ಬೆಂಗಳೂರು: ನಾಲ್ಕು ದಿನಗಳ ಕೃಷಿ ಮೇಳಕ್ಕೆ ಅದ್ದೂರಿ ಚಾಲನೆ
ಬೆಂಗಳೂರು, ಅ.24: ಗುರುವಾರದಿಂದ ನಾಲ್ಕು ದಿನಗಳ ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ)ದಲ್ಲಿ ಹಮ್ಮಿಕೊಂಡಿರುವ ಕೃಷಿ ಮೇಳಕ್ಕೆ ಅದ್ದೂರಿ ಚಾಲನೆ ದೊರಕಿದ್ದು, ರೈತರು, ವಿದ್ಯಾರ್ಥಿಗಳು, ಯುವಜನರ ಜನಸಾಗರವೇ ಹರಿದು ಬರುತ್ತಿದೆ.
ಕೃಷಿ ಮೇಳದಲ್ಲಿ ಸುಮಾರು 700 ಕ್ಕೂ ಅಧಿಕ ಕೃಷಿಗೆ ಪೂರಕವಾದ ಮಳಿಗೆಗಳನ್ನು ಸ್ಥಾಪನೆ ಮಾಡಲಾಗಿತ್ತು. ರಾಜ್ಯ ಕೃಷಿ ವಿವಿಗಳು, ತೋಟಗಾರಿಕೆ, ಅರಣ್ಯ ಇಲಾಖೆ, ಕೃಷಿ ಮಾರುಕಟ್ಟೆ ಮಂಡಳಿ, ಕರ್ನಾಟಕ ಹಾಲು ಮಹಾಮಂಡಳಿ, ಕೃಷಿ ಪರಿಕರಗಳ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಸೇರಿದಂತೆ ಹಲವರು ಮಳಿಗೆಗಳನ್ನು ಸ್ಥಾಪಿಸಿದ್ದರು.
ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿದ್ದ ರೈತರು, ವಿದ್ಯಾರ್ಥಿಗಳು ಎಲ್ಲ ಮಳಿಗೆಗಳಿಗೆ ಭೇಟಿ ಮಾಡಿ ವಿವರಗಳನ್ನು ಪಡೆದುಕೊಳ್ಳುತ್ತಿದ್ದರು. ಕೃಷಿಕರು ಇಲ್ಲಿನ ಪಶು ಸಂಗೋಪನೆ ವಿಭಾಗದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಿಕ್ಕಿರಿದು ಸೇರಿ ಮಾಹಿತಿ ಪಡೆಯುತ್ತಿದ್ದರೆ, ವಿದ್ಯಾರ್ಥಿಗಳು ಹೊಸ ಸಂಶೋಧನೆ, ಹೊಸ ತಳಿಗಳ ಬಗ್ಗೆ ವಿವರಗಳನ್ನು ಕೇಳುತ್ತಿದ್ದರು.
ಪ್ರವೇಶ ದ್ವಾರದಿಂದ ಆರಂಭಗೊಂಡು ಕೊನೆಯವರೆಗೂ ಜನಸಂದಣಿಯಿಂದಲೇ ಕೂಡಿತ್ತು. ಮುಖ್ಯದ್ವಾರದ ಪಕ್ಕದಲ್ಲಿಯೇ ಮಳಿಗೆ ತೆರೆದಿದ್ದ ಸಾವಯವ ಕೃಷಿ ಪದ್ಧತಿಗಳು, ಕೃಷಿ ಯಂತ್ರೋಪಕರಣಗಳ ಮಳಿಗೆಗಳಲ್ಲಿ ಜನಸಂದಣಿಯಿಂದ ಕೂಡಿತ್ತು. ಪಕ್ಕದಲ್ಲಿಯೇ ನೈಸರ್ಗಿಕ ಕೃಷಿ ಪದ್ಧತಿಗಳನ್ನು ಪರಿಚಯಿಸುತ್ತಿದ್ದ ಮಳಿಗೆಯಲ್ಲಿ ಸಿರಿಧಾನ್ಯಗಳು, ಸಾವಯವ ವಿಧಾನದಲ್ಲಿ ಬೆಳೆದಿದ್ದ ಉತ್ಪನ್ನಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡಲಾಗುತ್ತಿತ್ತು. ಹಣಕಾಸು ಮತ್ತು ಕೃಷಿ ಉದ್ಯಮದ ಮಳಿಗೆಯಲ್ಲಿ ಕೃಷಿಗೆ ಸಂಬಂಧಿಸಿದ ಸಾಲಗಳು, ಬಡ್ಡಿ ಹಾಗೂ ಮತ್ತಿತರೆ ಯೋಜನೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಗುತ್ತಿತ್ತು.
ಮೇಳದ ಆರಂಭದಲ್ಲಿಯೇ ಕೃಷಿಗೆ ಪೂರಕವಾದ ಆಧುನಿಕ ಉಪಕರಣ ಪ್ರದರ್ಶನವಿದ್ದ ಮಳಿಗೆಯಲ್ಲಿ ಕಳೆ ಕೀಳುವ, ಬೀಜ ಹಾಕುವ ಯಂತ್ರಗಳು ಸೇರಿದಂತೆ ವಿವಿಧ ಬಹುಪಯೋಗಿ ಯಂತ್ರಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ರೈತರು, ಕೃಷಿಕಾರರು ಹೆಚ್ಚು ಇಲ್ಲಿಗೆ ಭೇಟಿ ನೀಡಿ ವಿವರವಾದ ಮಾಹಿತಿ ಪಡೆಯುತ್ತಿದ್ದರು. ಪಕ್ಕದಲ್ಲಿದ್ದ ಮಳಿಗೆಯಲ್ಲಿ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ವಿವಿಧ ತಳಿಯ ಮೀನುಗಳನ್ನು ಪ್ರದರ್ಶಿಸಿದ್ದು, ಅದರಲ್ಲಿ ನೂತನವಾಗಿ ಮೀನು ತಳಿಗಳನ್ನು ಆವಿಷ್ಕಾರ ಮಾಡಲಾಗಿದೆ. ಆದರೆ, ರೈತರ ಬೇಡಿಕೆಗೆ ಅನುಗುಣವಾಗಿ ಮೀನುಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ವಿವಿ ಡಾ.ಹರ್ಷ ಹೇಳಿದರು.
ವಿಶೇಷ ಆಕರ್ಷಣೆ: ಮೇಳದಲ್ಲಿ ಇತ್ತೀಚಿಗೆ ಬಿಡುಗಡೆಯಾದ ವಿವಿಧ ತಳಿಗಳ ಪ್ರಾತ್ಯಕ್ಷಿಕೆ, ಸುಧಾರಿತ ಬೇಸಾಯ ಪದ್ಧತಿಗಳ ತಾಕುಗಳು, ಖುಷ್ಕಿ ಬೇಸಾಯಕ್ಕೆ ಸೂಕ್ತವಾದ ಬೆಳೆ ಪದ್ದತಿಗಳು, ತೋಟಗಾರಿಕಾ ಬೆಳೆಗಳು, ಸಮಗ್ರ ಬೇಸಾಯ ಪದ್ಧತಿ ಪ್ರಾತ್ಯಕ್ಷಿಕೆ, ಸಿರಿಧಾನ್ಯಗಳು ಹಾಗೂ ಮಹತ್ವದ ಔಷಧೀಯ ಮತ್ತು ಸುಗಂಧಯುಕ್ತ ಸಸ್ಯಗಳು, ಸಮಗ್ರ ಪೋಷಕಾಂಶಗಳು ಮತ್ತು ಪೀಡೆ ನಿರ್ವಹಣೆ ಸೇರಿದಂತೆ ವಿವಿಧ ರೀತಿಯ ಪ್ರದರ್ಶನಗಳನ್ನು ತೆರೆದಿಡಲಾಗಿತ್ತು. ಕೃಷಿ ಮೇಳದಲ್ಲಿ ಪಾಲ್ಗೊಳ್ಳಲು ಜಿಕೆವಿಕೆ ಮುಖ್ಯದ್ವಾರದಿಂದ ಮೇಳದ ಮುಖ್ಯದ್ವಾರದವರೆಗೂ ಉಚಿತವಾದ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿತ್ತು. ಅಲ್ಲದೆ, ಜಿಕೆವಿಕೆಯಿಂದ ನೂತನವಾಗಿ ಸಂಶೋಧನೆ ಮಾಡಿರುವ ತಳಿಗಳ ಪ್ರಾತ್ಯಕ್ಷಿಕೆಯನ್ನು ತೋರಿಸುವ ಸಲುವಾಗಿ ರೈತರಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು. ಮೇಳದಲ್ಲಿ ಯಾವುದೇ ಅಡೆ ತಡೆಗಳು, ಅನಾಹುತಗಳು ಸಂಭವಿಸಿದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ವಿಶೇಷ ಆಕರ್ಷಣೆ ಗಿರ್ ಹೋರಿ
ದೇಶದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿರುವ ಗುಜರಾತ್ ಮೂಲದ ದೇಸಿ ತಳಿ ಗಿರ್ ಹೋರಿ ಹೆಚ್ಚು ಜನರ ಆಕರ್ಷಣೆ ಕೇಂದ್ರವಾಗಿತ್ತು. ಬರೋಬ್ಬರಿ 1200 ಕೆ.ಜಿ. ತೂಕವಿರುವ ಈ ಹೋರಿಯನ್ನು ಅದರ ಮಾಲಕ ಮಾರಾಟ ಮಾಡಲು ಹಿಂಜರಿಯುತ್ತಾರೆ. ಆದರೆ, ಇದರ ಬೆಲೆ 24 ಲಕ್ಷಕ್ಕೂ ಅಧಿಕವಾಗಿದೆ ಎಂದು ತಿಳಿಸಿದ್ದಾರೆ.
50 ರೂ.ಗೆ ಊಟ
ಕೃಷಿ ಮೇಳದಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ಜಿಕೆವಿಕೆ ವತಿಯಿಂದಲೇ ಮೇಳಕ್ಕೆ ಬರುವವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ 50 ರೂ.ಗೆ ಮುದ್ದೆ, ಕಾಳು ಸಾರು, ಅನ್ನ ಸೇರಿದಂತೆ ಮತ್ತಿತರೆ ಪದಾರ್ಥಗಳನ್ನು ಒಳಗೊಂಡ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ, ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆಯನ್ನು ಅಗತ್ಯ ಪ್ರಮಾಣದಲ್ಲಿ ಮಾಡಲಾಗಿತ್ತು.