ಜೀವ ಯಾಚಿಸುತ್ತಿರುವ ಜೀವ ವಿಮೆ
ಎಲ್‌ಐಸಿಯ ಮೇಲೆ ಒಮ್ಮೆಲೇ ಎರಡು ರೀತಿಯ ದಾಳಿ ನಡೆಯುತ್ತಿದೆ. ಕೇಂದ್ರ ಸರಕಾರ ತನ್ನ ತಪ್ಪು ಆರ್ಥಿಕ ಕಾರಣಗಳಿಗಾಗಿ, ರಾಜಕೀಯ ದುರುದ್ದೇಶದಿಂದ, ಎಲ್‌ಐಸಿ ಭಂಡಾರವನ್ನು ಖಾಲಿ ಮಾಡಲು ಹೊರಟಿದೆ. ಎಲ್‌ಐಸಿಯ ಹಣದಲ್ಲಿ ಸರಕಾರ ಪ್ರಜ್ಞಾಪೂರ್ವಕವಾಗಿ ಜೂಜು ಆಡುತ್ತಿದೆ. ಅದನ್ನೇ ಪೆಡಂಭೂತ ಮಾಡಿ ಕಾರ್ಪೊರೇಟ್ ಬಂಡವಾಳಗಾರರು ಎಲ್‌ಐಸಿಯ ಪ್ರತಿಷ್ಠೆಗೆ ಕಳಂಕ ಹಚ್ಚಲು ತಪ್ಪು ಪ್ರಚಾರ ಮಾಡಲು ಶುರು ಮಾಡಿದ್ದಾರೆ. ಎರಡೂ ದಾಳಿಗಳ ಉದ್ದೇಶ ಒಂದೇ. ಒಂದಕ್ಕೊಂದು ಪೂರಕ. ಇದ್ಯಾವುದೂ ಕಾಕತಾಳೀಯವಲ್ಲ. ಇದು ಸಿಂಪೋನಿ, ಜುಗಲ್‌ಬಂಧಿ!
ಕಳೆದ ಐದಾರು ವರ್ಷಗಳಲ್ಲಿ ಎಲ್‌ಐಸಿ ಮಾಡಿರುವ ಹೂಡಿಕೆಗಳ ಬಗ್ಗೆ ಇತ್ತೀಚೆಗೆ ಮಾಧ್ಯಮಗಳಲ್ಲಿ ಹೆಚ್ಚು ಹೆಚ್ಚು ಸುದ್ದಿ ಕಾಣಿಸಿಕೊಳ್ಳುತ್ತಿವೆ. ಅದೇ ವೇಳೆ, ಆ ಹೂಡಿಕೆಗಳ ಕುರಿತು ಎಚ್ಚರಿಕೆ ಗಂಟೆಯೂ ಬಾರಿಸಲ್ಪಡುತ್ತಿದೆ. ಅದೂ ಪದೇ ಪದೇ! ಅರ್ಥಾತ್, ನರೇಂದ್ರ ಮೋದಿ ನೇತೃತ್ವದ ಭಾಜಪ ಸರಕಾರ ಕೇಂದ್ರದಲ್ಲಿ 2014ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಯಾವ ರೀತಿ ಎಲ್‌ಐಸಿ ಯ ಮಿಗುತಾಯ (Surplus) ಹಣವನ್ನು ನಷ್ಟ-ಸಂಭವವುಳ್ಳ ಹಾಗೂ ಸಂದೇಹಾಸ್ಪದವಾದ ಕಂಪೆನಿಗಳಲ್ಲಿ ಬಂಡವಾಳ ಹೂಡಿಕೆ ಮಾಡಲಾಗುತ್ತಿದೆ ಮತ್ತು ಅಷ್ಟೇ ಅಲ್ಲದೆ ಎಲ್‌ಐಸಿಯನ್ನು ಕೇಂದ್ರ ಸರಕಾರದ ಕರಾವಿನ ಹಸುವಾಗಿ, ಎಟಿಎಂ ಯಂತ್ರವಾಗಿ ಹಾಗೂ ಕಡೇ ಗಳಿಗೆಯ ಎರವಲುದಾರನನ್ನಾಗಿ ಬಳಸಿ ಕೊಳ್ಳಲಾಗುತ್ತಿದೆ, ಮುಂತಾದ ವಿಚಾರಗಳ ಬಗ್ಗೆ ಶಂಕೆಗಳು ಕಾಣಿಸಿಕೊಳ್ಳುತ್ತಿವೆ. ತಮಿಳು ಸುದ್ದಿ ಪತ್ರಿಕೆ ದಿನಕರನ್ ಪ್ರಕಾರ, ಕಾಂಗ್ರೆಸ್ ಪಕ್ಷದ ಪ್ರಿಯಾಂಕಾ ಗಾಂಧಿ ವಾದ್ರಾರವರು ಕಳೆದ ಎರಡೂವರೆ ತಿಂಗಳುಗಳಲ್ಲಿ ಎಲ್‌ಐಸಿಯಲ್ಲಿ ತಪ್ಪು ಹಣಕಾಸು ಹೂಡಿಕೆಗಳಿಂದ ಸಂಸ್ಥೆಗೆ ಶೇರು ವಹಿವಾಟಿನಲ್ಲಿ ರೂ.57,000 ಕೋಟಿ ನಷ್ಟ ಉಂಟಾಗಿದೆ ಎಂದು ಆಪಾದಿಸಿದ್ದಾರೆ. ಇದೇ ತರಹದ ಸುದ್ದಿಗಳು ಇಂಟರ್‌ನೆಟ್ ಸುದ್ದಿ ಪೋರ್ಟಲ್‌ಗಳಲ್ಲಿಯೂ ಹೆಚ್ಚು ಹೆಚ್ಚು ವರದಿಯಾಗಿವೆ. ಈ ವರದಿಗಳ ಬಗ್ಗೆ ಸೂಕ್ಷ್ಮವಾಗಿ ಮತ್ತು ಗಂಭೀರವಾಗಿ ಪರಿಶೋಧಿಸಬೇಕಾದ ಜವಾಬ್ದಾರಿಯ ಅಗತ್ಯವಿದೆ. ಕಾರಣ, ಎಲ್‌ಐಸಿಯ ಹಣ ದೇಶದ ಸಾರ್ವಜನಿಕರ ಉಳಿತಾಯ, ಅವರ ಆಸ್ತಿ. ಎಲ್‌ಐಸಿ ದೇಶದ ಸಾಮಾನ್ಯ ಜನರ ಭರವಸೆ. ಅದನ್ನು ಯಾರೇ ಆಗಿರಲಿ ಮನಸ್ಸೋ ಇಚ್ಛೆ (ದುರು)ಉಪಯೋಗಿಸಿಕೊಳ್ಳುವುದು ಅಪಾಯಕಾರಿ. ದೇಶದ ಆರ್ಥಿಕತೆಗೆ ಹಾಗೂ ಆರ್ಥಿಕ ಸ್ವಾವಲಂಬನೆಗೆ ಅದು ಮಾರಕವಾಗುವುದು. ಎಲ್‌ಐಸಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳು ದೇಶದ ಆರ್ಥಿಕ ಬೆನ್ನೆಲುಬು. ಆದರೆ, ಯಾಕೆ ಹಠಾತ್ತನೆ ಎಲ್‌ಐಸಿಯ ಆರ್ಥಿಕ ಆರೋಗ್ಯದ ಬಗ್ಗೆ ಈ ಸುದ್ದಿ, ಸಂದೇಹಗಳು?! ವಿಮರ್ಶಕರ ಪ್ರಾಮಾಣಿಕತೆಯನ್ನು ಒಪ್ಪುವುದಾದರೂ ಸತ್ಯಾಂಶವನ್ನು ಶೋಧಿಸಬೇಕು. ಕೇಡಿಗರ, ಸಂಚುಗಾರರ ಬಗ್ಗೆ ಎಚ್ಚರ ವಹಿಸಬೇಕು. ಎಲ್‌ಐಸಿ ಬಗ್ಗೆ ಜನರಿಗಿರುವ ಭರವಸೆಯನ್ನು ಹಳಿ ತಪ್ಪಿಸುವ ಪ್ರಯತ್ನಗಳು ಜಾರಿಯಲ್ಲಿವೆ. ಭಾರತವನ್ನು ಕಟ್ಟುವ ಸಂಸ್ಥೆ ಎಲ್‌ಐಸಿ. ಎಲ್‌ಐಸಿ ದೇಶದ ಹೆಮ್ಮೆ. ಎಲ್‌ಐಸಿ ಜನಗಳ ಪ್ರತಿಷ್ಠೆ ಮತ್ತು ಖಾಸಗಿ ಬಂಡವಾಳದ ಈರ್ಷ್ಯೆ, ಹೊಟ್ಟೆಕಿಚ್ಚು!
ದೇಶದ ಆರ್ಥಿಕ ವಲಯದಲ್ಲಿ ಶೀಘ್ರಗತಿಯಲ್ಲಿ ಎರಡನೆಯ ಹಂತದ ಆರ್ಥಿಕ ಸುಧಾರಣೆಗಳನ್ನು ಜಾರಿ ಮಾಡಲು ನರೇಂದ್ರ ಮೋದಿಯವರ ಭಾಜಪ ಸರಕಾರ ಕಾರ್ಯೋನ್ಮುಖವಾಗಿದೆ. ಯಾವ ವೇಗದಲ್ಲಿ ಸರಕಾರಿ ಬ್ಯಾಂಕ್‌ಗಳಲ್ಲಿ ಅನೇಕ ರೀತಿಯ ಸುಧಾರಣೆಗಳು ಮಾಡಲಾಗುತ್ತಿರುವುದನ್ನು ನಾವು ಪ್ರತ್ಯಕ್ಷವಾಗಿ ಕಾಣುತ್ತಿದ್ದೇವೆ. ಜಿ-20 (ಎ-20) ರಾಷ್ಟ್ರಗಳ ಒಡಂಬಡಿಕೆ ಮತ್ತು ಬ್ಯಾಸೆಲ್ ನಾರ್ಮ್‌ಸ್‌ಗೆ (BASEL NORMS) ಭಾರತ ಬದ್ಧವಾಗಿದೆ. ಆದ್ದರಿಂದ ಬ್ಯಾಂಕಿಂಗ್ ವಲಯದಲ್ಲಿ ರಭಸದಿಂದ ಬದಲಾವಣೆಗಳನ್ನು ಮಾಡಲಾ ಗುತ್ತಿದೆ. ಇದೇ ನಿಟ್ಟಿನಲ್ಲಿ, ಎಲ್‌ಐಸಿಯನ್ನು ಶೇರು ಮಾರ್ಕೆಟ್‌ನಲ್ಲಿ ಲಿಸ್ಟ್ ಮಾಡುವ ನಿರ್ಧಾರವನ್ನು ಕೇಂದ್ರ ಸರಕಾರ ಪ್ರಕಟಿಸಿದೆ. ಇದರ ಅರ್ಥ, ಎಲ್‌ಐಸಿಯಲ್ಲಿ ಕೇಂದ್ರ ಸರಕಾರದ ಬಂಡವಾಳವನ್ನು ವಾಪಸ್ ಪಡೆಯುವುದು (Disinvestment) ಮತ್ತು ನಿಗಮದ ಆಸ್ತಿಯ ಮಾನ್ಯೀಕರಣ ಮಾಡುವುದು (Asset Monetization). ಇದರ ಶಿರೋನಾಮ ಬಿಗ್ ಬ್ಯಾಂಗ್ ರಿಫಾರ್ಮ್ (Big Bang Reform)! ಹೀಗೆ ಆದಲ್ಲಿ, ಮಾರುಕಟ್ಟೆ ಮೌಲ್ಯದ (Market Valuation) ಆಧಾರದಲ್ಲಿ, ಎಲ್‌ಐಸಿ ಭಾರತದ ಟಾಪ್ ಲಿಸ್ಟ್‌ಡ್ ಕಂಪೆನಿ ಆಗಿ ಪರಿಣಮಿಸುವುದು. ಇಂಗ್ಲೆಂಡಿನ ಬ್ರಾಂಡ್ ಫೈನಾನ್ಸ್ ಸಂಸ್ಥೆಯ ವರದಿಯ ಅನುಸಾರ, ಎಲ್‌ಐಸಿ ಭಾರತದ ಅತ್ಯಂತ ಭರವಸೆ ಪೂರ್ಣ ಬ್ರಾಂಡ್ (Most Trusted Brand), ಅದರ ಮೌಲ್ಯ 7.32 ಬಿಲಿಯನ್ ಅಮೆರಿಕನ್ ಡಾಲರ್‌ಗಳು; 2018 ವರ್ಷಕ್ಕೆ ಹೋಲಿಸಿದಾಗ ಮೌಲ್ಯದ ವೃದ್ಧಿ ಈ ವರ್ಷ ಶೇ.22.8.
ಎಲ್‌ಐಸಿಯ ಆರ್ಥಿಕ ವರ್ಷ 2018-19 ಸಾಲಿನ ಲೆಕ್ಕ ಪತ್ರಗಳ ವರದಿ ಪ್ರಕಟಿತವಾಗಿದೆ. 2018-19ರಲ್ಲಿ ನಿಗಮ ಶೇರು ವ್ಯವಹಾರಗಳಲ್ಲಿ 23,600 ಕೋಟಿ ರೂ.ಗಳ ಲಾಭ ಸಂಪಾದಿಸಿದೆ. ಪ್ರಸಕ್ತ ವರ್ಷ ಸೆಪ್ಟಂಬರ್ ತನಕ 11,500 ಕೋಟಿ ರೂ.ಗಳನ್ನು ಶೇರು ವ್ಯವಹಾರಗಳಲ್ಲಿ ಲಾಭವನ್ನಾಗಿ ಗಳಿಸಿದೆ. ಎಲ್‌ಐಸಿಯ 2019ರ ಚಿತ್ರಣ(LIC's Profile) ದಿಂದ ಈ ಕೆಳಕಂಡ ಮಾಹಿತಿ ಗಳು ವ್ಯಕ್ತವಾಗುತ್ತವೆ.
ಎಲ್‌ಐಸಿಯ ಆಪತ್ ನಿಧಿ (ಸಾಲ ತೀರಿಸುವ ಶಕ್ತಿ) SOLVENCY RESERVE
ಒಟ್ಟು ಆಸ್ತಿಯಲ್ಲಿ ಒಟ್ಟು ಹೊರೆ (ಹಣಕಾಸಿನ ಜವಾಬ್ದಾರಿ)ಯನ್ನು ಕಳೆದ ಬಳಿಕ ಬರುವ ಮೊಬಲಗಿನ ಒಂದೂವರೆ ಪಟ್ಟು ನಿಧಿ ಅನ್ನುವುದು ಆಪತ್ ನಿಧಿಯಾಗಿ ಇರಬೇಕೆಂಬುದು ಇನ್ಸುರೆನ್ಸ್ ರೆಗ್ಯುಲೇಟರಿ ಡೆವಲಪ್‌ಮೆಂಟ್ ಅಥಾರಿಟಿ ಆಪ್ ಇಂಡಿಯಾ (IRDAI) ದ ಕಾನೂನು.
ಒಟ್ಟು ಆಸ್ತಿ A
ಒಟ್ಟು ಹೊರೆ (-) B
ಅಂತರ C
ಆಪತ್ ನಿಧಿ = C x 1.5 ಅಂದರೆ'C',ಯ ಶೇ.150 ಎಲ್‌ಐಸಿಯ ಪ್ರಸಕ್ತ ಆಪತ್ ನಿಧಿ (Solvency Fund) ಅದರ ಹಣಕಾಸಿನ ಜವಾಬ್ದಾರಿಯ 1.55 ಗುಣ ಇದೆ. ಎರಡನೆಯ ಅಂಶ, ರೂ.40 ಲಕ್ಷ ಮೇಲಿನ ಎಲ್‌ಐಸಿಯ ಎಲ್ಲ ಪಾಲಿಸಿಗಳೂ GIC Re ಸಂಸ್ಥೆಯಲ್ಲಿ ಮರು ವಿಮೆ (Re-insurance) ಆಗಿವೆ.
ಮೂರನೆಯದು, ಎಲ್ಲ ಎಲ್‌ಐಸಿ ಪಾಲಿಸಿಗಳಿಗೂ ಕೇಂದ್ರ ಸರಕಾರದ ಸಾರ್ವಭೌಮ ಭರವಸೆ (Sovereign Guarantee) ಇದೆ. ಆದ ಕಾರಣ, ಎಲ್ಲ ಎಲ್‌ಐಸಿ ಪಾಲಿಸಿ ಗಳಿಗೆ ಮತ್ತು ಪಾಲಿಸಿದಾರರ ಹಣಕ್ಕೆ ಮೂರು ಅಂತಸ್ತಿನ ರಕ್ಷಣೆ ಇದೆ. ವಿಮಾ ಕ್ಷೇತ್ರದಲ್ಲಿ ಪೈಪೋಟಿ ಆರಂಭವಾಗಿ 20 ವರ್ಷಗಳು ಕಳೆದಿವೆ. ಜೀವ ವಿಮೆಯನ್ನು ಮಾರಾಟ ಮಾಡಲು ಕತ್ತು ಕೊಯ್ಯುವಷ್ಟು (Cut-throat) ಸ್ಪರ್ಧೆ ಇದ್ದರೂ, ಎಲ್‌ಐಸಿಯ ಮಾರ್ಕೆಟ್ ಪಾಲು ಪಾಲಿಸಿ ಸಂಖ್ಯೆಗಳ ಆಧಾರದಲ್ಲಿ ಶೇ.73 ಇದೆ. ಇದು ಎಲ್‌ಐಸಿಯ ಉತ್ಕೃಷ್ಟ ಸಾಧನೆ, ಅತ್ಯಂತ ಶ್ಲಾಘನೀಯ. ಹಣ ಕಾಸು ವರ್ಷ 2018-19ಕ್ಕೆ ಎಲ್‌ಐಸಿ ಪಾಲಿಸಿದಾರರಿಗೆ ಹೊಸ ದಾಖಲೆಯಾಗಿ ರೂ. 50,000 ಕೋಟಿಯನ್ನು ಬೋನಸ್ ಆಗಿ ಪ್ರಕಟಿಸಿದೆ.
ಈಗಷ್ಟೇ ಪ್ರಕಟಿತವಾಗಿರುವ ವಿಮಾ ನಿಯಂತ್ರಣ ಸಂಸ್ಥೆಯ (IRDA) 2019-20ನೇ ವರ್ಷದ ಅರ್ಧ ವಾರ್ಷಿಕ ವರದಿಯು ಈ ಕೆಳಕಂಡಂತೆ ಹೇಳಿದೆ:
ಭಾರತೀಯ ಜೀವವಿಮಾ ನಿಗಮ ಹೊಸ ವ್ಯವಹಾರದಲ್ಲಿ (New Business) ಈ ವರ್ಷದ ಮೊದಲನೆಯ ಅರ್ಧದಲ್ಲಿ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ. ದೇಶದ ಸ್ವಾತಂತ್ರದ ನಂತರ ಈ ರೀತಿಯ ಗರಿಷ್ಠ ವಹಿವಾಟು ಹಿಂದೆಂದೂ ನಡೆದಿರಲಿಲ್ಲ.
ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ, ಎಲ್‌ಐಸಿಯ ಆರ್ಥಿಕ ಆರೋಗ್ಯದ ಅಪಪ್ರಚಾರಗಳ ಬಗ್ಗೆ ಪ್ರಸ್ತಾಪಿಸಿದಾಗ, ವಿಮಾ ನಿಯಂತ್ರಕ ಶುಭಾಷ್ ಚಂದ್ರ ಕುಂಟೀಯಾರವರು, ‘‘ಈ ರೀತಿಯ ತಪ್ಪು ಪ್ರಚಾರವನ್ನು ಕೆಲವು ಖಾಸಗಿ ವಿಮಾ ಕಂಪೆನಿಗಳು ಎಲ್‌ಐಸಿಯ ವಿರುದ್ಧ ಮಾಡುತ್ತಿವೆ. ಅಪರಾಧಿಗಳ ವಿರುದ್ಧ ಕಠಿಣ ಶಿಸ್ತಿನ ಕ್ರಮವನ್ನು ಕೈಗೊಳ್ಳಲಾಗುವುದು. ಎಲ್‌ಐಸಿ ಅತ್ಯಂತ ಆರೋಗ್ಯಕರ ಸಂಸ್ಥೆ’’ ಎಂದು ಹೇಳಿದರು.
ಹೊಸ ವ್ಯವಹಾರದಲ್ಲಿ ಎಲ್‌ಐಸಿಯ ದಾಖಲೆ
ಆರ್ಥಿಕ ವರ್ಷ 2019-20ರಲ್ಲಿ, ಎಲ್‌ಐಸಿ ಮೊದಲ ವರ್ಷದ ಪ್ರೀಮಿಯಂ ಕಲೆಕ್ಷನ್ (First Year Premium Collection)ನಲ್ಲಿ ಶೇ.41.74 ಬೆಳವಣಿಗೆ ಸಾಧಿಸಿದೆ. ಇದು ಎಲ್ಲ ಖಾಸಗಿ ಜೀವವಿಮಾ ಕಂಪೆನಿಗಳೂ ಒಟ್ಟಾಗಿ ಸೇರಿ ಮಾಡಿರುವ ಸಾಧನೆಗಿಂತ ಹೆಚ್ಚಿನದು. ಎಲ್ಲ ಖಾಸಗಿ ಜೀವ ವಿಮಾ ಕಂಪೆನಿಗಳ ಒಟ್ಟು ವೃದ್ಧಿ ಶೇ.20.88 ಮಾತ್ರ. ಸೆಪ್ಟಂಬರ್ 2019ರ ಅಂತ್ಯದಲ್ಲಿ ಎಲ್‌ಐಸಿಯ ಮಾರ್ಕೆಟ್ ಶೇರು ಶೇ.71.55, ಎಲ್ಲ ಖಾಸಗಿ ಜೀವವಿಮಾ ಕಂಪೆನಿಗಳ ಒಟ್ಟು ಮಾರ್ಕೆಟ್ ಶೇರು ಶೇ.28.45.
(ಹಿಂದು ಪತ್ರಿಕೆ, 16.10.2019)
ದೇಶ, ವಿದೇಶಿ ಕಾರ್ಪೊರೇಟ್ ಬಂಡವಾಳಗಾರರಿಗೆ ಎಲ್‌ಐಸಿಯ ಸಾಧನೆ ಗಳು ನುಂಗಲಾರದ ತುತ್ತಾಗಿದೆ. ದೇಶದ ಬೆಳವಣಿಗೆಗೆ ಈ ಖಾಸಗಿ ಕಂಪೆನಿಗಳು ಒಂದು ಬಿಡಿಕಾಸನ್ನೂ ಖರ್ಚು ಮಾಡಿಲ್ಲ. ಅಕ್ರಮವಾಗಿ ಅಥವಾ ಅನೀತಿಯಿಂದ ಆದರೂ ಸರಿ ಲಾಭವೇ ಅವುಗಳ ಏಕೈಕ ಗುರಿ. ಅವುಗಳ ವ್ಯಾಪಾರ ತಂತ್ರಗಳಲ್ಲಿ ಎಲ್‌ಐಸಿಯನ್ನು ದೂಷಿಸುವುದೂ ಒಂದು. ವಿಮಾ ನಿಯಂತ್ರಕರ ಹೇಳಿಕೆ ಇದನ್ನು ಖಚಿತ ಪಡಿಸುತ್ತದೆ.
1956ರಲ್ಲಿ ಎಲ್‌ಐಸಿ ಸ್ಥಾಪನೆಯಾಯಿತು. ಪ್ರಾರಂಭದಲ್ಲಿ ಕೇಂದ್ರ ಸರಕಾರ ಹೂಡಿದ ಬಂಡವಾಳ ಕೇವಲ ಐದು ಕೋಟಿ ರೂ. ಮಾತ್ರ. ಕಳೆದ ವರ್ಷ 2017-18ರಲ್ಲಿ ಎಲ್‌ಐಸಿ ಈ ಐದು ಕೋಟಿ ಬಂಡವಾಳದ ಮೇಲೆ ಕೇಂದ್ರ ಸರಕಾರಕ್ಕೆ, ಈ ಒಂದು ವರ್ಷಕ್ಕೆ, 2,430 ಕೋಟಿ, 19 ಲಕ್ಷ, 58 ಸಾವಿರದ ನೂರ ತೊಂಬತ್ತು ಮೂರು ರೂ.ಯನ್ನು ಡಿವಿಡೆಂಡ್ ಆಗಿ ಪಾವತಿ ಮಾಡಿತ್ತು. 2017-18 ಸಾಲಿನಲ್ಲಿ ಎಲ್‌ಐಸಿಯ ಒಟ್ಟು ಮಿಗುತಾಯ ಹಣ (Valuation Surplus) ರೂ.48,436 ಕೋಟಿ. ಪ್ರಸಕ್ತ ಸಾಲಿಗೆ ಎಲ್‌ಐಸಿ ಕೇಂದ್ರ ಸರಕಾರಕ್ಕೆ ಎಷ್ಟು ಡಿವಿಡೆಂಡ್ ನೀಡುವುದು ಎಂದು ಕಾದು ನೋಡಬಹುದು. ಪ್ರಪಂಚದ ಅತಿ ದೊಡ್ಡ ಮತ್ತು ಶ್ರೇಷ್ಠ ಜೀವವಿಮಾ ಕಂಪೆನಿ ಎಲ್‌ಐಸಿ. ಇಲ್ಲಿಯವರೆಗೆ ರಾಕ್ ಆಫ್ ಜಿಬ್ರಾಲ್ಟರ್ ರೀತಿ ಸದೃಢವಾಗಿದೆ. ದುಷ್ಟ ಶಕ್ತಿಗಳು ಏನೇ ಡರ್ಟಿ ಗೇಮ್ಸ್ಸ್‌ಆಡಿದರೂ ಎಲ್‌ಐಸಿ ರಾಕ್ ಆಫ್ ಜಿಬ್ರಾಲ್ಟರ್ ಆಗಿಯೇ ಮುಂದುವರಿಯಬಹುದೆಂಬ ಭರವಸೆ ಜನರಿಗಿದೆ.
ಡರ್ಟೀ ಗೇಮ್ಸ್ಸ್ ಎಂಬ ನಾಣ್ಯದ ಒಂದು ಮುಖ ನೋಡಿದೆವು. ಅದರ ಇನ್ನೊಂದು ಮುಖದ ಕಡೆ ಗಮನ ಹರಿಸುವುದು ಅನಿರ್ವಾಯ. ಮೊದಲ ಭಾಗದಲ್ಲಿ ಯಾವ ರೀತಿ ಕಾರ್ಪೊರೇಟ್ ಬಂಡವಾಳಗಾರರು ಎಲ್‌ಐಸಿಯ ಬಗ್ಗೆ ತಪ್ಪು ಪ್ರಚಾರವೆಸಗುತ್ತಿದ್ದಾರೆ ಎಂಬುದನ್ನು ನೋಡಿದೆವು. ಇನ್ನೊಂದು ಭಾಗದಲ್ಲಿ ಈ ಹೇಯ ಕೃತ್ಯದಲ್ಲಿ ಕೇಂದ್ರ ಸರಕಾರದ ಪಾತ್ರವನ್ನು ಗುರುತಿಸುವ ಅಗತ್ಯವಿದೆ. ಎಲ್‌ಐಸಿಯ ಹಣವನ್ನು ನಷ್ಟ-ಸಂಭವವುಳ್ಳ ಹಾಗೂ ಸಂದೇಹಾಸ್ಪದವಾದ ಸಂಸ್ಥೆಗಳಲ್ಲಿ ತೊಡಗಿಸಿ, ಎಲ್‌ಐಸಿಗೆ ನಷ್ಟವನ್ನು ಉಂಟು ಮಾಡಿ, ಜನಗಳ ಮನಸ್ಸಿನಲ್ಲಿ ಆ ಸಂಸ್ಥೆಯ ಭರವಸೆಯ ಬಗ್ಗೆ ಆತಂಕಗಳನ್ನು ಕೆರಳಿಸಿ, ಕೊನೆಗೆ ಎಲ್‌ಐಸಿಯನ್ನು ಬಲಹೀನಗೊಳಿಸಿ ಅದನ್ನು ಖಾಸಗಿಕರಿಸುವುದೇ ಇಂದಿನ ಕೇಂದ್ರ ಸರಕಾರದ ಹುನ್ನಾರವಿರಬಹುದು. ಹಲವಾರು ನಿದರ್ಶನಗಳನ್ನು ನಾವು ವಿಶ್ಲೇಷಿಸಬಹುದು.
ಖಾಸಗಿ ಸಂಸ್ಥೆಯಾದ ಐಎಲ್‌ಎಫ್‌ಎಸ್ (ILFS Ltd.)ನಲ್ಲಿ ಎಲ್‌ಐಸಿ ಶೇ.25.34 ಶೇರುಗಳನ್ನು ಹೊಂದಿದೆ. ವಿಪರೀತ ಆರ್ಥಿಕ ಮುಗ್ಗಟ್ಟಿನಲ್ಲಿರುವ ಈ ಸಂಸ್ಥೆ ಈಗ ದಿವಾಳಿ ಯಾಗುವ ಸ್ಥಿತಿಯಲ್ಲಿದೆ. ಶೇ.25.34 ಪಾಲು ಬಂಡವಾಳ ಅಷ್ಟೇ ಅಲ್ಲದೆ ಎಲ್‌ಐಸಿ ಈ ಸಂಸ್ಥೆಯಲ್ಲಿ 540 ಕೋಟಿ ರೂ.ಯಷ್ಟು ಹಣವನ್ನು ನಾನ್-ಕನ್ವರ್ಟಿಬಲ್ ಡೆಬಂಚರ್ (Non-Convertible Debenture) ಆಗಿ ಸಹ ಹೂಡಿದೆ. ಐಎಲ್‌ಎಫ್‌ಎಸ್ ಕಂಪೆನಿಯ ಸಾಲದ ಹೊರೆ ರೂ.91,000 ಕೋಟಿಗಿಂತಲೂ ಹೆಚ್ಚು. ಏನಾದರೂ ಸರಿ, ಈ ಖಾಸಗಿ ಕಂಪೆನಿಯನ್ನು ಉಳಿಸಬೇಕು ಎಂಬುದು ಕೇಂದ್ರ ಸರಕಾರದ ನಿಲುವು. ಅದಕ್ಕಾಗಿ ಎಲ್‌ಐಸಿ ಇನ್ನೂ ಹೆಚ್ಚು ಬಂಡವಾಳವನ್ನು ಐಎಲ್‌ಎಫ್‌ಎಸ್‌ನಲ್ಲಿ ತೊಡಗಿಸಬೇಕು ಎಂಬ ಒತ್ತಡವಿದೆ.
ಆರ್ಥಿಕ ವರ್ಷ 2014-15 ಮತ್ತು 2018-19ರ ಮಧ್ಯೆ ಎಲ್‌ಐಸಿ ಕೇಂದ್ರ ಸರಕಾರಿ ಸ್ವಾಮ್ಯದ ಉದ್ದಿಮೆಗಳಲ್ಲಿ 10.7 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ಬಂಡವಾಳವನ್ನು ಹೂಡಿದೆ. ಇದರಲ್ಲಿ ಸರಕಾರಿ ಸ್ವಾಮ್ಯದ ಬ್ಯಾಂಕುಗಳೂ ಸೇರಿವೆ. 1956ರಿಂದ 2014ರ ವರೆಗೆ ಎಲ್‌ಐಸಿ ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳಲ್ಲಿ ಹೂಡಿದ್ದ ಬಂಡವಾಳ 11.9 ಲಕ್ಷ ಕೋಟಿ ರೂ. ಒಟ್ಟು ಬಂಡವಾಳ ಹೂಡಿಕೆ 22.6 ಲಕ್ಷ ಕೋಟಿ ರೂ. 58 ವರ್ಷಗಳಲ್ಲಿ ಹೂಡಿದ್ದ ಬಂಡವಾಳ 11.9 ಲಕ್ಷ ಕೋಟಿ ರೂ.ಗಳಾಗಿದ್ದು, ಕಳೆದ 6 ವರ್ಷಗಳಲ್ಲಿ ಮಾತ್ರ 10.7 ಲಕ್ಷ ಕೋಟಿ ರೂ. ಹೆಚ್ಚುವರಿ ಬಂಡವಾಳ ಹೂಡಲಾಯಿತು. ಅಂದರೆ 2014ರ ನಂತರದ 6 ವರ್ಷಗಳಲ್ಲಿ ಸಾರ್ವಜನಿಕ ಕ್ಷೇತ್ರದಲ್ಲಿ ಎಲ್‌ಐಸಿ ಬಂಡವಾಳ ಹೂಡಿಕೆ ಶೇ.90ರಷ್ಟು ಹೆಚ್ಚು.
ಐಡಿಬಿಐ ಬ್ಯಾಂಕ್ (IDBI Bank) ನಲ್ಲಿ ಬಂಡವಾಳದ ಶೇ.51 ಪಾಲನ್ನು ಖರೀದಿಸಲು ಎಲ್‌ಐಸಿಗೆ ಆಜ್ಞೆ ಹೊರಡಿಸ ಲಾಯಿತು. ಶೇ.51 ಶೇರುಗಳ ಮೌಲ್ಯ 21,624 ಕೋಟಿ ರೂ. ಇದು ಸೆಪ್ಟಂಬರ್-ಡಿಸೆಂಬರ್ 2018ರಲ್ಲಿ. ಶೇರುಗಳ ಮೌಲ್ಯ ರೂ.21,624 ಕೋಟಿಯಿಂದ ಈಗ ರೂ. 8,718ಕ್ಕೆ ಕುಸಿದಿದೆ. ಅಂದರೆ ಸುಮಾರು ಒಂದು ವರ್ಷದಲ್ಲಿ ಎಲ್‌ಐಸಿಗೆ ಉಂಟಾದ ನಷ್ಟ 12,906 ಕೋಟಿ ರೂ. ಐಡಿಬಿಐ ಬ್ಯಾಂಕ್‌ನಲ್ಲಿ ಮರುಪಾವತಿಯಾಗದ ಸಾಲಗಳ ಹೊರೆ (NPA) ಶೇ.29, ಅಂದರೆ ಸುಮಾರು 55,000 ಸಾವಿರ ಕೋಟಿ ರೂ. ಬೆಟ್ಟದಷ್ಟು ಸಾಲದ ಹೊರೆಯಿಂದ ಎಲ್‌ಐಸಿ ಹೂಡಿದ ಬಂಡವಾಳ ನೀರಿನಲ್ಲಿ ಮಾಡಿದ ಹೋಮದ ಹಾಗೆ ಕೊಚ್ಚಿ ಹೋಗಿದೆ. ಇದರಿಂದಾಗಿ ಐಡಿಬಿಐ ಬ್ಯಾಂಕ್‌ನಲ್ಲಿ 9,300 ಕೋಟಿ ರೂ. ಹೆಚ್ಚುವರಿ ಬಂಡವಾಳ ಹೂಡಿಕೆ ಅನಿವಾರ್ಯವಾಯಿತು. ಈ 9,300 ಕೋಟಿ ರೂ.ಯಲ್ಲಿ ಕೇಂದ್ರ ಸರಕಾರದ ಪಾಲು4,557 ಕೋಟಿ ರೂ. ಮತ್ತು ಎಲ್‌ಐಸಿಯ ಪಾಲು 4,743 ಕೋಟಿ ರೂ. ಎಲ್‌ಐಸಿ ಮೆಜಾರಿಟಿ ಸ್ಟೇಕ್ ಹೊಂದಿರುವ ಐಡಿಬಿಐ ಬ್ಯಾಂಕ್ ಈಗ ಖಾಸಗಿ ಬ್ಯಾಂಕ್. ಬ್ಯಾಂಕ್‌ನ ಆರ್ಥಿಕ ಸ್ಥಿತಿ ಕಿಂಚಿತ್ತೂ ಸುಧಾರಿಸಿಲ್ಲ ಅನ್ನುವುದು ಆತಂಕದ ವಿಚಾರ.
2017ರ ನವೆಂಬರ್‌ನಲ್ಲಿ ನ್ಯೂ ಇಂಡಿಯಾ ಅಶ್ಶೂರೆನ್ಸ್ ಕಂಪೆನಿಯಲ್ಲಿ ಎಲ್‌ಐಸಿ 5,713 ಕೋಟಿ ರೂ.ಗೆ ಶೇರುಗಳನ್ನು ಖರೀದಿ ಮಾಡಿತು; ಒಂದು ಶೇರಿಗೆ 800 ರೂ.ಯಂತೆ. ಸೆಪ್ಟಂಬರ್ 23, 2019ಕ್ಕೆ ಶೇರುಗಳ ಮೌಲ್ಯ757 ರೂ.ಕ್ಕೆ ಕುಸಿಯಿತು, ಶೇ.86ರಷ್ಟು. ಅಂದರೆ 5,713 ಕೋಟಿ ರೂ., 757 ಕೋಟಿ ರೂ.ಯಾಗಿ ಕುಗ್ಗಿತು.
ಜಿಐಸಿ ರೇ (GIC Re)ನಲ್ಲಿ ಎಲ್‌ಐಸಿ ಖರೀದಿಸಿದ ಬಂಡವಾಳ ಅಕ್ಟೋಬರ್ 2018ರಲ್ಲಿ 5,641 ಕೋಟಿ ರೂ. ಈಗ ಅದರ ಮೌಲ್ಯ 1,751 ಕೋಟಿ ರೂ. ಎನ್‌ಟಿಪಿಸಿ (NTPC)ಯಲ್ಲಿ ಎಲ್‌ಐಸಿ ಹೊಂದಿದ್ದ ಬಂಡವಾಳ 4,275 ಕೋಟಿ ರೂ. ಈಗ ಅದರ ಮೌಲ್ಯ3,003 ಕೋಟಿ ರೂ. ಎರಡು ವರ್ಷಗಳಲ್ಲಿ ಬರೀ ಐದು ದೊಡ್ಡ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಎಲ್‌ಐಸಿಗೆ ಉಂಟಾದ ನಷ್ಟ 20,000 ಕೋಟಿ ರೂ.
ಇದಲ್ಲದೆ, ಎಲ್‌ಐಸಿ ಕೋಲ್ ಇಂಡಿಯಾ (COAL INDIA,) ಎನ್‌ಎಚ್‌ಪಿಸಿ (NHPC,) ಎನ್‌ಬಿಸಿಸಿ (NBCC,) ಹಿಂದೂಸ್ಥಾನ್ ಕಾಪರ್ (Hindustan Copper) ಮುಂತಾದ ಉದ್ದಿಮೆಗಳಲ್ಲಿ ಶೇರು ಮಾರುಕಟ್ಟೆ ಉಲ್ಟಾ-ಪಲ್ಟಿಯಲ್ಲಿ ಸುಮಾರು 17,000 ಕೋಟಿ ರೂ. ನಷ್ಟ ಅನುಭವಿಸಿತು.
ಕೇಂದ್ರ ಸರಕಾರದ ಆದೇಶದ ಮೇರೆಗೆ ಹೂಡಲಾದ ಈ ಬಂಡವಾಳಗಳು ಶೇರು ಮಾರ್ಕೆಟ್ ಗೋತಾ ಹೊಡೆದುದರ ಫಲವಾಗಿ ಎಲ್‌ಐಸಿಗೆ ಎಷ್ಟು ಆರ್ಥಿಕ ನಷ್ಟವನ್ನು ಉಂಟು ಮಾಡಿದವು ಅನ್ನುವುದನ್ನು ನಾವು ಲೆಕ್ಕ ಮಾಡಬಹುದು. ಇವೆಲ್ಲವೂ ಎಲ್‌ಐಸಿ ಪಾಲಿಸಿದಾರರ ಹಣ.
ಭಾರತೀಯ ರೈಲ್ವೆ, ರಸ್ತೆ ಸಾರಿಗೆ ಸಂಸ್ಥೆಗಳು, ಏರ್ ಇಂಡಿಯಾ, ಟೆಲಿಕಾಂ, ಇನ್ನೂ ಅನೇಕ ಉದ್ದಿಮೆಗಳಿಗೆ ಎಲ್‌ಐಸಿ ಬಂಡವಾಳ ಒದಗಿಸಿದೆ. ಇವುಗಳ ಸ್ಥಿತಿಯೇನು? ರೈಲು ಮಾರ್ಗಗಳನ್ನು, ರೈಲು ನಿಲ್ದಾಣದ ಫ್ಲಾಟ್‌ಫಾರಂಗಳನ್ನು, ರೈಲು ನಿಲ್ದಾಣಗಳನ್ನೇ ಖಾಸಗೀಕರಿಸಲು ಮುಂದಾಗಿದೆ. ನರೇಂದ್ರ ಮೋದಿಯವರ ಕೇಂದ್ರ ಸರಕಾರದ ಎಲ್‌ಐಸಿಯಲ್ಲಿ ಸಂಗ್ರಹವಿರುವ ಜನರ ಉಳಿತಾಯಕ್ಕೆ ಭದ್ರತೆ ಇದೆಯೇ? ಸಾಮಾನ್ಯ ಜನಗಳ ಉಳಿತಾಯದ ಹಣ ಖಾಸಗಿ ಬಂಡವಾಳಿಗರ ಲೂಟಿಗಾಗಿಯೇ?
ಬಿಎಸ್‌ಎನ್‌ಎಲ್ (BSNL) ಇಂದೋ ನಾಳೆಯೋ ಅನ್ನುವ ಹಾಗೆ ಐಸಿಯೂ (ICU)ನಲ್ಲಿದೆ! ಏರ್ ಇಂಡಿಯಾ ರೆಕ್ಕೆ ಪುಕ್ಕವಿಲ್ಲದೆ ಚಿಂತಾಜನಕವಾಗಿದೆ. ಇವೆಲ್ಲಕ್ಕೂ ಯಾರು ಹೊಣೆ? ಬುಲೆಟ್ ಟ್ರೈನ್ ವೇಗದಲ್ಲಿ ಭಾರತದ ಆರ್ಥಿಕತೆ ಪ್ರಪಾತದತ್ತ ಧಾವಿಸುತ್ತಿದೆ. ಇದು ಇಂದಿನ ವಾಸ್ತವ ಸ್ಥಿತಿ. ಎಲ್ಲೋ ಕೆಳಗಿನ ಸ್ತರದಲ್ಲಿದ್ದ ಗೌತಮ್ ಅದಾನಿ ಈಗ ದೇಶದ ಎರಡನೆಯ ಅತ್ಯಂತ ಶ್ರೀಮಂತ ಬಿಲಿಯನೇರ್! ಇದು ಮೇಕ್ ಇನ್ ಇಂಡಿಯಾ! ಬಲಿಪಶುಗಳು ಯಾರು? ಸಾರ್ವಜನಿಕ ಬ್ಯಾಂಕ್‌ಗಳು ಮತ್ತು ಎಲ್‌ಐಸಿ.
ಶೇರು ಮಾರ್ಕೆಟ್‌ನಲ್ಲಿ ಉಂಟಾದ ನಷ್ಟ, ಸಂದೇಹಾಸ್ಪದ ಬಂಡವಾಳ ಹೂಡಿಕೆ ಮುಂತಾದವುಗಳಿಂದ ಎಲ್‌ಐಸಿಯ ಮರು ಪಾವತಿಯಾಗದ ಸಾಲಗಳು, ಅಂದರೆ ಎನ್‌ಪಿಎ (NPA) ಕ್ರಮೇಣ ಗಣನೀಯವಾಗಿ ಹೆಚ್ಚಿವೆ. ಕೆಳಕಂಡ ಅಂಕಿ ಅಂಶಗಳನ್ನು ವೀಕ್ಷಿಸಬಹುದು. ಬ್ಯಾಂಕುಗಳಲ್ಲಿ ವಾಡಿಕೆಯಲ್ಲಿರುವಂತೆ ಎಲ್‌ಐಸಿಯಲ್ಲೂ ಮರುಪಾವತಿಯಾಗದ ಸಾಲದ ಕೆಲಭಾಗವನ್ನು ರದ್ದು ಮಾಡಲು ಹಣವನ್ನು ಒದಗಿಸಿಡಲಾಗುವುದು. (Pro-vision for writing off Bad Loans) ಹೀಗಾಗಿ ನಿವ್ವಳ ಮರುಪಾವತಿಯಾಗದ ಸಾಲದ ದರ ಒಟ್ಟು ಮರುಪಾವತಿಯಾಗದ ಸಾಲದ ದರಕ್ಕಿಂತ ಕಡಿಮೆ. ಎಲ್‌ಐಸಿಯ 2018-19ರ ಒಟ್ಟು ಮರುಪಾವತಿಯಾಗದ ಸಾಲ ಶೇ.6ನ್ನು ದಾಟಿದೆ. ಇದು ಕಳವಳದ ಸುದ್ದಿ.
ಎಲ್‌ಐಸಿಯ ಮೇಲೆ ಒಮ್ಮೆಲೇ ಎರಡು ರೀತಿಯ ದಾಳಿ ನಡೆಯುತ್ತಿದೆ. ಕೇಂದ್ರ ಸರಕಾರ ತನ್ನ ತಪ್ಪು ಆರ್ಥಿಕ ಕಾರಣಗಳಿಗಾಗಿ, ರಾಜಕೀಯ ದುರುದ್ದೇಶದಿಂದ ಎಲ್‌ಐಸಿ ಭಂಡಾರವನ್ನು ಖಾಲಿ ಮಾಡಲು ಹೊರಟಿದೆ. ಎಲ್‌ಐಸಿಯ ಹಣದಲ್ಲಿ ಸರಕಾರ ಪ್ರಜ್ಞಾಪೂರ್ವಕವಾಗಿ ಜೂಜು ಆಡುತ್ತಿದೆ. ಅದನ್ನೇ ಪೆಡಂಭೂತ ಮಾಡಿ ಕಾರ್ಪೊರೇಟ್ ಬಂಡವಾಳಗಾರರು ಎಲ್‌ಐಸಿಯ ಪ್ರತಿಷ್ಠೆಗೆ ಕಳಂಕ ಹಚ್ಚಲು ತಪ್ಪು ಪ್ರಚಾರ ಮಾಡಲು ಶುರು ಮಾಡಿದ್ದಾರೆ. ಎರಡೂ ದಾಳಿಗಳ ಉದ್ದೇಶ ಒಂದೇ. ಒಂದಕ್ಕೊಂದು ಪೂರಕ. ಇದ್ಯಾವುದೂ ಕಾಕತಾಳೀಯವಲ್ಲ. ಇದು ಸಿಂಪೋನಿ, ಜುಗಲ್‌ಬಂಧಿ! ಮಹಾಭಾರತದ ಶಕುನಿ ಜ್ಞಾಪಕಕ್ಕೆ ಬರುತ್ತಾನೆ. ಜೂಜಾಟದಲ್ಲಿ ಆತ ಅತೀ ಮೇಧಾವಿ. ಕೇಂದ್ರ ಸರಕಾರ ಎಲ್‌ಐಸಿಯನ್ನು ಬಲಹೀನಗೊಳಿಸಿ, ಅದೇ ಕಾರಣಕ್ಕಾಗಿ ಸಂಸ್ಥೆಯನ್ನು ಶೇರು ಪೇಟೆಯಲ್ಲಿ ಲಿಸ್ಟ್ ಮಾಡುವುದು, ನಂತರ ಹಿತ್ತಲ ಬಾಗಿಲಿನಿಂದ ಅದನ್ನು ಖಾಸಗೀಕರಿಸುವುದು, ಇದುವೇ ಬಿಗ್ ಬ್ಯಾಂಗ್!
ಭಾರತದ ಜನತೆ, ಕಾರ್ಮಿಕ ಚಳವಳಿ ಎಲ್‌ಐಸಿಯ ಬಗ್ಗೆ ಎಚ್ಚರ ವಹಿಸಬೇಕು. ಕ್ರೋನಿ ಕ್ಯಾಪಿಟಲಿಸಂನ ಹುನ್ನಾರಗಳನ್ನು ಹಿಮ್ಮೆಟ್ಟಿಸಬೇಕು. ಎಲ್‌ಐಸಿ ಭಾರತದ ಹೆಮ್ಮೆ, ಜನತೆಯ ಭರವಸೆ. ಎಲ್‌ಐಸಿ ರಾಷ್ಟ್ರದ ಆರ್ಥಿಕ ಸ್ವಾವಲಂಬನೆಯ ಅಡಿಪಾಯ. ಅದು ಗಟ್ಟಿಯಾಗಿಯೇ ಉಳಿಯಬೇಕು.