ಉಡುಪಿ: ಆಯುಷ್ಮಾನ್ ಯೋಜನೆಯ ಸರಳೀಕರಣಕ್ಕೆ ಒತ್ತಾಯ
ಉಡುಪಿ, ಅ. 30: ಕೇಂದ್ರ ಸರಕಾರ ಬಡವರ ಆರೋಗ್ಯ ರಕ್ಷಣೆಗಾಗಿ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್ ಯೋಜನೆಯನ್ನು ಇನ್ನಷ್ಟು ಸರಳೀಕರಿಸಬೇಕಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.
ಆಯುಷ್ಮಾನ್ ಭಾರತ್ ಯೋಜನೆ ಫಲಾನುಭವಿಗಳೊಂದಿಗೆ ಬುಧವಾರ ಬಿಜೆಪಿ ಕಚೇರಿಯಲ್ಲಿ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವರ ಸೂಚನೆಯಂತೆ ಫಲಾನುಭವಿಗಳೊಂದಿಗೆ ಈ ಸಂವಾದ ನಡೆಯುತ್ತಿದೆ ಎಂದರು.
ಹಿಂದಿನ ಕರ್ನಾಟಕ ಸರಕಾರ ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಯೋಜನೆಯನ್ನು ಒಟ್ಟಿಗೆ ಸೇರಿಸಿ ಕಗ್ಗಂಟು ಮಾಡಿದರು. ಕ್ಯಾನ್ಸರ್, ಕಿಡ್ನಿ, ಹೃದಯ ಮೊದಲಾದ ಕಾಯಿಲೆಗಳು ಇರುವ 3ಎ ವರ್ಗದ ರೋಗಿಗಳು ಸರಕಾರಿ ಆಸ್ಪತ್ರೆಗೆ ತೆರಳಿ ಅಲ್ಲಿಂದ ಶಿಫಾರಸು ಪತ್ರ ಪಡೆದು ಖಾಸಗಿ ಆಸ್ಪತ್ರೆಗೆ ಹೋಗಬೇಕಾಗಿದೆ. ಇದನ್ನು ರದ್ದುಪಡಿಸಿ ನೇರವಾಗಿ ಖಾಸಗಿ ಆಸ್ಪತ್ರೆಗೆ ತೆರಳಿ ಸೇವೆ ಪಡೆಯುವ ವ್ಯವಸ್ಥೆ ಮಾಡಬೇಕಾಗಿದೆ ಎಂದು ಶೋಭಾ ಹೇಳಿದರು.
3ಎ ವರ್ಗದ ರೋಗಿಗಳನ್ನು ನೇರವಾಗಿ ಖಾಸಗಿ ಆಸ್ಪತ್ರೆಗೆ ಕಳುಹಿಸಿದರೆ ಅವ್ಯವಹಾರವಾಗುವ ಸಾಧ್ಯತೆ ಇದೆ. ಚಿಕಿತ್ಸೆ ಇಲ್ಲದೆ ಬಿಲ್ ಆಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳುತಿದ್ದಾರೆ. ಯೋಜನೆಗೆ ಸಂಬಂಧಿಸಿದ ನೋಡಲ್‌ಅಧಿಕಾರಿಗಳಿರುವಾಗ ಅವ್ಯವಹಾರವಾಗದೆ ನಿಜವಾದ ರೋಗಿಗಳಿಗೆ ಅನುಕೂಲ ಸಿಗಬೇಕಾಗಿದೆ ಎಂದು ಮುಖ್ಯಕಾರ್ಯದರ್ಶಿ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ತಿಳಿಸಲಾಗಿದೆ ಎಂದು ರಘುಪತಿ ಭಟ್ ವಿವರಿಸಿದರು.
ಆಯುಷ್ಮಾನ್ ಯೋಜನೆ ಜಾರಿಗೆ ಬಂದ ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಭಟ್ ಹೇಳಿದರು.
ಯೋಜನೆಯ ಫಲಾನುಭವಿಗಳು ಆಯುಷ್ಮಾನ್ ಯೋಜನೆಯಿಂದ ತಮಗಾದ ಪ್ರಯೋಜನವನ್ನು ತಿಳಿಸಿದರು. ರಾತ್ರಿ ವೇಳೆ ಅಪಘಾತವಾದರೆ ಬೆಳಗಿನವರೆಗೆ ಕಾಯಲು ಆಸ್ಪತ್ರೆಯಲ್ಲಿ ತಿಳಿಸುತ್ತಿದ್ದಾರೆ ಎಂದವರು ದೂರಿದರು. ಇಂತಹ ಯೋಜನೆಗಳನ್ನು ಮನೆ ಮನೆಗೆ ತಿಳಿಸಬೇಕು ಎಂದು ಸಲಹೆಗಳನ್ನು ನೀಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಹೊಸದಿಲ್ಲಿಯಲ್ಲಿ ಆಯೋಜಿಸಿದ ಯೋಜನೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ರಾಜ್ಯದಿಂದ ಪಾಲ್ಗೊಂಡ ಏಕೈಕ ಫಲಾನುಭವಿ ಹಿರಿಯಡಕದ ಗಜಾನನ ನಾಯಕ್ ಅವರು ಸಭೆಯಲ್ಲಿ ಮಾತನಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸದಸ್ಯರಾದ ಶಿಲ್ಪಾಸುವರ್ಣ, ಗೀತಾಂಜಲಿ ಸುವರ್ಣ, ಸುಮಿತ್ ಬೈಲೂರು, ರೇಶ್ಮಾ ಉದಯಕುಮಾರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.