ಮೋಹನ್ದಾಸ್, ವಿಶ್ವನಾಥ್ ಗಾಣಿಗ, ರಮೇಶ್ ರಾವ್ ಸಹಿತ ಉಡುಪಿಯ ಐವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ಮೋಹನ್ದಾಸ್, ರಮೇಶ್ ರಾವ್, ವಿಶ್ವನಾಥ್ ಗಾಣಿಗ, ಕೃಷ್ಣ ಪ್ರಸಾದ್, ಪ್ರಕಾಶ್ ಶೆಟ್ಟಿ
ಉಡುಪಿ, ಅ.28: ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನ ಗೆದ್ದ ಅಂತಾರಾಷ್ಟ್ರೀಯ ಪವರ್ ಲಿಫ್ಟರ್ ವಿಶ್ವನಾಥ ಭಾಸ್ಕರ್ ಗಾಣಿಗ, ಹಿರಿಯ ಕಲಾವಿದ ಯು. ರಮೇಶ್ ರಾವ್ ಸೇರಿದಂತೆ ಉಡುಪಿ ಜಿಲ್ಲೆಯ ಐವರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ವಿಶ್ವನಾಥ್ ಗಾಣಿಗ (ಕ್ರೀಡೆ)
ಕುಂದಾಪುರ ತಾಲೂಕಿನ ದೇವಲಕುಂದದ ಬಾಳಿಕೆರೆಯ ಭಾಸ್ಕರ್ ಗಾಣಿಗ ಹಾಗೂ ಪದ್ಮಾವತಿ ದಂಪತಿಯ ಮಗ ವಿಶ್ವನಾಥ್, ಪ್ರಾಥಮಿಕ ಶಿಕ್ಷಣವನ್ನು ಬಳ್ಳಾರಿ ಹಾಗೂ ನೆಂಪುವಿನಲ್ಲಿ ಮುಗಿಸಿದ್ದರು. ಕುಂದಾಪುರ ಭಂಡಾರ್ಕರ್ಸ್ ಕಾಲೇಜಿನಲ್ಲಿ ಪದವಿ ಹಾಗೂ ಬೆಂಗಳೂರು ಜೈನ ಕಾಲೇಜಿನಲ್ಲಿ ಎಂಎಸ್ ಇನ್ ಐಟಿಯನ್ನು ಮಾಡಿದ್ದರು.
ಕೆನಡಾದಲ್ಲಿ 2019ರ ಸೆಪ್ಟಂಬರ್ನಲ್ಲಿ ನಡೆದ ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ನಲ್ಲಿ ಎರಡು ಚಿನ್ನ ಹಾಗೂ ಎರಡು ಬೆಳ್ಳಿಯ ಪದಕ ಪಡೆದಿದ್ದರು. ಅಲ್ಲದೆ ಈ ಚಾಂಪಿಯನ್ಶಿಪ್ನಲ್ಲಿ 327.5ಕೆ.ಜಿ. ಭಾರ ಎತ್ತುವ ಮೂಲಕ ವರ್ಷದ ಹಳೆ ದಾಖಲೆ ಭಾರತದ ಹೆಸರಿಗೆ ಮಾಡಿದ್ದಾರೆ. 2017ರಲ್ಲಿ ಸೌತ್ ಆಫ್ರಿಕಾದಲ್ಲಿ ನಡೆದ ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ನಲ್ಲಿ 1 ಚಿನ್ನ ಪದಕ ಮತ್ತು ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ನಲ್ಲಿ 1 ಬೆಳ್ಳಿಯ ಪದಕ ಪಡೆದಿದ್ದರು.
ಹೀಗೆ ಇವರು ಅಂತಾರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಒಟ್ಟು 5 ಚಿನ್ನದ ಪದಕ, 3 ಬೆಳ್ಳಿಯ ಪದಕ ಹಾಗೂ 3 ಕಂಚಿನ ಪದಕ ಮತ್ತು ರಾಷ್ಟೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಒಟ್ಟು 18 ಚಿನ್ನದ ಪದಕ, 5 ಬೆಳ್ಳಿಯ ಪದಕ ಹಾಗೂ 3 ಕಂಚಿನ ಪದಕವನ್ನು ಪಡೆದಿದ್ದಾರೆ.
ಬಿ.ಜಿ.ಮೋಹನ್ದಾಸ್(ಹೊರನಾಡು)
ಬಿಜೂರು ಗೋವಿಂದಪ್ಪ ಮೋಹನ್ದಾಸ್ ಮಣಿಪಾಲದ ಫಾರ್ಮಸಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ನಂತರ ಅದೇ ವಿಭಾಗದ ಸಹಾಯಕ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ್ದರು. 80ರ ದಶಕದಲ್ಲಿ ಕೊಲ್ಲಿ ರಾಷ್ಟ್ರಕ್ಕೆ ವಲಸೆ ಹೋದ ಇವರು, ಅಲ್ಲಿ ಫಾರ್ಮಸಿಯ ವಿವಿಧ ಸಂಸ್ಥೆಗಳಲ್ಲಿ ಕಳೆದ 35 ವರ್ಷಗಳ ಕಾಲ ದುಡಿದಿದ್ದರು.
ಸಮಾಜ ಸೇವೆಗಾಗಿ ಸಂಘದ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಇವರು, ದುಬೈ ಕರ್ನಾಟಕ ಸಂಘದ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಹಾಗೂ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೆ ಯುಎಇ ಇಂಡಿ ಯನ್ ಫಾರ್ಮಾಸ್ಯೂಟಿಕಲ್ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ಶಾರ್ಜಾ ಕರ್ನಾಟಕ ಸಂಘ 2007ರ ಪ್ರತಿಷ್ಟಿತ ಮಯೂರ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ಗಲ್ಫ್ ನಾಡಿನಲ್ಲಿ ಕನ್ನಡ ಅರಳಲು ಸಹಕಾರಿಯಾಗಿದ್ದ ಇವರಿಗೆ ಹತ್ತಾರು ಪ್ರಶಸ್ತಿಗಳು ಲಭಿಸಿವೆ. ಕಾಂತಾವರ ಕನ್ನಡ ಸಂಘವು ಇತ್ತೀಚೆಗೆ ಇವರ ಕುರಿತ ‘ಗಲ್ಫ್ ಕನ್ನಡಿಗ-ಬಿ.ಜಿ.ಮೋಹನ್ದಾಸ್ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದೆ. 2014ರಲ್ಲಿ ಊರಿಗೆ ವಾಪಾಸ್ ಬಂದಿರುವ ಇವರು, ಇದೀಗ ಮಣಿಪಾಲದಲ್ಲಿ ಪತ್ನಿ ಯಶೋದಾ, ಪುತ್ರ ಅಖಿಲ್ ಹಾಗೂ ಪುತ್ರಿ ಯಶಸ್ವಿ ಅವರೊಂದಿಗೆ ನೆಲಸಿದ್ದಾರೆ.
ರಮೇಶ್ ರಾವ್ (ಚಿತ್ರಕಲೆ)
ಉಡುಪಿ ಬೋರ್ಡ್ ಹೈಸ್ಕೂಲಿನ ಚಿತ್ರ ಕಲಾ ಶಿಕ್ಷಕರಾಗಿದ್ದ ದಿ.ರಾಮಕೃಷ್ಣ ರಾವ್ ಹಾಗೂ ಸೀತಮ್ಮ ದಂಪತಿಯ ಪುತ್ರ ರಮೇಶ್ ರಾವ್, 21ವರ್ಷಗಳ ಕಾಲ ಸಿಂಡಿಕೇಟ್ ಬ್ಯಾಂಕ್ನಲ್ಲಿ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿಯೊಂದಿಗೆ ಪೂರ್ಣ ಕಾಲಿಕವಾಗಿ ಚಿತ್ರಕಲೆಯಲ್ಲಿ ತೊಡಗಿಸಿ ಕೊಂಡರು.
ಉಡುಪಿಯ ಗ್ಯಾಲರಿ ದೃಷ್ಠಿ ದೃಶ್ಯ ಮತ್ತು ಕಲಾಶಾಲೆಯ ನಿರ್ದೇಶಕರಾಗಿ ರುವ ಇವರು, ಉಡುಪಿ ಆರ್ಟಿಸ್ಟ್ ಫೋರಂನ ಸ್ಥಾಪಕಾಧ್ಯಕ್ಷರು ಮತ್ತು ಪ್ರಸ್ತುತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೆಂಕಟಪ್ಪಪ್ರಶಸ್ತಿ-2009 ಇದರ ನಿರ್ಣಾಯಕರಾಗಿಯೂ ಕೆಲಸ ಮಾಡಿದ್ದಾರೆ. ದೆಹಲಿಯ ತಿಹಾರ್ ಹಾಗೂ ಉಡುಪಿಯ ಅಂಪಾರ್ ಜೈಲ್ನ ಆರ್ಟ್ ಕ್ಯಾಂಪ್ಗಳಲ್ಲಿ ತರಬೇತಿ ನೀಡಿದ್ದಾರೆ.
1969, 1980, 1992 ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, 1972, 1973, 1975ರ ಕೇರಳ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ಲಲಿತಕಲಾ ಅಕಾಡೆಮಿ ರೀಜನಲ್ ಸೆಂಟರ್ ಚೆನೈ ಪ್ರಶಸ್ತಿ, ಕರ್ನಾಟಕ ಲಲಿತ ಕಲಾ ಅಕಾಡೆಮಿ ಗೌರವ ಪ್ರಶಸ್ತಿ, ಆಳ್ವಾಸ್ ಚಿತ್ರಸಿರಿ ಪ್ರಶಸ್ತಿಯನ್ನು ಪಡೆದಿದ್ದಾರೆ.
ಭಾರತಾದ್ಯಂತ 20ಕ್ಕೂ ಅಧಿಕ ಕಲಾ ಶಿಬಿರಗಳನ್ನು ನಡೆಸಿರುವ ಇವರು, ಶ್ರದ್ಧಾ ರಿಹಬಿಲಿಟೇಶನ್ ಫೌಂಡೇಶನ್ ಮುಂಬೈ, ಸೇವ್ದ ಚಿಲ್ಡ್ರನ್ ಮುಂಬೈ ಸೇರಿದಂತೆ ಹಲವು ಸಹಾಯಾರ್ಥ ಪ್ರದರ್ಶನಗಳನ್ನು ನಡೆಸಿದ್ದಾರೆ. ರಮೇಶ್ ರಾವ್ ವಾಸ್ತವ ಶೈಲಿಯ ವಿಶಿಷ್ಠ ಕಲಾವಿದರು.
ಜನಸಾಮಾನ್ಯರ ಬದುಕಿನ ಚಿತ್ರಣಕ್ಕೆ ಅಗ್ರಸ್ಥಾನ. ನೆರಳು ಬೆಳಕಿನ ಲವಲವಿಕೆಯ ಜಿವಂತಿಕೆಯನ್ನು ತನ್ನ ಕಲಾಕೃತಿಯಲ್ಲಿ ಪ್ರತಿಬಿಂಬಿಸಿದ್ದಾರೆ.
ಡಾ.ಕೃಷ್ಣಪ್ರಸಾದ್(ವೈದ್ಯಕೀಯ): ಉಡುಪಿಯ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾಗಿ ರುವ ಡಾ. ಕೃಷ್ಣಪ್ರಸಾದ್ ಕೆ., ಉಡುಪಿ ಜಿಲ್ಲಾಸ್ಪತ್ರೆ ಕಣ್ಣಿನ ವಿಭಾಗದ ಮುಖ್ಯಸ್ಥರಾಗಿ, ದಾವಣಗೆರೆಯ ಜೆ.ಜೆ.ಎಮ್ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.
ದಾವಣಗೆರೆಯ ಜೆ.ಜೆ.ಎಮ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮತ್ತು ಎಂಎಸ್ ಪದವಿಯನ್ನು ಪೂರೈಸಿರುವ ಇವರು, ಬ್ಯಾಂಕಾಕ್, ಜರ್ಮನಿ ಹಾಗೂ ಸಿಂಗಾಪುರಗಳಲ್ಲಿ ಕಣ್ಣಿನ ಚಿಕಿತ್ಸೆ ಕುರಿತು ಸಂಶೋಧನೆ ಹಾಗೂ ವಿಶೇಷ ಪರಿಣಿತಿಯನ್ನು ಪಡೆದಿದ್ದಾರೆ. ರಾಜ್ಯ ಸರಕಾರದ ಯಶಸ್ವಿನಿ ರೈತರ ಸಹಕಾರಿ ಆರೋಗ್ಯ ಯೋಜನೆಯ ವಿಶ್ವಸ್ಥರಾಗಿ ಇವರನ್ನು ನಿಯುಕ್ತಿಗೊಳಿಸಲಾಗಿದೆ ಮತ್ತು ರಾಜ್ಯ ದೃಷ್ಟಿ ನೀತಿ ಸಮಿತಿಯ ಅಧ್ಯಕ್ಷರಾಗಿ ನೇಮಿಸಿದೆ.
ಇವರ ಮೂಲಕ ಸುಮಾರು ಒಂದು ಲಕ್ಷಕ್ಕಿಂತಲೂ ಅಧಿಕ ಮಂದಿ ನೇತ್ರ ದಾನದ ಘೋಷಣೆಯನ್ನು ಮಾಡಿದ್ದು ಸುಮಾರು 330 ಕಣ್ಣಿನ ಕರಿಗುಡ್ಡೆ ಕಸಿ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಈವರೆಗೆ 60000ಕ್ಕಿಂತಲೂ ಅಧಿಕ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ್ದು ಅದರಲ್ಲಿ 24 ಸಾವಿರಕ್ಕಿಂತಲೂ ಅಧಿಕ ಉಚಿತ ನೇತ್ರ ಶಸ್ತ್ರ ಚಿಕಿತ್ಸೆಯನ್ನು ನೆರವೆರಿಸಿದ್ದಾರೆ. 3 ಲಕ್ಷ 75 ಸಾವಿರಕ್ಕಿಂತಲೂ ಅಧಿಕ ಉಚಿತ ಕನ್ನಡಕ ವಿತರಣೆ ಮಾಡಿದ್ದಾರೆ. ಇಂದಿನವರೆಗೆ 20 ಲಕ್ಷ ಜನರ ಕಣ್ಣಿನ ತಪಾಸಣೆ ನಡೆಸಿದ್ದು ಅದರಲ್ಲಿ ಸುಮಾರು 10 ಲಕ್ಷಕ್ಕಿಂತಲೂ ಅಧಿಕ ಜನರ ಕಣ್ಣಿನ ಪರೀಕ್ಷೆಯನ್ನು ಉಚಿತ ಶಿಬಿರಗಳಲ್ಲಿ ನಡೆಸಿದ್ದಾರೆ. ಇವರಿಗೆ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಹಾಗೂ ಸನ್ಮಾನಗಳು ದೊರೆತಿವೆ.
ಕೆ.ಪ್ರಕಾಶ್ ಶೆಟ್ಟಿ (ಸಂಕೀರ್ಣ)
ಮೂಲತಃ ಉಡುಪಿ ಜಿಲ್ಲೆಯವರಾದ ಪ್ರಕಾಶ್ ಶೆಟ್ಟಿ, ದಿ.ಮಾಧವ ಶೆಟ್ಟಿ ಮತ್ತು ರತ್ನಾ ಶೆಟ್ಟಿ ದಂಪತಿಯ ಪುತ್ರ. ಕಾಲೇಜು ಶಿಕ್ಷಣ ಮುಗಿಸಿದ ಬಳಿಕ ಹೊಟೇಲ್ ಉದ್ಯಮದ ಕಡೆಗೆ ಗಮನ ಹರಿಸಿದ ಇವರು ಇಂದು ಹೊಟೇಲ್ ಉದ್ಯಮದಲ್ಲಿ ಮಹತ್ತರ ಸಾಧನೆ ಮಾಡುವ ಮೂಲಕ ಖಾತ್ಯ ಉದ್ಯಮಿಯಾಗಿದ್ದಾರೆ.
1993ರಲ್ಲಿ ಬೆಂಗಳೂರಿನ ಬಂಜಾರ ಹೆಸರಿನ ಹೊಟೇಲ್ ಆರಂಭಿಸಿದ ಅವರು, ಪ್ರಸ್ತುತ ಎಂಆರ್ಜಿ ಹಾಸ್ಪಿಟಾಲಿಟಿ ಆ್ಯಂಡ್ ಇನ್ಫ್ರಾಸ್ಟ್ರಕ್ಟರ್ನ ಚೇಯರ್ಮೆನ್ ಆಗಿದ್ದಾರೆ. ಬೆಂಗಳೂರು, ಮಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ವಿಲಾಸಿ ಹೊಟೇಲ್ಗಳನ್ನು ಸ್ಥಾಪಿಸಿದ್ದಾರೆ. ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾವಿರಾರು ಮಂದಿಗೆ ಉದ್ಯೋಗದಾತರಾದರು.
ಸಮಾಜ ಮತ್ತು ಹೊಟೇಲ್ ಉದ್ಯಮದಲ್ಲಿ ಸಲ್ಲಿಸಿರುವ ಇವರ ಸೇವೆಗೆ ಗ್ಲೋಬಲ್ ಅಚೀವರ್ಸ್ ಫೇಂಡೇಶನ್ನಿಂದ ಬೆಸ್ಟ್ ಇಂಟಲೆಕ್ಚುವಲ್ ಆವಾರ್ಡ್, ಗೌರವ ರತ್ನ ಪ್ರಶಸ್ತಿ, ಟಿಪ್ಪುಸುಲ್ತಾನ್ ಪಶಸ್ತಿ ಸೇರಿದಂತೆ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.