ಅಧಿಕಾರಿಗಳ ಕೈಯಲ್ಲಿ ವೈದ್ಯಕೀಯ ಕಾನೂನು ಕುರಿತ ಕಾರ್ಯಾಗಾರ
ಮಣಿಪಾಲ, ಅ.28: ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾ ಲಯದ ವಿಧಿವಿಜ್ಞಾನ ಔಷಧ ವಿಭಾಗದ ವತಿಯಿಂದ ಪೊಲೀಸ್, ನ್ಯಾಯಾಂಗ ಮತ್ತು ವೈದ್ಯಕೀಯ ಅಧಿಕಾರಿಗಳ ಕೈಯಲ್ಲಿ ವೈದ್ಯಕೀಯ ಕಾನೂನು ಕಾರ್ಯಾ ಗಾರ ‘ಸ್ಪಿಯರ್- 2019’ ಅನ್ನು ರವಿವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ ಮಾತನಾಡಿ, ಅಧಿಕಾರಿಗಳಿಗೆ ಈ ರೀತ್ರಿಯ ಇನ್ನೂ ಅನೇಕ ಕಾರ್ಯಾಗಾರ ಗಳನ್ನು ನಡೆಸಬೇಕು. ಅವರು ಈ ಅವಕಾಶಗಳ ಲಾಭವನ್ನು ಹೆಚ್ಚಾಗಿ ಪಡೆದು ಕೊಳ್ಳಬೇಕು. ಕಾನೂನು, ನ್ಯಾಯ ವ್ಯವಸ್ಥೆಯನ್ನು ಉತ್ತಮವಾಗಿ ಪೂರೈಸಲು ಸಹಾಯ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ.ಜೋಶಿ, ನ್ಯಾಯಾಲಯದ ವಿಚಾರಣೆಗೆ ಬಂದಾಗ ಕಸ್ಟಡಿ ಸರಪಳಿ ನಿರ್ವಹಣೆಯ ಮಹತ್ವದ ಬಗ್ಗೆ ಮತ್ತು ಜಿಲ್ಲಾ ಪೋಲೀಸ್ ಅಧೀಕ್ಷಕಿ ನಿಶಾ ಜೇಮ್ಸ್, ಅಪರಾಧದ ತನಿಖೆಯಲ್ಲಿ ಭೌತಿಕ ಸಾಕ್ಷ್ಯಗಳ ಪ್ರಸ್ತುತತೆ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್. ಅಶೋಕ್, ಮಾಹೆ ಸಹಉಪಕುಲಪತಿ ಡಾ.ಪೂರ್ಣಿಮಾ ಬಾಳಿಗಾ ಮುಖ್ಯ ಅತಿಥಿಗಳಾಗಿದ್ದರು. ಕೆಎಂಸಿಯ ಡೀನ್ ಡಾ.ಶರತ್ ಕುಮಾರ ರಾವ್ ಸ್ವಾಗತಿಸಿದರು. ಫೋರೆನ್ಸಿಕ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ವಿನೋದ ಸಿ.ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಪ್ರಾಧ್ಯಾಪಕ ಡಾ.ಶಂಕರ ಎಂ.ಬಕ್ಕಣ್ಣವರ ವಂದಿಸಿದರು. ಸಹಪ್ರಾಧ್ಯಾಪಕಿ ಡಾ.ಅನಿತಾ ಎಸ್. ಕಾರ್ಯ ಕ್ರಮ ನಿರೂಪಿಸಿದರು.