ಸವರ್ಣದೀರ್ಘಸಂಧಿ: ವ್ಯಾಕರಣ ಪಾಠಕ್ಕೆ ವಿವರಣೆ ತುಸು ದೀರ್ಘ!
ಪ್ರತಿಯೊಬ್ಬ ರೌಡಿಗೂ ಆತ ರೌಡಿಯಾಗುವುದಕ್ಕೆ ಒಂದು ಕಾರಣ ಇರುತ್ತದೆ. ಅನಾಥನಂತಿದ್ದ ತಿಮ್ಮ ಮುದ್ದಣ್ಣನೆಂಬ ರೌಡಿಯಾಗುವುದಕ್ಕೂ ಒಂದು ಕಾರಣವಿದೆ. ಆತ ಶಾಲೆಗೆ ಸೇರಿ ಕಲಿತವನಲ್ಲ. ಆದರೆ ಕನ್ನಡದ ಮೇಷ್ಟ್ರು ಮಕ್ಕಳಿಗೆ ಕಲಿಸುವ ವ್ಯಾಕರಣವನ್ನೆಲ್ಲ ಅರಿತುಕೊಂಡವನು. ಆ ಕನ್ನಡದ ಮೇಷ್ಟ್ರು, ಅವರ ಮಗಳು ಮನೋರಮೆ, ಕನ್ನಡ ಪಾಠ ಎಲ್ಲವೂ ಆತನಿಗೆ ಆಪ್ತವಾಗಿತ್ತು. ಆದರೆ ರೌಡಿಗಳು ಆ ಶಾಲೆಯನ್ನು ಮುಚ್ಚಿ ಮೇಷ್ಟ್ರಿಗೆ ಹಲ್ಲೆ ನಡೆಸುತ್ತಾರೆ. ಘಟನೆಯಲ್ಲಿ ಮಗಳು ಮನೋರಮೆ ನಾಪತ್ತೆಯಾಗುತ್ತಾಳೆ. ಆಘಾತದಿಂದ ಮೇಷ್ಟ್ರು ಹುಚ್ಚರಾಗುತ್ತಾರೆ. ಆ ಹಳ್ಳಿಯನ್ನು ತೊರೆಯುವ ಹುಡುಗನಿಗೆ ಪೈಲ್ವಾನ್ ಒಬ್ಬ ಆಶ್ರಯ ನೀಡುತ್ತಾನೆ. ಹಾಗೆ ಪೈಲ್ವಾನ್ ಗರಡಿಯಲ್ಲಿ ರೌಡಿಸಂ ಕಲಿತು ಮುದ್ದಣ್ಣನಾಗಿ ಬೆಳೆಯುತ್ತಾನೆ. ಮುಂದೇನಾಗುತ್ತದೆ ಎನ್ನುವುದನ್ನು ನಾವು ಹೇಳುವುದಕ್ಕಿಂತ ಅಥವಾ ನೀವು ಊಹಿಸುವುದಕ್ಕಿಂತ ಪರದೆಯ ಮೇಲೆ ನೋಡುವುದೇ ಚಂದ.
ಯಾಕೆಂದರೆ ಚಿತ್ರಕತೆ, ಸಂಭಾಷಣೆಯಲ್ಲಿನ ವಿಭಿನ್ನತೆಯೇ ಚಿತ್ರದ ಪ್ರಮುಖ ಆಕರ್ಷಣೆಯಾಗಿ ಗುರುತಿಸುವಂತಿದೆ. ಮುದ್ದಣ್ಣನ ಪಾತ್ರದಲ್ಲಿ ಪ್ರಥಮ ಬಾರಿಗೆ ವೀರೇಂದ್ರ ಶೆಟ್ಟಿ ನಾಯಕನಾಗಿ ನಟಿಸಿದ್ದಾರೆ. ಮುದ್ದಣ್ಣನ ಜೋಡಿ ಅಮೃತ ವರ್ಷಿಣಿಯಾಗಿ ನವ ನಟಿ ಕೃಷ್ಣಾ ಕಾಣಿಸಿಕೊಂಡಿದ್ದಾರೆ. ಚಿತ್ರದ ‘ಕೊಳಲಾದೆನಾ’ ಹಾಡು ಈಗಾಗಲೇ ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಇವರ ಜೋಡಿ ಮೋಡಿ ಮಾಡಿತ್ತು. ಆದರೆ ಸಿನೆಮಾದಲ್ಲಿ ಆ ನಿರೀಕ್ಷೆ ಇರಿಸಿಕೊಂಡು ಹೋದರೆ ಅಂತಹ ಸನ್ನಿವೇಶಗಳಿಗೆ ಕೊರತೆ ಇದೆ.
ನಾಯಕನ ವ್ಯಾಕರಣ ಪಾಠ ಕೆಲವೆಡೆ ಹೆಚ್ಚಿತೇನೋ ಎನ್ನುವಂತಿದೆ. ನಾಯಕನಿಗೆ ಇಂಟ್ರಡಕ್ಷನ್ ನೀಡಿದ ಬಳಿಕವೂ ಆತನ ಕುರಿತಾದ ಕತೆಯನ್ನು ನಿರೂಪಿಸಿಕೊಂಡು ಹೋಗುವುದು ಪ್ರೇಕ್ಷಕರಿಗೆ ಆಸಕ್ತಿ ಕಳೆದುಕೊಳ್ಳುವಂತೆ ಮಾಡುತ್ತದೆ. ಬಾಲ್ಯದ ಸನ್ನಿವೇಶಗಳಲ್ಲಿ ಮಕ್ಕಳಿಂದ ತೆಗೆಸಲಾದ ಅಭಿನಯ ಮತ್ತು ಜೀವಂತಿಕೆ ಇರದ ಕಂಠದಾನ ಸನ್ನಿವೇಶವನ್ನು ಪೇಲವಗೊಳಿಸಿದೆ.
ಶ್ರೇಷ್ಠ ಛಾಯಾಗ್ರಾಹಕ ಲೋಕನಾಥನ್ ಕೆಲಸ ಕೂಡ ಆಕರ್ಷಕ ಎನಿಸುವುದಿಲ್ಲ. ಲಾಂಗ್ ಶಾಟ್‌ಗಳು ಮತ್ತು ಪರಿಣಾಮಕಾರಿ ಎನಿಸದ ಸಂಕಲನ ಕೂಡ ಇದಕ್ಕೆ ಕಾರಣ ಎನ್ನಬಹುದು. ಪೊಲೀಸ್ ಅಧಿಕಾರಿಗಳಾಗಿ ರವಿ ಮಂಡ್ಯ ತಮ್ಮ ಎಂದಿನ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೋರ್ವ ಅಧಿಕಾರಿಯಾಗಿ ಅಜಿತ್ ಹನಮಕ್ಕನವರ್ ತಮ್ಮ ನ್ಯೂಸ್ ರೀಡಿಂಗ್ ಶೈಲಿಯಲ್ಲೇ ಕಥಾನಾಯಕನ ಬಗ್ಗೆ ವಿವರಿಸಿದ್ದಾರೆ. ನಿರಂಜನ್ ದೇಶಪಾಂಡೆ, ದತ್ತಾತ್ರೇಯ ಕುರಹಟ್ಟಿ ಮೊದಲಾದವರು ರಂಗಭೂಮಿ ಕಲಾವಿದರಾಗಿ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ಪಾಸಿಟಿವ್ ರೌಡಿಸಂ ಕೂಡ ತಪ್ಪುಎನ್ನುವ ಸಂದೇಶ ಇರುವುದರಿಂದ ಆ ಬಗ್ಗೆ ಪ್ರಶ್ನಿಸುವ ಅಗತ್ಯವಿಲ್ಲ. ನಾಯಕಿಯ ತಂದೆಯಾಗಿ ನಿಜ ತಂದೆ ರವಿ ಭಟ್ ಅವರೇ ನಟಿಸಿದ್ದು, ಮಗಳ ಹಾಡಿನ ರೆಕಾರ್ಡಿಂಗ್ ದೃಶ್ಯ ತುಂಬ ನೈಜವಾಗಿ ಮೂಡಿ ಬಂದಿದೆ. ಕನ್ನಡ ಮೇಷ್ಟ್ರಾಗಿ ಕೃಷ್ಣ ನಾಡಿಗ್ ಗಮನ ಸೆಳೆಯುತ್ತಾರೆ. ಸಣ್ಣ ಅವಧಿಯ ಚಿತ್ರವಾದರೂ ಚಿತ್ರಕತೆ ದೀರ್ಘವಾದಂತಿದೆ. ಕಾಮಿಡಿ ಪಂಚ್‌ಗಳು ಒಂದಷ್ಟು ವರ್ಕೌಟ್ ಆಗಿದ್ದರೆ ಇನ್ನೊಂದಷ್ಟು ಟೈಮಿಂಗ್ಸ್ ತಪ್ಪಿದ ಹಾಗಿದೆ. ಆದರೆ ಚಿತ್ರ ನೋಡಿದ ಬಳಿಕ ಒಂದು ವಿಷಯ ವೇದ್ಯವಾಗುತ್ತದೆ. ಸವರ್ಣದೀರ್ಘ ಸಂಧಿ ಚಿತ್ರವು ಕನ್ನಡಕ್ಕೆ ಒಬ್ಬ ಭರವಸೆಯ ನಿರ್ದೇಶಕನನ್ನು, ಆಕರ್ಷಕ ಕಂಠದ ಆರಡಿಯ ನಾಯಕನನ್ನು ನೀಡಿದೆ ಎನ್ನುವುದು ನಿಜ.
ತಾರಾಗಣ: ವೀರೇಂದ್ರ ಶೆಟ್ಟಿ, ಕೃಷ್ಣಾ
ನಿರ್ದೇಶನ: ವೀರೇಂದ್ರ ಶೆಟ್ಟಿ
ನಿರ್ಮಾಣ: ವೀರೇಂದ್ರ ಶೆಟ್ಟಿ ಮತ್ತು ಲುಷಿಂಗ್ಟನ್