ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಧರಣಿ
ಬೆಂಗಳೂರು, ಅ.30: ಬಗರ್ ಹುಕುಂ ಸಾಗುವಳಿದಾರರಿಗೆ ಉಳುಮೆ ಚೀಟಿ, ನಿವೇಶನ ರಹಿತರಿಗೆ ನಿವೇಶನ, ಮನೆ, ಮತ್ತಿತರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಸದಸ್ಯರು ನಗರದ ಟೌನ್‌ಹಾಲ್ ಮುಂಭಾಗ ಧರಣಿ ನಡೆಸಿದರು.
ಬುಗರ್ ಹುಕುಂ ಸಾಗುವಳಿದಾರರಿಗೆ ಉಳುಮೆ ಚೀಟಿಗಾಗಿ ಹೊಸದಾಗಿ ಪಾರಂ ನ.57 ಅರ್ಜಿ ಹಾಕಿಕೊಳ್ಳಲು ಅವಕಾಶ ನೀಡಬೇಕು. ನಿವೇಶನ ರಹಿತರಿಗೆ ನಿವೇಶನ ಮತ್ತು ಸರಕಾರದ ವತಿಯಿಂದ ಕೇರಳ ಮಾದರಿಯಲ್ಲಿ 5 ಸೆಂಟ್ಸ್ ಭೂಮಿ ನೀಡಿ ಮನೆ ಕಟ್ಟಿ ಕೋಡಬೇಕು. ನಿವೇಶನ ನೀಡುವಾಗ ಆಯಾ ಗ್ರಾಮಗಳ ಪಕ್ಕದಲ್ಲೇ ನಿವೇಶನ ನೀಡಬೇಕು. ಉಳುಮೆ ಚೀಟಿ ವಿಲೇವಾರಿಗೆ ಮಂಜೂರಾತಿ ಸಮಿತಿ ರಚಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಬುಗರ್‌ಹುಕಂ ಸಾಗುವಳಿದಾರರಿಗೆ ಅರಣ್ಯ ಭೂಮಿ ಎಂದು ಪಹಣಿಯಲ್ಲಿ ಸೇರಿಸುವುದನ್ನು ಕೈಬಿಡಬೇಕು. ಕಂದಾಯ ಇಲಾಖೆಗೆ ವರ್ಗಾವಣೆ ಮಾಡಬೇಕು. ರೈತರ ಜಮೀನಿನ ಪಹಣೆಯಲ್ಲಿ ಪಿನ್ ನಂಬರ್ ತೆಗೆದು ಹೊಸ ನಂಬರ್ ನೀಡಿ ದುರಸ್ತಿ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಎನ್. ವೆಂಕಟಾಚಲಯ್ಯ, ಜಿಲ್ಲಾಧ್ಯಕ್ಷ ಪಾಲನೇತ್ರಯ್ಯ, ಕಾರ್ಯದರ್ಶಿ ನರಸಿಂಹಮೂರ್ತಿ, ಸಿದ್ದಪ್ಪ, ಮಾಯಣ್ಣ ಮತ್ತಿತರರಿದ್ದರು.