ಹಿಂದಣ ಹೆಜ್ಜೆಗಳು-ಭೂ ವಿಜ್ಞಾನಿಯ ಕಣ್ಣಲ್ಲಿ
ಈ ಹೊತ್ತಿನ ಹೊತ್ತಿಗೆ
‘ಹಿಂದಣ ಹೆಜ್ಜೆಗಳು-ಭೂ ವಿಜ್ಞಾನಿಯ ಕಣ್ಣಲ್ಲಿ’ ಕೃತಿಯು ಕರ್ನಾಟಕ ಮತ್ತು ಕರ್ನಾಟಕದ ಹೊರಗಿನ ಇತಿಹಾಸ ಮತ್ತು ಪುರಾತತ್ವ ಕುರಿತಾದ ಲೇಖನಗಳನ್ನು ಹೊಂದಿವೆ. ಆಸಕ್ತಿಯಿಂದ ಛಾಯಾಗ್ರಾಹಕರೂ ಆಗಿರುವ ಡಾ. ಎಚ್. ಚಂದ್ರಶೇಖರ ಅವರು ತಮ್ಮ ಛಾಯಾಚಿತ್ರಗಳ ಮೂಲಕ ತಮ್ಮ ಸಂಶೋಧನೆ ಮತ್ತು ವಾದಕ್ಕೆ ಹೆಚ್ಚಿನ ಸಮರ್ಥನೆಗಳನ್ನು ಒದಗಿಸುತ್ತಾರೆ. ತಲಸ್ಪರ್ಶಿ ಅಧ್ಯಯನಕ್ಕೆ ಮಾದರಿ ಎನ್ನಿಸಬಹುದಾದ ಇವರ ಲೇಖನಗಳು ಗತಕಾಲದ ಇತಿಹಾಸಕ್ಕೆ ಕನ್ನಡಿ ಹಿಡಿಯುತ್ತವೆ.
‘ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ/ನಿಂದ ಹೆಜ್ಜೆಯನರಿಯಬಾರದು’ ಎನ್ನುವ ಅಲ್ಲಮಪ್ರಭುವಿನ ಮಾತುಗಳನ್ನು ಉಲ್ಲೇಖಿಸುತ್ತಾ ಲೇಖಕರು ಬರಹಕ್ಕೆ ತೊಡಗುತ್ತಾರೆ. ಶರಣರ ನಾಡಿನಲ್ಲೊಂದು ಬೃಹತ್ ಬುದ್ಧವಿಹಾರ, ದಣ್ಣಾಯಕನ ಕೆರೆ-ಊರು ಮತ್ತು ಕೆರೆ -ಒಂದು ಅಧ್ಯಯನ, ಜಾತವೇದ ಮುನಿಗದ್ದುಗೆ, ಕೆಳದಿ ರಾಜ್ಯದ ರಾಜಧಾನಿಗಳ ಭೂವೈಜ್ಞಾನಿಕ ಅಧ್ಯಯನ, ಕೊಪ್ಪಳ ಜಿಲ್ಲೆಯ ಖನಿಜ ಸಂಪತ್ತು ಮತ್ತು ದೇಗುಲಗಳ ಕಲೆ, ನಗರ್ಲೆಯ ಶಾಸನಗಳು ಮತ್ತು ದೇಗುಲಗಳು ಒಂದು ಅಧ್ಯಯನ, ಶಿಲ್ಪಗಳಲ್ಲಿ ಆನೆ-ವೈವಿಧ್ಯದ ಚಿತ್ರಗಳು, ಕರ್ನಾಟಕದ ಕೋಟೆಗಳು ಭೂವಿಜ್ಞಾನಿಯ ಕಣ್ಣಲ್ಲಿ, ಕಾಶ್ಮೀರದ ಕಮನೀಯ ದೇವಾಲಯಗಳು, ರಕ್ತಸಿಕ್ತ ಸ್ಮಾರಕ ಜಲಿಯನ್‌ವಾಲಾಭಾಗ್, ಅಪೂರ್ವ ದೇಗುಲಗಳ ಆಲಂಪುರ, ಕಿತ್ತೂರು ಚೆನ್ನಮ್ಮನ ಸಂಬಂಧಿತ ಸ್ಮಾರಕಗಳು, ಕರ್ನಾಟಕದ ಕೆಲ ಪುರಾತನ ಬಾವಿಗಳ ಒಂದು ಅಧ್ಯಯನ, ಉಡುಪಿ ಜಿಲ್ಲೆಯ ವಾಸ್ತು ಮತ್ತು ಶಿಲ್ಪಕಲೆಯ ಮೇಲೆ ಈ ಜಿಲ್ಲೆಯ ಶಿಲೆಗಳ ಪ್ರಭಾವ, ನಿಯೋಗ: ವಿವಿಧ ರೂಪಗಳು....ಹೀಗೆ ಕರ್ನಾಟಕವಲ್ಲದೆ ದೇಶದೊಳಗಿರುವ ವಿವಿಧ ಶಿಲ್ಪಕಲೆ, ಸ್ಮಾರಕ, ಸಂಸ್ಕೃತಿಗಳಿಗೆ ಸಂಬಂಧಿಸಿದ ಸುಮಾರು 19 ಲೇಖನಗಳು ಇಲ್ಲಿವೆ. ಕೆಲವು ಲೇಖನಗಳು ಸಂಶೋಧನೆಗಳ ರೂಪದಲ್ಲಿದ್ದರೆ, ಇನ್ನು ಕೆಲವು ಪ್ರವಾಸಕಥನದಂತಿದೆ. ಪೂರ್ಣ ಪ್ರಮಾಣದ ಸಂಶೋಧನಾ ಗ್ರಂಥವೂ ಅಲ್ಲದೆ, ಪೂರ್ಣ ಪ್ರಮಾಣದ ಪ್ರವಾಸ ಕಥನವೂ ಅಲ್ಲದ ಬರಹಗಳೇ ಬಹುತೇಕ. ಕೆಲವು ಲೇಖನಗಳು ಅಪರೂಪದ ಮಾಹಿತಿಗಳನ್ನೊಳಗೊಂಡಿವೆ. ಜೊತೆಗೆ ಛಾಯಾಚಿತ್ರಗಳೂ ಲೇಖನಗಳನ್ನು ಓದುಗರಿಗೆ ಇನ್ನಷ್ಟು ಹತ್ತಿರವಾಗಿಸುತ್ತದೆ. ಇಲ್ಲಿರುವ ಲೇಖನಗಳೆಲ್ಲವೂ ಬಿಡಿ ಬಿಡಿಯಾಗಿರುವಂತಹದು. ಬರಹಗಳು ಇತಿಹಾಸದ ಮೇಲ್ಮುಖವಾದ ಪರಿಚಯವನ್ನಷ್ಟೇ ಮಾಡಿ ಮುಗಿದು ಹೋಗುತ್ತದೆ. ಸಂಸ್ಕೃತಿಯ ಆಳ ವಿಶ್ಲೇಷಣೆಗೆ ಇದು ಇಳಿಯುವುದಿಲ್ಲ. ಅಂತಹದೊಂದು ವಿಶ್ಲೇಷಣೆ ಈ ಕೃತಿಯ ಗುರಿಯೂ ಅಲ್ಲ. ಪ್ರವಾಸಿಗರಿಗೆ, ನಾಡಿನ ವಿವಿಧ ಸ್ಥಳ ವಿಶೇಷಗಳ ಕುರಿತಂತೆ ಆಸಕ್ತಿಯುಳ್ಳವರಿಗೆ ಈ ಕೃತಿ ಇಷ್ಟವಾಗಬಹುದು. ಅವರ ಪ್ರಯಾಣಕ್ಕೆ ಒಂದು ವೇದಿಕೆಯನ್ನು ಒದಗಿಸಬಹುದು. ಕನ್ನಡ ಸಾಹಿತ್ಯ ಪರಿಷತ್ತು ಈ ಕೃತಿಯನ್ನು ಹೊರತಂದಿದೆ. 176 ಪುಟಗಳ ಈ ಕೃತಿಯ ಮುಖಬೆಲೆ 120 ರೂಪಾಯಿ.