ಬ್ರಹ್ಮಾವರ ಕೃಷಿಮೇಳ ಸಮಾಪ್ತಿ: ಹರಿದು ಬಂದ ಜನಸಾಗರ
ಬ್ರಹ್ಮಾವರ, ಅ.20: ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾ ಲಯ, ಬ್ರಹ್ಮಾವರ ಮತ್ತು ಉಳ್ಳಾಲ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಬ್ರಹ್ಮಾವರ ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ ಡಿಪ್ಲೋಮಾ ಕೃಷಿ ಮಹಾವಿದ್ಯಾಲಯ, ಕೊಚ್ಚಿನ್ ಗೇರು ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯ, ಉಡುಪಿ ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶು ಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಂಗಳೂರು ಹಾಲು ಉತ್ಪಾದಕರ ಒಕ್ಕೂಟ, ಜಿಲ್ಲಾ ಕೃಷಿಕ ಸಮಾಜ ಉಡುಪಿ ಮತ್ತು ಮಂಗಳೂರು ಇವುಗಳ ಸಹಯೋಗದಲ್ಲಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾದ ಎರಡು ದಿನಗಳ ಕೃಷಿ ವೆುೀಳ ರವಿವಾರ ಸಮಾಪನಗೊಂಡಿತು.
ಕೃಷಿಮೇಳಕ್ಕೆ ಜನ ಸಾಗರವೇ ಹರಿದು ಬಂದಿದ್ದು, ಮೊದಲ ದಿನವಾದ ಶನಿವಾರ ಸುಮಾರು 12ರಿಂದ 13 ಸಾವಿರ ಮಂದಿ ಸಾರ್ವಜನಿಕರು ಭೇಟಿ ನೀಡಿದರೆ, ಎರಡನೆ ದಿನವಾದ ಇಂದು 25000ಕ್ಕೂ ಅಧಿಕ ಮಂದಿ ಆಗಮಿಸಿ ಕೃಷಿಮೇಳವನ್ನು ಯಶಸ್ವಿಗೊಳಿಸಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕೃಷಿಮೇಳಕ್ಕೆ ಆಗಮಿಸಿದ್ದಾರೆ ಎಂಬುದು ಸಂಘ ಟಕರ ಅಭಿಪ್ರಾಯ.
ಈ ಬಾರಿಯ ಕೃಷಿಮೇಳದಲ್ಲಿ 190 ಮಳಿಗೆಗಳಿದ್ದು, ಇದರಲ್ಲಿ ಕೃಷಿಗೆ ಸಂಬಂಧಿಸಿದ 130 ಹಾಗೂ ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆ ಗಳ 10 ಮಗಳಿಗೆಗಳಿದ್ದವು. ಎರಡನೆ ದಿನವಾದ ಇಂದು ರೈತರಿಗೆ ಹೈಟೆಕ್ ತೋಟಗಾರಿಕೆ ಹಾಗೂ ಲಾಭದಾಯಕ ಸಮಗ್ರ ಕೃಷಿ ಎಂಬ ವಿಷಯದಲ್ಲಿ ವಿಚಾರಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಕೊನೆಯಲ್ಲಿ ಕೃಷಿ ವಿಜ್ಞಾನಿಗಳ ಜೊತೆ ರೈತರ ಚರ್ಚಾಗೋಷ್ಠಿ,ಸಂವಾದ ಕಾರ್ಯಕ್ರಮ ನಡೆಯಿತು.