ಹುಲಿಯ ನೆತ್ತಿಗೆ ನೆರಳು: ಬೆಂಕಿ ಬಿದ್ದ ಮನೆಗೆ ನೀರ ಚೆಲ್ಲಿ....
ಈ ಹೊತ್ತಿನ ಹೊತ್ತಿಗೆ
‘‘ನಾನು
ಒಂದು ಬೀಜವಾಗಲು ಬಯಸುತ್ತೇನೆ
ಕೆಳಗೆ ಬಿದ್ದರೂ
ಕಳೆದು ಹೋಗುವುದಿಲ್ಲ
ಒಡೆದು ಚಿಗುರುತ್ತೇನೆ
ನೆಲದಿಂದೆದ್ದು ಮೇಲೆ ಬರುತ್ತೇನೆ
ಹತ್ತಾರು ಬೀಜಗಳಿಗೆ
ಜನ್ಮ ನೀಡುತ್ತೇನೆ....’’
ಹೀಗೆ ವಿನಯ ವಿಧೇಯತೆಯ ಮಣ್ಣ ಸೊಗಡಿನಿಂದ ಬಿರಿದ ಬೀಜಗಳ ಮೊಳಕೆಗಳು ನದೀಮ ಸನದಿಯವರ ಪದ್ಯಗಳು. ‘ಬೆಂಕಿಬಿದ್ದ ಮನೆಯ ಪೇದೆ/ಜೀವ ಭಯದ ಹಂಗು ತೊರೆದು/ಗಲಭೆಕೋರನ ಮನೆಯ/ಬೆಂಕಿ ನಂದಿಸುತ್ತಿದ್ದ’
‘ಏಸು-ಪೈಗಂಬರ, ಈಶ-ದಿಗಂಬರ/ ನಮಗಿರಲಿ ಸಾವಿರ ಹಬ್ಬ/ಅರಿತರೆ ಒಳಿತು ಜಗಕೆ ಇರುವನು/ ಒಬ್ಬನೇ ಚಂದ್ರ, ಒಬ್ಬನೇ ಇಂದ್ರ’....ರಹಮತ್ ತರೀಕೆರೆ ಹೇಳುವಂತೆ ಇವೆಲ್ಲವೂ ‘ನಮ್ಮ ಕಾಲದ ಆರೋಗ್ಯವಂತ ಮನಸ್ಸೊಂದು ಲೋಕಕ್ಕೆ ಮಿಡಿದ ಸಾಕ್ಷದಂತಿರುವ ಕವನಗಳು. ದ್ವೇಷದ ಗೋಡೆಗಳನ್ನು ಕಟ್ಟುವ ಸಮಾಜದೊಳಗೆ ನಿಂತು ಜಾತಿ ಮತಗಳಾಚೆಗಿನ ದೇವರು ಧರ್ಮಗಳಾಚೆ ಮನುಷ್ಯ ಪ್ರೀತಿಯನ್ನು ಹಾರೈಸುವ ಕವನಗಳು. ರಹಮತ್ ತರೀಕೆರೆ ತಮ್ಮ ಬೆನ್ನುಡಿಯಲ್ಲಿ ಹೀಗೆ ಹೇಳುತ್ತಾರೆ: ‘‘...ಆಳವಾದ ಶ್ರದ್ಧೆಯಿಂದ ವ್ಯಕ್ತವಾಗುವ ಖಾಸಗಿ ಭಾವವು ನಾಡಿನ ರಾಜಕೀಯ ಕಾವ್ಯವೂ ಆಗಬಲ್ಲದು. ಸ್ವಂತಿಕೆಯು ಸಾರ್ವಜನಿಕವೂ ಆಗಬಲ್ಲದು ಎಂಬಂತೆ ಇಲ್ಲಿನ ಪ್ರೇಮ ಪದ್ಯಗಳಿವೆ’’
ಇಲ್ಲಿ ಒಟ್ಟು 31 ಪದ್ಯಗಳಿವೆ. ಕಾಡನ್ನೂ ಮೀರಿ ಕಾಡ್ಗಿಚ್ಚು ಹೇಗೆ ಮನೆ-ಮನಗಳನ್ನು ಆವರಿಸಿ ನಿಂತಿವೆ ಎನ್ನುವುದನ್ನು ಹೇಳುವ ‘ಕಾಡ್ಗಿಚ್ಚು’, ದ್ವೇಷವನ್ನು ಮಾನವೀಯತೆ ತನ್ನ ಜೀವ ಚೈತನ್ಯವನ್ನು ಒತ್ತೆಯಿಟ್ಟು ಹೇಗೆ ಗೆಲ್ಲುತ್ತದೆ ಎನ್ನುವುದನ್ನು ಹೇಳುವ ‘ಗಲಭೆ’, ಗಾಂಧಿಯ ಹೆಸರಿನಲ್ಲಿ ನಡೆಯುವ ವಿಪರ್ಯಾಸಗಳನ್ನು ಹೇಳುವ ‘ಗಾಂಧಿ ಸಿಕ್ಕಿದ್ದ’, ಮನುಷ್ಯತ್ವವೇ ಇಲ್ಲದ ವರ್ತಮಾನವನ್ನು ನೋಡಿ ನಿಟ್ಟುಸಿರಿಡುವ, ಅದಕ್ಕೆ ಸವಾಲು ಹಾಕುವ ‘ಗಲಭೆಯಲ್ಲಿ ಸತ್ತವನೊಬ್ಬನ ಅವಿಡವಿಟ್ಟು’...ಹೀಗೆ ಹೆಚ್ಚಿನ ಕವಿತೆಗಳು ರಾಜಕೀಯ ಕಾರಣಗಳಿಂದ ಜರ್ಝರಿತವಾಗಿರುವ ಮನುಷ್ಯ ಪ್ರೇಮದ ಕುರಿತಂತೆ ಕಾಳಜಿ ವ್ಯಕ್ತಪಡಿಸುತ್ತವೆ.
ಸಮಕಾಲೀನ ಪುಸ್ತಕ ಬೆಳಗಾವಿ, ಇವರು ಹೊರತಂದಿರುವ ಕೃತಿಯ ಒಟ್ಟು ಪುಟಗಳು 88. ಮುಖಬೆಲೆ 85 ರೂಪಾಯಿ. ಆಸಕ್ತರು 99720 94184 ದೂರವಾಣಿಯನ್ನು ಸಂಪರ್ಕಿಸಬಹುದು.