ಉಡುಪಿ ನಗರದ ಎಲ್ಲ ರಸ್ತೆಗಳಲ್ಲೂ ಟ್ರಾಫಿಕ್ ಜಾಮ್!
ಉಡುಪಿ, ಅ.26: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಇಂದು ಬೆಳಗ್ಗಿನಿಂದ ಇಡೀ ಉಡುಪಿ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಇದರಿಂದ ವಾಹನಗಳ ಚಾಲಕರು ಹಾಗೂ ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ.
ನಗರದ ಪ್ರಮುಖ ರಸ್ತೆಯಾಗಿರುವ ಕೆ.ಎಂ.ಮಾರ್ಗ, ಉಡುಪಿ- ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಕಲ್ಸಂಕ ಜಂಕ್ಷನ್, ಸಿಟಿ ಬಸ್ ನಿಲ್ದಾಣ, ಮಸೀದಿ ರಸ್ತೆ, ಮಾರುತಿ ವಿಥಿಕಾ ರಸ್ತೆ ಸೇರಿದಂತೆ ಎಲ್ಲ ರಸ್ತೆಗಳು ವಾಹನಗಳಿಂದ ತುಂಬಿ ಹೋಗಿವೆ. ಪ್ರಮುಖ ರಸ್ತೆಗಳಲ್ಲದೇ ನಗರದ ಒಳರಸ್ತೆಗಳಲ್ಲೂ ಟ್ರಾಫಿಕ್ ಜಾಮ್ ಉಂಟಾಯಿತು.
ಹಬ್ಬದ ಖರೀದಿಗಾಗಿ ಸಾರ್ವಜನಿಕರು ಬೆಳಗ್ಗೆಯಿಂದಲೇ ತಮ್ಮ ವಾಹನ ಗಳಲ್ಲಿ ನಗರಕ್ಕೆ ಆಗಮಿಸಿದ ಪರಿಣಾಮ ಈ ಟ್ರಾಫಿಕ್ ಜಾಮ್ ಉಂಟಾಗಿದೆ ಎನ್ನಲಾಗಿದೆ. ಅಲ್ಲದೆ ನಗರದಲ್ಲಿ ಸರಿಯಾದ ಪಾರ್ಕಿಂಗ್ ಸ್ಥಳ ಇಲ್ಲದೆ ರಸ್ತೆ ಬದಿಯಲ್ಲೇ ವಾಹನಗಳನ್ನು ಪಾರ್ಕ್ ಮಾಡಿರುವು ದರಿಂದ ಈ ರೀತಿ ಸಂಚಾರ ದಲ್ಲಿ ವ್ಯತಯ ಉಂಟಾಯಿತು.
ವಾಹನ ದಟ್ಟನೆಯಿಂದ ಕೆಲವು ರಸ್ತೆಗಳಲ್ಲಿ ಅರ್ಧ ಗಂಟೆಗೂ ಅಧಿಕ ಕಾಲ ಸಂಚಾರದಲ್ಲಿ ವ್ಯತ್ಯಯ ಕಂಡುಬಂದಿದೆ. ಇದರಿಂದ ವಾಹನ ಚಾಲಕರು ಮಾತ್ರ ವಲ್ಲದೆ ಪಾದಾಚಾರಿಗಳು ಕೂಡ ರಸ್ತೆ ದಾಟಲು ಪರದಾಡುತ್ತಿರುವುದು ಕಂಡು ಬಂದಿದೆ. ಕೆಲವು ರಸ್ತೆಗಳಲ್ಲಿ ಸಾರ್ವಜನಿಕರೇ ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಿದರು. ಪೊಲೀಸರು ಕೂಡ ಸುಗಮ ಸಂಚಾರಕ್ಕಾಗಿ ಹರಸಾಹಸ ಪಟ್ಟರು. ಕೆಲವು ಕಡೆ ಪೊಲೀಸರು ಇಲ್ಲದ ಕಾರಣ ಗಂಟೆಗಟ್ಟಲೆ ಸಂಚಾರ ಸಮಸ್ಯೆ ಉಂಟಾಗಿರುವುದು ಕಂಡುಬಂತು.