ಬಂಟ್ವಾಳ ಪುರಸಭೆಯಲ್ಲಿ ಕೇಳುವವರಾರೂ ಇಲ್ಲ!
►ಇತ್ತ ಅಧಿಕಾರಿಯೂ ಇಲ್ಲ, ಅತ್ತ ಅಧಿಕಾರವೂ ಇಲ್ಲ ► ಅಭಿವೃದ್ಧಿ ಕಾರ್ಯಗಳು ಕುಂಠಿತ
ಬಂಟ್ವಾಳ, ಅ.28: ಬಂಟ್ವಾಳ ಪುರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲದೆ ವರ್ಷವೇ ಕಳೆದಿದ್ದು, ಇದೀಗ ಪುರಸಭೆಯ ಮುಖ್ಯಾಧಿಕಾರಿ ಹುದ್ದೆಯೂ ಖಾಲಿಯಾಗಿ 25 ದಿನಗಳಾಗಿವೆ. ಜನಪ್ರತಿನಿಧಿಗಳ ಆಡಳಿತದ ಜೊತೆಗೆ ಅಧಿಕಾರಿಯೂ ಇಲ್ಲದಂತಾಗಿದ್ದು, ಆಡಳಿತ ಯಂತ್ರವೇ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ.
ಬಂಟ್ವಾಳ ಪುರಸಭೆಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಕಾರ್ಕಳಕ್ಕೆ ವರ್ಗಾವಣೆಗೊಂಡಿದ್ದಾರೆ. ಆದರೆ ಇಲ್ಲಿ ಇಲ್ಲಿಗೆ ಪ್ರಭಾರ ನೆಲೆಯಲ್ಲೂ ಯಾರು ನಿಯೋಜನೆಯಾಗಿಲ್ಲ. ಮುಖ್ಯಾಧಿಕಾರಿ ನಿರ್ಗಮಿಸುವ ಸಂದರ್ಭ ಪುರಸಭೆಯ ವ್ಯವಸ್ಥಾಪಕಿ ಲೀಲಾವತಿಯವರಿಗೆ ಚಾರ್ಜ್ ನೀಡಲಾಗಿದೆ.
ಜನಪ್ರತಿನಿಧಿಗಳ ಆಡಳಿತ ವ್ಯವಸ್ಥೆಗೆ ಅಧ್ಯಕ್ಷರು, ಉಪಾಧ್ಯಕ್ಷರು ಇಲ್ಲವಾಗಿದ್ದು, ಸದ್ಯ ಆಡಳಿತಾಧಿ ಕಾರಿಯಾಗಿ ಮಂಗಳೂರು ಸಹಾಯಕ ಆಯುಕ್ತರು ಕಾರ್ಯನಿರ್ವಹಿಸುತ್ತಾರೆ. ಆದರೆ ಅವರು ಅಗತ್ಯ ವಿದ್ದರೆ ಮಾತ್ರ ಇಲ್ಲಿಗೆ ಆಗಮಿಸುತ್ತಾರೆಯೇ ಹೊರತು ಇಲ್ಲವಾದಲ್ಲಿ ಇತ್ತ ಸುಳಿಯುವುದೇ ಇಲ್ಲ. ಸದ್ಯ ಮುಖ್ಯಾಧಿಕಾರಿಯೂ ಇಲ್ಲದಿರುವುದರಿಂದ ಅಗತ್ಯದ ಕೆಲಸಕ್ಕಾಗಿ ಪುರಸಭೆಗೆ ಧಾವಿಸುವ ಪುರವಾಸಿಗಳು ಬರಿಗೈಯಲ್ಲಿ ವಾಪಸ್ ಆಗುತ್ತಿರುವುದು ಸಾಮಾನ್ಯ ವಾಗಿದೆ. ಇತ್ತ ಜನಪ್ರತಿನಿಧಿಗಳ ಆಡಳಿತವು ಆಸ್ತಿತ್ವಕ್ಕೆ ಬಾರದಿರುವುದರಿಂದ ಪುರಸಭಾ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳೂ ಕುಂಠಿತಗೊಂಡಿದೆ ಎಂದು ಪುರವಾಸಿಗಳು ಆರೋಪಿಸಿದ್ದಾರೆ.
ಬಂಟ್ವಾಳ ಪುರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತ, ಪೂರ್ಣಾವಧಿಯ ಮುಖ್ಯಾಧಿಕಾರಿ ಹುದ್ದೆ ಏಕಕಾಲದಲ್ಲಿ ಖಾಲಿ ಬಿದ್ದಿರುವ ಸ್ಥಿತಿ ಇದೇ ಮೊದಲ ಬಾರಿಗೆ ಉದ್ಭವಿಸಿದೆ. ಇಷ್ಟೊಂದು ಸುರ್ದೀಘ ಅವಧಿಯವರೆಗೆ ಜನಪ್ರತಿನಿಧಿಗಳ ಆಡಳಿತವಿಲ್ಲದಿರುವುದು ಹೊಸ ದಾಖಲೆಯಾಗಿದೆ.
ಪುರಸಭೆಯ ಮೂಲಗಳ ಪ್ರಕಾರ ನೂತನ ಮುಖ್ಯಾಧಿಕಾರಿ ನವೆಂಬರ್ 3ರಂದು ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಅದಿನ್ನು ಖಚಿತಗೊಂಡಿಲ್ಲ.
ಬಂಟ್ವಾಳ ಪುರಸಭೆಯ ಚುನಾವಣೆಯಲ್ಲಿ 27 ಸ್ಥಾನಗಳ ಪೈಕಿ, ಕಾಂಗ್ರೆಸ್ 12, ಬಿಜೆಪಿ 11 ಮತ್ತು ಎಸ್‌ಡಿಪಿಐ 4 ಸ್ಥಾನಗಳನ್ನು ಗಳಿಸಿತ್ತು. ಸಂಸದ, ಶಾಸಕರ ಮತಬಲದಿಂದ ಬಿಜೆಪಿ ಅಧಿಕಾರಕ್ಕೇರುವ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಮೀಸಲಾತಿ ಪಟ್ಟಿಯ ವಿಚಾರ ಕೋರ್ಟ್ ಮೆಟ್ಟಿಲೇರಿದ ಕಾರಣ ವಿಳಂಬವಾಯಿತು. ಆದರೆ, ಈಗ ಆ ಗೋಜಿಗೇ ಸರಕಾರ ಹೋಗಿಲ್ಲ. ಚುನಾವಣೆ ನಡೆದದ್ದು, ಗೆದ್ದವರು ಸಂಭ್ರಮಾಚರಿಸಿದ್ದಷ್ಟೇ ಬಂತು.
ಬಂಟ್ವಾಳ ಪುರಸಭೆಯಲ್ಲಿ ಆಡಳಿತಾಧಿಕಾರ ಬಂದು ವರ್ಷ, ಎರಡು ತಿಂಗಳನ್ನು ಪೂರೈಸಿದೆ. ಮಂಗಳೂರು ಸಹಾಯಕ ಆಯುಕ್ತ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚುನಾಯಿತ ಪ್ರತಿನಿಧಿಗಳಿಗೆ ಪ್ರಮಾಣಪತ್ರ ಸಿಕ್ಕಿದ್ದು ಬಿಟ್ಟರೆ ಪೂರ್ಣ ಪ್ರಮಾಣದ ಅಧಿಕಾರ ಸಿಗದೆ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ವಾರ್ಡ್ ಗಳ ಸಮಸ್ಯೆಗಳನ್ನು ಸರಿ ಮಾಡಲು ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಕುಸಿತಗೊಂಡಿವೆ. ಅದಲ್ಲದೆ, ಇದೀಗ ಆಡಳಿತ ಯಂತ್ರವೇ ಸಂಪೂರ್ಣ ನಿಷ್ಕ್ರಿಯವಾಗಿದೆ. ಇದರಲ್ಲಿ ಕ್ಷೇತ್ರ ಶಾಸಕರ ನಿರ್ಲಕ್ಷವೂ ಇದೆ.
ಲುಕ್ಮಾನ್,
ಬಂಟ್ವಾಳ ಪುರಸಭಾ ಸದಸ್ಯ
ಸದ್ಯ ಹಿಂದಿನ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ತನಗೆ ಚಾರ್ಜ್ ನೀಡಿ ಹೋಗಿದ್ದಾರೆ. ಹೊಸ ಮುಖ್ಯಾಧಿಕಾರಿ ನ.3ರಂದು ಆಗಮಿಸುತ್ತಾರೆ ಎಂದು ಹೇಳಲಾಗುತ್ತಿದ್ದರು ಅದಿನ್ನೂ ಸ್ಪಷ್ಟಗೊಂಡಿಲ್ಲ.
ಲೀಲಾವತಿ,
ವ್ಯವಸ್ಥಾಪಕಿ ಬಂಟ್ವಾಳ ಪುರಸಭೆ