ಕೊಳೆಯುತ್ತಿರುವ ಉನ್ನತ ಶಿಕ್ಷಣ ಸಂಸ್ಥೆಗಳು
ಶಿಕ್ಷಣ ರಂಗದ ಕಗ್ಗೊಲೆಗೆ ಜೀವಂತ ಸಾಕ್ಷಗಳು: ಭಾಗ - 3
ದೇಶದ ಸಾರ್ವಜನಿಕ ಶಿಕ್ಷಣದ ಮೇಲೆ ಸರಕಾರಿ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ದಾಳಿಗಳ ಕುರಿತು ವಿಚಾರಣೆ ನಡೆಸಲು ಪೀಪಲ್ಸ್ ಕಮಿಷನ್ ಫಾರ್ ಶ್ರಿಂಕಿಂಗ್ ಡೆಮಾಕ್ರಟಿಕ್ ಸ್ಪೇಸ್ (ಪಿಸಿಎಸ್‌ಡಿಎಸ್) ಸಂಘಟನೆಯು ನಿವೃತ್ತ ನ್ಯಾಯಾಧೀಶರನ್ನೂ ಒಳಗೊಂಡ ಒಂದು ಜನತಾ ನ್ಯಾಯಮಂಡಳಿಯನ್ನು ರಚಿಸಿತ್ತು. ಅದರ ಮುಂದೆ ನೂರಾರು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಸಾಕ್ಷ ಹೇಳಿ ಹಸಿಹಸಿ ಸತ್ಯಗಳನ್ನು ಬಿಚ್ಚಿಟ್ಟಿದ್ದರು. ಅವುಗಳ ಆಧಾರದಲ್ಲಿ ಈ ವಿಶೇಷ ಸರಣಿಯನ್ನು ನಿರೂಪಿಸಲಾಗಿದೆ.
ಇಡೀ ಈಶಾನ್ಯ ಪ್ರದೇಶದಲ್ಲಿಯೇ ಇರುವ ಏಕೈಕ ಮಹಿಳಾ ವಿಶ್ವವಿದ್ಯಾನಿಲಯಕ್ಕೆ, ಉಪಕುಲಪತಿಯ ನೇಮಕಾತಿ ಆಗದಿರುವುದರಿಂದ, ಅದನ್ನು ಬಜೆಟ್ ಪಟ್ಟಿಯಿಂದ ಸಂಪೂರ್ಣವಾಗಿ ಹೊರಗಿಡುವುದರ ಮೂಲಕ ಅದಕ್ಕೆ ಪ್ರವರ್ತಕರೇ ಇಲ್ಲದಂತೆ ಮಾಡಲಾಯಿತು. ಈ ವಿಶ್ವವಿದ್ಯಾನಿಲಯವನ್ನು ಅಭಿವೃದ್ಧಿಪಡಿಸದೇ ಇರಲು ಕುಲಪತಿಯ ನೇಮಕಾತಿ ಆಗಿಲ್ಲದಿರುವುದನ್ನೇ ಒಂದು ನೆಪ ಮಾಡಿಕೊಳ್ಳಲಾಯಿತು. ಕುಲಪತಿ ನೇಮಕಾತಿ ಮಾಡುವ ಹೊಣೆ ವಿದ್ಯಾರ್ಥಿಗಳದ್ದೇ, ಅಥವಾ ಸರಕಾರದ್ದೇ? ಆದರೆ, ವಿದ್ಯಾರ್ಥಿಗಳೇ ಕಷ್ಟ ಅನುಭವಿಸಬೇಕಾಯಿತು
ದೇಶದಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆ ದಿನದಿಂದ ದಿನಕ್ಕೆ ಕೊಳೆಯುತ್ತಾಬರುತ್ತಿದೆ. ವ್ಯವಸ್ಥಿತವಾದ ನಿಧಿ ಕಡಿತವು- ಬೋಧಕ ಸಿಬ್ಬಂದಿಗಳ ನೇಮಕಾತಿ ಮಾಡದಿರುವುದು, ತಾತ್ಕಾಲಿಕತೆಯ ಧೋರಣೆ, ಸಾಮಾಜಿಕ ವಿಜ್ಞಾನಗಳ ಕೋರ್ಸ್‌ಗಳಲ್ಲಿ ಕಡಿತ ಇತ್ಯಾದಿ ಹಲವಾರು ಕಾರಣಗಳಿಂದಾಗಿ ಭಾರತದಲ್ಲಿ ಶಿಕ್ಷಣದ ದಯನೀಯ ಸ್ಥಿತಿಗೆ ಕಾರಣವಾಗಿದೆ. ಜನತಾ ನ್ಯಾಯಮಂಡಳಿಯ ಮುಂದೆ ನೀಡಲಾದ ಸಾಕ್ಷಗಳು ಈ ಕುರಿತು ಸ್ಪಷ್ಟ ಚಿತ್ರಣ ಒದಗಿಸುತ್ತವೆ.
ದಿಲ್ಲಿ ವಿಶ್ವವಿದ್ಯಾನಿಲಯದ ಪ್ರೊ. ಕರೆನ್ ಗ್ಯಾಬ್ರಿಯೆಲ್ ಅವರು, 2017ರಲ್ಲಿ ಸರಕಾರವು ದಿಲ್ಲಿ ವಿಶ್ವವಿದ್ಯಾನಿಲಯದ ಕಾಲೇಜುಗಳ ಪ್ರವೇಶಾತಿ ಪ್ರಕ್ರಿಯೆಯಲ್ಲಿ ‘ವಿದ್ಯಾರ್ಥಿಗಳಿಗೆ ಅನುಕೂಲ’ ಎಂಬ ವೇಷದಲ್ಲಿ ಪರಿಚಯಿಸಿದ ಧೋರಣೆಯ ಬದಲಾವಣೆಯ ಬಗ್ಗೆ ತಿಳಿಸಿದರು. ತಮ್ಮ ಆಯ್ಕೆಯ ನಾಲ್ಕು ವಿಷಯಗಳಲ್ಲಿ ‘ವೃತ್ತಿ ಅಧ್ಯಯನ’ ಎಂದು ಶ್ರೇಣೀಕರಿಸಿದ ಕೋರ್ಸ್ ಗಳನ್ನು ಸೇರಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದ್ದು, ಇದು ಸಾಂಪ್ರದಾಯಿಕ ಅಕಾಡಮಿಕ್ ಕೋರ್ಸ್‌ಗಳ ವೆಚ್ಚದಲ್ಲಿ ವೃತ್ತಿ ಕೋರ್ಸ್‌ಗಳಿಗೆ ಪ್ರೋತ್ಸಾಹ ನೀಡಲು ಕೈಗೊಂಡ ಉದ್ದೇಶಪೂರ್ವಕ ಕ್ರಮವಾಗಿದೆ ಎಂದವರು ವಿವರಿಸಿದರು.. ಈ ಮುಚ್ಚುಮರೆಯ ಬದಲಾವಣೆಯು ವೃತ್ತಿ ಶಿಕ್ಷಣದ ಮೂಲಕ ಖಾಸಗೀಕರಣಕ್ಕೆ ಉತ್ತೇಜನ ನೀಡುವ ಉದ್ದೇಶ ಹೊಂದಿದ್ದು, ಇದು ವಿದೇಶಿ ಖಾಸಗಿ ಸಮಾಲೋಚನಾ (ಸಲಹಾ) ಸಂಸ್ಥೆಯಾದ ಅರ್ನ್ಸ್ಟ್ ಆ್ಯಂಡ್ ಯಂಗ್ (Ernst & Young) ಪ್ರಸ್ತಾಪಿಸಿ, ನಂತರ ನೀತಿ (NITI) ಆಯೋಗವು ಅಂಗೀಕರಿಸಿದ ’ವಿಷನ್ 2030’ ದಾಖಲೆಯಲ್ಲಿರುವ ಸುಧಾರಣಾ ಕ್ರಮಗಳ ಭಾಗವಾಗಿದೆ. ಪಠ್ಯಕ್ರಮದ ಕುರಿತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯ ಮೇಲೆ ಇದು ದುಷ್ಪರಿಣಾಮ ಬೀರಿದೆ ಎಂದು ಪ್ರೊ. ಮುಜುಮ್‌ದಾರ್ ವಿವರಿಸಿದರು.
‘ಗುಜರಾತ್ ಮಾದರಿ’ ಅಭಿವೃದ್ಧಿ ಕುರಿತು ಮಾತನಾಡುತ್ತಾ ಪ್ರೊ. ಹೇಮಂತ್ ಕುಮಾರ್ ಶಾ ಅವರು, ಗುಜರಾತ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಎದುರಾಗಿರುವ ದಯನೀಯ ಸ್ಥಿತಿಯನ್ನು ಬಹಿರಂಗಪಡಿಸಿದರು. ಗುಜರಾತಿನಲ್ಲಿ ವಿಶ್ವವಿದ್ಯಾನಿಲಯಗಳ ಸಂಖ್ಯೆ 15ರಿಂದ 50ಕ್ಕೂ ಹೆಚ್ಚಿಗೆ ಏರಿಕೆಯಾಗಿವೆ. ಆದರೆ, ಅವುಗಳಿಗೆ ಕಟ್ಟಡಗಳಿಲ್ಲ, ಅವುಗಳಲ್ಲಿ ಅಧ್ಯಾಪಕರಿಲ್ಲ, ಉಪಕುಲಪತಿಗಳಿಲ್ಲ, ಗುಮಾಸ್ತರಿಲ್ಲ, ರಿಜಿಸ್ಟ್ರಾರ್ ಮೊದಲಾದವರು ಇಲ್ಲ. ಅವುಗಳಲ್ಲಿ ಹೆಚ್ಚಿನವು ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಲ್ಲವೇ, ತಹಶೀಲ್ದಾರ್ ಕಚೇರಿಗಳಲ್ಲಿ ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ ಎಂದು ತಿಳಿಸಿದರು.
ಗುಜರಾತಿನಲ್ಲೇ ಅತ್ಯುತ್ತಮ ಆರ್ಟ್ಸ್ ಕಾಲೇಜುಗಳಲ್ಲಿ ಒಂದೆಂದು ಹೆಸರಾಗಿರುವ ತನ್ನದೇ ಎಸ್‌ಕೆ ಆರ್ಟ್ಸ್ ಕಾಲೇಜಿನಲ್ಲಿ ಅಧ್ಯಾಪಕರ ಕೊರತೆ ಎಷ್ಟರ ಮಟ್ಟಿಗೆ ಇದೆಯೆಂದರೆ, ಕಾಲೇಜಿನ ಎಲ್ಲಾ ಎರಡನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ 735 ಆಸನ ವ್ಯವಸ್ಥೆ ಇರುವ ಸಭಾಂಗಣದಲ್ಲಿ ಒಟ್ಟಾಗಿ ಪಾಠ ಮಾಡುವಂತೆ ತನ್ನ ಕಾಲೇಜಿನ ಪ್ರಿನ್ಸಿಪಾಲರು ತನ್ನನ್ನು ಕೇಳಿಕೊಂಡರೆಂದು ಅವರು ಹೇಳಿದರು. ಯಾಕೆಂದರೆ, ತರಗತಿವಾರು ಪಾಠ ಮಾಡಲು ಬೇಕಾದಷ್ಟು ಅಧ್ಯಾಪಕರು ಕಾಲೇಜಿನಲ್ಲಿಲ್ಲ.
ವಿದ್ಯಾರ್ಥಿ-ಅಧ್ಯಾಪಕರ ಅನುಪಾತ ಶಿಕ್ಷಣ ಸಂಸ್ಥೆಯ ಶ್ರೇಣಿಗೆ ಅನುಗುಣವಾಗಿ 20 ಶೇಕಡಾದಷ್ಟು ಇರಬೇಕಾದುದನ್ನು ಕೂಡಾ ಹೆಚ್ಚಿಸಲಾಗಿದ್ದು, ಶಿಕ್ಷಣದ ಗುಣಮಟ್ಟ ಇಳಿಯುತ್ತಿದೆ ಎಂದು ಪ್ರೊ. ನಾರಾಯಣ್ ಹೇಳಿದರು. ಶೈಕ್ಷಣಿಕ ಸಂಸ್ಥೆಗಳಿಗೆ ನಿಧಿಯಿಲ್ಲದಂತೆ ಮಾಡುವುದರಿಂದ ಸರಕಾರವು ವಿದ್ಯಾರ್ಥಿ-ಅಧ್ಯಾಪಕ ಅನುಪಾತವನ್ನು ಹಾಳುಗೆಡವುತ್ತಿದ್ದು, ಇದು ಶಿಕ್ಷಣ ಸಂಸ್ಥೆಗಳ ಶ್ರೇಣಿಗೆ ಹಾನಿಯುಂಟುಮಾಡುತ್ತಿರುವುದು ವಿಪರ್ಯಾಸ ಎಂದವರು ಹೇಳಿದರು.
ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ 5,000 ಹುದ್ದೆಗಳು ಖಾಲಿ ಇದ್ದು, ಬಹುತೇಕ ಎಲ್ಲವನ್ನೂ ತಾತ್ಕಾಲಿಕ ಅಧ್ಯಾಪಕರ ಮೂಲಕ ತುಂಬಿಸಲಾಗಿದೆ ಎಂಬ ವಿಷಯವನ್ನು ಪ್ರೊ. ಅಪೂರ್ವಾನಂದ ಹಂಚಿಕೊಂಡರು. ಅಸ್ಸಾಂ ಮಹಿಳಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಇದಕ್ಕಿಂತಲೂ ಆಘಾತಕಾರಿಯಾದ ಪ್ರಕರಣವನ್ನು ಮುಂದಿಟ್ಟರು. ಇಡೀ ಈಶಾನ್ಯ ಪ್ರದೇಶದಲ್ಲಿಯೇ ಇರುವ ಏಕೈಕ ಮಹಿಳಾ ವಿಶ್ವವಿದ್ಯಾನಿಲಯಕ್ಕೆ, ಉಪಕುಲಪತಿಯ ನೇಮಕಾತಿ ಆಗದಿರುವುದರಿಂದ, ಅದನ್ನು ಬಜೆಟ್ ಪಟ್ಟಿಯಿಂದ ಸಂಪೂರ್ಣವಾಗಿ ಹೊರಗಿಡುವುದರ ಮೂಲಕ ಅದಕ್ಕೆ ಪ್ರವರ್ತಕರೇ ಇಲ್ಲದಂತೆ ಮಾಡಲಾಯಿತು. ಈ ವಿಶ್ವವಿದ್ಯಾನಿಲಯವನ್ನು ಅಭಿವೃದ್ಧಿಪಡಿಸದೇ ಇರಲು ಕುಲಪತಿಯ ನೇಮಕಾತಿ ಆಗಿಲ್ಲದಿರುವುದನ್ನೇ ಒಂದು ನೆಪ ಮಾಡಿಕೊಳ್ಳಲಾಯಿತು. ಕುಲಪತಿ ನೇಮಕಾತಿ ಮಾಡುವ ಹೊಣೆ ವಿದ್ಯಾರ್ಥಿಗಳದ್ದೇ, ಅಥವಾ ಸರಕಾರದ್ದೇ? ಆದರೆ, ವಿದ್ಯಾರ್ಥಿಗಳೇ ಕಷ್ಟ ಅನುಭವಿಸಬೇಕಾಯಿತು ಎಂದು ಅವರು ದೂರಿದರು.
ಕೇಂದ್ರೀಯ ವಿಶ್ವವಿದ್ಯಾನಿಲಯಗಳಿಗೆ ಮಾತ್ರ ಪ್ರಾಮುಖ್ಯತೆ ನೀಡಿದ ಪರಿಣಾಮವಾಗಿ ಹೆಚ್ಚುಕಡಿಮೆ ಸಂಪೂರ್ಣ ಅವಗಣನೆಗೆ ಗುರಿಯಾಗಿರುವ ರಾಜ್ಯ ವಿಶ್ವವಿದ್ಯಾನಿಲಯಗಳ ಕರುಣಾಜನಕ ಸ್ಥಿತಿಯನ್ನು ಪ್ರೊ. ಅಪೂರ್ವಾನಂದ ಅವರು ವಿವರಿಸಿದರು. ತಾನು ಭೇಟಿ ನೀಡಿದ ಬಿಹಾರದ ಬೆಟ್ಟಿಹಾದಲ್ಲಿ ಕಾಲೇಜೊಂದು 1,200 ವಿದ್ಯಾರ್ಥಿಗಳನ್ನು ಹೊಂದಿದ್ದರೂ, 500ರಷ್ಟು ವಿದ್ಯಾರ್ಥಿಗಳು ಮಾತ್ರ ತರಗತಿಗೆ ಹಾಜರಾಗುತ್ತಿದ್ದಾರೆ ಎಂದು ತಿಳಿಸಿದ ಅವರು, ಅಧ್ಯಾಪಕರ ನೇಮಕಾತಿ ಆಗಿರದಿರುವುದರಿಂದ ಹೆಚ್ಚಿನ ವಿಭಾಗಗಳಿಗೆ ಬೀಗ ಜಡಿಯಲಾಗಿರುವುದೇ ಇದಕ್ಕೆ ಕಾರಣವೇ ಹೊರತು ವಿದ್ಯಾರ್ಥಿಗಳಲ್ಲ ಎಂದು ತಿಳಿಸಿದರು. ಇದು ದೇಶಾದ್ಯಂತದ ರಾಜ್ಯ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳ ಕತೆಯಾಗಿದೆ. ಈ ಶಿಕ್ಷಣ ಸಂಸ್ಥೆಗಳಲ್ಲಿ ನಿಜವಾಗಿಯೂ ಶಿಕ್ಷಣವೇ ಇಲ್ಲದಾಗಿದ್ದು, ವಿದ್ಯಾರ್ಥಿಗಳು ಕೇವಲ ಪದವಿ ಪಡೆಯಲು ಮಾತ್ರ ಬರುತ್ತಿದ್ದಾರೆ ಎಂದವರು ಹೇಳಿದರು.
ಪಟ್ನಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಮುಖೇಶ್ ಕುಮಾರ್ ಅವರು, ಬಿಹಾರದಲ್ಲಿ ರಾಜ್ಯ ವಿಶ್ವವಿದ್ಯಾನಿಲಯಗಳ ಸಾಂಸ್ಥಿಕ ಜೀರ್ಣತೆ ಕುರಿತು ನಿರಾಶಾಜನಕ ಸಾಕ್ಷ ನುಡಿದರು. ಪಟ್ನಾ ವಿಶ್ವವಿದ್ಯಾನಿಲಯದಲ್ಲಿ 24 ಗಂಟೆಗಳ ಕಾಲವೂ ತೆರೆದಿರುತ್ತಿದ್ದ ವಾಚನಾಲಯವನ್ನು 12 ಗಂಟೆಗಳಿಗೆ ಸೀಮಿತಗೊಳಿಸಲಾಗಿದೆ. ಆಘಾತಕಾರಿ ವಿಷಯವೆಂದರೆ, ಇಲ್ಲಿ ನಾಲ್ಕು ವರ್ಷಗಳಿಗೊಮ್ಮೆ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಛಾಪ್ರ ವಿಶ್ವವಿದ್ಯಾನಿಲಯದಿಂದ ಕಳೆದ ಐದರಿಂದ ಆರು ವರ್ಷಗಳಲ್ಲಿ ಒಬ್ಬನೇ ಒಬ್ಬ ಪದವೀಧರ ಹೊರಗೆ ಬಂದಿಲ್ಲ ಎಂದು ವರದಿಯಾಗಿದೆ. ಜಯ ಪ್ರಕಾಶ್ ವಿಶ್ವವಿದ್ಯಾನಿಲಯದಲ್ಲಿ ಕಳೆದ ಏಳು ವರ್ಷಗಳಿಂದ ಒಬ್ಬನೇ ಒಬ್ಬ ವಿದ್ಯಾರ್ಥಿ ಪದವಿ ಪಡೆದಿಲ್ಲ. ಅಂದರೆ, 2012ರಲ್ಲಿ ದಾಖಲಾತಿ ಹೊಂದಿರುವವರು ಇನ್ನೂ ಪದವಿ ಪಡೆದಿಲ್ಲ. 1939ರಲ್ಲಿ ಸ್ಥಾಪಿಸಲಾಗಿರುವ ಪಟ್ನಾ ವಿಶ್ವವಿದ್ಯಾನಿಲಯದ ಆರ್ಟ್ಸ್ ಕಾಲೇಜಿನಲ್ಲಿ ಲಲಿತ ಕಲೆಗಳ ವಿದ್ಯಾರ್ಥಿಯಾಗಿರುವ ರಾಮಕೃಷ್ಣ, ತಮ್ಮ ವಿಶ್ವವಿದ್ಯಾನಿಲಯದಲ್ಲಿ ಖಾಯಂ ಉಪನ್ಯಾಸಕರು ಇಲ್ಲ ಮಾತ್ರವಲ್ಲ, ಹಲವು ತಾತ್ಕಾಲಿಕ ಉಪನ್ಯಾಸಕರನ್ನೂ ತೆಗೆದುಹಾಕಲಾಗಿದೆ ಎಂದು ಹೇಳಿದರು. ಖಾಯಂ ಉಪನ್ಯಾಸಕರ ನೇಮಕಾತಿ, ಅಧ್ಯಯನಕ್ಕೆ ಉತ್ತಮ ವಾತಾವರಣ, ವಿದ್ಯಾರ್ಥಿನಿಯರ ವಸತಿನಿಲಯದ ಸ್ಥಾಪನೆ ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ತಾವು ಹೋರಾಟ ಮಾಡುತ್ತಿರುವುದಾಗಿ ಅವರು ತಿಳಿಸಿದರು. ತಮ್ಮ ತಾತ್ಕಾಲಿಕ ಪರಿಸ್ಥಿತಿ ಮತ್ತು ಉದ್ಯೋಗದ ಭದ್ರತೆ ಇಲ್ಲದಿರುವ ಕಾರಣದಿಂದ ಅಭದ್ರತೆಯಿಂದ ಇರುವ ಉಪನ್ಯಾಸಕರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲಾಗುತ್ತಿದೆ ಎಂದು ಪ್ರೊ. ಥಾಪರ್ ಹೇಳಿದರು. ಪ್ರಶ್ನಿಸುವುದರ ಮಹತ್ವವನ್ನು ತಿಳಿಸಿಕೊಡಬೇಕಾದ ಶಿಕ್ಷಕರೇ ಈಗ, ಪ್ರಶ್ನಿಸಲು ಭಯಪಡುತ್ತಿದ್ದಾರೆ. ಜ್ಞಾನ ವ್ಯವಸ್ಥೆಯನ್ನು ಪ್ರಶ್ನಿಸಿ, ಅದನ್ನು ಸುಧಾರಿಸುವುದು ಸಾಧ್ಯವಾಗುವಂತೆ, ಈಗಿರುವ ಜ್ಞಾನವನ್ನು ಪ್ರಶ್ನಿಸುವುದು ಹೇಗೆಂಬುದನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡುವುದು ಅತ್ಯಗತ್ಯ ಎಂದು ಪ್ರೊ. ಥಾಪರ್ ಒತ್ತಿಹೇಳಿದರು. ದಿಲ್ಲಿ ವಿಶ್ವವಿದ್ಯಾನಿಲಯದ ಪ್ರೊ. ಅಭಾ ದೇವ್ ಹಬೀಬ್ ಅವರು, 2008ರಲ್ಲಿ ದೊಡ್ಡ ಬಲವನ್ನು ಹೊಂದಿದ್ದು, ಹೆಚ್ಚಿನವರು ಖಾಯಂ ನೆಲೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸೆಮಿಸ್ಟರ್ ವ್ಯವಸ್ಥೆಯನ್ನು ಪ್ರತಿಭಟಿಸಿದ್ದ ದಿಲ್ಲಿ ವಿಶ್ವವಿದ್ಯಾನಿಲಯ ಶಿಕ್ಷಕರ ಸಂಘ (ಡಿಯುಟಿಎ)ದಲ್ಲಿ ಈಗ ಪರಿಸ್ಥಿತಿ ಹೇಗೆ ಬದಲಾಗಿದೆ ಎಂದು ವಿವರಿಸಿ, ಈಗ 50 ಶೇಕಡಾ ಶಿಕ್ಷಕರು ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡುತ್ತಿರುವುದರೊಂದಿಗೆ ಅದರ ಬಲ ಗಣನೀಯವಾಗಿ ಕಡಿಮೆಯಾಗಿದೆ ಎಂದು ಹೇಳಿದರು. ಅಧ್ಯಾಪನ ವೃತ್ತಿಯಲ್ಲಿ ಖಾಯಂ ಉದ್ಯೋಗವನ್ನು ನಿರಾಕರಿಸಿ, ತಾತ್ಕಾಲಿಕತೆಯನ್ನು ಅನುಸರಿಸುತ್ತಿರುವುದರಿಂದ ಅಧ್ಯಾಪಕರು ಅಸಂತೋಷದ ಜೀವನ ನಡೆಸುತ್ತಿದ್ದು, ವೃತ್ತಿಯಲ್ಲಿ ಉತ್ತಮ ಭವಿಷ್ಯದ ಸಾಧ್ಯತೆಯನ್ನು ಕಾಣದೆ, ಉದ್ಯೋಗ ತ್ಯಜಿಸುತ್ತಿದ್ದಾರೆ ಎಂದು ಪ್ರೊ. ಕುಮಾರ್ ತಿಳಿಸಿದರು.
ದೇಶದಲ್ಲಿ ಶಿಕ್ಷಣದ ಪರಿಸ್ಥಿತಿ ಇಷ್ಟೊಂದು ದಯನೀಯವಾಗಿರುವಾಗಲೂ ಆ ಕುರಿತು ಮಾತನಾಡದೆ ವಿಶ್ವಗುರುವಾಗಲು ಹೊರಟಿರುವವರ ಕುರಿತು ಜನತೆ, ಮುಖ್ಯವಾಗಿ ಯುವಜನರು ಯೋಚಿಸಬೇಕಾಗಿದೆ.