ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ನಾಳೆ ಜಿಲ್ಲಾಧಿಕಾರಿಗಳಿಂದ ಅಧಿಸೂಚನೆ
ಬೆಂಗಳೂರು, ಅ.23: ಮುಂದಿನ ತಿಂಗಳಿನಲ್ಲಿ ನಡೆಯಲಿರುವ 14 ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ನಾಳೆ(ಅ.24) ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಲಿಸಲಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ. 2 ಮಹಾನಗರ ಪಾಲಿಕೆ, 6 ನಗರಸಭೆ, 3 ಪುರಸಭೆ, 3 ಪಟ್ಟಣಪಂಚಾಯತ್ ಸೇರಿದಂತೆ 4 ಕ್ಷೇತ್ರಗಳ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ.
ನಾಳೆಯಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಅ.31 ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿರುತ್ತದೆ. ನ.2ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.4 ರಂದು ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿದೆ. ನ.12 ರಂದು ಚುನಾವಣೆ ನಡೆಯಲಿದ್ದು, ನ.13 ಕ್ಕೆ ಅಗತ್ಯವಿದ್ದ ಕಡೆ ಮರು ಮತದಾನ ನಡೆದು, ನ.14 ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.
ವೆಚ್ಚ ಮಿತಿ ಹಾಗೂ ವೀಕ್ಷಕರು: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸೀಮಿತ ವೆಚ್ಚ ಮಿತಿ ನಿಗದಿ ಮಾಡಲಾಗಿದೆ. ಮಹಾನಗರ ಪಾಲಿಕೆಗೆ 3 ಲಕ್ಷ ರೂ., ನಗರಸಭೆಗೆ 2 ಲಕ್ಷ ರೂ., ಪುರಸಭೆಗೆ 1.50 ಲಕ್ಷ ರೂ., ಪಟ್ಟಣ ಪಂಚಾಯತ್ಗೆ 1 ಲಕ್ಷ ರೂ. ನಿಗದಿ ಮಾಡಲಾಗಿದೆ.
ಚುನಾವಣಾ ಆಯೋಗ ನಿಗದಿ ಮಾಡಿರುವ ಮಿತಿಯಷ್ಟೇ ಹಣ ಖರ್ಚು ಮಾಡಬೇಕಿದೆ. ಹಾಗೂ ಚುನಾವಣೆಯಲ್ಲಿ ನಡೆಯುವ ಅಕ್ರಮ ತಡೆಯುವ ಸಲುವಾಗಿ ಆಯೋಗವು ಸಾಮಾನ್ಯ ವೀಕ್ಷಕರು ಹಾಗೂ ಚುನಾವಣಾ ವೆಚ್ಚ ವೀಕ್ಷಕರನ್ನು ನೇಮಕ ಮಾಡಲಾಗಿದೆ.
ಸ್ವತಂತ್ರವಾಗಿ ಸ್ಪರ್ಧೆ: ಈಗಾಗಲೇ ಜೆಡಿಎಸ್ನ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಉಳಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿಯೂ ಸ್ವತಂತ್ರವಾಗಿ ತಮ್ಮ ಪರ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತಯಾರಿ ನಡೆಸಿವೆ.