ಮಹಾರಾಷ್ಟ್ರದಲ್ಲಿ ಶಿವಸೇನೆಯವರೇ ಮುಖ್ಯಮಂತ್ರಿ: ಸಂಜಯ ರಾವತ್
ಮುಂಬೈ, ನ.1: ಶಿವಸೇನೆ ಪಕ್ಷದವರೇ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಪಕ್ಷದ ಹಿರಿಯ ಮುಖಂಡ ಸಂಜಯ ರಾವತ್ ಶುಕ್ರವಾರ ತಿಳಿಸಿದ್ದಾರೆ. ಈ ಮೂಲಕ ಬಿಜೆಪಿಯೊಂದಿಗೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ತನ್ನ ಪಟ್ಟನ್ನು ಶಿವಸೇನೆ ಬಿಗಿಗೊಳಿಸಿದೆ.
ಸರಕಾರ ರಚನೆಗೆೆೆ ಸಂಬಂಧಿಸಿ ಬಿಜೆಪಿ ಹಾಗೂ ಶಿವಸೇನೆ ಮಧ್ಯೆ ಈ ತನಕ ಮಾತುಕತೆ ಆರಂಭವಾಗಿಲ್ಲ. ಶಿವಸೇನೆ ಪಕ್ಷದವರೇ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುತ್ತಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾವತ್ ಹೇಳಿದ್ದಾರೆ.
ಬಿಜೆಪಿಯೊಂದಿಗೆ ಸರಕಾರ ರಚನೆ ಮಾಡುವ ಕುರಿತು ಅಂತಿಮ ನಿರ್ಧಾರವಾಗಿಲ್ಲ. ಅವರು ದೊಡ್ಡವರು ಎಂದು ಶಿವಸೇನೆಯ ರಾಜ್ಯಸಭಾ ಸಂಸದ ರಾವತ್ ಹೇಳಿದ್ದಾರೆ.
50:50 ಸೂತ್ರದ ಪ್ರಕಾರ ಸರಕಾರ ರಚಿಸುವಂತೆ ಜನಾದೇಶ ಲಭಿಸಿದೆ. ಒಂದು ವೇಳೆ ಶಿವಸೇನೆ ನಿರ್ಧರಿಸಿದರೆ, ಮಹಾರಾಷ್ಟ್ರದಲ್ಲಿ ಸ್ಥಿರ ಸರಕಾರ ರಚಿಸುವಷ್ಟು ಅಗತ್ಯದ ಸಂಖ್ಯೆಯನ್ನು ಪಡೆಯಲಿದೆ ಎಂದು ರಾವತ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ನಡೆದ ರಾಜ್ಯ ಚುನಾವಣೆಯಲ್ಲಿ 288 ಸದಸ್ಯಬಲದ ವಿಧಾನಸಭೆಯಲ್ಲಿ ಬಿಜೆಪಿ 105 ಕ್ಷೇತ್ರಗಳಲ್ಲಿ ಜಯ ಸಾಧಿಸಿದರೆ, ಶಿವಸೇನೆ 56 ಸ್ಥಾನವನ್ನು ಗೆದ್ದುಕೊಂಡಿತ್ತು. ಲೋಕಸಭಾ ಚುನಾವಣೆಗೆ ಮೊದಲು ನಡೆದ ಒಪ್ಪಂದದಂತೆ 50:50 ಸೂತ್ರದಂತೆ ಸಚಿವ ಸಂಪುಟ ಹಂಚಿಕೆಯಾಗಬೇಕು. ತಲಾ ಎರಡೂವರೆ ವರ್ಷ ಮುಖ್ಯಮಂತ್ರಿ ಸ್ಥಾನ ಹಂಚಿಕೆ ಯಾಗಬೇಕೆಂಬ ಬೇಡಿಕೆಯನ್ನು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಪಕ್ಷ ಬಿಜೆಪಿ ಮುಂದಿಟ್ಟಿದೆ.
ಇದಕ್ಕೆ ಒಪ್ಪದ ಬಿಜೆಪಿ, ಮುಖ್ಯಮಂತ್ರಿ ಸ್ಥಾನ ತನಗೇ ಬೇಕು. ಉಪ ಮುಖ್ಯಮಂತ್ರಿ ಸ್ಥಾನವನ್ನು ಶಿವಸೇನೆಗೆ ನೀಡುವುದಾಗಿ ಹೇಳಿತ್ತು.
ಈ ಎಲ್ಲ ಬೆಳವಣಿಗೆಯ ಮಧ್ಯೆ ಸಂಜಯ್ ರಾವತ್ ಗುರುವಾರ ಸಂಜೆ ಎನ್ಸಿಪಿ ವರಿಷ್ಠ ಶರದ್ ಪವಾರ್ರನ್ನು ಭೇಟಿಯಾಗಿ ಚರ್ಚಿಸಿದ್ದರು.