varthabharthi


ನೇಸರ ನೋಡು

ಬಸವರಾಜ ಕಟ್ಟೀಮನಿ-ಜನ್ಮ ಶತಾಬ್ದಿ ಸ್ಮರಣೆ

ವಾರ್ತಾ ಭಾರತಿ : 26 Oct, 2019
ಜಿ.ಎನ್.ರಂಗನಾಥ ರಾವ್

ಕಟ್ಟೀಮನಿಯವರು ಅನಕೃ ಅವರಿಂದ ಪ್ರಗತಿಶೀಲ ಸ್ಫೂರ್ತಿಯನ್ನಷ್ಟೇ ಪಡೆದುಕೊಂಡು ತಮ್ಮದೇ ಆದ ಜಾಡಿನಲ್ಲಿ ಕಾದಂಬರಿಯ ಕೃಷಿ ಮಾಡಿದವರು. ಸಮಾಜದ ವಿವಿಧ ಮುಖಗಳಾದ ಕಾರ್ಖಾನೆಗಳು, ಮಠಮಂದಿರಗಳಲ್ಲಿ ನಡೆಯುತ್ತಿದ್ದ ಶೋಷಣೆ, ಅನ್ಯಾಯಗಳನ್ನು ಕಂಡು ರೊಚ್ಚಿಗೆದ್ದು ನಿಷ್ಠುರವಾಗಿ ಬರೆದ ಕಟ್ಟೀಮನಿಯವರ ಕಾದಂಬರಿಗಳಲ್ಲಿ ಸಾಮಾಜಿಕ ವಾಸ್ತವತೆ ಎನ್ನುವುದು ತುಸು ಢಾಳವಾಗಿಯೇ ಕಾಣಿಸಿಕೊಳ್ಳುತ್ತದೆ. ಪ್ರಗತಿಶೀಲರಲ್ಲಿ ವೈಚಾರಿಕತೆಗಿಂತ ಭಾವನೆಗಳೇ ಮೇಲುಗೈ ಪಡೆಯುತ್ತವೆ ಎನ್ನುವುದು ಕುರ್ತಕೋಟಿಯವರ ಅಭಿಮತ. ಇದು ಕಟ್ಟೀಮನಿಯವರಿಗೂ ಅನ್ವಯಿಸಬಹುದಾದ ಮಾತು.


ಖಡ್ಗವಾಗಲೀ ಕಾವ್ಯ ಎಂದು ಕನ್ನಡ ಸಾಹಿತ್ಯದಲ್ಲಿ ಬಂಡಾಯದ ದನಿ ಮೊಳಗುವುದಕ್ಕೂ ಮೊದಲೇ ಬರವಣಿಗೆ ಶೋಷಣೆ ಮೊದಲಾದ ಅನ್ಯಾಯಗಳಿಗೆ ದನಿಯಾಗಬೇಕೆಂಬ ಬದ್ಧತೆಯಿಂದ ಸಾಮಾಜಿಕ ವಾಸ್ತವ ಮಾರ್ಗದಲ್ಲಿ ಕಥೆ-ಕಾದಂಬರಿಗಳನ್ನು ರಚಿಸಿದ ಬಸವರಾಜ ಕಟ್ಟೀಮನಿಯವರ ಜನ್ಮ ಶತಾಬ್ದಿಯ ವರ್ಷವಿದು. ಪ್ರಗತಿಶೀಲ ಸಾಹಿತ್ಯ ಚಳವಳಿಯ ಮುಂಚೂಣಿ ಲೇಖಕರಾದ ಬಸವರಾಜ ಕಟ್ಟೀಮನಿಯವರು ಜನಿಸಿದ್ದು 1919ರ ಅಕ್ಟೋಬರ್ 5ರಂದು, ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮಲಾಮರಡಿಯಲ್ಲಿ. ಅಪ್ಪಯ್ಯಣ್ಣ ಮತ್ತು ಬಾಳವ್ವ ದಂಪತಿಗಳ ಎರಡನೆಯ ಮಗ ಬಸವ, ಬಸವರಾಜ ಕಟ್ಟೀಮನಿಯಾಗಿ ಬೆಳೆದು ಕನ್ನಡ ಸಾಹಿತ್ಯದಲ್ಲಿ ಅಗ್ರಮಾನ್ಯ ಕಾದಂಬರಿಕಾರರೆನಿಸಿಕೊಂಡದ್ದು ಒಂದು ಹೋರಾಟದ ಕಥನವೇ.

ತಂದೆಯ ಉದ್ಯೋಗದ ದೆಸೆಯಿಂದಾಗಿ ಊರೂರು ಅಲೆಯ ಬೇಕಾದ ಪರಿಸ್ಥಿತಿಯಲ್ಲಿ ಬಸವರಾಜ ಕಟ್ಟೀಮನಿಯವರ ಪ್ರಾಥಮಿಕ ವಿದ್ಯಾಭ್ಯಾಸ ಗೋಕಾಕ, ಬೈಲಹೊಂಗಲ, ಕಿತ್ತೂರು ಶಾಲೆಗಳಲ್ಲಿ ನಡೆಯಿತು. ಪ್ರೌಢ ಶಿಕ್ಷಣ ಬೆಳಗಾವಿ ಮತ್ತು ಪುಣೆಯಲ್ಲಿ. ಓದು ಮತ್ತು ಬರವಣಿಗೆ ಕಟ್ಟೀಮನಿಯವರಿಗೆ ಬಾಲ್ಯದಿಂದಲೇ ಒಲಿದುಬಂದ ನಂಟು. ಏಳನೆಯ ತರಗತಿಗೆ ಬರುವ ವೇಳೆಗೇ ಗಳಗನಾಥ, ಬಂಕಿಮಚಂದ್ರ, ವಾಸುದೇವಾಚಾರ್ಯ, ಮಾಸ್ತಿ, ಕುವೆಂಪು ಅವರ ಕಥೆ-ಕಾದಂಬರಿಗಳನ್ನು ಓದಿ ಸಾಹಿತ್ಯದಲ್ಲಿ ಅಭಿರುಚಿ ಬೆಳೆಸಿಕೊಂಡಿದ್ದ ಕಟ್ಟೀಮನಿ ವಿದ್ಯಾರ್ಥಿಯಾಗಿದ್ದಾಗಲೇ ಕೆಲವು ಪ್ರಬಂಧಗಳನ್ನು ಬರೆದು ಗುರುಗಳಿಂದ ‘ಭೇಷ್’ ಅನ್ನಿಸಿಕೊಂಡಿದ್ದರಂತೆ. ಮಗನ ಓದು ಪಠ್ಯೇತರ ಪುಸ್ತಕಗಳತ್ತ ಒಲಿಯುತ್ತಿರುವುದನ್ನು ಕಂಡು ತಂದೆಗೆ ಅಸಮಾಧಾನ. ಕಥೆ-ಕಾದಂಬರಿಗಳನ್ನು ಓದಿ ಮಗ ಹಾಳಾಗುತ್ತಿದ್ದಾನೆಂಬ ತಂದೆಯ ಸಿಟ್ಟಿಗೆ ‘‘ಒಂದಲ್ಲ ಒಂದು ದಿನ ನನ್ನ ಮಗನೂ ಕಥೀ ಪುಸ್ತಕ ಬರೆದು ದೊಡ್ಡವನಾಗ್ತಾನೆ’’ ಎಂದು ತಾಯಿಯ ಸಮಾಧಾನ. ಮಗನಿಂದ ಮಧ್ಯರಾತ್ರಿಯವರೆಗೆ ಬಂಕಿಮಚಂದ್ರ, ಶರತ್‌ಚಂದ್ರರ ಕಾದಂಬರಿಗಳನ್ನು ಓದಿಸಿ ಕೇಳುತ್ತಿದ್ದ ಅವ್ವ ಅಪ್ಪನಿಗೆ ತಿಳಿಯದಂತೆ ಕೊಟ್ಟ ನಾಲ್ಕಾಣೆಯಿಂದ ಗ್ರಂಥಾಲಯದ ಸದಸ್ಯನಾದ ಬಾಲಕ ಬಸವನ ಮುಂದೆ ಅದ್ಭುತವಾದ ರಂಗುರಂಗಿನ ಸಾರಸ್ವತ ಪ್ರಪಂಚ ತೆರೆದುಕೊಂಡಿತು.

ಕಥಾ ಸಾಹಿತ್ಯದ ಓದು ಹಾಗೂ ಕೇಳಿದ ಜಾನಪದ ಕಥೆ-ಕಾವ್ಯಗಳು ಬಾಲಕ ಕಟ್ಟೀಮನಿಯವರೊಳಗೆ ಸುಪ್ತವಾಗಿದ್ದ ಸೃಜನಶೀಲ ಪ್ರತಿಭೆಗೆ ಕಾವು ಕೊಟ್ಟಿದ್ದರಲ್ಲಿ ಆಶ್ವರ್ಯವೇನಿಲ್ಲ. ಸಣ್ಣ ವಯಸ್ಸಿನಲ್ಲೇ ಕಥೆ, ಕವನಗಳು, ಕಿತ್ತೂರು ಚೆನ್ನಮ್ಮನನ್ನು ಕುರಿತು ಒಂದು ನಾಟಕ-ಹೀಗೆ ಶುರುವಾಯಿತು ಬಸವನ ಸಾಹಿತ್ಯ ಕೃಷಿ. ಬರವಣಿಗೆಯಲ್ಲಿ ಕೈ ಪಳಗುತ್ತಾ ಬೆಳೆದಂತೆ ಪತ್ರಿಕೆಯೊಂದರಲ್ಲಿ ಕಥೆಯೊಂದು ಪ್ರಕಟವಾಗಿ ಬಸವ ಕಥೆಗಾರ ಬಸವರಾಜ ಕಟ್ಟೀಮನಿ ಆದರು. ಮನೆಯಲ್ಲಿ ದುರ್ಭರ ಬಡತನ. ತಂದೆಯ ಸಂಬಳದಿಂದಲೇ ಸಂಸಾರ ತೂಗಿಸಲಾಗದಂತಹ ಪರಿಸ್ಥಿತಿ. ಈ ಪರಿಸ್ಥಿತಿಯೇ ತರುಣ ಕಟ್ಟೀಮನಿಯವರಲ್ಲಿ ಸಮಾಜದಲ್ಲಿನ ಬಡವ-ಬಲ್ಲಿದರ ನಡುವಣ ವರ್ಗಗಳ ಅಂತರ, ತರತಮಗಳ ಬಗ್ಗೆ ಜಾಗೃತಿಯುಂಟುಮಾಡಿರಬೇಕು. ಹೊಟ್ಟೆಹೊರೆದುಕೊಳ್ಳಲಾಗದ ದಟ್ಟದಾರಿದ್ರ್ಯದ ತಮ್ಮಂತಹ ಜನರು ಒಂದುಕಡೆಗಿದ್ದರೆ, ಉಪಭೋಗಿಸಲಾರದಷ್ಟು ಶ್ರೀಮಂತ ಜಮೀನ್ದಾರರು ಮತ್ತೊಂದೆಡೆಗೆ- ದೇಶದಲ್ಲಿನ ಈ ಕಟುವಾಸ್ತವ ವಿದ್ಯಾರ್ಥಿಯಾಗಿದ್ದಾಗಲೇ ಅವರಲ್ಲಿ ವರ್ಗ ಪ್ರಜ್ಞೆಯನ್ನೂ ಪ್ರಖರಗೊಳಿಸಿತ್ತು. ಕಾಡುವ ಬಡತನಕ್ಕೆ ಸ್ವಲ್ಪವಾದರೂ ಉಪಶಮನ ಸಿಗಲೆಂದು ತಂದೆ ತಂದು ಕಟ್ಟಿದ ಎಮ್ಮೆಯನ್ನು ಮೇಯಿಸುತ್ತಲೇ 1935ರಲ್ಲಿ ಕಟ್ಟೀಮನಿ ಮೆಟ್ರಿಕ್ ಪಾಸಾದರು. ವ್ಯಾಸಂಗ ಮುಂದುವರಿಸಲಾಗಲಿಲ್ಲ.

ಬೆಳಗಾವಿಯಲ್ಲಿ ಹೈಸೂಲ್ ವಿದ್ಯಾರ್ಥಿಯಾಗಿದ್ದಾಗಲೇ ಕಥೆ/ಲೇಖನಗಳನ್ನು ಬರೆದು ‘ಸಂಯುಕ್ತ ಕರ್ನಾಟಕ’ ಪತ್ರಿಕೆಯೊಂದಿಗೆ ನಂಟು ಕುದುರಿತ್ತು. ಸಾಹಿತ್ಯ ಕೃಷಿ ಬದುಕಿಗೆ ಆಧಾರವಾಯಿತು. ಉಪಸಂಪಾದಕನಾಗಿ ‘ಸಂಯುಕ್ತ ಕರ್ನಾಟಕ’ ಪತ್ರಿಕೆ ಸೇರಿದರು. ಅಲ್ಲಿಂದ ‘ತರುಣ ಕರ್ನಾಟಕ’, ‘ಕರ್ನಾಟಕ ಬಂಧು’ ‘ಸ್ವತಂತ್ರ ಕರ್ನಾಟಕ’ ಮೊದಲಾದ ಪತ್ರಿಕೆಗಳಲ್ಲಿ ದುಡಿದರು. ಪ್ರಗತಿಶೀಲ ಸಾಹಿತ್ಯದ ಮುಖವಾಣಿಯಂತಿದ್ದ ‘ಉಷಾ’ ಪತ್ರಿಕೆಯ ಸಂಪಾದಕರೂ ಆದರು. ಪತ್ರಿಕಾ ವ್ಯವಸಾಯದಲ್ಲಿದ್ದಾಗಲೇ ಸ್ವಾತಂತ್ರ್ಯ ಸಂಗ್ರಾಮ ಕೈಬೀಸಿ ಕರೆಯಿತು. 1942ರ ಚಳವಳಿಯಲ್ಲಿ ಸಕ್ರಿಯವಾಗಿ ಭಾವಹಿಸಿ ಸೆರೆಮನೆ ಸೇರಿದರು. ಸೆರೆಮನೆಯಲ್ಲಿ ಕುಳಿತು ಕಥೆಗಳನ್ನು ಬರೆದರು.

 ಹತ್ತು ಕಥಾ ಸಂಕಲನಗಳು, ಮೂವತ್ತಾರು ಕಾದಂಬರಿಗಳು, ಎರಡು ಕವನ ಸಂಕಲನಗಳು, ಶಿಶು ಸಾಹಿತ್ಯ ಸಂಗ್ರಹಗಳು ಎರಡು ಮತ್ತು ಆತ್ಮಕಥೆ ‘ಕಾದಂಬರಿಕಾರನ ಬದುಕು’- ಇದು ಬಸವರಾಜ ಕಟ್ಟೀಮನಿಯವರ ಸಾಹಿತ್ಯ ಸಂಪದ. ‘ಕಾರವಾನ’ (1944) ಮೊದಲ ಕಥಾ ಸಂಕಲನ. ‘ಸ್ವಾತಂತ್ರ್ಯದೆಡೆಗೆ’ (1944) ಮೊದಲ ಕಾದಂಬರಿ. ‘ಜ್ವಾಲಾಮುಖಿಯ ಮೇಲೆ’, ‘ಬೀದಿಯಲ್ಲಿ ಬಿದ್ದವಳು’, ‘ಮೋಹದ ಬಲೆಯಲ್ಲಿ’, ‘ಜರತಾರಿ ಜಗದ್ಗುರು’, ‘ಖಾನಾವಳಿಯ ನೀಲ’, ‘ನೀ ನನ್ನ ಮುಟ್ಟ ಬೇಡ’, ‘ಜನಿವಾರ ಶಿವದಾರ’ ಕಟ್ಟೀಮನಿಯವರ ಮುವ್ವತ್ತೈದಕ್ಕೂ ಮಿಗಿಲಾದ ಕಾದಂಬರಿಗಳ ಪೈಕಿ ವಿಮರ್ಶಕರ ಗಮನಸೆಳೆಯುವುದರಲ್ಲಿ ಹೆಚ್ಚು ಯಶಸ್ವಿಯಾಗಿರುವ ಕೃತಿಗಳು. ‘ಗಿರಿಜಾ ಕಂಡ ಸಿನೆಮಾ’, ‘ಬೂಟ್ ಪಾಲಿಷ್’, ‘ಜೀವನ ಕಲೆ’, ‘ನಾಗಪಂಚಮಿಗೆ ಬಂದದ್ದು’, ‘ರಕ್ತಧ್ವಜ’ ಕಟ್ಟೀಮನಿಯವರ ಮುಖ್ಯ ಕತೆಗಳು.

ನವೋದಯ ಸಾಹಿತ್ಯದಲ್ಲಿ ಅಭಿವ್ಯಕ್ತಿಪಡೆದ ಸಾಮಾಜಿಕ ವಾಸ್ತವ ಮಾರ್ಗ ಪ್ರಗತಿಶೀಲರಲ್ಲೂ ಮುಂದುವರಿಯಿತಾದರೂ ದನಿ ಮತ್ತು ಧಾಟಿಗಳಲ್ಲಿ ಪ್ರಗತಿಶೀಲರ ರಚನೆಗಳು ಭಿನ್ನವಾಗಿ ಎದ್ದು ಕಾಣುತ್ತವೆ. ಸಾಮಾಜಿಕ ವಾಸ್ತವ ಮಾರ್ಗಪ್ರಗತಿಶೀಲರಲ್ಲಿ ಸಮಾಜದಲ್ಲಿನ ಅಸಮಾನತೆ, ಶೋಷಣೆ, ವರ್ಗಸಂಘರ್ಷಗಳ ಪ್ರಖರ ಚಿತ್ರಣದ ಮುಖೇನ ಒಂದು ಹೊಸ ಕವಲಾಗಿ ಮೂಡಿರುವುದನ್ನು ಕನ್ನಡ ವಿಮರ್ಶೆ ಗುರುತಿಸಿದೆ. ಅನಕೃ ಪ್ರಗತಿಶೀಲ ಚಳವಳಿಯ ಪ್ರವರ್ತಕರು.ಕಟ್ಟೀಮನಿಯವರು ಅನಕೃ ಅವರಿಂದ ಪ್ರಗತಿಶೀಲ ಸ್ಫೂರ್ತಿಯನ್ನಷ್ಟೇ ಪಡೆದುಕೊಂಡು ತಮ್ಮದೇ ಆದ ಜಾಡಿನಲ್ಲಿ ಕಾದಂಬರಿಯ ಕೃಷಿ ಮಾಡಿದವರು. ಸಮಾಜದ ವಿವಿಧ ಮುಖಗಳಾದ ಕಾರ್ಖಾನೆಗಳು, ಮಠಮಂದಿರಗಳಲ್ಲಿ ನಡೆಯುತ್ತಿದ್ದ ಶೋಷಣೆ, ಅನ್ಯಾಯಗಳನ್ನು ಕಂಡು ರೊಚ್ಚಿಗೆದ್ದು ನಿಷ್ಠುರವಾಗಿ ಬರೆದ ಕಟ್ಟೀಮನಿಯವರ ಕಾದಂಬರಿಗಳಲ್ಲಿ ಸಾಮಾಜಿಕ ವಾಸ್ತವತೆ ಎನ್ನುವುದು ತುಸು ಢಾಳವಾಗಿಯೇ ಕಾಣಿಸಿಕೊಳ್ಳುತ್ತದೆ. ಪ್ರಗತಿಶೀಲರಲ್ಲಿ ವೈಚಾರಿಕತೆಗಿಂತ ಭಾವನೆಗಳೇ ಮೇಲುಗೈ ಪಡೆಯುತ್ತವೆ ಎನ್ನುವುದು ಕುರ್ತಕೋಟಿಯವರ ಅಭಿಮತ. ಇದು ಕಟ್ಟೀಮನಿಯವರಿಗೂ ಅನ್ವಯಿಸಬಹುದಾದ ಮಾತು.

ಕಟ್ಟೀಮನಿಯವರ ಕಥೆ-ಕಾದಂಬರಿಗಳು ರೋಷ, ಭಾವಾವೇಶ ಮೂಲದವು. ಶೋಷಣೆ ಇತ್ಯಾದಿ ಸಾಮಾಜಿಕ ಅನ್ಯಾಯಗಳ ವಿರುದ್ಧ ಅವರ ಲೇಖನಿ ಹೆಚ್ಚು ಮೊನಚುಗೊಳ್ಳುತ್ತದೆ. ಸಿಟ್ಟು, ರೋಷಾವೇಶಗಳು ಕಿಡಿಕಾರುತ್ತವೆ. ಈ ಮಾತಿಗೆ ನಿದರ್ಶನವಾಗಿ ‘ಜ್ವಾಲಾಮುಖಿಯ ಮೇಲೆ’, ‘ಬೀದಿಯಲ್ಲಿ ಬಿದ್ದವಳು’, ‘ಮೋಹದ ಬಲೆಯಲ್ಲಿ, ‘ಜರತಾರಿ ಜಗದ್ಗುರು’ ಮೊದಲಾದ ಕಾದಂಬರಿಗಳನ್ನು ಗಮನಿಸಬಹುದು. ‘ಜ್ವಾಲಾಮುಖಿಯ ಮೇಲೆ’ ಅಂದಿನ ಸಾಮಾಜಿಕ ಮತ್ತು ಆರ್ಥಿಕ ಜೀವನವನ್ನು ತುಂಬಾ ಸಮರ್ಥವಾಗಿ ನಿರೂಪಿಸುವ ಕಾದಂಬರಿ. ಈ ಕಾದಂಬರಿಗಳಲ್ಲಿ ಲೇಖಕರ ರೋಷ, ಆಕ್ರೋಷಗಳು ಕೃತಿಯ ಬಂಧ ಮತ್ತು ಕಲಾತ್ಮಕತೆಯನ್ನೇ ನುಂಗಿಹಾಕುವಷ್ಟು ಪ್ರಬಲವಾಗಿದ್ದು ಬಿಂಬಿಸುತ್ತಿರುವ ಶೋಷಣೆ, ಅನ್ಯಾಯಗಳು ಸಾಮಾಜಿಕವಾದದ್ದೋ, ವ್ಯಕ್ತಿಗತವಾದದ್ದೋ ಎನ್ನುವುದು ಸ್ಪಷ್ಟವಾಗದೆ ಗೊಂದಲ ಉಂಟಾಗುತ್ತದೆ. ಜಗದ್ಗುರುಗಳಾಗಬೇಕಾದ ಸ್ವಾಮಿಗಳು ನೀತಿಭ್ರಷ್ಟರಾಗಬಾರದು ಎನ್ನುವುದು ಎಲ್ಲರೂ ಒಪ್ಪುವಂತಹ ಮಾತೇ. ಆದರೆ ಇದಕ್ಕೆ ನಿಜವಾದ ಕಾರಣ ಸಾಮಾಜಿಕ ಅವನತಿಯಲ್ಲದೆ ಎಂಬುದನ್ನು ಗುರುತಿಸುವುದರಲ್ಲಿ ಲೇಖಕರು ವಿಫಲವಾಗುವುದರಿಂದ ಕಾದಂಬರಿ ವೈಯಕ್ತಿಕ ಆರೋಪದಲ್ಲೇ ತೃಪ್ತಿಪಡುವಂತಾಗಿದೆ ಎನ್ನುವುದು ವಿಮರ್ಶಕರ ಅಂಬೋಣ.

‘ನೀ ನನ್ನ ಮುಟ್ಟಬೇಡ’, ‘ಜನಿವಾರ ಶಿವದಾರ’ಗಳಲ್ಲಿ ಸಾಮಾಜಿಕ ವಾಸ್ತವತೆಯ ಇನ್ನೊಂದು ಕರಾಳ ಮುಖವಾದ ಜಾತೀಯತೆ ಸಮಸ್ಯೆಯನ್ನು ಚಿತ್ರಿಸಿದ್ದಾರೆ. ಈ ಎರಡು ಕೃತಿಗಳಲ್ಲಿ ಸಮಾಜದ ಕಟು ವಿಡಂಬನೆ ಇದ್ದರೆ, ‘ಸಾಕ್ಷಾತ್ಕಾರ’ದಲ್ಲಿ ಸುಶಿಕ್ಷಿತರ ಅಂಧಶ್ರದ್ಧೆ, ಮೂಢನಂಬಿಕೆಗಳ ಚಿತ್ರಣವಿದೆ. ‘ಸ್ವಾತಂತ್ರ್ಯದೆಡೆಗೆ’ ಮತ್ತು ‘ಮಾಡಿ ಮಡಿದವರು’ ಸ್ವಾತಂತ್ರ್ಯ ಹೋರಾಟವನ್ನು ದಾಖಲಿಸುವ ಕಾದಂಬರಿಗಳು. ಇಲ್ಲಿಯೂ ಕೂಡ ರಾಷ್ಟ್ರೀಯತೆಯ ಭಾವಾವೇಶದ ರಭಸವೇ ಹೆಚ್ಚು. ಇದು ಹೋರಾಟಕ್ಕೆ ಸಹಜವಾದದ್ದೇ. ಸಾಮಾಜಿಕ ಅನ್ಯಾಯಗಳ ಮೇಲಿನ ಕೋಪತಾಪಗಳ ಮಧ್ಯೆಯೂ ಕಟ್ಟೀಮನಿಯವರು ಕಲಾತ್ಮಕವಾಗಿ ಬರೆಯುವ ಸೃಜನಶೀಲ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನುಳ್ಳವರು ಎಂಬುದರಲ್ಲಿ ಎರಡು ಮಾತಿರಲಾರದು.ಇದಕ್ಕೆ, ‘ಖಾನಾವಳಿಯ ನೀಲ’, ‘ನಾನು ಪೊಲೀಸನಾಗಿದ್ದೆ, ‘ಗಿರಿಯ ನವಿಲು’, ‘ಬಂಗಾರದ ಜಿಂಕೆಯ ಹಿಂದೆ’ ಕಾದಂಬರಿಗಳು ಉತ್ತಮ ನಿದರ್ಶನವಾಗಿ ನಿಲ್ಲುತ್ತವೆ. ‘ಖಾನಾವಳಿಯ ನೀಲ’ ಸಾಮಾಜಿಕ ವಾಸ್ತವವನ್ನು, ಜನಸಾಮಾನ್ಯರ ಬದುಕಿನ ಸುಖದುಃಖಗಳನ್ನು ಹೃದಯಂಗಮವಾಗಿ ಚಿತ್ರಿಸುವ ಕಾದಂಬರಿ.

ವಿಮರ್ಶೆಯ ಒಲವುನಿಲುವುಗಳು ಏನೇ ಇದ್ದರೂ, ‘ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ’ಗಳಿಸಿದ ‘ಜ್ವಾಲಾಮುಖಿಯ ಮೇಲೆ’ ಕಟ್ಟೀಮನಿಯವರ ಮಹತ್ವದ ಕಾದಂಬರಿ ಎನ್ನುವ ಕೀರ್ತಿಗೆ ಪಾತ್ರವಾಗಿದೆ. ಪ್ರಗತಿಶೀಲ ಚಳವಳಿಯ ಕಾಲಕ್ಕೆ ವಸ್ತುವಿನಲ್ಲಿ ನಾವೀನ್ಯತೆ ಮೆರೆದ ಕಾದಂಬರಿ ಇದು. ಬಂಡವಾಳಶಾಹಿ ವ್ಯವಸ್ಥೆ ಮತ್ತು ಶ್ರಮಜೀವಿಗಳ ಸಂಘಟನೆಗಳು ಬೂರ್ಜ್ವಾಸಮಾಜದ ಹಿನ್ನೆಲೆಯಲ್ಲಿ ಮುಖಾಮುಖಿಯಾಗುವುದನ್ನು ಪರಿಣಾಮಕಾರಿಯಾಗಿ ಬಿಂಬಿಸುವುದರಲ್ಲಿ ಇದರ ಮಹತ್ವವಿದೆ. ‘ಕಾದಂಬರಕಾರನ ಕಥೆ’ ಕಟ್ಟೀಮನಿಯವರ ಬದುಕಿನ ಚಿತ್ರವನ್ನು ಕಟ್ಟಿಕೊಡುತ್ತಲೇ ಆ ಕಾಲದ ಸಮಾಜ, ಸಾಹಿತ್ಯಲೋಕ, ಪತ್ರಿಕಾ ಪ್ರಪಂಚ-ಇಂತಹ, ತಾವು ಒಳಗೊಂಡ ತಮ್ಮ ಸುತ್ತಮುತ್ತಲ ಸಮಾಜದ ಹಲವು ಮುಖಗಳನ್ನು ಅನಾವರಣಗೊಳಿಸುವ ಆತ್ಮಕಥೆಯಾಗಿದೆ. ಬಸವರಾಜ ಕಟ್ಟೀಮನಿಯವರ ಶಕ್ತಿ ಇರುವುದು ಅವರ ಗ್ರಾಮೀಣ ಜೀವನಾನುಭವದಲ್ಲಿ. ವಿಮರ್ಶಕ ಎಲ್. ಎಸ್.ಶೇಷಗಿರಿ ರಾವ್ ಹೇಳುವಂತೆ, ಅವರು ಗ್ರಾಮಜೀವನವನ್ನು ಸಮೃದ್ಧವಾಗಿ ಕಾದಂಬರಿ ಲೋಕಕ್ಕೆ ತಂದುಕೊಟ್ಟವರು. ಹಳ್ಳಿ ಬದುಕನ್ನು ಗಾಢವಾಗಿ ಪ್ರೀತಿಸಿದವರು. ಅಂತೆಯೇ ಕಟ್ಟೀಮನಿಯವರ ಕಥೆ, ಕಾದಂಬರಿಗಳ ಭಾಷೆ ದೇಸಿಯ ಕಸುವನ್ನು ಮೈಗೂಡಿಸಿಕೊಂಡಿರುವ ಭಾಷೆ. ಕುರ್ತಕೋಟಿಯವರು ಹೇಳುವಂತೆ ಕಟ್ಟೀಮನಿಯವರ ಕೃತಿಗಳಲ್ಲಿ ಸೂಕ್ಷ್ಮ ಕಲಾವಂತಿಕೆ ಇಲ್ಲದಿರಬಹುದು, ಆದರೆ ಅವರ ಬರಹಕ್ಕೆ ಸಿಡಿಲಿನ ಶಕ್ತಿ ಇದೆ ಎನ್ನುವುದೂ ವಿಮರ್ಶೆಯ ಮಾತೇ.

 ಕನ್ನಡದ ಜೀವಂತ ಜ್ವಾಲಾಮುಖಿ ಎನ್ನಿಸಿಕೊಂಡಿದ್ದ ಬಸವರಾಜ ಕಟ್ಟೀಮನಿಯವರು ತಮ್ಮ ಬರವಣಿಗೆಯಲ್ಲಿನ ಈ ಜ್ವಾಲಾಮುಖಿ ಗುಣದಿಂದಾಗಿ ಹಲವಾರು ಸಲ ವ್ಯಕ್ತಿಗಳ ಹಾಗೂ ವ್ಯವಸ್ಥೆಯ ವಿರೋಧವನ್ನೂ ಎದುರಿಸಬೇಕಾಗಿ ಬಂದುದರಲ್ಲಿ ಆಶ್ವರ್ಯವೇನಿಲ್ಲ. ‘ಜರತಾರಿ ಜಗದ್ಗುರು’ ಪ್ರಕಟವಾದ ದಿನಗಳಲ್ಲಿ ಅಪರಿಚಿತನೊಬ್ಬ ಅವರ ಮೇಲೆ ಗುಂಡುಹಾರಿಸುವ ವಿಫಲ ಪ್ರಯತ್ನ ನಡೆಸಿದ್ದನಂತೆ. ತಮ್ಮ ಕಥೆ, ಕಾದಂಬರಿಗಳ ಮೂಲಕ ಅನ್ಯಾಯ, ಶೋಷಣೆ, ಜಾತಿ-ಮತ, ಮಠಮಂದಿರಗಳ ಡಾಂಭಿಕತನಗಳ ವಿರುದ್ಧ ಯುದ್ಧ ಸಾರಿದ ಕಟ್ಟೀಮನಿಯವರನ್ನು 1968ರಲ್ಲಿ ಕರ್ನಾಟಕ ವಿಧಾನಪರಿಷತ್ತಿನ ಸದಸ್ಯರಾಗಿ ನಾಮಕರಣ ಮಾಡಲಾಯಿತು. ಆದರೆ ಅಲ್ಲಿ ಅವರ ಬಂಡಾಯ ಮೊಳಗಿದ್ದು ಕಡಿಮೆಯೇ.

ಬಸವರಾಜ ಕಟ್ಟೀಮನಿಯವರು ಇಂದು ನಮ್ಮಡನೆ ಇದ್ದಿದ್ದರೆ ಅವರು ಶತಾಯುಷಿಗಳಾಗುತ್ತಿದ್ದರು. ಕಟ್ಟೀಮನಿಯವರಿಗೆ ನೂರು ವರ್ಷವಾದರೆ ಅವರ ಸಾಹಿತ್ಯಕ್ಕೆ ಎಪ್ಪತ್ತೈದು ವರುಷಗಳು. ಅವರ ಸಹಸ್ರಾರು ಪುಟಗಳ ಸಾಹಿತ್ಯ ವಿಮರ್ಶಕರ ಗಮನ ಸೆಳೆದಿರುವುದು ನಿಜವಾದರೂ ಅವರಿಗೆ ವಿಮರ್ಶೆಯ ಪೂರ್ಣ ನ್ಯಾಯ ಸಿಕ್ಕಿಲ್ಲ. ಇದು ಕಟ್ಟೀಮನಿಯೊಬ್ಬರಿಗೇ ಅಲ್ಲ, ಇಡೀ ಪ್ರಗತಶೀಲ ಸಾಹಿತ್ಯಕ್ಕೂ ಅನ್ವಯವಾಗುವ ಮಾತು. ಪ್ರಗತಿಶೀಲ ಚಳವಳಿಯ ನಂತರ ದಲಿತ, ಬಂಡಾಯ ಸಾಹಿತ್ಯಗಳನ್ನೂ ಕನ್ನಡ ಕಂಡಿದೆ. ಈ ಹಿನ್ನೆಲೆಯಲ್ಲಿ ಇವತ್ತಿನ ಪೀಳಿಗೆ ಕಟ್ಟೀಮನಿಯವರ ಕಥೆ, ಕಾದಂಬರಿಗಳಿಗೆ ಹೇಗೆ ಸ್ಪಂದಿಸಬಹುದು ಎನ್ನುವುದು ಕುತೂಹಲಕಾರಿಯಾದ ಸಂಗತಿ. ಕಟ್ಟೀಮನಿಯವರ ಸಾಹಿತ್ಯದ ಪುನರ್‌ಮೌಲ್ಯ ಮಾಪನಕ್ಕೆ ಇದು ಸಕಾಲ. ಜಿ.ಎಸ್.ಶಿವರುದ್ರಪ್ಪನವರು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕರಾಗಿದ್ದಾಗ ಹಳೆ-ಹೊಸ ಸಾಹಿತ್ಯಗಳ ಚರ್ಚೆಗೆ ವೇದಿಕೆ ಕಲ್ಪಿಸುತ್ತಿದ್ದುದು ನೆನಪಾಗುತ್ತಿದೆ.ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ಮತ್ತು ರಾಜ್ಯದ ಇತರ ವಿಶ್ವವಿದ್ಯಾನಿಲಯಗಳಾಗಲೀ ಸಾಹಿತ್ಯ ಅಕಾಡೆಮಿಯಾಗಲೀ ಬಸವರಾಜ ಕಟ್ಟೀಮನಿಯವರ ಕಥೆ/ಕಾದಂಬರಿಗಳ ವಿಮರ್ಶಾತ್ಮಕ ಚರ್ಚೆಗೆ ವೇದಿಕೆ ಕಲ್ಪಿಸಿದಲ್ಲಿ ಅದು ಅವರ ಜನ್ಮ ಶತಾಬ್ದಿಯ ಅರ್ಥಪೂರ್ಣ ಆಚರಣೆಯಾದೀತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)