ಇಗ್ನೇಷಿಯಸ್ ಒರ್ವಿನ್ ನರ್ಹೊನಾಗೆ ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ
ಮಂಗಳೂರು, ಅ. 28: ಈ ಬಾರಿಯ 15ನೆ ವರ್ಷದ ಪಿಂಗಾರ ರಾಜೋತ್ಸವ ಪ್ರಶಸ್ತಿಯನ್ನು ಪರಿಸರ ಸ್ನೇಹಿ ಸೊಳ್ಳೆ ನಿವಾರಕ ಯಂತ್ರವನ್ನು ಆವಿಷ್ಕಾರ ಮಾಡಿದ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಮಂಗಳೂರಿನ ತಜ್ಞ ಇಗ್ನೇಷಿಯಸ್ ಒರ್ವಿನ್ ನರ್ಹೋನಾ ಅವರಿಗೆ ನೀಡಲಾಗುವುದು ಎಂದು ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ ಸಮಿತಿಯ ಕಾರ್ಯದರ್ಶಿ ರೇಮಂಡ್ ಡಿಕುನ್ಹಾ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ನ.12ರಂದು ಸಂಜೆ 4 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಂಗಳೂರು ಬಿಷಪ್ ಡಾ. ಪೌವ್ಲ್ ಸಲ್ದಾನಾ ಅವರ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ತನ್ನ ವಾರ್ಷಕೋತ್ಸವನ್ನು ಆಚರಿಸಲಿದೆ. ಅರೆ ಹೊಳೆ ಪ್ರತಿಷ್ಠಾನದಿಂದ ಗೀತಾ ನಾಟಕ ಗೋಕುಲ ನಿರ್ಗಮನ ಪ್ರದರ್ಶನಗೊಳ್ಳಲಿದೆ. 25 ಕವಿಗಳನ್ನೊಳಗೊಂಡ ಕವಿಗೋಷ್ಠಿ ನಡೆಯಲಿದೆ ಎಂದು ರೇಮಂಡ್ ಡಿ ಕುನ್ಹಾ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಪ್ರತಿನಿಧಿಗಳಾದ ರೋಯ್ ಕ್ಯಾಸ್ಟಲಿನೋ, ಹರಿಕೃಷ್ಣ ಪುನರೂರು, ಇ. ಫೆರ್ನಾಂಡಿಸ್ ಮೊದಲಾದವರು ಉಪಸ್ಥಿತರಿದ್ದರು.