45 ವರ್ಷಗಳ ಹಿಂದೆ ಎಲ್ಲಿ ತಲೆ ಮರೆಸಿಕೊಂಡಿದ್ರಿ..?
ಪತ್ರಕರ್ತ ಎಂಜಲು ಕಾಸಿ ಅದಾಗಲೇ ಯಾವುದೋ ಪತ್ರಿಕಾಗೋಷ್ಠಿ ಮುಗಿಸಿ, ಶೀರಾ-ಉಪ್ಪಿಟ್ಟು ತಿಂದು ಬಾಯೊರಸಿಕೊಳ್ಳುತ್ತಾ ಇದ್ದಾಗಲೇ ಅಲ್ಲಿಗೆ ಪೇದೆಯೊಬ್ಬ ಬಂದ ‘‘ಸಾರ್...ಸಾಹೇಬ್ರು ಬರೋಕೆ ಹೇಳಿದ್ದಾರೆ...’’
ಕಾಸಿಯ ತೊಡೆ ಸಂಧಿಯಲ್ಲಿ ಏನೋ ಹರಿದಾಡಿದಂತಾಯಿತು. ಇತ್ತೀಚೆಗೆ ಹಾಗೆಲ್ಲ ಕರೆದಾಗ ಹೋದವರು ತಿರುಗಿ ಬಂದ ದಾಖಲೆಗಳೇ ಇರಲಿಲ್ಲ.
‘‘ಯಾಕೆ ಸಾರ್?’’ ಮೆಲ್ಲಗೆ ಕಾಸಿ ಕೇಳಿದ.
‘‘ಅದೆಲ್ಲ ಗೊತ್ತಿಲ್ಲ...ಸಾಹೇಬರು ಠಾಣೆಗೆ ಕರ್ಕೊಂಡು ಬರೋಕೆ ಹೇಳಿದ್ದಾರೆ...’’ ಪೇದೆ ಮೀಸೆ ತಿರುವುತ್ತಾ ಇದ್ದ.
‘‘ಹಾಗೆಲ್ಲ ಬರೋಕೆ ಆಗೊಲ್ಲ....’’ ಕಾಸಿ ಹೇಳಿದ.
‘‘ನಡಕೊಂಡು ಬರದೇ ಇದ್ದರೆ ಏರೋಪ್ಲೇನ್‌ಹತ್ತಿಸ್ಕೊಂಡು ಬನ್ನಿ ಎಂದಿದ್ದಾರೆ ಸಾಹೇಬ್ರು..’’ ಏರೋಪ್ಲೇನ್ ಹೆಸರು ಕೇಳಿದ್ದೆ ಕಾಸಿ ತಣ್ಣಗಾದ.
‘‘ನಾನು ಪತ್ರಕರ್ತ. ನನ್ನ ಮುಟ್ಟಿದ್ರೆ ಏನಾಗುತ್ತೆ ಗೊತ್ತಲ್ಲ?’’ ಕಾಸಿ ಬೆದರಿಸಲು ನೋಡಿದ.
‘‘ನಾವು ಹಾಗೆಲ್ಲ ಮುಟ್ಟಲ್ಲ....ತಟ್ಟೋದು ಮಾತ್ರ ಗೊತ್ತು ನಮಗೆ...’’ ಪೇದೆ ಮರು ಉತ್ತರಿಸಿದ.
‘‘ನೋಡ್ರೀ...ಇದು ಅಭಿವ್ಯಕ್ತಿ ಸ್ವಾತಂತ್ರದ ದಮನ...’’ ಕಾಸಿ ಜೋರಾಗಿ ಹೇಳಿದ.
‘‘ಅಭಿವ್ಯಕ್ತಿ, ಸ್ವಾತಂತ್ರ, ದಮನ ಹೀಗೆ ಮಾತನಾಡೋದು ದೇಶವಿರೋಧಿ ಕೃತ್ಯ. ನೀವು 45 ವರ್ಷಗಳ ಹಿಂದೆ ತಲೆ ಮರೆಸಿಕೊಂಡು ನಕ್ಸಲ್ ಚಟುವಟಿಕೆ ನಡೆಸುತ್ತಾ ಇದ್ದಿರಿ ಎನ್ನುವುದು ಗುಪ್ತಚರ ಇಲಾಖೆಯಿಂದ ಮಾಹಿತಿ ದೊರಕಿದೆ....ಆದುದರಿಂದ ‘ಸ್ವಲ್ಪ’ ವಿಚಾರಿಸೋದಕ್ಕೆ ಸಾಹೇಬರು ಕರೆಸಿದ್ದಾರೆ...’’ ಪೇದೆ ವಿವರಿಸಿದ.
‘‘ಸಾರ್ 45 ವರ್ಷಗಳ ಹಿಂದೆ ನಾನು ಇನ್ನೂ ಹುಟ್ಟಿಯೇ ಇರಲಿಲ್ಲ....’’ ಕಾಸಿ ಅಲವತ್ತುಕೊಂಡ.
‘‘ಅದೆಲ್ಲ ನಮಗೆ ಗೊತ್ತಿಲ್ಲ. 45 ವರ್ಷಗಳ ಹಿಂದೆ ನೀವು ಭೂಗತರಾಗಿ ನಕ್ಸಲ್ ಚಟುವಟಿಕೆ ನಡೆಸಿದ್ದೀರಿ ಎಂದು ಗು.ಚ. ಇಲಾಖೆ ಮಾಹಿತಿ ನೀಡಿದೆ...ಅದಕ್ಕೆ ಸಾಹೇಬರು ಅಲ್ಲಿ ಏರೋಪ್ಲೇನ್ ಇಟ್ಟು ಕಾಯ್ತೆ ಇದ್ದಾರೆ...’’
‘‘ಸಾರ್...45 ವರ್ಷಗಳ ಹಿಂದೆ ನಾನು ಭೂಮಿಯ ಮೇಲೆ ಇರಲೇ ಇಲ್ಲ...’’
‘‘ಹಾಗಾದರೆ ಅದಕ್ಕೆ ಮೊದಲು ಎಲ್ಲಿದ್ರೀ ಎನ್ನುವ ದಾಖಲೆ ಕೊಡಿ...’’ ಪೇದೆ ಕೇಳಿದ.
‘‘ಸಾರ್...ತಾಯಿ ಹೊಟ್ಟೆಯ ಒಳಗೆ ಇದ್ದೆ...’’
‘‘ಅಲ್ಲಿ ಏನು ಮಾಡ್ತಾ ಇದ್ರಿ....’’
‘‘..........’’
‘‘ಅಲ್ಲಿ ನೀವು ನಕ್ಸಲ್ ಚಟುವಟಿಕೆ ಮಾಡ್ತಾ ಇದ್ದಿರಿ ಎಂದು ವಿವರ ದೊರಕಿದೆ...ಬನ್ನಿ ಬನ್ನಿ....ಸಾಹೇಬರು...ಏರೋಪ್ಲೇನ್....’’
‘‘ಸಾರ್, ಕಳೆದ ನಲ್ವತ್ತು ವರ್ಷಗಳಲ್ಲಿ ನನ್ನನ್ನು ಯಾಕೆ ಬಂಧಿಸಿಲ್ಲ?’’ ಕಾಸಿ ಮರು ಪ್ರಶ್ನೆ ಹಾಕಿದ.
‘‘ಯಾಕೆಂದರೆ, ಆಗ ದೇಶದಲ್ಲಿ ಅಚ್ಛೇ ದಿನ್ ಇರಲಿಲ್ಲ. ಈಗ ಅಚ್ಛೇ ದಿನ್ ಬಂದಿದೆ. ಅದಕ್ಕೆ ಈ ಹಿಂದೆ ತಲೆಮರೆಸಿಕೊಂಡಿದ್ದ ನಕ್ಸಲರನ್ನೆಲ್ಲ ಪತ್ತೆ ಹಚ್ಚಿ ಅವರನ್ನು ಜೈಲಿಗೆ ತಳ್ಳುತ್ತಿದ್ದೇವೆ...’’ ಪೇದೆ ಹೇಳಿದ.
‘‘ಸಾರ್...ನಾನು ಬರ್ತೇನೆ. ನೀವು ಮುಂದೆ ಹೋಗಿ...’’ ಕಾಸಿ ಗೋಗರೆದ.
‘‘ಅದೆಲ್ಲ ಆಗಲ್ಲ, ಸಾಹೇಬರು ಏರೋಪ್ಲೇನ್ ಇಟ್ಟು ಕಾಯ್ತ ಇದ್ದಾರೆ...’’
‘‘ಏರೋಪ್ಲೇನ್ ಎಲ್ಲ ಬೇಡಾ ಸಾರ್...ನಾನು ಆಟೊದಲ್ಲೇ ಬರ್ತೇನೆ...’’
‘‘ಟಿಕೆಟ್ ದುಡ್ಡೇನೂ ನಿಮ್ಮಿಂದ ತಗೊಳ್ಳಲ್ಲ...ಅವರೇ ಹತ್ತಿಸಿ ಅವರೇ ಇಳಿಸ್ತಾರೆ...’’ ಪೇದೆ ಸಮಾಧಾನಿಸಿದ.
‘‘ಸಾರ್...ನಾನು ಪತ್ರಕರ್ತ ಸಾರ್...’’ ಕಾಸಿ ಮತ್ತೆ ಗೋಗರೆದ.
‘‘ಪತ್ರಕರ್ತನ ಯಾವ ಗುಣಲಕ್ಷಣಗಳೂ ನಿಮ್ಮಲ್ಲಿ ಇಲ್ಲ ಎನ್ನೋದು ಗು.ಚ. ಇಲಾಖೆಯ ಆರೋಪ...’’
‘‘ಪತ್ರಕರ್ತನ ಗುಣಲಕ್ಷಣಗಳು ಏನು ಸಾರ್...?’’ ಕಾಸಿ ದೈನ್ಯದಿಂದ ಕೇಳಿದ.
‘‘ಪ್ರಧಾನಿ ಮೋದಿಯವರ ಕುರಿತಂತೆ ಕಾವ್ಯ ಬರೆಯೋದು...ಪ್ರತಿ ದಿನ ಮೋದಿಯವರ ಬಗ್ಗೆ ಭಜನೆ, ಅಮಿತ್ ಶಾ ನಾಮಸ್ಮರಣೆ....ಆರೆಸ್ಸೆಸ್ ಸರ ಸಂಚಾಲಕರೊಂದಿಗೆ ಸಹಭಾಗಿತ್ವ...ಪ್ಯಾಂಟ್ ಒಳಗಡೆ ದೊಗಳೆ ಚಡ್ಡಿ....ಹೀಗೆ ಯಾವ ಗುಣಲಕ್ಷಣಗಳೂ ಇಲ್ಲ ಎನ್ನುವುದನ್ನು ವರದಿ ತಿಳಿಸಿದೆ...ಬನ್ನಿ ಬನ್ನಿ...ಸಾಹೇಬರು ಕರೆಯುತ್ತಿದಾರೆ...’’
ಪ್ಯಾಂಟ್ ಒಳಗೆ ದೊಗಳೆ ಚಡ್ಡಿ ಬಚ್ಚಿಟ್ಟುಕೊಳ್ಳುವುದಕ್ಕಿಂತ ನಕ್ಸಲೈಟ್ ಆಗಿ ಏರೋಪ್ಲೇನ್ ಹತ್ತುವುದೇ ವಾಸಿ ಎಂದು ಪೇದೆಯ ಹಿಂದೆ ಕಾಸಿ ನಡೆದ.