ಹಿರಿಯಡ್ಕ ಮೈದಾನದಲ್ಲಿ ಮರಳು ಸಂಗ್ರಹ ಯಾರ್ಡ್ ನಿರ್ಮಾಣಕ್ಕೆ ವಿರೋಧ: ಡಿಸಿಗೆ ಮನವಿ
ಉಡುಪಿ, ಅ.22: ಹಿರಿಯಡ್ಕ ಸಾರ್ವಜನಿಕ ಗಾಂಧಿ ಮೈದಾನದಲ್ಲಿ ಮರಳು ಶೇಖರಿಸುವ ಯಾರ್ಡ್ ನಿರ್ಮಿಸುತ್ತಿರುವುದನ್ನು ಕೈಬಿಡುವಂತೆ ಆಗ್ರಹಿಸಿ ಹಿರಿಯಡ್ಕ ಗ್ರಾಮಸ್ಥರ ನಿಯೋಗವೊಂದು ಸೋಮವಾರ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರಿಗೆ ಮನವಿ ಸಲ್ಲಿಸಿದೆ.
ಬೊಮ್ಮರಬೆಟ್ಟು ಅಂಜಾರು ಗ್ರಾಪಂ ವ್ಯಾಪ್ತಿಯ ಮುಖ್ಯ ಪೇಟೆಯಾಗಿರುವ ಹಿರಿಯಡಕದಲ್ಲಿ ಸುಮಾರು 1 ಎಕರೆ ಪ್ರದೇಶದಲ್ಲಿರುವ ಮಿಲಿಟರಿ ಕ್ಯಾಂಪಿಂಗ್ ಗ್ರೌಂಡ್ ಅಥವಾ ಗಾಂಧಿ ಮೈದಾನ ಎಂದು ಕರೆಯಲ್ಪಡುವ ಸಾರ್ವಜನಿಕ ಮೈದಾನ ನೂರಾರು ವರ್ಷಗಳಿಂದ ಉಪಯೋಗ ದಲ್ಲಿದ್ದು, ಇದು ಸಾರ್ವಜನಿಕ ಕ್ರೀಡಾ ಆಟೋಟಗಳಿಗೆ, ಸಭೆ ಸಮಾರಂಭಗಳಿಗೆ, ಶಾಲಾ ವಿದ್ಯಾರ್ಥಿಗಳಿಗೆ, ಸಂಘ ಸಂಸ್ಥೆಗಳ ಸಾರ್ವಜನಿಕ ಕಾರ್ಯಕ್ರಮಗಳಿಗೆ ಬಳಕೆ ಮಾಡಲಾಗುತ್ತಿದೆ.
ಈ ಮೈದಾನವನ್ನು ಸಾರ್ವಜನಿಕರ ಸಹಕಾರದಿಂದ ಹಿರಿಯಡಕ ನವೋದಯ ಫ್ರೆಂಡ್ಸ್ ನೇತೃತ್ವದಲ್ಲಿ ಸಮತಟ್ಟುಗೊಳಿಸಲಾಗಿದೆ. ಇದು ರಾಜ್ಯ, ಜಿಲ್ಲಾ ಮಟ್ಟದ ಹಗಲು-ರಾತ್ರಿ ಕ್ರಿಕೆಟ್, ಫುಟ್ಬಾಲ್, ವಾಲಿಬಾಲ್ ಪಂದ್ಯಾಟಗಳು, ಯಕ್ಷಗಾನ, ಇತರ ಹಲವಾರು ಸಮಾರಂಭಗಳು ನಿರಂತರ ನಡೆಯುತ್ತಿರುವ ಏಕೈಕ ಸ್ಥಳ ಇದಾಗಿದೆ. ಹಿರಿಯ ನಾಗರಿಕರಿಗೆ ವಾಕಿಂಗ್ಗೆ ಕೂಡ ಇದು ಸ್ಥಳವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈಗ ಈ ಸ್ಥಳದಲ್ಲಿ ಸುತ್ತಲೂ ಬೇಲಿ ಹಾಕಿ ಮರಳು ಸಂಗ್ರಹಿಸಿ ವೇ-ಬ್ರಿಡ್ಜ್ ನಿರ್ಮಿಸಲು ಮುಂದಾಗಿದ್ದು, ಬಜೆ ಡ್ಯಾಮ್ನಿಂದ ತೆಗೆಯುವ ಮರಳನನು ದಾಸ್ತಾನು ಇರಿಸಲು ಸಿದ್ದತೆಯನ್ನು ಮಾಡಲಾಗುತ್ತಿದೆ. ಇದು ತೀರಾ ವಿಷಾಧನೀಯವಾಗಿದ್ದು, ಕೂಡಲೇ ಪರಿಸರದ ಮಕ್ಕಳ, ಯುವ ಜನಾಂಗದ ಮುಂದಿನ ಭವಿಷ್ಯಕ್ಕಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ಇದನ್ನು ತೆರವು ಗೊಳಿಸಬೇಕು ಎಂದು ನಿಯೋಗ ಒತ್ತಾಯಿಸಿದೆ.