ಬೋಳಾರ ಲೀವೆಲ್ ಬಳಿ ಬಾಯ್ದೆರೆದ ಪುರಾತನ ಬಾವಿ !
ಮಂಗಳೂರು, ಅ.25: ನಗರದ ಬೋಳಾರ ಲೀವೆಲ್ ಸರ್ಕಲ್ ಬಳಿ ಸುಮಾರು 100 ವರ್ಷದ ಹಿಂದಿನದ್ದು ಎನ್ನಲಾದ ಬಾವಿಯೊಂದು ಗುರುವಾರ ಸಂಜೆಯ ವೇಳೆಗೆ ಬಾಯ್ದೆರೆದಿದೆ. ಇದರಿಂದ ಸಂಚಾರಕ್ಕೆ ತೊಡಕುಂಟಾಗುವುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರ ಗಮನ ಸೆಳೆದಿದ್ದು, ಅದರಂತೆ ಸಂಚಾರ ಪೊಲೀಸರು ಬ್ಯಾರಿಕೇಡ್ ಅಡ್ಡವಿಟ್ಟು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ಈ ಬಾವಿಯು ನೂರು ವರ್ಷದ ಹಿಂದಿನದ್ದು ಎನ್ನಲಾಗುತ್ತಿದೆ.
ಇಲ್ಲಿ ರಸ್ತೆ ನಿರ್ಮಿಸುವಾಗ ಬಾವಿಗೆ ಮಣ್ಣು ತುಂಬಿಸದೆ ಮೇಲ್ಗಡೆ ಕಲ್ಲು ಚಪ್ಪಡಿ ಹಾಕಿ ಮಣ್ಣು ತುಂಬಿಸಿ ಡಾಮರೀಕರಣ ಮಾಡಲಾಗಿತ್ತು. ಕಳೆದ ಮೂರ್ನಾಲ್ಕು ದಿನದಿಂದ ಸುರಿಯುತ್ತಿರುವ ಭಾರೀ ಮಳೆಗೆ ಮಣ್ಣು ಸಡಿಲಗೊಂಡು ಬಾವಿಯ ಬಾಯ್ದೆರೆದಿದೆ. ಅಲ್ಲದೆ ಎರಡು ಅಡಿ ಅಗಲದ ಸುತ್ತಳತೆಯಲ್ಲಿ ಡಾಮಾರು ರಸ್ತೆಯಲ್ಲಿ ಕುಸಿತ ಕಂಡು ಬಂದಿದೆ. ತಕ್ಷಣ ಇದನ್ನು ದುರಸ್ತಿ ಮಾಡದಿದ್ದರೆ ಅಪಾಯಕ್ಕೆ ಆಹ್ವಾನ ನೀಡುವ ಸಾಧ್ಯತೆ ಇದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
Next Story