೇವಿಸಿದಾಗ ಅಥವಾ ಔಷಧಿಯ ಡೋಸೇಜ್ನ್ನು ಹೆಚ್ಚಿಸಿದಾಗ ಶರೀರದಲ್ಲಿ ಸೆರೊಟೋನಿನ್ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಗೊಳ್ಳುತ್ತದೆ.
ಸಿರೊಟೋನಿನ್ ಸಿಂಡ್ರೋಮ್ಗೆ ತುತ್ತಾಗಿರುವ ವ್ಯಕ್ತಿಗಳಲ್ಲಿ ಅದರ ಲಕ್ಷಣಗಳು ಸಾಮಾನ್ಯವಾಗಿ ಆರು ಗಂಟೆಗಳೊಳಗೆ ಕಾಣಿಸಿಕೊಳ್ಳುತ್ತವೆ. ಈ ಲಕ್ಷಣಗಳಿಗೆ ಕಾರಣವಾದ ಔಷಧಿಗಳ ಸೇವನೆಯನ್ನು ಅವರು ನಿಲ್ಲಿಸಿದಾಗ ಸಿರೊಟೋನಿನ್ ಸಿಂಡ್ರೋಮ್ನಿಂದ ಚೇತರಿಕೆಯುಂಟಾಗುತ್ತದೆ.
► ಕಾರಣಗಳು
ಖಿನ್ನತೆ ನಿವಾರಕಗಳು, ತಲೆನೋವಿನ ಔಷಧಿಗಳು, ನೋವು ನಿವಾರಕಗಳು, ಆ್ಯಂಟಾಸಿಡ್ಗಳು ಮತ್ತು ಪೋಷಕಾಂಶಗಳ ಪೂರಕಗಳ ಸೇವನೆ ಸಿರೊಟೋನಿನ್ ಸಿಂಡ್ರೋಮ್ನ್ನು ಉಂಟು ಮಾಡಬಲ್ಲವು.
► ಲಕ್ಷಣಗಳು
ಸೆರೊಟೋನಿನ್ ಲಕ್ಷಣಗಳು ಹೆಚ್ಚಾಗಿ ಹೊಸ ಔಷಧಿಯೊಂದನ್ನು ಸೇವಿಸಿದ ಕೆಲವೇ ಗಂಟೆಗಳಲ್ಲಿ ಪ್ರಕಟಗೊಳ್ಳುತ್ತವೆ. ಔಷಧಿಯು ಸೆರೊಟೋನಿನ್ ಮಟ್ಟದಲ್ಲಿ ವ್ಯತ್ಯಯವನ್ನುಂಟು ಮಾಡುತ್ತದೆ. ಸಾಮಾನ್ಯವಾಗಿ ಔಷಧಿ ಅಥವಾ ಪೂರಕದ ಡೋಸೇಜ್ನ್ನು ಏಕಾಏಕಿ ಹೆಚ್ಚಿಸುವುದು ಇದಕ್ಕೆ ಕಾರಣವಾಗುತ್ತದೆ. ಎಲ್ಎಸ್ಡಿ ಮತ್ತು ಕೊಕೇನ್ ನಂತಹ ಕೆಲವು ನಿಷೇಧಿತ ಮಾದಕ ದ್ರವ್ಯಗಳೂ ಸೆರೊಟೋನಿನ್ ಸಿಂಡ್ರೋಮ್ಗೆ ಕಾರಣವಾಗುತ್ತವೆ.
ರೋಗಿಗಳಿಗೆ ಸೆರೊಟೋನಿನ್ ಸಿಂಡ್ರೋಮ್ನ ಸಂಭಾವ್ಯ ಅಪಾಯದ ಬಗ್ಗೆ ತಿಳಿದಿರುವಂತಾಗಲು ತಮ್ಮ ಉತ್ಪನ್ನಗಳ ಮೇಲೆ ಎಚ್ಚರಿಕೆಯನ್ನು ಮುದ್ರಿಸುವಂತೆ ಇತ್ತೀಚಿಗೆ ಕೆಲವು ದೇಶಗಳು ಔಷಧಿ ತಯಾರಕರಿಗೆ ಸೂಚಿಸಿವೆ. ನೀವು ಸೇವಿಸುತ್ತಿರುವ ಔಷಧಿಗಳ ಬಗ್ಗೆ ಯಾವುದೇ ಗೊಂದಲವಿದ್ದರೆ ನಿಮ್ಮ ವೈದ್ಯರಿಂದ ಸಲಹೆ ಪಡೆಯುವುದು ಅಗತ್ಯ. ಗೊಂದಲ ಅಥವಾ ಉದ್ವೇಗ, ಚರ್ಮದ ಮೇಲೆ ದದ್ದುಗಳು ಕಾಣಿಸಿಕೊಳ್ಳುವುದು, ತಲೆನೋವು, ವಾಕರಿಕೆ, ಅತಿಸಾರ, ಹೆಚ್ಚಿನ ಹೃದಯ ಬಡಿತ ಅಥವಾ ವೇಗವಾಗಿ ಹೃದಯವು ಹೊಡೆದುಕೊಳ್ಳುವುದು, ಶರೀರದಲ್ಲಿ ನಡುಕ, ಅತಿಯಾಗಿಬೆವರುವಿಕೆ ಇವು ಸೆರೊಟೋನಿನ್ ಸಿಂಡ್ರೋಮ್ನ ಲಕ್ಷಣಗಳಾಗಿವೆ. ಗಂಭೀರ ಪ್ರಕರಣಗಳಲ್ಲಿ ಸೆರೊಟೋನಿನ್ ಸಿಂಡ್ರೋಮ್ ಸಾವಿಗೂ ಕಾರಣವಾಗಬಹುದು.
ಇಂತಹ ಯಾವುದೇ ಲಕ್ಷಣಗಳು ಕಾಣಿಸಿಕೊಂಡಾಗ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗುತ್ತದೆ. ಅತಿಯಾದ ಜ್ವರ,ಅನಿಯಮಿತ ಎದೆಬಡಿತ ಮತ್ತು ಬವಳಿ ಬರುವಂತಾಗುತ್ತಿದ್ದರೂ ವೈದ್ಯಕೀಯ ನೆರವು ಪಡೆಯಬೇಕು.
► ಚಿಕಿತ್ಸೆ
ಸೆರೊಟೋನಿನ್ ಸಿಂಡ್ರೋಮ್ನ ಲಕ್ಷಣಗಳನ್ನು ಸುಲಭವಾಗಿ ನಿಯಂತ್ರಿಸಬಹುದು. ತಕ್ಷಣವೇ ಔಷಧಿ ಸೇವನೆಯನ್ನು ನಿಲ್ಲಿಸಿ ವೈದ್ಯರನ್ನು ಸಂಪರ್ಕಿಸುವುದು ಈ ಸಿಂಡ್ರೋಮ್ನ್ನು ನಿಯಂತ್ರಿಸಲು ಅತ್ಯಂತ ಸಹಜ ಪರಿಹಾರವಾಗಿದೆ. ನೀವು ಯಾವುದೇ ಅಧಿಕ ಶಕ್ತಿಯ ಔಷಧಿಯನ್ನು ಸೇವಿಸುತ್ತಿದ್ದರೆ ಶರೀರದ ಮೇಲೆ ಅದರ ಪರಿಣಾಮಗಳ ಮೇಲೆ ನಿಗಾಯಿರಲಿ. ಔಷಧಿಯು ನಿಮಗೆ ಹಾನಿಯನ್ನುಂಟು ಮಾಡುತ್ತಿದೆ ಎಂದು ಅನ್ನಿಸಿದರೆ ವೈದ್ಯರನ್ನು ಭೇಟಿಯಾದರೆ ಅವರು ಬದಲಿ ಔಷಧಿಯನ್ನು ಸೂಚಿಸಬಹುದು.