ಜಾತಿ, ಧರ್ಮ, ಭಾಷೆಯ ವಿಚಾರದಲ್ಲಿ ಯಾವುದೇ ತಾರತಮ್ಯಗಳಿಗೆ ಅವಕಾಶ ಕೊಡುವುದಿಲ್ಲ
ರಾಜ್ಯ ಅಲ್ಪಸಂಖ್ಯಾತರ ಆಯೋಗದ ನೂತನ ಅಧ್ಯಕ್ಷ ಅಬ್ದುಲ್ ಅಝೀಮ್
ಬೆಂಗಳೂರು, ಅ.19: ರಾಜ್ಯದಲ್ಲಿ ಒಂದು ಕೋಟಿ ಅಲ್ಪಸಂಖ್ಯಾತರಿದ್ದಾರೆ. ಎಲ್ಲರ ನಿರೀಕ್ಷೆಯಂತೆ ಬದ್ಧತೆಯಿಂದ ಕೆಲಸ ಮಾಡುತ್ತೇನೆ. ಜಾತಿ, ಧರ್ಮ, ಭಾಷೆಯ ವಿಚಾರದಲ್ಲಿ ಯಾವುದೇ ಬಗೆಯ ತಾರತಮ್ಯಗಳಿಗೆ ಅವಕಾಶ ಕೊಡುವುದಿಲ್ಲ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ನೂತನ ಅಧ್ಯಕ್ಷ ಅಬ್ದುಲ್ ಅಝೀಮ್ ಹೇಳಿದರು.
ಶನಿವಾರ ನಗರದ ಅಂಬೇಡ್ಕರ್ ವೀಧಿಯಲ್ಲಿರುವ ವಿವಿ ಗೋಪುರದಲ್ಲಿನ ಅಲ್ಪಸಂಖ್ಯಾತರ ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರಿಗೆ ಅನ್ಯಾಯವಾಗದಂತೆ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಅವರು ಹೇಳಿದರು.
ಅಲ್ಪಸಂಖ್ಯಾತರ ಆಯೋಗಕ್ಕೆ ಸಿವಿಲ್ ನ್ಯಾಯಾಧೀಶರ ಅಧಿಕಾರವನ್ನು ನೀಡಲಾಗಿದೆ. ನಾನು ಯಾವುದೇ ಜಿಲ್ಲೆಗೆ ಪ್ರವಾಸ ಕೈಗೊಂಡರು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಕರೆದು ಕಾನೂನು ಸುವ್ಯವಸ್ಥೆಯ ಕುರಿತು ಮಾಹಿತಿ ಕಲೆ ಹಾಕುತ್ತೇನೆ. ಅಲ್ಪಸಂಖ್ಯಾತರ ಜೊತೆ ಇಲ್ಲಿ ನ್ಯಾಯ ಆಗುತ್ತಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುತ್ತೇನೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಪ್ರಮುಖವಾದ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ, ಅಲ್ಲಿ ಹಿಂದೂ ಹಾಗೂ ಮುಸ್ಲಿಮ್ ಸಮುದಾಯದ ಸ್ಥಳೀಯ ಪ್ರಮುಖರನ್ನು ಒಳಗೊಂಡ ಸಮಿತಿಯನ್ನು ರಚನೆ ಮಾಡಿ, ಕೋಮು ಸೌಹಾರ್ದತೆ ಕಾಪಾಡುವ ಜವಾಬ್ದಾರಿಯನ್ನು ವಹಿಸಲಾಗುವುದು ಎಂದು ಅಬ್ದುಲ್ ಅಝೀಮ್ ತಿಳಿಸಿದರು.
ಬಡತನ, ಅನರಕ್ಷತೆ ಹಾಗೂ ಸೂಕ್ತವಾದ ಮಾರ್ಗದರ್ಶನದ ಕೊರತೆಯಿಂದಾಗಿ ಅಲ್ಪಸಂಖ್ಯಾತರ ಬಾಹುಳ್ಯವಿರುವ ಪ್ರದೇಶಗಳಲ್ಲಿ ಇತ್ತೀಚೆಗೆ ಮಾದಕ ವಸ್ತುಗಳ ಸೇವನೆ ಪ್ರಮಾಣ ಹೆಚ್ಚುತ್ತಿರುವುದು ಆತಂಕಕಾರಿ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಸಂಗ್ರಹಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದು ಅವರು ಹೇಳಿದರು.
ವಕ್ಫ್ ಬೋರ್ಡ್, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಹಾಗೂ ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೇಲೆ ಆಯೋಗವು ಹದ್ದಿನ ಕಣ್ಣು ಇಡಲಿದೆ. ಒತ್ತುವರಿಯಾಗಿರುವ, ಭೋಗ್ಯಕ್ಕೆ ನೀಡಿರುವ ಪ್ರಮುಖ ವಕ್ಫ್ ಆಸ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು. ಆನಂತರ, ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ ವಕ್ಫ್ ಆಸ್ತಿಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅಬ್ದುಲ್ ಅಝೀಮ್ ತಿಳಿಸಿದರು.
ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಜಾರಿಗೆ ತರಲಾಗಿರುವ ಯೋಜನೆಗಳು ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಕೈಗೆ ಸಿಗದಂತೆ ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿವೇತನ, ಶೈಕ್ಷಣಿಕ ಸಾಲ ಪಡೆಯುವಾಗ ಒದಗಿಸುವ ದಾಖಲೆಗಳನ್ನು ಸರಳೀಕರಣಗೊಳಿಸುವ ಸಂಬಂಧ ಕಂದಾಯ ಇಲಾಖೆ ಸಚಿವರ ಜೊತೆ ಚರ್ಚೆ ನಡೆಸಲಾಗುವುದು ಎಂದು ಅಬ್ದುಲ್ ಅಝೀಮ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಾರ್ಯದರ್ಶಿ ಅನೀಸ್ ಸಿರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
10 ಸಾವಿರ ಕೋಟಿ ಆದಾಯ
ರಾಜ್ಯದಲ್ಲಿರುವ ವಕ್ಫ್ ಆಸ್ತಿಗಳನ್ನು ಸರಿಯಾಗಿ ಉಪಯೋಗಿಸಿಕೊಂಡಲ್ಲಿ ವಾರ್ಷಿಕ ಕನಿಷ್ಠ 10 ಸಾವಿರ ಕೋಟಿ ರೂ.ಗಳ ಆದಾಯ ಬರುವ ಸಾಧ್ಯತೆಯಿದೆ. ಈ ಹಣವನ್ನು ವಕ್ಫ್ ವಿಶ್ವವಿದ್ಯಾಲಯ, ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜು, ಆಸ್ಪತ್ರೆಗಳ ನಿರ್ಮಾಣಕ್ಕಾಗಿ ಬಳಸಿಕೊಳ್ಳಬಹುದು. ಇದು ನನ್ನ ಕನಸು.
-ಅಬ್ದುಲ್ ಅಝೀಮ್, ರಾಜ್ಯ ಅಲ್ಪಸಂಖ್ಯಾತರ ಆಯೋಗದ ನೂತನ ಅಧ್ಯಕ್ಷ