varthabharthi


ಕಾಲಂ 9

ಬಿಪಿಸಿಎಲ್ ಖಾಸಗೀಕರಣ: ದೇಶದ್ರೋಹವೂ ಹೌದು- ಭ್ರಷ್ಟಾಚಾರವೂ ಹೌದು

ವಾರ್ತಾ ಭಾರತಿ : 26 Oct, 2019
ಶಿವಸುಂದರ್

ಬಿಪಿಸಿಎಲ್ ಖಾಸಗೀಕರಣಕ್ಕೆ ಅಡ್ಡಿಯಾಗುತ್ತಿದ್ದ 1976ರ ಕಾಯ್ದೆಯನ್ನು ನಿವಾರಿಸಿಕೊಳ್ಳಲು ಮೋದಿ ಸರಕಾರ ಒಂದು ಕುತಂತ್ರವನ್ನು ಮಾಡಿದೆ. ಮೋದಿ ಸರಕಾರವು 2016ರಲ್ಲಿ ಆಡಳಿತಕ್ಕೆ ಅಡ್ಡಿಯಾಗುತ್ತಿದೆ ಎಂಬ ಹೆಸರಿನಲ್ಲಿ ಪುರಾತನವಾದ 186 ಕಾಯ್ದೆಗಳನ್ನು ಮತ್ತು ನಿಯಮಗಳನ್ನು ರದ್ದುಗೊಳಿಸಿತು. ಅದರ ಭಾಗವಾಗಿ ಬಿಪಿಸಿಎಲ್ ಅನ್ನು ಖಾಸಗೀಕರಿಸಲು ಸಂಸತ್ತಿನ ಅನುಮತಿ ಕಡ್ಡಾಯ ಮಾಡುತ್ತಿದ್ದ ನಿಯಮವನ್ನೂ ಸಹ ಸದ್ದಿಲ್ಲದೆ ರದ್ದುಗೊಳಿಸಿಬಿಟ್ಟಿತು. ಇದರ ಬಗ್ಗೆ ಯಾವ ವಿರೋಧ ಪಕ್ಷಗಳೂ ಸಹ ಸೊಲ್ಲೆತ್ತಲಿಲ್ಲವೆನ್ನುವುದೂ ಸಹ ಅಷ್ಟೇ ಆಶ್ಚರ್ಯಕರ ವಿಷಯವಾಗಿದೆ.


‘‘ಕಾಂಗ್ರೆಸಿಗರದು ವಂಶವಾಹಿ ರಾಜಕಾರಣ. ಅವರು ರಾಜಕೀಯಕ್ಕೆ ಬರುವುದೇ ಏಳು ತಲೆಮಾರು ತಿಂದರೂ ಕರಗದಷ್ಟು ಆಸ್ತಿ-ಪಾಸ್ತಿ ಮಾಡಲು. ಆದರೆ ನಮ್ಮ ಪ್ರಧಾನಿ ಮೋದಿಯವರನ್ನು ನೋಡಿ. ಅವರಿಗೇನು ಮಕ್ಕಳೇ, ಮರಿಯೇ? ಅವರೊಬ್ಬ ಫಕೀರ. ಆದ್ದರಿಂದ ಅವರು ಭ್ರಷ್ಟಾಚಾರ ಮಾಡುವುದು ಇಲ್ಲ. ಮಾಡಲು ಬಿಡುವುದೂ ಇಲ್ಲ’’

ಇದು ಮೋದಿ ಭಕ್ತರಲ್ಲಿರುವ ಹಲವಾರು ಮೂಢನಂಬಿಕೆಗಳಲ್ಲಿ ಒಂದು. ಚುನಾವಣೆಯಿಂದ ಚುನಾವಣೆಗೆ ಬಿಜೆಪಿ ರಾಜಕಾರಣಿಗಳ ಆಸ್ತಿಪಾಸ್ತಿಗಳು ಕಾಂಗ್ರೆಸಿಗರಷ್ಟೇ ತೀವ್ರವಾಗಿ ಏರುತ್ತಿವೆ. ಮಾತ್ರವಲ್ಲದೆ ಪ್ರತಿಯೊಬ್ಬ ಬಿಜೆಪಿ ರಾಜಕಾರಣಿಯು ಇತರ ಎಲ್ಲಾ ಪಕ್ಷಗಳಂತೆ ತಮ್ಮ ಬಂಧು-ಬಳಗಕ್ಕೇ ಅಧಿಕಾರ ಹಂಚುತ್ತಾ ಬರುತ್ತಿದೆ.
ಆದ್ದರಿಂದ ಕೇವಲ ನೈತಿಕ ದೃಷ್ಟಿಯಿಂದ ನೋಡಿದರೂ ಬಿಜೆಪಿ ಪಕ್ಷವು ಕಾಂಗ್ರೆಸಿಗಿಂತ ಅಥವಾ ಇನ್ಯಾವುದೇ ರಾಜಕೀಯ ಪಕ್ಷಗಳಿಗೆ ಪೈಪೋಟಿ ನೀಡುವಷ್ಟು ಭ್ರಷ್ಟ ಪಕ್ಷವೇ ಆಗಿದೆ. ಮಾತ್ರವಲ್ಲ. ಅದೇ ಈಗ ಭ್ರಷ್ಟಾಚಾರದಲ್ಲೂ, ಸ್ವಜನ ಪಕ್ಷಪಾತದಲ್ಲೂ ಲೀಡರ್.

ಆದರೆ ಬಿಜೆಪಿ ನಡೆಸುತ್ತಿರುವ ಭ್ರಷ್ಟಾಚಾರವು ಕೇವಲ ವ್ಯಕ್ತಿಗತ ಭ್ರಷ್ಟಾಚಾರಕ್ಕೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಈಗ ಅದೂ ಒಂದು ಆರ್ಥಿಕ ನೀತಿಯೇ ಆಗಿಬಿಟ್ಟಿದೆ ಮತ್ತು ಅದಕ್ಕೆ ಒಂದು ದೇಶದ್ರೋಹಿ ಆಯಾಮವೂ ಇದೆ.

ಉದಾಹರಣೆಗೆ ಬಿಜೆಪಿ ಸರಕಾರವು ಅತ್ಯಂತ ತುರ್ತಿನಲ್ಲಿ ಮಾಡುತ್ತಿರುವ ಬಿಪಿಸಿಎಲ್ ಖಾಸಗೀಕರಣವನ್ನೇ ಗಮನಿಸೋಣ. ಬಿಪಿಸಿಎಲ್- ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್- ಕಂಪೆನಿ ಭಾರತದ ಸಾರ್ವಜನಿಕ ಕ್ಷೇತ್ರದ ಬಹುದೊಡ್ಡ ಕಂಪೆನಿ. 1976ರಲ್ಲಿ ರಾಷ್ಟ್ರೀಕರಣವಾಗುವ ಮೊದಲು ಅದು ಬರ್ಮಾ ಶೆಲ್ ಆಯಿಲ್ ಕಂಪೆನಿ ಎಂಬ ಹೆಸರಿನ ಖಾಸಗಿ ಕಂಪೆನಿಯಾಗಿತ್ತು. 1971ರಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಭಾರತವು ಬಾಂಗ್ಲಾದೇಶ ವಿಮೋಚನೆಗೆ ಸೈನಿಕ ಸಹಾಯ ಮಾಡುತ್ತಾ ನೇರವಾಗಿ ಪಾಕಿಸ್ತಾನದ ಆಂತರಿಕ ವಿಷಯದಲ್ಲಿ ಮಧ್ಯಪ್ರವೇಶಿಸಿತ್ತು. ಆಗ ಭಾರತದ ಯುದ್ಧಾಗತ್ಯಗಳಿಗೆ ಖಾಸಗಿ ಕಂಪೆನಿಯಾದ ಬರ್ಮಾ ಶೆಲ್ ಕಂಪೆನಿ ಸಹಕರಿಸಲಿಲ್ಲ. ಆ ಕಾರಣವನ್ನು ಒಳಗೊಂಡಂತೆ ಆ ಅವಧಿಯಲ್ಲಿ ನಡೆದ ಹಲವಾರು ರಾಷ್ಟ್ರೀಕರಣ ಯೋಜನೆಗಳ ಭಾಗವಾಗಿ ಬರ್ಮಾ ಶೆಲ್ ಆಯಿಲ್ ಕಂಪೆನಿಯನ್ನೂ ಸಹ ರಾಷ್ಟ್ರೀಕರಿಸಲಾಯಿತು. ಬಿಪಿಸಿಎಲ್ ಆಯಿತು.

ಬಿಪಿಸಿಎಲ್ ಕಂಪೆನಿ ಕಳೆದ 43 ವರ್ಷಗಳಲ್ಲಿ ಬೃಹತ್ ಸಾರ್ವಜನಿಕ ತೈಲ ಸಂಸ್ಕರಣ ಹಾಗೂ ವಿತರಣಾ ಕಂಪೆನಿಯಾಗಿ ಬೆಳೆದಿದೆ. ಈಗ ಅದು ವಾರ್ಷಿಕ 38.3 ಮಿಲಿಯನ್ ಟನ್‌ನಷ್ಟು ಕಚ್ಚಾತೈಲವನ್ನು ಸಂಸ್ಕರಿಸುತ್ತದೆ ಹಾಗೂ ದೇಶಾದ್ಯಂತ 15,078 ಪೆಟ್ರೋಲ್ ಪಂಪ್‌ಗಳನ್ನೂ ಹಾಗೂ 6,004 ಎಲ್‌ಪಿಜಿ ಅನಿಲ ವಿತರಣಾ ಘಟಕಗಳನ್ನೂ ಹೊಂದಿದೆ. ಹಾಗೆ ನೋಡಿದರೆ ನಮ್ಮ ದೇಶಕ್ಕೆ ಇದ್ದಿದ್ದರಲ್ಲಿ ಅಗತ್ಯವಿರುವ ಶಕ್ತಿ ಮೂಲಗಳ ಸಾಮರ್ಥ್ಯ ಮತ್ತು ಸ್ವಾಯತ್ತೆಗಳನ್ನು ಒದಗಿಸುತ್ತಿರುವುದು ಈ ಬಿಪಿಸಿಎಲ್, ಎಚ್‌ಪಿಸಿಎಲ್, ಇಂಡಿಯನ್ ಆಯಿಲ್ ಕಂಪೆನಿ, ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್‌ನಂತಹ ಸಾರ್ವಜನಿಕ ಕಂಪೆನಿಗಳೇ. ಹಾಗಿದ್ದರೂ ದೇಶಭಕ್ತ ಮೋದಿ ಸರಕಾರ ಬಿಪಿಸಿಎಲ್ ಅನ್ನು ಖಾಸಗೀಕರಿಸಲು ಏಕೆ ಮುಂದಾಗಿದೆ? ಸಾಮಾನ್ಯವಾಗಿ ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳನ್ನು ಖಾಸಗೀಕರಿಸಲು ಕೊಡುವ ಕಾರಣ ಅದು ನಷ್ಟವನ್ನುಂಟು ಮಾಡುತ್ತಿದೆ ಎಂಬುದಾಗಿರುತ್ತದೆ.

ಆದರೆ ಬಿಪಿಸಿಎಲ್ ನಷ್ಟವನ್ನೆದುರಿಸುತ್ತಿತ್ತೇ? ಬಿಪಿಸಿಎಲ್ ರಾಷ್ಟ್ರೀಕರಣವಾದಾಗಲಿಂದಲೂ ಲಾಭವನ್ನು ಮಾಡುತ್ತಿದೆಯೇ ಹೊರತು ನಷ್ಟವನ್ನೆದುರಿಸಿಯೇ ಇಲ್ಲ. 2014-15ರ ಸಾಲಿನಲ್ಲಿ ಅದು 5,085 ಕೋಟಿ ರೂ.ಗಳಷ್ಟು ತೆರಿಗೆಯ ನಂತರದ ಲಾಭ ಮಾಡಿದ್ದರೆ, 2017-18ರ ಸಾಲಿನಲ್ಲಿ 7,138 ಕೋಟಿ ರೂ.ಗಳಷ್ಟು ಲಾಭವನ್ನು ಮಾಡಿದೆ. ಹಾಗೆಯೇ ಬಿಪಿಸಿಎಲ್ ನಮ್ಮ ದೇಶದ ಒಟ್ಟಾರೆ ಜಿಡಿಪಿಗೆ 2015ರಲ್ಲಿ 67,000 ಕೋಟಿ ರೂ.ಗಳಷ್ಟು ಕೊಡುಗೆಯನ್ನು ನೀಡಿದ್ದರೆ 2018-19ರ ಸಾಲಿನಲ್ಲಿ 95,067 ಕೋಟಿ ರೂ.ಗಳಷ್ಟು ಕೊಡುಗೆಯನ್ನು ನೀಡಿದೆ. ಎಲ್ಲಾ ಕಾರಣದಿಂದಲೇ ಭಾರತ ಸರಕಾರ 2016ರಲ್ಲಿ ಬಿಪಿಸಿಎಲ್‌ಗೆ ಮಹಾರತ್ನ ಎಂಬ ಬಿರುದನ್ನೂ ನೀಡಿತ್ತು. ಬಿಪಿಸಿಎಲ್ ಅನ್ನು ಖಾಸಗೀಕರಿಸುವ ಮೂಲಕ ಸರಕಾರವು 60,000 ಕೋಟಿ ರೂಪಾಯಿಗಳನ್ನು ನಿರೀಕ್ಷಿಸುತ್ತಿದೆ. ಆದರೆ ಕೇವಲ ಕಳೆದ ಐದು ವರ್ಷಗಳಲ್ಲೇ ಬಿಪಿಸಿಎಲ್ ಭಾರತ ಸರಕಾರಕ್ಕೆ ಡಿವಿಡೆಂಡ್ ಮತ್ತು ತೆರಿಗೆಗಳ ರೂಪದಲ್ಲಿ 30,000 ಕೋಟಿ ರೂಪಾಯಿಗಳನ್ನು ನೀಡಿದೆ. ಅಂದರೆ ಸರಕಾರ ಬಿಪಿಸಿಎಲ್ ಅನ್ನು ಅನಾಮತ್ತು ಮಾರುವ ಮೂಲಕ ಎಷ್ಟು ಆದಾಯವನ್ನು ನಿರೀಕ್ಷಿಸುತ್ತಿದೆಯೋ ಅಷ್ಟು ಮೊತ್ತವನ್ನು ಬಿಪಿಸಿಲ್ ಮುಂದಿನ ಐದು ವರ್ಷಗಳಲ್ಲಿ ಕೇವಲ ತನ್ನ ವ್ಯವಹಾರಗಳಿಂದಲೇ ತೆರಿಗೆ ಹಾಗೂ ಡಿವಿಡೆಂಡುಗಳ ರೂಪದಲ್ಲಿ ಸರಕಾರಕ್ಕೆ ಪಾವತಿಸುತ್ತಿತ್ತು. ಹಾಗಿದ್ದರೂ ಲಾಭ ಮಾಡುತ್ತಿರುವ ಈ ಚಿನ್ನದ ಕೋಳಿಯನ್ನು ಮೋದಿ ಸರಕಾರ ಕೊಲ್ಲುತ್ತಿರುವುದೇಕೆ?

ಇದಕ್ಕೆ ಎರಡು ದೇಶದ್ರೋಹೀ ಕಾರಣಗಳಿವೆ. ಮೊದಲನೆಯದಾಗಿ 1991ರಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಎಲ್ಲಾ ಪಕ್ಷಗಳ ಸರ್ವ ಸಮ್ಮತಿಯೊಂದಿಗೆ ಸರಕಾರವೇ ಪ್ರಾರಂಭಿಸಿದ ಉದಾರೀಕರಣ-ಖಾಸಗೀಕರಣ-ಜಾಗತೀಕರಣದ ನೀತಿಗಳು ಸರಕಾರಗಳನ್ನು ದೇಶವನ್ನು ಕಟ್ಟುವ ಮತ್ತು ಜನರಿಗೆ ಉದ್ಯೋಗವನ್ನು ಒದಗಿಸುವ ಕಲ್ಯಾಣ ಪ್ರಭುತ್ವವಾಗಿ ಉಳಿಸಲಿಲ್ಲ. ಬದಲಿಗೆ ಪ್ರಭುತ್ವಗಳು ಕಟ್ಟಿದ್ದೆಲ್ಲವನ್ನೂ ಖಾಸಗಿಯವರಿಗೆ ಪರಭಾರೆ ಮಾಡುವ ನವ ಉದಾರಿ ಸರಕಾರವಾಗಿಯೂ ಮತ್ತು ಅದಕ್ಕೆ ಪ್ರತಿರೋಧ ಕಂಡುಬಂದರೆ ಅದನ್ನು ಹತ್ತಿಕ್ಕುವ ಪೊಲೀಸ್ ಪ್ರಭುತ್ವ ಹಾಗೂ ಕಾರ್ಪೊರೇಟ್ ಪ್ರಭುತ್ವಗಳಾದವು. 1991ರ ಮೊದಲ ದಶಕದಲ್ಲಿ ಜನರ ಮನ್ನಣೆಯನ್ನು ಗಳಿಸಲು ಸರಕಾರಗಳು ನಷ್ಟ ಮಾಡುತ್ತಿದ್ದ ಸಾರ್ವಜನಿಕ ಉದ್ದಿಮೆಗಳನ್ನು ಮಾತ್ರ ಖಾಸಗೀಕರಿಸುತ್ತೇವೆಂದು ಹೇಳುತ್ತಿದ್ದವು.
 
 ಆದರೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಮೇಲೆ ಯಾವ ಎಗ್ಗೂಸಿಗ್ಗೂ ಇಲ್ಲದೆ ಎಲ್ಲಾ ಲಾಭದಾಯಕ ಸಾರ್ವಜನಿಕ ಉದ್ದಿಮೆಗಳನ್ನೂ ಬಹಿರಂಗವಾಗಿಯೇ ಖಾಸಗೀಕರಿಸಲು ಪ್ರಾರಂಭಿಸಿದೆ. ವಾಸ್ತವವಾಗಿ ಮೋದಿ ಸರಕಾರವು ಜಾರಿಗೆ ತಂದ ಆರ್ಥಿಕ ಪ್ರಗತಿಗೆ ಮಾರಕವಾದ ನೋಟು ನಿಷೇಧ ಮತ್ತು ಜಿಎಸ್‌ಟಿಯಂತಹ ನೀತಿಗಳಿಂದಾಗಿ ಇಂದು ದೇಶದ ಆರ್ಥಿಕತೆ ಮಂದಗತಿಯನ್ನು ಅನುಭವಿಸುತ್ತಿದೆ. ಹೀಗಾಗಿ ಸರಕಾರವು ಈ ಸಾಲಿನಲ್ಲಿ ನಿರೀಕ್ಷಿಸುತ್ತಿದ್ದಷ್ಟು ತೆರಿಗೆ ಸಂಗ್ರಹವೂ ಆಗುತ್ತಿಲ್ಲ. ಅದರ ಜೊತೆಗೆ ಕಾರ್ಪೊರೇಟ್ ಆದಾಯ ತೆರಿಗೆಯಿಂದ ಬರಬಹುದಾದ 1,45,000 ಕೋಟಿ ರೂ.ಗಳನ್ನೂ ಸಹ ಸರಕಾರ ಆರ್ಥಿಕ ಪುನಶ್ಚೇತನದ ಹೆಸರಿನಲ್ಲಿ ಬಿಟ್ಟುಕೊಟ್ಟಿದೆ. ಎಲ್ಲಾ ಕಾರಣಗಳಿಂದ ಮೋದಿ ಸರಕಾರವು ಈ ವರ್ಷ ಸರಕಾರ ನಡೆಸಬೇಕೆಂದರೂ ಸಹ ಅತ್ಯಂತ ತುರ್ತಾಗಿ ತೆರಿಗೆಯೇತರ ಆದಾಯವನ್ನು ಹುಡುಕಲೇ ಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿತ್ತು. ಆದ್ದರಿಂದಲೇ ಈ ಸಾಲಿನ ಬಜೆಟ್‌ನಲ್ಲಿ 1.06 ಲಕ್ಷ ಕೋಟಿ ರೂ.ಗಳನ್ನು ಬಿಪಿಸಿಎಲ್ ರೀತಿ ಚಿನ್ನದ ಮೊಟ್ಟೆ ಇಡುತ್ತಿದ್ದ ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳನ್ನು ಹರಾಜು ಮಾಡುವ ಮೂಲಕ ಗಳಿಸುವ ಪ್ರಸ್ತಾಪವನ್ನು ಮಾಡಲಾಗಿದೆ.

ಆದರೆ ಈವರೆಗೆ ಹಣಕಾಸು ಸಚಿವಾಲಯವು ಸಂಗ್ರಹಿಸಲು ಸಾಧ್ಯವಾಗಿರುವುದು ಕೇವಲ 13,000 ಕೋಟಿ ರೂ.ಗಳನ್ನು ಮಾತ್ರ. ಆದ್ದರಿಂದಲೇ ತನ್ನ ಬಜೆಟ್ ಗುರಿಯನ್ನು ಸಾಧಿಸುವ ಒತ್ತಡದಿಂದ ಅತ್ಯಂತ ಲಾಭದಾಯಕವಾಗಿದ್ದ ಬಿಪಿಸಿಎಲ್ ಅನ್ನು ಖಾಸಗೀಕರಿಸುವ ಮೂಲಕ 60,000 ಕೋಟಿ ರೂ.ಗಳನ್ನು ಪಡೆದುಕೊಳ್ಳುವ ತಂತ್ರವನ್ನು ಮೋದಿ ಸರಕಾರ ಹೆಣೆದಿದೆ. ತುಂಬಾ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಬಿಪಿಸಿಎಲ್ ಖಾಸಗೀಕರಣ ದಿಢೀರನೆ ಖಾಸಗೀಕರಣಗೊಳ್ಳಲು ಇದು ಕಾರಣ.

ಆದರೆ ಬಿಪಿಸಿಎಲ್ ಮತ್ತು ಬಿಎಸ್‌ಎನ್‌ಎಲ್ ಇತ್ಯಾದಿಗಳನ್ನು ರಭಸದಿಂದ ಖಾಸಗೀಕರಿಸುತ್ತಿರುವುದರ ಹಿಂದೆ ಬಿಜೆಪಿ ಸರಕಾರದ ಮತ್ತೊಂದು ಮಹಾ ದೇಶದ್ರೋಹಿ ಪರಮ ಭ್ರಷ್ಟ ಕುತಂತ್ರವಿದೆ. ಹಾಗೆ ನೋಡಿದರೆ ಖಾಸಗೀಕರಣದ ನೀತಿಯ ಭಾಗವಾಗಿ ಇತರ ಎಲ್ಲಾ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಿಸಿದ ಹಾಗೆ ಬಿಪಿಸಿಎಲ್ ಅನ್ನೂ ಖಾಸಗೀಕರಿಸಲು ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ 2002ರಲ್ಲೇ ಪ್ರಯತ್ನಿಸಿತ್ತು. ಆದರೆ ಬಿಪಿಸಿಎಲ್‌ನ ಮೂಲಸಂಸ್ಥೆಯಾದ ಬರ್ಮಾಶೆಲ್ ಕಂಪೆನಿಯನ್ನು ಖಾಸಗೀಕರಿಸಿದ 1976ರ ಕಾಯ್ದೆಯ ಪ್ರಕಾರ ಮತ್ತೆ ಬಿಪಿಸಿಎಲ್ ಅನ್ನು ಖಾಸಗೀಕರಿಸಬೇಕೆಂದರೂ ಅಥವಾ ಅದರ ಮೇಲಿನ ಸರಕಾರದ ಒಡೆತನವನ್ನು ಪರಭಾರೆ ಮಾಡಬೇಕೆಂದರೂ ಲೋಕಸಭೆ ಮತ್ತು ರಾಜ್ಯಸಭೆಗಳ ಅನುಮತಿಯನ್ನು ಪಡೆಯುವುದು ಕಡ್ಡಾಯವಾಗಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ ಬಿಪಿಸಿಎಲ್ ಖಾಸಗೀಕರಿಸಬೇಕೆಂಬ ವಾಜಪೇಯಿ ಸರಕಾರದ ಪ್ರಯತ್ನಗಳನ್ನು ಆಗ ರದ್ದುಮಾಡಿತ್ತು. ಹಾಗಿದ್ದ ಮೇಲೆ ಮೋದಿ ಸರಕಾರ ಈಗ ಹೇಗೆ ಸಂಸತ್ತಿನ ಅನುಮೋದನೆಯನ್ನೇ ಪಡೆಯದೆ ಬಿಪಿಸಿಎಲ್ ಅನ್ನು ಖಾಸಗೀಕರಿಸುತ್ತಿದೆ? ಮೋದಿ ಸರಕಾರದ ಅಸಲಿ ದೇಶದ್ರೋಹ ಮತ್ತು ಭ್ರಷ್ಟಾಚಾರಗಳು ಇಲ್ಲಿ ಬಚ್ಚಿಟ್ಟುಕೊಂಡಿವೆ.

ಬಿಪಿಸಿಎಲ್ ಖಾಸಗೀಕರಣಕ್ಕೆ ಅಡ್ಡಿಯಾಗುತ್ತಿದ್ದ 1976ರ ಕಾಯ್ದೆಯನ್ನು ನಿವಾರಿಸಿಕೊಳ್ಳಲು ಮೋದಿ ಸರಕಾರ ಒಂದು ಕುತಂತ್ರವನ್ನು ಮಾಡಿದೆ. ಮೋದಿ ಸರಕಾರವು 2016ರಲ್ಲಿ ಆಡಳಿತಕ್ಕೆ ಅಡ್ಡಿಯಾಗುತ್ತಿದೆ ಎಂಬ ಹೆಸರಿನಲ್ಲಿ ಪುರಾತನವಾದ 186 ಕಾಯ್ದೆಗಳನ್ನು ಮತ್ತು ನಿಯಮಗಳನ್ನು ರದ್ದುಗೊಳಿಸಿತು. ಅದರ ಭಾಗವಾಗಿ ಬಿಪಿಸಿಎಲ್ ಅನ್ನು ಖಾಸಗೀಕರಿಸಲು ಸಂಸತ್ತಿನ ಅನುಮತಿ ಕಡ್ಡಾಯ ಮಾಡುತ್ತಿದ್ದ ನಿಯಮವನ್ನೂ ಸಹ ಸದ್ದಿಲ್ಲದೆ ರದ್ದುಗೊಳಿಸಿಬಿಟ್ಟಿತು. ಇದರ ಬಗ್ಗೆ ಯಾವ ವಿರೋಧಪಕ್ಷಗಳೂ ಸಹ ಸೊಲ್ಲೆತ್ತಲಿಲ್ಲವೆನ್ನುವುದೂ ಸಹ ಅಷ್ಟೇ ಆಶ್ಚರ್ಯಕರ ವಿಷಯವಾಗಿದೆ. ಹೀಗೆ ಬಿಪಿಸಿಎಲ್ ಖಾಸಗೀಕರಣವು ಸಾರ್ವತ್ರಿಕವಾದ ಖಾಸಗೀಕರಣದ ನೀತಿಯ ಭಾಗವೇ ಆಗಿದ್ದರೂ ಈ ಉದ್ದಿಮೆಯನ್ನು ಖಾಸಗೀಕರಿಸಲು ಮಾತ್ರ ಮೋದಿ ಸರಕಾರ ಪ್ರಜಾತಂತ್ರ ವಿರೋಧಿ ಕ್ರಮವನ್ನು ಅನುಸರಿಸುವ ಕಳ್ಳ ಮಾರ್ಗವನ್ನೂ ಅನುಸರಿಸಿದೆ.
ಇದಕ್ಕೆ ಒಂದು ವಿಶೇಷ ಕಾರಣವೂ ಇದೆ.

ಬಿಪಿಸಿಎಲ್ ಖಾಸಗೀಕರಣದ ಪ್ರಕ್ರಿಯೆಯ ಭಾಗವಾಗಿ ಅದರ ಮೌಲ್ಯಂದಾಜು, ಹರಾಜು ಮತ್ತು ಶೇರುಮೊತ್ತ ಸಂಗ್ರಹಣೆಗಾಗಿ ಸಂಬಂಧಪಟ್ಟ ಇಲಾಖೆಯು ಸಾರ್ವಜನಿಕ ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ. ಅಕ್ಟೋಬರ್‌ನಲ್ಲಿ ಸರಕಾರ ಬಿಪಿಸಿಎಲ್ ಖಾಸಗೀಕರಣದ ಪ್ರಕ್ರಿಯೆಯನ್ನು ಘೋಷಿಸಿದ ನಂತರದಲ್ಲಿ ಬಿಪಿಸಿಎಲ್‌ನಲ್ಲಿರುವ ಸರಕಾರದ ಶೇ.53 ಶೇರುಗಳನ್ನು ಕೊಂಡುಕೊಳ್ಳಲು ಫ್ರಾನ್ಸಿನ ಟೋಟಲ್, ಬ್ರಿಟನ್‌ನ ಬಿಪಿ, ಮಲೇಷಿಯಾದ ಪೆಟ್ರೋನಾಸ್, ಸೌದಿ ಅರೇಬಿಯಾದ ಶೆಲ್-ಸೌದಿ ಅರಾಮ್ಕೋ ಎಂಬ ವಿದೇಶಿ ಕಂಪೆನಿಗಳು ಆಸಕ್ತಿ ತೋರಿದ್ದರೆ, ಭಾರತದಿಂದ ಅದನ್ನು ಕೊಂಡುಕೊಳ್ಳಲು ಮುಂದೆ ಬಂದಿರುವುದು ಅಂಬಾನಿಯ ರಿಲಯನ್ಸ್ ಕಂಪೆನಿ ಮಾತ್ರ. ಹಾಗೆ ನೋಡಿದರೆ ಬಿಪಿಸಿಎಲ್‌ನ ಬೃಹತ್ ಶೇರು ಕೊಳ್ಳುವಿಕೆಯ ಶರತ್ತನ್ನು ಪಾಲಿಸಬಹುದಾದ ಏಕೈಕ ಭಾರತೀಯ ಕಂಪೆನಿಯೂ ಅಂಬಾನಿ ಕಂಪೆನಿ ಮಾತ್ರ. ಈಗ ಸರಕಾರವು ತೈಲ ಕ್ಷೇತ್ರವು ಒಂದು ದೇಶದ ಸ್ವಾಯತ್ತೆಗೆ ಮುಖ್ಯವಾಗಿರುವುದರಿಂದ ಸರಕಾರವು ವಿದೇಶಿ ಕಂಪೆನಿಗಿಂತ ಭಾರತೀಯ ಕಂಪೆನಿಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದೆ ಎಂದು ಪರೋಕ್ಷವಾಗಿ ಹೇಳುತ್ತಿದೆ. ಆ ಮೂಲಕ ಬಿಪಿಸಿಎಲ್ ಅನ್ನು ಬಹಿರಂಗವಾಗಿಯೇ ತನ್ನ ನೆಚ್ಚಿನ ಅಂಬಾನಿ ಕಂಪೆನಿಗೆ ಮಾರಲು ಮೋದಿ ಸರಕಾರ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದೆ.

ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಸಾರ್ವಜನಿಕ ಕ್ಷೇತ್ರದ ಟೆಲಿಕಾಂ ಕಂಪೆನಿಯಾದ ಬಿಎಸ್‌ಎನ್‌ಎಲ್ ನಷ್ಟಕ್ಕೆ ಗುರಿ ಮಾಡಿ ಅಂಬಾನಿಯ ಜಿಯೋ ಕಂಪೆನಿಗೆ ಲಾಭವಾಗುವಂತೆ ನೋಡಿಕೊಳ್ಳಲಾಯಿತು. ಕೃಷ್ಣ ಗೋದಾವರಿ ಬೇಸಿನ್‌ನಲ್ಲಿ ಸರಕಾರಿ ಸ್ವಾಮ್ಯದ ಒಎನ್‌ಜಿಸಿ ಕಂಪೆನಿ ಎಲ್ಲಿ ನೈಸರ್ಗಿಕ ಅನಿಲವನ್ನು ಹೊರತೆಗೆಯುತ್ತಿತ್ತೋ ಅದರ ಪಕ್ಕದಲ್ಲೇ ರಿಲಯನ್ಸ್ ಗ್ಯಾಸ್ ಸಂಸ್ಥೆಗೆ ಅನಿಲ ಗಣಿಗಾರಿಕೆ ಮಾಡಲು ಅವಕಾಶ ಮಾಡಿಕೊಟ್ಟಿತು. ಅಂಬಾನಿಯ ರಿಲಯನ್ಸ್ ಕಂಪೆನಿ ಒಎನ್‌ಜಿಸಿಗೆ ಸೇರಿದ ಅನಿಲವನ್ನು ಕಳ್ಳತನ ಮಾಡಿ ಮಾರಿಕೊಂಡರೂ ಮೋದಿ ಸರಕಾರ ಸುಮ್ಮನಿತ್ತು. ಕೋರ್ಟಿನಲ್ಲಿ ಅದರ ವಿರುದ್ಧ ಹಾಕಿದ್ದ ದಾವೆಯೂ, ಇಲಾಖೆಗಳು ಕೊಟ್ಟ ನೋಟೀಸುಗಳೂ ಸಹ ಇದ್ದಕ್ಕಿದ ಹಾಗೆ ಮೌನ ತಳೆದಿವೆ. ಹಾಗೆಯೇ ರಕ್ಷಣಾ ಖರೀದಿ ಕ್ಷೇತ್ರದಲ್ಲಿ ಅನಿಲ್ ಅಂಬಾನಿಗಾಗಿಯೇ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ ಲಾಭ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಅದರ ಪರಿಣಾಮವಾಗಿಯೇ ಸಾವಿರಾರು ಕೋಟಿ ರೂ. ರಫೇಲ್, ಜಲಾಂತರ್ಗಾಮಿ ನೌಕೆ ಖರೀದಿ ಹಗರಣಗಳೂ ನಡೆಯುತ್ತಿವೆ.

  ಈ ಎಲ್ಲಾ ಕಾರಗಳಿಂದಾಗಿಯೇ ಸಾರ್ವಜನಿಕ ಕ್ಷೇತ್ರದ ಬಿಎಸ್‌ಎನ್‌ಎಲ್, ಒಎನ್‌ಜಿಸಿಗಳು ನಷ್ಟ ಅನುಭವಿಸಲು ಪ್ರಾರಂಭಿಸಿದರೆ ಅಂಬಾನಿಗಳ ಆಸ್ತಿಪಾಸ್ತಿಗಳು ಮಾತ್ರ ಕಳೆದ ಐದು ವರ್ಷದಲ್ಲಿ 1.5 ಲಕ್ಷ ಕೋಟಿಯಷ್ಟು ಹೆಚ್ಚಾಗಿದೆ. ಇವೆಲ್ಲದರ ಋಣಸಂದಾಯವೆಂಬಂತೆ ಬಿಜೆಪಿ ಪಕ್ಷಕ್ಕೆ ಚುನಾವಣಾ ಸಂದರ್ಭದಲ್ಲಿ ಬೇರೆಲ್ಲಾ ಪಕ್ಷಗಳಿಗಿಂತ ಅತಿಹೆಚ್ಚು ಕಾರ್ಪೊರೇಟ್ ದೇಣಿಗೆಗಳು ಗುಪ್ತವಾಗಿ ಮತ್ತು ಬಹಿರಂಗವಾಗಿ ಸಂದಾಯವಾಯಿತು. ಒಂದು ಅಂದಾಜಿನ ಪ್ರಕಾರ ಬಿಜೆಪಿ ಪಕ್ಷವು 2019ರ ಚುನಾವಣೆಯಲ್ಲಿ ಅಂದಾಜು 27,000 ಕೋಟಿ ರೂ.ಗಳನ್ನು ವ್ಯಯಮಾಡಿದೆ. ಜಗತ್ತಿನ ಯಾವೊಂದು ಪಕ್ಷವೂ ಒಂದು ಚುನಾವಣೆಗಾಗಿ ಇಷ್ಟೊಂದೂ ಮೊತ್ತವನ್ನು ವ್ಯಯ ಮಾಡಿಯೂ ಇಲ್ಲ. ಅಂತಹ ಸಾಮರ್ಥ್ಯವನ್ನೂ ಹೊಂದಿಲ್ಲ.
ಇದು ದೇಶದ್ರೋಹವಲ್ಲವೇ? ಭ್ರಷ್ಟಾಚಾರವಲ್ಲವೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)