ಮೂರು ಚಲನಚಿತ್ರಗಳ ಆದಾಯ ದೇಶದ ಆರ್ಥಿಕತೆಯನ್ನು ಸೂಚಿಸಬಲ್ಲದೆ!?
ಮಾನ್ಯ ಸಚಿವರು ದೇಶದಲ್ಲಿ ಮೂರು ಚಲನಚಿತ್ರಗಳು ಒಟ್ಟಾರೆಯಾಗಿ 120 ಕೋಟಿ ರೂ. ಗಳಿಸಿವೆ ಮತ್ತು ಆದ್ದರಿಂದ ಆರ್ಥಿಕ ಕುಸಿತವಿಲ್ಲ. ಉತ್ತಮ ಆರ್ಥಿಕತೆಯನ್ನು ಹೊಂದಿರುವ ದೇಶದಲ್ಲಿ 120 ಕೋಟಿ ರೂ. ಹೇಗೆ ಬರುತ್ತದೆ ಎಂದು ಕೇಳುತ್ತಾರೆ. ನಿರುದ್ಯೋಗ ದತ್ತಾಂಶದ ಬಗ್ಗೆ ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆಯ ವರದಿಯು ಸಹ ಸುಳ್ಳು ಎಂದು ಹೇಳುತ್ತಾ ದೇಶದಲ್ಲಿ ಎಲ್ಲರನ್ನೂ ಒಟ್ಟಿಗೆ ಮೂರ್ಖರನ್ನಾಗಿಸುತ್ತಿದ್ದಾರೆ.
ನಿಧಾನಗತಿಯ ಆರ್ಥಿಕತೆಯನ್ನು ತಳ್ಳಿಹಾಕಲು ಮೂರು ಬ್ಲಾಕ್‌ಬಸ್ಟರ್ ಚಲನಚಿತ್ರಗಳ ಗಳಿಕೆಯನ್ನು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ವಿಲಕ್ಷಣವಾಗಿ ಉಲ್ಲೇಖಿಸಿದ್ದಾರೆ. ಮಾನ್ಯ ಸಚಿವರು ದೇಶದಲ್ಲಿ ಮೂರು ಚಲನಚಿತ್ರಗಳು ಒಟ್ಟಾರೆಯಾಗಿ 120 ಕೋಟಿ ರೂ. ಗಳಿಸಿವೆ ಮತ್ತು ಆದ್ದರಿಂದ ಆರ್ಥಿಕ ಕುಸಿತವಿಲ್ಲ. ಉತ್ತಮ ಆರ್ಥಿಕತೆಯನ್ನು ಹೊಂದಿರುವ ದೇಶದಲ್ಲಿ 120 ಕೋಟಿ ರೂ. ಹೇಗೆ ಬರುತ್ತದೆ ಎಂದು ಕೇಳುತ್ತಾರೆ. ನಿರುದ್ಯೋಗ ದತ್ತಾಂಶದ ಬಗ್ಗೆ ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆಯ ವರದಿಯು ಸಹ ಸುಳ್ಳು ಎಂದು ಹೇಳುತ್ತಾ ದೇಶದಲ್ಲಿ ಎಲ್ಲರನ್ನು ಒಟ್ಟಿಗೆ ಮೂರ್ಖರನ್ನಾಗಿ ಸುತ್ತಿದ್ದಾರೆ.
ರಾಷ್ಟ್ರೀಯ ಹಣಕಾಸು ನಿಧಿಯ ಮುನ್ಸೂಚನಾ ವರದಿಗಿಂತ ಮೊದಲೇ ವಿಶ್ವ ಬ್ಯಾಂಕ್ ತನ್ನ ವರದಿಯನ್ನು ಬಿಡುಗಡೆ ಮಾಡಿದೆ. ವಿಶ್ವಬ್ಯಾಂಕಿನ ಪ್ರಕಾರ ಭಾರತದ ಅಭಿವೃದ್ಧಿ ದರವು ಸತತ ಎರಡನೇ ವರ್ಷವು ಸಹ ಕುಸಿದಿದೆ. 2017-18ನೇ ಆರ್ಥಿಕ ವರ್ಷದಲ್ಲಿ ಶೇಕಡಾ 7.2 ಇದ್ದ ಬೆಳವಣಿಗೆ ಈಗ ಕುಸಿಯುತ್ತಿದೆ. ಉತ್ಪಾದನೆ ಮತ್ತು ನಿರ್ಮಾಣ ಕ್ಷೇತ್ರಗಳಲ್ಲಿನ ಚಟುವಟಿಕೆಗಳು ನಿಧಾನವಾಗಿರುವುದರಿಂದ ಕೈಗಾರಿಕಾ ಉತ್ಪಾದನೆ ಬೆಳವಣಿಗೆ ಸಹ ಪ್ರತಿಶತ 6.1ಕ್ಕೆ ಕುಸಿದಿದೆ ಎನ್ನುತ್ತದೆ ವರದಿ. ಸೇವಾ ಕ್ಷೇತ್ರದ ಬೆಳವಣಿಗೆ ಸಹ ನಿಧಾನವಾಗಿ ಕುಸಿಯಲು ಆರಂಭಿಸಿದೆ. ನೋಟು ಅಮಾನೀಕರಣ, ಅವೈಜ್ಞಾನಿಕ ಸರಕು ಮತ್ತು ಸೇವಾ ತೆರಿಗೆ ಜಾರಿಯಲ್ಲಿ ಉಂಟಾದ ತೊಂದರೆ, ಗ್ರಾಮೀಣ ಆರ್ಥಿಕ ಸಮಸ್ಯೆಗಳು, ಏರುತ್ತಿರುವ ನಿರುದ್ಯೋಗ ಸಮಸ್ಯೆ, ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಆರ್ಥಿಕ ಕುಸಿತ ದೇಶದ ಆರ್ಥಿಕ ಪ್ರಗತಿಗೆ ಸಂಪೂರ್ಣವಾಗಿ ಹಿನ್ನಡೆಯಾಗಿದೆ ಎಂದು ವಿಶ್ವ ಬ್ಯಾಂಕ್ ತನ್ನ ವರದಿಯಲ್ಲಿ ಸ್ಪಷ್ಟವಾಗಿ ನಿರೂಪಿಸಿದೆ.
ಇತ್ತೀಚಿನ ವರದಿಗಳ ಪ್ರಕಾರ ದೇಶದ ಆರ್ಥಿಕ ಹಿನ್ನಡೆಯೂ ಮುಖ್ಯವಾಗಿ ಕೈಗಾರಿಕಾ ವಲಯಕ್ಕೂ ವ್ಯಾಪಿಸಿದ್ದು, ಕಳೆದ ತಿಂಗಳು ದೇಶದ ಕೈಗಾರಿಕಾ ಬೆಳವಣಿಗೆ ಪ್ರಮಾಣ ಕಳೆದ ಬಾರಿಗಿಂತ ಶೇ.1.1 ಕುಸಿತ ಕಂಡಿದೆ ಎಂದು ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ ತಿಳಿಸಿದೆ. ಕಳೆದ 2018ರ ಆಗಸ್ಟ್ ತಿಂಗಳಲ್ಲಿ ಶೇ. 4.8 ಇದ್ದ ಕೈಗಾರಿಕಾ ಉತ್ಪಾದನೆ ಸೂಚ್ಯಂಕ ಇಂದು ಶೇ. 4.3ಕ್ಕೆ ಕುಸಿದಿದೆ. ವರದಿಗಳ ಪ್ರಕಾರ ಸರಕಾರದ ಹಲವು ನಿರ್ಧಾರಗಳಿಂದ 25 ವಿವಿಧ ಕೈಗಾರಿಕಾ ವಲಯದಲ್ಲಿ ಉಂಟಾದ ಕುಂಠಿತ ಬೆಳವಣಿಗೆ ಇದಕ್ಕೆ ಮುಖ್ಯ ಕಾರಣವೆನ್ನಲಾಗುತ್ತಿದೆ. ಕಳೆದ ವರ್ಷದಲ್ಲಿ ಶೇ.7.62 ಇದ್ದ ವಿದ್ಯುತ್ ಉತ್ಪಾದನೆ ಇಂದು ಶೇ. 6.0 ಇಳಿಮುಖವಾಗಿದೆ ಎಂದು ವರದಿ ತಿಳಿಸಿದೆ.
ಅಲ್ಲದೆ ಗಣಿಗಾರಿಕೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಶೇಕಡಾ 0.1 ಉತ್ಪಾದನೆ ತಗ್ಗಿದ್ದು ಒಟ್ಟಾರೆ ಎಪ್ರಿಲ್‌ನಿಂದ ಆಗಸ್ಟ್ ವರೆಗೆ ದೇಶದ ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಶೇ. 5.2ರಿಂದ ಶೇ. 2.3 ಕುಸಿದಿದೆ ಎಂದು ದೇಶದ ಸಾಂಖಿಕ ಅನುಷ್ಠಾನ ಸಚಿವಾಲಯವೇ ತಿಳಿಸಿದೆ. ದೇಶದ ಆರ್ಥಿಕ ಸ್ಥಿತಿ ಸಮಸ್ಯೆಯಲ್ಲಿದೆ ಎನ್ನುವುದಕ್ಕೆ ಇನ್ನೇನು ಸಾಕ್ಷಿಬೇಕು. ಈ ವರದಿಯನ್ನು ವಿಶ್ವಬ್ಯಾಂಕ್ ಸಹ ಒಪ್ಪಿಕೊಂಡಿದ್ದು, ಈಗ ಭಾರತದ ಆರ್ಥಿಕ ಸ್ಥಿತಿ ವಿಶ್ವಕ್ಕೆ ಒಂದು ಪ್ರಶ್ನಾರ್ಹವಾಗಿದೆ. ಭಾರತದ ಅಭಿವೃದ್ಧಿ ದರ 2019-20ನೇ ಹಣಕಾಸು ವರ್ಷದಲ್ಲಿ ಶೇ. 6ಕ್ಕೆ ಕುಸಿಯಲಿದೆ ಎಂದು ಇತ್ತೀಚೆಗೆ ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ. ಕಳೆದ ವರ್ಷ ಇದು ಸುಮಾರು 6.9ರಲ್ಲಿ ಇತ್ತು ಎನ್ನುವುದು ಗಮನಾರ್ಹ. ಇದರ ಆಧಾರದ ಮೇಲೆ ವಿಶ್ವಬ್ಯಾಂಕ್ ಭಾರತದ ಆರ್ಥಿಕತೆ ಕ್ರಮೇಣ ಸುಧಾರಿಸಲಿದೆ ಎಂದು ಭವಿಷ್ಯ ನುಡಿದಿತ್ತು. ಆದರೆ ಈ ಭವಿಷ್ಯ ಒಂದು ವರ್ಷದಲ್ಲಿ ಸುಳ್ಳಾಗುವ ಎಲ್ಲ ಲಕ್ಷಣಗಳು ನಿಧಾನವಾಗಿ ದೇಶದಲ್ಲಿ ಗೋಚರಿಸುತ್ತಿದೆ ಎನ್ನುತ್ತಾರೆ ತಜ್ಞರು.
ಭಾರತದಲ್ಲಿ ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟು ಅಭೂತಪೂರ್ವ ವಾಗಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ಹೇಳಿದ್ದಾರೆ. ಕೈಗಾರಿಕಾ ನೀತಿಗಳು, ಸರಕು ಮತ್ತು ಸೇವಾ ತೆರಿಗೆ, ಬ್ಯಾಂಕ್‌ಗಳ ದಿವಾಳಿತನ ಮತ್ತು ದಿವಾಳಿತನ ಸಂಹಿತೆಯಂತಹ ಉಪಕ್ರಮಗಳ ಅನುಷ್ಠಾನದಲ್ಲಿನ ಅವೈಜ್ಞಾನಿಕ ಮತ್ತು ಮುಂದಾಲೋಚನೆ ಇಲ್ಲದ ನೀತಿಗಳಿಂದ ಇಂದು ಇಡೀ ಆರ್ಥಿಕ ಪರಿಸ್ಥಿತಿ ಬದಲಾಗಿದೆ ಎಂದು ಅವರು ಹೇಳುತ್ತಾರೆ. ಕಳೆದ 70 ವರ್ಷಗಳಲ್ಲಿ ಭಾರತವು ಮೊದಲ ಬಾರಿಗೆ ಇಂತಹ ಆರ್ಥಿಕ ಕುಸಿತವನ್ನು ಎದುರಿಸುತ್ತಿದೆ. ಸಾಲದಾತರು ಯಾವುದೇ ವ್ಯವಹಾರಗಳಿಗೆ ಧನಸಹಾಯವನ್ನು ನಿಡುತ್ತಿಲ್ಲ. ಇದರ ಪರಿಣಾಮವಾಗಿ ಮಾರುಕಟ್ಟೆಗೆ ಹಣದ ಹರಿವು ಇಂದು ಕಡಿಮೆಯಾಗುತ್ತಿದೆ. ಖಾಸಗಿ ವಲಯದವರಿಗೆ ಯಾರೂ ಸಾಲ ನೀಡಲು ಸಹ ಇಂದು ಸಿದ್ಧರಿಲ್ಲ. ದೇಶದ ಇಡೀ ಹಣಕಾಸು ವ್ಯವಸ್ಥೆಯು ಈ ರೀತಿಯ ಬೆದರಿಕೆಗೆ ಒಳಗಾಗಿರುವ ಪರಿಸ್ಥಿತಿಯನ್ನು ಇದುವರೆಗೆ ಯಾರೂ ಎದುರಿಸಲಿಲ್ಲ ಮತ್ತು ಊಹಿಸಿರಲಿಲ್ಲ. ನಿರಂತರ ಆರ್ಥಿಕ ಕುಸಿತವನ್ನು ನಿವಾರಿಸಲು ಸರಕಾರ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ.
ಹಿಂದೂಸ್ಥಾನ್ ಯೂನಿಲಿವರ್ಸ್ ಲಿಮಿಟೆಡ್ (ಎಚ್‌ಎಲ್), ಭಾರತದ ಅತಿದೊಡ್ಡ ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ (ಎಫ್‌ಎಂಸಿಜಿ) ಉತ್ಪಾದಕ ಕಂಪೆನಿ ಸೇರಿದಂತೆ ಇಂತಹ ಹತ್ತು ಹಲವಾರು ಇತರೆ ಕಂಪೆನಿಗಳು ಇಂದು ಬೆಳವಣಿಗೆಯ ದರದಲ್ಲಿ ಕುಸಿತವನ್ನು ಕಾಣುತ್ತಿದೆ. ಪ್ರಸಿದ್ಧ ಆಟೊಮೊಬೈಲ್ ವಲಯವು ಸಹ ಕಳೆದ ತ್ರೈಮಾಸಿಕದಲ್ಲಿ ಏಳು ಶೇಕಡಾ ಬೆಳವಣಿಗೆಯ ದರವನ್ನು ವರದಿ ಮಾಡಿತ್ತು. ಆಟೊಮೊಬೈಲ್ ಉದ್ಯಮವು ಸುಮಾರು 37 ಮಿಲಿಯನ್ ಜನರನ್ನು ನೇಮಿಸಿಕೊಂಡಿದ್ದು ದೇಶದ ಜಿಡಿಪಿಗೆ ಏಳು ಪ್ರತಿಶತದಷ್ಟು ಕೊಡುಗೆ ನೀಡುತ್ತದೆ. ಆದರೆ ಈ ಬಾರಿ ಆರ್ಥಿಕ ಕುಸಿತದಿಂದ ಐದು ಲಕ್ಷ ಪ್ರಯಾಣಿಕ ವಾಹನಗಳು ಮತ್ತು 30 ಲಕ್ಷ ದ್ವಿಚಕ್ರ ವಾಹನಗಳು ಮಾರಾಟವಾಗದೆ ಉಳಿದಿವೆ.
ಕಳೆದ 8 ವರ್ಷಗಳಲ್ಲಿ ಆಟೊಮೊಬೈಲ್ ಕ್ಷೇತ್ರ ಕನಿಷ್ಠ ಮಟ್ಟವನ್ನು ಮುಟ್ಟಿದ್ದು ಉತ್ಪಾದನೆಯನ್ನೇ ಸ್ವಲ್ಪದಿನ ಸ್ಥಗಿತಗೊಳಿಸಬೇಕಾಯಿತು. ಭಾರತದ ಅತಿದೊಡ್ಡ ವಾಹನ ತಯಾರಕರಾದ ಮಾರುತಿಯನ್ನು ಸಹ ಸಿಬ್ಬಂದಿಯನ್ನು ಕಡಿತಗೊಳಿಸುವಂತೆ ಕೋರಲಾಯಿತು. ಅದರ ಷೇರು ಬೆಲೆಗಳು ಕಳೆದ ಶೇ. 26ರಷ್ಟು ಕುಸಿತ ಕಂಡಿತ್ತು. ಇದು ಇತರ ವಲಯಗಳ ಮೇಲೆ ನಿಧಾನವಾಗಿ ಪರಿಣಾಮ ಬೀರಲು ಆರಂಭಿಸಿದೆ. ಇತರ ದೊಡ್ಡ ಕಂಪೆನಿಗಳಾದ ಐಟಿಸಿ ಮತ್ತು ಗೋದ್ರೆಜ್ ಸೇರಿದಂತೆ ಇನ್ನಿತರ ದಿಗ್ಗಜ ಕಂಪೆನಿಗಳ ಬೆಳವಣಿಗೆಯಲ್ಲಿ ಇಂದು ತೀವ್ರವಾದ ಕುಸಿತವನ್ನು ಕಂಡಿವೆ.
ದೇಶೀಯ ಮಾರುಕಟ್ಟೆ ಬಿಕ್ಕಟ್ಟು, ಪ್ರತಿಕೂಲವಾದ ಜಾಗತಿಕ ಹಣಕಾಸು ಏರಿಳಿಕೆ, ಸುಂಕ ರಚನೆ, ಬೇಡಿಕೆ ಇಲ್ಲದಿರುವುದು, ಯುದ್ದ ಭೀತಿ ಮತ್ತು ಹೆಚ್ಚುತ್ತಿರುವ ಹಣದುಬ್ಬರ ಇವುಗಳಿಂದ ಶೀಘ್ರದಲ್ಲೇ ಭಾರತದ ಜನರು ಇನ್ನು ಹೆಚ್ಚಿನ ತೊಂದರೆಗಳನ್ನು ಅನುಭವಿಸಬೇಕಾಗಬಹುದು ಎನ್ನತ್ತಾರೆ ತಜ್ಞರು. ಮುಖ್ಯವಾಗಿ ಕಳೆದ ಒಂದು ವರ್ಷದ ಅವಧಿಯಲ್ಲಿ ದೇಶದ ರಫ್ತು ಪ್ರಮಾಣ ಶೇ.10ರಷ್ಟು ಕುಸಿದಿದೆ. ಇದು ಕಳೆದ ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ. 3.4ಕ್ಕೆ ತೀವ್ರವಾಗಿ ಕುಸಿತವಾಗಿದೆ ಎನ್ನುತ್ತವೆ ವರದಿಗಳು. ಅಲ್ಲದೆ ಯುಎಸ್-ಚೀನಾ ವ್ಯಾಪಾರ ಯುದ್ಧವು ಈಗಾಗಲೇ ಉಲ್ಬಣಗೊಳ್ಳುತ್ತಿರುವ ಬೆಂಕಿಗೆ ಇಂಧನವನ್ನು ಸೇರಿಸುತ್ತಿದೆ. ಬೆಳವಣಿಗೆ ಕುಂಠಿತವಾಗುತ್ತಿರುವಂತೆ ದೇಶದ ಜಿಡಿಪಿಯು ಸಹ ಮಂದಗತಿಯಲ್ಲಿ ಸಾಗುತ್ತಿದೆ.
ಯಾವುದೇ ಆರ್ಥಿಕತೆಯಲ್ಲಿ ಸುಸ್ಥಿರ ಬೆಳವಣಿಗೆಗೆ ಮುಖ್ಯ ಆಧಾರವಾಗಿರುವ ಖಾಸಗಿ ವಲಯದಲ್ಲಿನ ಹೂಡಿಕೆ ಇಂದು 15 ವರ್ಷಗಳ ಕನಿಷ್ಠ ಮಟ್ಟದಲ್ಲಿದೆ ಎನ್ನಲಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಖಾಸಗಿ ವಲಯದಿಂದ ಇಂದು ಹೊಸ ಯೋಜನೆಗಳಲ್ಲಿ ಯಾವುದೇ ಹೂಡಿಕೆ ಇಲ್ಲ. ಹೊಸ ನೇಮಕಾತಿಯು ಇಲ್ಲ. ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂದರೆ ಅನೇಕ ಭಾರತೀಯ ಕೈಗಾರಿಕೋದ್ಯಮಿಗಳು ಆರ್ಥಿಕತೆಯ ಸ್ಥಿತಿ, ವ್ಯವಹಾರಗಳ ಕಡೆಗೆ ಸರಕಾರದ ಅಸಹಾಯಕತೆ ಮತ್ತು ತೆರಿಗೆ ಅಧಿಕಾರಿಗಳ ಕಿರುಕುಳದ ಬಗ್ಗೆ ಜೋರಾಗಿ ದೂರು ನೀಡಿದ್ದಾರೆ.
ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಭಾರತದ ನಿಧಾನಗತಿಯ ಆರ್ಥಿಕ ಕುಸಿತವು ಅಥವಾ ಆಶ್ಚರ್ಯಕರವಲ್ಲ. ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಯು ಭಾರತದ ಆರ್ಥಿಕ ಬೆಳವಣಿಗೆಯ ಬಗ್ಗೆ ಕಳೆದ ಮೂರು ವರ್ಷಗಳಿಂದ ಕೆಲವೊಂದು ಮುನ್ಸೂಚನೆಗಳನ್ನು ನೀಡುತ್ತಿದ್ದುದನ್ನು ತಜ್ಞರು ಗಮನಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತದ ಹಣಕಾಸು ವಲಯದಲ್ಲಿ ಭಾರೀ ಸದ್ದು ಮಾಡುತ್ತಿವೆ. ಬ್ಯಾಂಕುಗಳಲ್ಲಿ ಕೊಳೆಯುತ್ತಿರುವ ಕೋಟ್ಯಾಂತರ ರೂಪಾಯಿಗಳ ನಾನ್ ಪರ್ಫಾರ್ಮಿಂಗ್ ಅಸೆಟ್ ಮತ್ತು ಮಲ್ಯರಂತಹ ಉದ್ಯಮಿಗಳು ಬ್ಯಾಂಕುಗಳಿಗೆ ನೀಡಬೇಕಾದ ಹಣಗಳು ಇವೆಲ್ಲವೂ ಸೇರಿ ಭಾರತದ ಆರ್ಥಿಕ ಸ್ಥಿತಿಯನ್ನು ಅಲುಗಾಡಿಸುತ್ತಿದೆ.
ಇದರೊಂದಿಗೆ ಮಧ್ಯಪ್ರಾಚ್ಯ ದೇಶಗಳಲ್ಲಿ ಉಂಟಾಗುತ್ತಿರುವ ಸಮಸ್ಯೆ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡುತ್ತಿದೆ. ಅಂತರ್‌ರಾಷ್ಟ್ರೀಯ ಹಣಕಾಸು ನಿಧಿಯ ಇತ್ತೀಚಿನ ಕೆಲ ವರದಿಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕ್ರಮೇಣ ಕಡಿಮೆಯಾಗುತ್ತಿರುವುದನ್ನು ಉಲ್ಲೇಖಿಸಲಾಗಿದೆ. ಭಾರತದ ಮಾರುಕಟ್ಟೆಯನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡಲು ಸರಕಾರವು ದಿನನಿತ್ಯ ಕೊಡುತ್ತಿರುವ ಹೇಳಿಕೆಗಳು ಆರ್ಥಿಕ ಕುಸಿತವನ್ನು ತಡೆಯಲು ಸಾಧ್ಯವಾಗುತ್ತಿಲ್ಲ. 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಬಾಯಲ್ಲಿ ಹೇಳಿದಷ್ಟು ಸುಲಭವಲ್ಲ. ಈ ಮಧ್ಯೆ ಭಾರತದ ಹಸಿವಿನ ಸೂಚ್ಯಂಕ ಸಹ ಪ್ರಕಟಿಸಲಾಗಿದ್ದು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಲ್ಲಿ ಹಸಿದವರ ಸಂಖ್ಯೆ ಹೆಚ್ಚೆಂದು ಹೇಳುತ್ತದೆ ಆ ವರದಿ.